ಮಂಗಳವಾರ, ಮಾರ್ಚ್ 9, 2021
31 °C

ನೂತನ ವಿಜಯನಗರ ಜಿಲ್ಲೆಯ ಅಗತ್ಯವಿದೆಯೇ?

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಪಶ್ಚಿಮ ತಾಲ್ಲೂಕುಗಳನ್ನು ಒಳಗೊಂಡ ವಿಜಯನಗರ ಜಿಲ್ಲೆ ಮಾಡಬೇಕೆಂಬ ಕೂಗಿಗೆ ಸಾಕಷ್ಟು ಪರ–ವಿರೋಧ ವ್ಯಕ್ತವಾಗುತ್ತಿದೆ. ಆದರೆ, ನಿಜಕ್ಕೂ ಹೊಸ ಜಿಲ್ಲೆ ರಚನೆಯ ಅಗತ್ಯವಿದೆಯೇ?

ಇಂತಹದ್ದೊಂದು ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ. ಭೌಗೋಳಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ನೋಡುವುದಾದರೆ ಹೊಸ ಜಿಲ್ಲೆ ರಚನೆ ಮಾಡುವುದಕ್ಕೆ ತಾರ್ಕಿಕ ಕಾರಣಗಳಿವೆ ಎಂಬುದು ಗೊತ್ತಾಗುತ್ತದೆ.

ಒಟ್ಟು ಹನ್ನೊಂದು ತಾಲ್ಲೂಕುಗಳನ್ನು ಒಳಗೊಂಡಿರುವ ಬಳ್ಳಾರಿ ಜಿಲ್ಲೆ ಭೌಗೋಳಿಕವಾಗಿ ಬಹಳ ವಿಸ್ತಾರವಾಗಿದೆ. ಜಿಲ್ಲಾ ಕೇಂದ್ರದಿಂದ ಪಶ್ಚಿಮ ದಿಕ್ಕಿನಲ್ಲಿರುವ ಕೊಟ್ಟೂರು, ಹೂವಿನಹಡಗಲಿ, ಹರಪನಹಳ್ಳಿ ತಾಲ್ಲೂಕಿನ ಅನೇಕ ಗ್ರಾಮಗಳು 200 ಕಿ.ಮೀಗಿಂತ ಅಧಿಕ ದೂರದಲ್ಲಿವೆ. ಸರ್ಕಾರಿ ಕಚೇರಿ ಸೇರಿದಂತೆ ಇತರೆ ಕೆಲಸಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಬೇಕೆಂದರೆ ಇಡೀ ದಿನ ಕಳೆದು ಹೋಗುತ್ತದೆ. ಸಮಯದ ಜತೆ ಜತೆಯಲ್ಲಿ ಆರ್ಥಿಕ ಹೊರೆಯೂ ಬೀಳುತ್ತದೆ.

ಒಂದುವೇಳೆ, ಹೊಸಪೇಟೆ (ವಿಜಯನಗರ) ಜಿಲ್ಲಾ ಕೇಂದ್ರವಾದರೆ ಈ ಅಂತರ ಸಾಕಷ್ಟು ಕಡಿಮೆಯಾಗುತ್ತದೆ. ಹೊಸಪೇಟೆಯಿಂದ ಹೂವಿನಹಡಗಲಿ, ಕೊಟ್ಟೂರು ತಾಲ್ಲೂಕುಗಳು 70 ಕಿ.ಮೀ ಹಾಗೂ ಹರಪನಹಳ್ಳಿ 80 ಕಿ.ಮೀ. ದೂರದಲ್ಲಿವೆ. ಕಂಪ್ಲಿ, ಹಗರಿಬೊಮ್ಮನಹಳ್ಳಿ 40 ಕಿ.ಮೀ. ಅಂತರದೊಳಗೆ ಬರುತ್ತವೆ. ಕೂಡ್ಲಿಗಿ 40 ಕಿ.ಮೀ ಹಾಗೂ ಸಂಡೂರು 30 ಕಿ.ಮೀ. ದೂರದಲ್ಲಿವೆ.

ಆದರೆ, ಉದ್ದೇಶಿತ ನೂತನ ಜಿಲ್ಲೆಯಿಂದ ಅವುಗಳನ್ನು ಕೈಬಿಡಲಾಗಿದೆ. ಎರಡೂ ತಾಲ್ಲೂಕುಗಳ ಜನ, ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಸೇರಿಸಬೇಕು ಎನ್ನುವುದರ ಪರ ಒಲವು ಹೊಂದಿದ್ದಾರೆ. ಈ ಸಂಬಂಧ ಈಗಾಗಲೇ ಕೂಡ್ಲಿಗಿ ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರು ಸಿ.ಎಂ. ಗೆ ಪತ್ರ ಬರೆದಿದ್ದಾರೆ.
ಹೊಸಪೇಟೆಯಿಂದ ಪಶ್ಚಿಮದ ಬಹುತೇಕ ತಾಲ್ಲೂಕುಗಳಿಗೆ ಉತ್ತಮ ರಸ್ತೆ ಹಾಗೂ ರೈಲು ಸಂಪರ್ಕ ಇದೆ. 30 ಕಿ.ಮೀ ಅಂತರದಲ್ಲಿ ವಿಮಾನ ನಿಲ್ದಾಣವಿದೆ.

ಒಂದು ಜಿಲ್ಲಾ ಕೇಂದ್ರಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯಗಳು ಅಲ್ಲಿವೆ. ಪಶ್ಚಿಮ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗಾಗಿ ಹೊಸಪೇಟೆಯನ್ನೇ ಜಿಲ್ಲಾ ಕೇಂದ್ರ ಮಾಡಬೇಕು ಎನ್ನುವುದು ಹೋರಾಟಗಾರರು, ಸಾಹಿತಿಗಳ ಅಭಿಪ್ರಾಯವಾಗಿದೆ.

‘ಹೊಸಪೇಟೆ ಜಿಲ್ಲಾ ಕೇಂದ್ರವಾಗಬೇಕೆಂಬ ಕೂಗು ಇತ್ತೀಚಿನದಲ್ಲ. ದಶಕದಿಂದ ಅದರ ಬಗ್ಗೆ ಹೋರಾಟ ನಡೆಸಲಾಗುತ್ತಿದೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ. ಪಶ್ಚಿಮ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ವಿಜಯನಗರ ಜಿಲ್ಲೆ ರಚನೆ ಮಾಡುವ ಅಗತ್ಯವಿದೆ’ ಎನ್ನುತ್ತಾರೆ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಹಿರಿಯ ಮುಖಂಡ ವೈ. ಯಮುನೇಶ್‌.

‘ಈಗಿರುವ ಅಖಂಡ ಬಳ್ಳಾರಿ ಜಿಲ್ಲೆ ವಿಭಜಿಸಿ, ಎರಡು ಜಿಲ್ಲೆಗಳನ್ನಾಗಿ ಮಾಡಿದರೂ ಅವುಗಳ ವ್ಯಾಪ್ತಿ ಚಿಕ್ಕಬಳ್ಳಾಪುರ, ರಾಮನಗರ, ಉಡುಪಿ ಹಾಗೂ ಯಾದಗಿರಿ ಜಿಲ್ಲೆಗಳಷ್ಟಾಗುತ್ತದೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸಲು, ಆಡಳಿತ ನಡೆಸಲು ಅನುಕೂಲವಾಗುತ್ತದೆ’ ಎಂದರು.

‘ವಿಜಯನಗರಕ್ಕೆ ಚಾರಿತ್ರಿಕ ಹಿನ್ನೆಲೆ ಇದೆ. ಆ ಹೆಸರು ಚಿರಸ್ಥಾಯಿಯಾಗಿ ಜಗತ್ತಿನ ಭೂಪಟದಲ್ಲಿ ಉಳಿಯಬೇಕಾದರೆ ಅದರ ಹೆಸರಿನಲ್ಲೇ ಜಿಲ್ಲೆ ರಚನೆಯಾಗುವುದು ಸೂಕ್ತ. ವಿಶಾಲ ಬಳ್ಳಾರಿ ಜಿಲ್ಲೆಯಿಂದ ಸರ್ವಾಂಗೀಣ ಅಭಿವೃದ್ಧಿ, ಆಡಳಿತ ನಡೆಸಲು ಅನಾನುಕೂಲವಾಗುತ್ತಿರುವ ವಿಷಯ ಎಲ್ಲರಿಗೂ ಗೊತ್ತಿದೆ’ ಎನ್ನುತ್ತಾರೆ ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು