ಗುರುವಾರ , ಮಾರ್ಚ್ 4, 2021
30 °C
ಕಾಂಗ್ರೆಸ್‌ ಶಾಸಕರ ರಾಜೀನಾಮೆ?

ಬಜೆಟ್‌ನತ್ತ ಗಮನಹರಿಸಿದ ಸಿಎಂ ಕುಮಾರಸ್ವಾಮಿ, ಅತೃಪ್ತ ಶಾಸಕರ ಚಿತ್ತ ಎತ್ತ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಸಭೆ ಚುನಾವಣೆಗೆ ಮುನ್ನ ಮತಾಕರ್ಷಣೆಯ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಣಿಯಾಗುತ್ತಿದ್ದರೆ, ಅತೃಪ್ತ ಕಾಂಗ್ರೆಸ್ ಶಾಸಕರನ್ನು ಬಳಸಿಕೊಂಡು ಸರ್ಕಾರವನ್ನೇ ಹಣಿಯಲು ಬಿಜೆಪಿ ನಾಯಕರು ತಯಾರಿ ನಡೆಸಿದ್ದಾರೆ.

‘ಈ ಬಾರಿ ಸರ್ಕಾರ ಬೀಳಿಸಿಯೇ ಸಿದ್ಧ’ ಎಂಬ ಉಮೇದು ಬಿಜೆಪಿ ನಾಯಕರಲ್ಲಿದೆ. ‘ಯಾವ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ; ಆ ಪಕ್ಷದವರೇ ರಾಜೀನಾಮೆ ಕೊಟ್ಟು ನಮ್ಮ ಕಡೆ ಬರಲಿದ್ದಾರೆ’ ಎಂಬ ಭರವಸೆ ಕಾಂಗ್ರೆಸ್–ಜೆಡಿಎಸ್‌ ನಾಯಕರದ್ದಾಗಿದೆ.

ಸಂಕ್ರಾಂತಿ ಹೊತ್ತಿಗೆ ಸರ್ಕಾರವನ್ನು ಬೀಳಿಸುವ ‘ಕ್ರಾಂತಿ’ಗೆ ಬಿಜೆಪಿ ನಾಯಕರು ವ್ಯವಸ್ಥಿತವಾಗಿಯೇ ಕೈ ಹಾಕಿದ್ದರು. ಆದರೆ, ರಹಸ್ಯ ಕಾರ್ಯಾಚರಣೆಯ ಗುಟ್ಟು ಬಯಲಾಗಿದ್ದರಿಂದಾಗಿ ಕಮಲ ಪಕ್ಷದ ನಾಯಕರ ಸರ್ವ ಪ್ರಯತ್ನವೂ ನೀರಿನಲ್ಲಿ ಹೋಮ ಮಾಡಿದಂತಾಗಿತ್ತು.

‘ಅಂದು ಬಿಜೆಪಿ ತೆಕ್ಕೆಗೆ ಬಂದಿರುವ ಕಾಂಗ್ರೆಸ್ ಶಾಸಕರು, ನಮ್ಮ ಜತೆ ಇದ್ದಾರೆ. ಅವರಿಂದ ರಾಜೀನಾಮೆ ಕೊಡಿಸುವ ಕಾರ್ಯಾಚರಣೆಯ ನೇತೃತ್ವವನ್ನು ಬೆಂಗಳೂರಿನ ಶಾಸಕರೊಬ್ಬರು ವಹಿಸಿಕೊಂಡಿದ್ದು, ಅವರು ಭಾನುವಾರ ಬೆಳಿಗ್ಗೆ ಮುಂಬೈಗೆ ತಲುಪಿದ್ದಾರೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.

ಅವಿಶ್ವಾಸ ಇಲ್ಲ: ಶಾಸಕರ ರಾಜೀನಾಮೆ ಕೊಡಿಸುವ ಮೂಲಕ ಸರ್ಕಾರದ ಬಲವನ್ನು ಕುಗ್ಗಿಸುವ ಯತ್ನ ಮಾಡಲಾಗುತ್ತದೆ ವಿನಾ ಅವಿಶ್ವಾಸ ನಿರ್ಣಯ ಮಂಡಿಸುವ ಇರಾದೆ ಸದ್ಯಕ್ಕೆ ಇಲ್ಲ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ಸರ್ಕಾರ ಅಲ್ಪಮತಕ್ಕೆ ಕುಸಿಯಬೇಕಾದರೆ ಬಿಜೆಪಿಯ 104 ಸದಸ್ಯರ ಬಲವನ್ನೂ ಉಳಿಸಿಕೊಂಡು ಕಾಂಗ್ರೆಸ್–ಜೆಡಿಎಸ್‌ನ 17 ಶಾಸಕರ ರಾಜೀನಾಮೆ ಕೊಡಿಸಲೇಬೇಕು. ಈಗ ಅಷ್ಟು ಸಂಖ್ಯಾಬಲ ಕೂಡಿಲ್ಲ. ಈ ಹಂತದಲ್ಲಿ ಅವಿಶ್ವಾಸ ಮಂಡಿಸಿ, ಅದು ಸೋತರೆ ಮತ್ತೆ ಆರು ತಿಂಗಳು ಅವಿಶ್ವಾಸ ಅದಕ್ಕೆ ಅವಕಾಶ ಸಿಗುವುದಿಲ್ಲ. ಹೀಗಾಗಿ ಆ ಹೆಜ್ಜೆ ಇಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಪ್ರತಿ ‘ಆಪರೇಷನ್‌’

ಸರ್ಕಾರವನ್ನು ಉಳಿಸಿಕೊಳ್ಳಲು ಬಿಜೆಪಿಯ ಐವರು ಶಾಸಕರಿಂದ ರಾಜೀನಾಮೆ ಕೊಡಿಸುವ ಪ್ರತಿ ತಂತ್ರವನ್ನು ‘ಮಿತ್ರ ಕೂಟ’ದ ನಾಯಕರು ರೂಪಿಸಿದ್ದಾರೆ. ‘ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಉತ್ತರ ಕನ್ನಡ  ಹಾಗೂ ಕೊಪ್ಪಳ ಜಿಲ್ಲೆಯ ತಲಾ ಒಬ್ಬರು  ಶಾಸಕರನ್ನು ಸಂಪರ್ಕಿಸಲಾಗಿದೆ. ಸಚಿವ ಸ್ಥಾನ ಸಿಗುವುದಾದರೆ ಅವರು ಬರಲು ತಯಾರಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಶಾಸಕರ ರಾಜೀನಾಮೆ?

ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗುತ್ತಿರುವ ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ನಾಗೇಂದ್ರ ಹಾಗೂ ಉಮೇಶ ಜಾಧವ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ ಎಂದು ಬಿಜೆಪಿ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

ಮುಂಬೈನ ರೆಸಾರ್ಟ್‌ನಲ್ಲಿರುವ ಅವರು ಮಂಗಳವಾರ ರಾತ್ರಿ ಬೆಂಗಳೂರಿಗೆ ಬರಲಿದ್ದಾರೆ. ಬುಧವಾರ ಆರಂಭವಾಗಲಿರುವ ಜಂಟಿ ಅಧಿವೇಶನಕ್ಕೆ ಮುನ್ನ ಅಥವಾ ರಾಜ್ಯಪಾಲರ ಭಾಷಣದ ಬಳಿಕ ಸಭಾಧ್ಯಕ್ಷರನ್ನು ಭೇಟಿಯಾಗಿ ರಾಜೀನಾಮೆ ನೀಡಲಿದ್ದಾರೆ. ಅಧಿವೇಶನ ನಡೆಯುತ್ತಿರುವಾಗಲೇ ಹಂತಹಂತವಾಗಿ 18 ಶಾಸಕರ ರಾಜೀನಾಮೆ ಕೊಡಿಸಿ, ಸರ್ಕಾರ ಅಲ್ಪಮತಕ್ಕೆ ಕುಸಿಯುವಂತೆ ಮಾಡುವುದು ನಾಯಕರ ಲೆಕ್ಕಾಚಾರ ಎಂದು ಮೂಲಗಳು ತಿಳಿಸಿವೆ.

* ಅತೃಪ್ತ ಶಾಸಕರು ನನ್ನ ಸಂಪರ್ಕದಲ್ಲಿದ್ದು, ಅವರೆಲ್ಲರೂ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸರ್ಕಾರ ಬೀಳದಂತೆ ತಡೆಯಲು ಬಿಜೆಪಿಯಲ್ಲಿಯೇ ಸ್ನೇಹಿತರಿದ್ದಾರೆ

ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

* ಕಾಂಗ್ರೆಸ್‌ ಶಾಸಕರೆಲ್ಲ ಒಟ್ಟಾಗಿದ್ದೇವೆ. ಅತೃಪ್ತ ಶಾಸಕರು ಸಂಪರ್ಕದಲ್ಲಿದ್ದಾರೆ. ಬಿಜೆಪಿಯವರ ಯಾವುದೇ ಯತ್ನ ಫಲಿಸುವುದಿಲ್ಲ

ಸಿದ್ದರಾಮಯ್ಯ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು