ಬಿಜೆಪಿ ಸಂ‘ಕ್ರಾಂತಿ’ಗೆ ಪ್ರತಿದಾಳ

7
ಪರಮೇಶ್ವರ ‘ಉಪಾಹಾರ’ ರಾಜಕೀಯ; ಮುಂಬೈನತ್ತ ಸಚಿವ ಶಿವಕುಮಾರ್‌

ಬಿಜೆಪಿ ಸಂ‘ಕ್ರಾಂತಿ’ಗೆ ಪ್ರತಿದಾಳ

Published:
Updated:

ಬೆಂಗಳೂರು: ‘ಆಪರೇಷನ್‌ ಕಮಲ’ಕ್ಕೆ ಕೈಹಾಕುವ ಮೂಲಕ ಬಿಜೆಪಿ ಒಡ್ಡಿರುವ ಸಂ‘ಕ್ರಾಂತಿ’ಯ ಬೆದರಿಕೆಗೆ ಪ್ರತಿದಾಳ ಉರುಳಿಸಿ, ಸಡ್ಡು ಹೊಡೆಯಲು ‘ದೋಸ್ತಿ’ಗಳು (ಜೆಡಿಎಸ್‌–ಕಾಂಗ್ರೆಸ್‌) ಮುಂದಾಗಿದ್ದಾರೆ.

ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಉದ್ದೇಶದಿಂದ ಬಿಜೆಪಿ ನಾಯಕರು, ಕಾಂಗ್ರೆಸ್‌ನ ಅತೃಪ್ತ ಶಾಸಕರ ಜೊತೆಗೆ ಜೆಡಿಎಸ್‌ನ ಕೆಲವು ಶಾಸಕರನ್ನೂ ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವ ಯೋಚನೆಯಲ್ಲಿದ್ದಾರೆ. ಈಗಾಗಲೇ ಮೈತ್ರಿ ಪಕ್ಷಗಳ 14 ಶಾಸಕರು ಸಂಪರ್ಕದಲ್ಲಿದ್ದು, ಇನ್ನೂ ನಾಲ್ವರನ್ನು ಸೆಳೆದುಕೊಂಡು ಶನಿವಾರದ ವೇಳೆಗೆ ಸರ್ಕಾರ ಪತನಗೊಳಿಸುವ ಕಾರ್ಯಾಚರಣೆ ನಡೆಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ವಿಧಾನಸಭೆ ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಬಿಜೆಪಿ

ಈ ನಡೆಯಿಂದ ಆತಂಕಗೊಂಡಿರುವ ಜೆಡಿಎಸ್ ಪಾಳೆಯ, ಬಿಜೆಪಿ ಶಾಸಕರನ್ನು ಸೆಳೆಯುವ ಪ್ರತಿತಂತ್ರ ಸಿದ್ಧಪಡಿಸಿದೆ. ಈ ಸುಳಿವು ಸಿಕ್ಕಿರುವುದರಿಂದಲೇ ಬಿಜೆಪಿ ನಾಯಕರು, ತಮ್ಮ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ‘ರೆಸಾರ್ಟ್‌ ರಾಜಕೀಯ’ದ ಮೊರೆ ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ರಾಜ್ಯ ರಾಜಕೀಯದಲ್ಲಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಸೋಮವಾರ ಸಂಜೆ ಸುಮಾರು ಒಂದು ಗಂಟೆ ಚರ್ಚೆ ನಡೆಸಿದ್ದಾರೆ.

ಸೂಕ್ತ ಸ್ಥಾನಮಾನ ಸಿಕ್ಕಿಲ್ಲವೆಂದು ಮುನಿಸಿಕೊಂಡು ‘ಕೈ’ಗೆ ಸಿಗದೆ ಓಡಾಡುತ್ತಿರುವ ಶಾಸಕರು ಕಮಲ ಪಕ್ಷದ ಕಡೆಗೆ ವಾಲಿರುವ ಮಾಹಿತಿ ಖಚಿತವಾಗುತ್ತಿದ್ದಂತೆ ಕಾಂಗ್ರೆಸ್‌ ನಾಯಕರಲ್ಲಿ ತಳಮಳ ಸೃಷ್ಟಿಯಾಗಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಈ ನಾಯಕರು, ಅಶೋಕ ಹೋಟೆಲ್‌ನಲ್ಲಿ ಪರಮೇಶ್ವರ ಏರ್ಪಡಿಸಿದ ಉಪಾಹಾರ ಕೂಟದಲ್ಲಿ ಚರ್ಚೆ ನಡೆಸಿದ್ದಾರೆ.

ಅಸಮಾಧಾನಗೊಂಡಿರುವ ರಮೇಶ ಜಾರಕಿಹೊಳಿ, ಪಕ್ಷೇತರ ಶಾಸಕ ಆರ್‌. ಶಂಕರ್‌ ಮತ್ತು ಕಾಂಗ್ರೆಸ್‌ ಶಾಸಕ ಬಿ. ನಾಗೇಂದ್ರ ಮುಂಬೈಯಲ್ಲಿ ಬೀಡುಬಿಟ್ಟಿದ್ದಾರೆ. ಈ ಮಧ್ಯೆ, ಚಿಂಚೋಳಿ ಶಾಸಕ ಡಾ. ಉಮೇಶ ಜಾಧವ ಮುಂಬೈಗೆ ತೆರಳಿದ್ದಾರೆ ಎಂಬ ವದಂತಿಯೂ ಹರಡಿದೆ.

ಸರ್ಕಾರ ಪತನಗೊಳಿಸಲು ಅಗತ್ಯ ವಾದ ಮ್ಯಾಜಿಕ್‌ ಸಂಖ್ಯೆ ತಲುಪಲು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಕಾರ್ಯಾಚರಣೆಯ ಹಿಂದೆ ಬಿ.ಎಸ್‌. ಯಡಿಯೂರಪ್ಪ, ಶಾಸಕರಾದ ಜಗದೀಶ ಶೆಟ್ಟರ್‌, ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಇದ್ದಾರೆ ಎನ್ನಲಾಗಿದೆ.

ಶಾಸಕರ ಮೇಲೆ ನಂಬಿಕೆಯಿದೆ

ಉಪಾಹಾರ ಸಭೆಯ ಬಳಿಕ ಮಾತನಾಡಿದ ಪರಮೇಶ್ವರ, ‘ಬಿಜೆಪಿಯವರು ಪಕ್ಷದ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಲೇ ಇದ್ದಾರೆ. ಕೆಲವು ಶಾಸಕರು ಮುಂಬೈಗೆ, ದೆಹಲಿಗೆ ಹೋಗಿದ್ದಾರೆಂಬ ಮಾಹಿತಿ ನಮಗೂ ಗೊತ್ತಿದೆ. ಆದರೆ, ನಮ್ಮ ಶಾಸಕರ ಮೇಲೆ ನಮಗೆ ನಂಬಿಕೆ ಇದೆ. ವಾಪಸು ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಅದಕ್ಕೆ ಪೂರಕ ಎಂಬಂತೆ, ಪಕ್ಷದ ತಂತ್ರಗಾರ, ಸಚಿವ ಡಿ.ಕೆ. ಶಿವಕುಮಾರ್‌ ಮಂಗಳವಾರ ಮುಂಬೈಗೆ ದೌಡಾಯಿಸಲಿದ್ದಾರೆ. ಅಂತರರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುವ ನೆಪದಲ್ಲಿ ಶಿವಕುಮಾರ್‌ ಔರಂಗಾಬಾದ್‌ಗೆ ತೆರಳಲಿದ್ದು, ಅಲ್ಲಿಂದ ಮುಂಬೈಗೆ ಹೋಗಿ ಅತೃಪ್ತ ಶಾಸಕರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

‘ಆಪರೇಶನ್ ಕಮಲ’ದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪಕ್ಷದ ಸಚಿವರಿಗೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಸಿದ್ದರಾಮಯ್ಯ ಮಾತಿಗೆ ದನಿಗೂಡಿಸಿದ ಪರಮೇಶ್ವರ, ‘ದೋಸ್ತಿ ಸರ್ಕಾರದ ರಕ್ಷಣೆಗೆ ಎಲ್ಲರೂ ಬದ್ಧರಾಗಿ. ಲೋಕಸಭೆ ಚುನಾವಣೆ ನಮಗೆ ಪ್ರಮುಖ. ಅಲ್ಲಿಯವರೆಗೂ ನಾವು ಎಚ್ಚರಿಕೆಯಿಂದ ಇರುವುದು ಉತ್ತಮ’ ಎಂದು ಹೇಳಿದ್ದಾರೆ.

* ಇದನ್ನೂ ಓದಿ: ಗುರುಗ್ರಾಮದ ದ ರೆಸಾರ್ಟ್‌ನಲ್ಲಿ ಬಿಜೆಪಿಯ ನೂರಕ್ಕೂ ಹೆಚ್ಚು ಶಾಸಕರು

ನನ್ನ ಬಳಿ ಎಲ್ಲ ಮಾಹಿತಿ ಇದೆ: ಸಿ.ಎಂ

‘ಮುಂಬೈನಲ್ಲಿ  ಬಿಜೆಪಿ ಶಾಸಕರ ಹೆಸರುಗಳಲ್ಲಿ ರೂಂಗಳು ಬುಕ್‌ ಆಗಿವೆ. ಆ ಶಾಸಕರು ಯಾರು ಎಂಬುದು ನನಗೆ ಗೊತ್ತು. ಏನು ನಡೆಯುತ್ತಿದೆ ಎಂಬ ಮಾಹಿತಿಯೂ ನನ್ನ ಬಳಿ ಇದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಸೋಮವಾರ ಮಾತನಾಡಿದ ಅವರು, ‘ಬಿಜೆಪಿಯ ಯಾವುದೇ ಶಾಸಕರನ್ನು ನಾನು ಸಂಪರ್ಕಿಸಿಲ್ಲ. ಅವರ (ಬಿಜೆಪಿ) ಬಳಿ ಮಾಹಿತಿ ಇದ್ದರೆ ಬಹಿರಂಗಪಡಿಸಲಿ. ಶಾಸಕರಾದ ರಮೇಶ್‌ ಜಾರಕಿಹೊಳಿ ಮತ್ತು ನಾಗೇಂದ್ರ ಅವರ ಜತೆ ಬೆಳಿಗ್ಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. 120 ಶಾಸಕರ ಬೆಂಬಲ ಹೊಂದಿದ್ದೇನೆ. ಕಾಂಗ್ರೆಸ್‌ನ ಯಾವುದೇ ಶಾಸಕರು ನಾಟ್‌ ರೀಚೆಬಲ್‌ ಆಗಿಲ್ಲ’ ಎಂದು ತಿಳಿಸಿದರು.

ಮಂಡ್ಯದಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ಸರ್ಕಾರ ಉರುಳಿಸಲು ಕೆಲವರು ಜ.17ರ ಗಡುವು ಕೊಟ್ಟಿದ್ದಾರೆ. ರಾಷ್ಟ್ರಪತಿ ಆಡಳಿತ ಜಾರಿ ಬಗ್ಗೆ ಮಾತನಾಡುತ್ತಿದ್ದಾರೆ. ಅದೆಲ್ಲ ಅವರ ಭ್ರಮೆ’ ಎಂದು ತಿರುಗೇಟು ನೀಡಿದರು.

ಸ್ವಪಕ್ಷೀಯರ ಮೇಲೆ ಸಿ.ಎಂ ನಿಗಾ

ಬಿಜೆಪಿ ಬಲೆಗೆ ಜೆಡಿಎಸ್‌ ಶಾಸಕರು ಬೀಳದಂತೆ ಖುದ್ದು ಎಚ್ಚರಿಕೆ ವಹಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ತಮ್ಮ ಪಕ್ಷದ ಶಾಸಕರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಗೊತ್ತಾಗಿದೆ.

ಸರ್ಕಾರಕ್ಕೆ ಆಪತ್ತು ಎದುರಾದರೆ, ಬಿಜೆಪಿಯ 6–7 ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳುವ ಕುರಿತು ಪಕ್ಷದ ಆಪ್ತ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿಯೂ ಇದೆ. ಜೆಡಿಎಸ್ ವರಿಷ್ಠ ಎಚ್.ಡಿ .ದೇವೇಗೌಡ ಮತ್ತು ಸಚಿವ ಎಚ್‌.ಡಿ. ರೇವಣ್ಣ ಕೂಡಾ ಪಕ್ಷದ ಶಾಸಕರ ಚಲನವಲನಗಳನ್ನು ಗಮನಿಸುತ್ತಿದ್ದಾರೆ.

‘ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ’

ಪರಮೇಶ್ವರ ಅವರ ಉಪಾಹಾರಕೂಟದಲ್ಲಿ ಭಾಗವಹಿಸಿದ ನಾಲ್ವರು ಸಚಿವರು, ‘ರಾಜ್ಯದಲ್ಲಿ ಸರ್ಕಾರ ಉಳಿಸಲು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧ’ ಎಂದು ಭರವಸೆ ನೀಡಿದ್ದಾರೆ.

‘ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿರುವ ಶಾಸಕರನ್ನು ಸೆಳೆಯಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ನಾವು ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧ’ ಎಂದೂ ಅವರು ಹೇಳಿದ್ದಾರೆ.

* ನನಗೂ ಆಪರೇಷನ್ ಸಾಮರ್ಥ್ಯ ಇದೆ. ಆದರೆ, ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವ ಉದ್ದೇಶದಿಂದ ಅಪರೇಷನ್‌ ಮಾಡುವುದಿಲ್ಲ

–ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ 

* ಬಿಜೆಪಿಯ ‘ಆಪರೇಶನ್ ಕಮಲದ ಬಗ್ಗೆ ಆತಂಕ ಇಲ್ಲ. ಅತೃಪ್ತ ಶಾಸಕರನ್ನು ವಾಪಸು ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ.

–ಜಿ. ಪರಮೇಶ್ವರ, ಉಪ ಮುಖ್ಯಮಂತ್ರಿ 

* ಸರ್ಕಾರ ಅಸ್ಥಿರವಾಗಿದೆ ಹಾಗೂ ತೊಂದರೆಯಲ್ಲಿದೆ ಎಂದು ಬಿಜೆಪಿ ಬಿಂಬಿಸುತ್ತಿದೆ. ಅಪಪ್ರಚಾರಕ್ಕೆ ಮಾಧ್ಯಮಗಳನ್ನು ಉಪಯೋಗಿಸುತ್ತಿದೆ
–ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 15

  Happy
 • 3

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !