ಶುಕ್ರವಾರ, ಜೂನ್ 18, 2021
21 °C
ಕಾಂಗ್ರೆಸ್‌ ಮುಖಂಡರಾದ ಪರಮೇಶ್ವರ, ಜಾಲಪ್ಪ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಐ.ಟಿ ದಾಳಿ

ಐ.ಟಿ ದಾಳಿ: ₹100 ಕೋಟಿ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನೀಟ್‌ ಪರೀಕ್ಷೆ ಮೂಲಕ ಭಾರತ ವೈದ್ಯಕೀಯ ಮಂಡಳಿ ಹಂಚಿಕೆ ಮಾಡಿದ್ದ ಸೀಟುಗಳನ್ನು ಅಕ್ರಮವಾಗಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್‌ ಮುಖಂಡರಾದ ಪರಮೇಶ್ವರ ಅವರಿಗೆ ಸೇರಿದ ಸಿದ್ಧಾರ್ಥ ಶಿಕ್ಷಣ ಟ್ರಸ್ಟ್‌ ಹಾಗೂ ಆರ್. ಎಲ್‌. ಜಾಲಪ್ಪ ಅವರ ದೇವರಾಜ ಅರಸು ಶಿಕ್ಷಣ ಸಂಸ್ಥೆ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಲೆಕ್ಕ ಕೊಡದ ಭಾರಿ ಆಸ್ತಿ ಪಾಸ್ತಿ ಪತ್ತೆ ಹಚ್ಚಿದ್ದಾರೆ.

ಎಂಬಿಬಿಎಸ್‌ ಹಾಗೂ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಮಧ್ಯವರ್ತಿಗಳ ಮೂಲಕ ಸರಾಸರಿ ₹50ರಿಂದ ₹ 65 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು. ಇದರಿಂದ ಬಂದ ₹100 ಕೋಟಿ ಹಣವನ್ನು ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಹೂಡಿಕೆ ಮಾಡಲಾಗಿತ್ತು. ಅದನ್ನು ಗೋಪ್ಯವಾಗಿ ಇಡಲಾಗಿತ್ತು. ಈ ಸಂಬಂಧ ಇದುವರೆಗೆ ₹8.82 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಐ.ಟಿ ಮೂಲಗಳು ತಿಳಿಸಿವೆ.

ವಿದ್ಯಾರ್ಥಿಗಳು ಪಾವತಿಸಿದ ಹಣವನ್ನು ಸ್ಥಿರಾಸ್ತಿಗಳ ಖರೀದಿ, ಹೊಟೇಲ್‌ಗಳ ನಿರ್ಮಾಣಕ್ಕಾಗಿ ಬಳಸಲಾಗಿದೆ. ಪ್ರಮುಖ ಟ್ರಸ್ಟಿಯೊಬ್ಬರ ಮನೆಯಲ್ಲಿ ಸಿಕ್ಕ ₹ 89 ಲಕ್ಷ ಹಣವೂ ಸೇರಿದಂತೆ ₹ 4.22 ಕೋಟಿ ಅಕ್ರಮ ಹಣ ವಶಪಡಿಸಿಕೊಳ್ಳಲಾಗಿದೆ. ಸೀಟು ಪರಿವರ್ತನೆಗೆ ಕೆಲವು ವಿದ್ಯಾರ್ಥಿಗಳ ಹೆಸರು ಬಳಸಿಕೊಳ್ಳಲಾಗಿದ್ದು, ಅವರನ್ನು ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ಸೀಟು ಮಾರಾಟಕ್ಕೆ ಸಹಾಯ ಮಾಡಿದ್ದಾಗಿ ಮಧ್ಯವರ್ತಿಗಳು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಟ್ರಸ್ಟಿಗಳು ತಮ್ಮ ನೌಕರರ ಹೆಸರಿನಲ್ಲಿ ಬ್ಯಾಂಕ್‌ ಖಾತೆಗಳನ್ನು ತೆರೆದು ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿದೆ. ನಗದು ರೂಪ ದಲ್ಲಿ ‍ಪಡೆದಿರುವ  ಹಣವನ್ನು ಈ ಖಾತೆಗಳಲ್ಲಿ ಠೇವಣಿ ಇಡಲಾಗಿದೆ. ಈ ರೀತಿ 8 ನೌಕರರ ಖಾತೆಗಳಲ್ಲಿ ಠೇವಣಿ ಇಡಲಾಗಿರುವ ₹ 4.6 ಕೋಟಿ ಜಪ್ತಿ ಮಾಡಲಾಗಿದೆ. ಇದರಿಂದ ಬಂದಿರುವ ಬಡ್ಡಿ ಹಣವನ್ನು ಟ್ರಸ್ಟಿಗಳ ವೈಯಕ್ತಿಕ ಸಾಲ ಮರುಪಾವತಿಗೆ ಬಳಸ ಲಾಗಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ತುಮಕೂರು ವರದಿ: ನಗರದ ಸಿದ್ಧಾರ್ಥ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರವೂ ದಾಖಲೆ ಗಳನ್ನು ಪರಿಶೀಲಿಸಿದರು. ಬೆಳಿಗ್ಗೆ 9ರಿಂದ ‌ಮಧ್ಯಾಹ್ನ 3ರವರೆಗೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ದಾಖಲಾತಿ ಪರಿಶೀಲಿಸಿದ ಐ.ಟಿ ಅಧಿಕಾರಿಗಳು ನಂತರ ಬೆಂಗ ಳೂರಿಗೆ ತೆರಳಿದರು. ಅಧಿಕಾರಿಗಳ ಮತ್ತೊಂದು ತಂಡ ವೈದ್ಯಕೀಯ ಕಾಲೇಜಿನಲ್ಲಿ ರಾತ್ರಿಯವರೆಗೂ ದಾಖಲೆಗಳನ್ನು ಪರಿಶೀಲಿಸಿತು. 

ಮಾಜಿ ಸಂಸದ ಸಿ.ಎನ್.ಭಾಸ್ಕರಪ್ಪ ಅವರ ಪುತ್ರ ಹಾಗೂ ಪರಮೇಶ್ವರ ಅವರ ಆಪ್ತ ಕುಮಾರ್ ಭಾಸ್ಕರಪ್ಪ ಅವರಿಂದ ಶಿಕ್ಷಣ ಸಂಸ್ಥೆಯ ಕೆಲವು ದಾಖಲಾತಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದರು. ನಗರದಲ್ಲಿರುವ ಪರಮೇಶ್ವರ ಅವರ ಅಣ್ಣನ ಮಗ ಆನಂದ್ ಅವರ ಮನೆ ಯಲ್ಲಿಯೂ ಶೋಧ ನಡೆಸಿದರು. ದಾಳಿ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕ ಮತ್ತು ಚಲವಾದಿ ಮಹಾಸಭಾ, ಡಾ.ಪರಮೇಶ್ವರ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

ಜಾಲಪ್ಪ ಟ್ರಸ್ಟ್‌ ಮುಂದುವರಿದ ಶೋಧ

ಕಾಂಗ್ರೆಸ್ ಮುಖಂಡ ಆರ್‌.ಎಲ್‌.ಜಾಲಪ್ಪ ಒಡೆತನದ ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗೆ ಸಂಬಂಧಿಸಿದ ದಾಖಲೆಗಳನ್ನು ಐ.ಟಿ ಅಧಿಕಾರಿಗಳು ಶುಕ್ರವಾರ ಮತ್ತಷ್ಟು ಕಲೆ ಹಾಕಿದರು.

ಸಂಸ್ಥೆ ಕುಲಪತಿ, ಹಣಕಾಸು ಹಾಗೂ ಆಡಳಿತ ವಿಭಾಗದ ಸಿಬ್ಬಂದಿ ಸೇರಿದಂತೆ ಹಲವರ ವಿಚಾರಣೆ ನಡೆಸಿದರು. ಹಣಕಾಸು ವ್ಯವಹಾರ, ಆದಾಯ ತೆರಿಗೆ ಪಾವತಿ ಸಂಬಂಧ ಮಹತ್ವದ ದಾಖಲೆಪತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು.

ಗುರುವಾರ ತಡರಾತ್ರಿವರೆಗೆ ಪರಿಶೀಲನೆ ನಡೆಸಿದ್ದ ಐ.ಟಿ ಅಧಿಕಾರಿಗಳು ರಾತ್ರಿ ಜಾಲಪ್ಪ ಅವರ ಅತಿಥಿಗೃಹದಲ್ಲಿಯೇ ತಂಗಿದ್ದರು. ಐ.ಟಿ ದಾಳಿಯ ಒತ್ತಡದ ನಡುವೆಯೇ ಜಾಲಪ್ಪ ಅವರು ಶುಕ್ರವಾರ ಬೆಳಿಗ್ಗೆ ಶಿಕ್ಷಣ ಸಂಸ್ಥೆ ಆವರಣದಲ್ಲಿನ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಚಿಕ್ಕಬಳ್ಳಾಪುರ ವರದಿ: ಇಲ್ಲಿನ ಪ್ರಶಾಂತ್ ನಗರದಲ್ಲಿರುವ ಆರ್.ಎಲ್.ಜಾಲಪ್ಪ ಅವರ ಸೋದರಳಿಯ ಜಿ.ಎಚ್.ನಾಗರಾಜ್ ಅವರ ವಿಚಾರಣೆ ನಡೆಸಿದ ಐ.ಟಿ ಅಧಿಕಾರಿಗಳು ಸಂಜೆ ಅವರನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋದರು.

ನಾಗರಾಜ್ ಅವರನ್ನು ಕರೆದುಕೊಂಡು ಹೋದ ನಂತರವೂ ಕೆಲ ಅಧಿಕಾರಿಗಳು ಮನೆಯಲ್ಲಿ ಮಾಹಿತಿ ಕಲೆ ಹಾಕುತ್ತಿದ್ದರು. ನಾಗರಾಜ್ ಅವರ ಮನೆಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿತ್ತು.

ಹಣಕಾಸು ವ್ಯವಹಾರ, ಆಸ್ತಿಗಳು, ಆದಾಯ, ತೆರಿಗೆ ಪಾವತಿಗೆ ಸಂಬಂಧಿಸಿದ ದಾಖಲೆಗಳನ್ನು ಕಲೆ ಹಾಕಿದರು. 9 ಮಂದಿ ಅಧಿಕಾರಿಗಳಲ್ಲಿ ಗುರುವಾರ ತಡರಾತ್ರಿ ಆರು ಮಂದಿ ನಾಗರಾಜ್ ಅವರ ಮನೆಯಿಂದ ತೆರಳಿ ಬೆಳಿಗ್ಗೆ ವಾಪಸಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು