ಮಂಗಳವಾರ, ಆಗಸ್ಟ್ 20, 2019
27 °C

ಐಎಂಎ ವಂಚನೆ ಪ್ರಕರಣದ ತನಿಖೆ: ವಿಚಾರಣೆಗೆ ಹಾಜರಾದ ಐಪಿಎಸ್‌ ಅಧಿಕಾರಿ ಹಿಲೋರಿ

Published:
Updated:

ಬೆಂಗಳೂರು: ಮನ್ಸೂರ್‌ ಖಾನ್‌ ಒಡೆತನದ ಕಂಪನಿಯ ವಂಚನೆ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ವಿಚಾರಣೆಗೆ ಪೂರ್ವ ವಲಯದ ಡಿಸಿಪಿ ಆಗಿದ್ದ ಅಜಯ್‌ ಹಿಲೋರಿ ಶುಕ್ರವಾರ ಹಾಜರಾಗಿದ್ದರು.

ಐಎಂಎ ಅಕ್ರಮ ಕುರಿತು ತನಿಖೆ ನಡೆಸುವಂತೆ ಆರ್‌ಬಿಐ ಸರ್ಕಾರಕ್ಕೆ ಸೂಚನೆ ನೀಡಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರುಕಟ್ಟೆ ಮತ್ತು ಗುಪ್ತಚರ ವಿಭಾಗದ ಸೂಚನೆ ಮೇರೆಗೆ ತನಿಖೆ ಪೊಲೀಸರು ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿಯೊಬ್ಬರ ವಿಚಾರಣೆ ನಡೆಯುತ್ತಿರುವುದು ಇದೇ ಮೊದಲು. ಐಎಂಎ ಅಕ್ರಮ ಕುರಿತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಮಾರುಕಟ್ಟೆ ಗುಪ್ತಚರ ವಿಭಾಗ ಕೆಲವು ದಾಖಲೆ ನೀಡಿದ್ದರೂ, ಡಿಸಿಪಿ ಕ್ಲೀನ್‌ಚಿಟ್‌ ನೀಡಿದ್ದರು ಎಂದು ಆರೋಪಿಸಲಾಗಿದೆ.

‘ಮನ್ಸೂರ್‌ ಖಾನ್‌ ಒಡೆತನದ ಕಂಪನಿಗಳ ವ್ಯವಹಾರ ಕಾನೂನುಬದ್ಧವಾಗಿ ನಡೆಯುತ್ತಿದೆ’ ಎಂದು ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರೂ ಹೇಳಿದ್ದರು. ಈ ಬಗ್ಗೆ ಆರ್‌ಬಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಬಳಿಕ ಸರ್ಕಾರ ಪ್ರಕರಣದ ಮರು ವಿಚಾರಣೆಗೆ ಆದೇಶಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ಅಜಯ್‌ ಹಿಲೋರಿ ವಂಚಕ ಕಂಪನಿಗೆ ‘ಕ್ಲೀನ್‌ ಚಿಟ್‌’ ನೀಡಿ, ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಅಪರಾಧ) ಅವರಿಗೆ ವರದಿ ಸಲ್ಲಿಸಿದ್ದರು. 

ಈ ಪ್ರಕರಣದಲ್ಲಿ ಈಗಾಗಲೇ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಖಾನ್ ಅವರ ವಿಚಾರಣೆ ನಡೆಸಲಾಗಿದೆ. ಶಿವಾಜಿನಗರ ಮಾಜಿ ಶಾಸಕ ಆರ್‌. ರೋಷನ್‌ ಬೇಗ್‌ ಅವರನ್ನೂ ವಿಚಾರಣೆಗೆ ಕರೆಯಲಾಗಿದ್ದು, ಅವರು ಗೈರಾಗಿದ್ದರು.

ಪುಲಕೇಶಿ ನಗರದ ಎಸಿಪಿ ಆಗಿದ್ದ ಎಸ್‌. ರಮೇಶ್‌ ಕುಮಾರ್‌ ಹಾಗೂ ಕಮರ್ಷಿಯಲ್‌ ಸ್ಟ್ರೀಟ್‌ ‍ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಆಗಿದ್ದ ಎಂ. ರಮೇಶ್‌ ಅವರಿಗೂ ಎಸ್‌ಐಟಿ ನೋಟಿಸ್‌ ಕೊಟ್ಟಿದ್ದು, ಕ್ರಮವಾಗಿ ಆಗಸ್ಟ್ 4 ಹಾಗೂ 6ರಂದು ವಿಚಾರಣೆಗೆ ಬರುವಂತೆ ಸೂಚಿಸಿದೆ.

Post Comments (+)