ಭಾನುವಾರ, ಏಪ್ರಿಲ್ 11, 2021
26 °C

ಬಿಜೆಪಿ ಜತೆ ಜೆಡಿಎಸ್‌ ಕೈಜೋಡಿಸುತ್ತಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಕೆ.ಮುರಳೀಧರ ರಾವ್ ಮತ್ತು ಶಾಸಕ ಕೆ.ಎಸ್‌.ಈಶ್ವರಪ್ಪ ಅವರನ್ನು ಜೆಡಿಎಸ್‌ನ ಪ್ರಭಾವಿ ಸಚಿವ ಸಾ.ರಾ.ಮಹೇಶ್‌ ಗುರುವಾರ ರಾತ್ರಿ ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಭೇಟಿಯಾಗಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

‘ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ’ ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಪ್ರತಿಯಾಗಿ ಜೆಡಿಎಸ್‌ ಬಿಟ್ಟಿರುವ ಪ್ರತ್ಯಸ್ತ್ರ ಇದು ಎಂದು ಹೇಳಲಾಗುತ್ತಿದೆ. ‌ಹಲವು ಶಾಸಕರು ಕೈತಪ್ಪಿ ಹೋಗಿದ್ದರಿಂದ ಕಂಗೆಟ್ಟಿರುವ ಕಾಂಗ್ರೆಸ್‌ ಅನ್ನು ಮಣಿಸುವುದಕ್ಕೆ ಇದು ಸಕಾಲ ಎಂದು ಭಾವಿಸಿ ಜೆಡಿಎಸ್‌ ಈ ದಾಳ ಉರುಳಿಸಿದೆ ಎಂಬ ಹೇಳಲಾಗುತ್ತಿದೆ.

‘ದೇವನಹಳ್ಳಿ ಸಮೀಪದ ಪ್ರೆಸ್ಟೀಜ್‌ ಗಾಲ್ಫ್‌ಶೈರ್‌ ರೆಸಾರ್ಟ್‌ನಲ್ಲಿ ತಂಗಿರುವ ಜೆಡಿಎಸ್‌ ಶಾಸಕರು ಸಹ ಇದೇ ವಿಷಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್‌ನ ಕಿರಿಕಿರಿ ಅನುಭವಿಸಿ ಸಾಕಾಗಿದೆ. ಬಿಜೆಪಿ ಜತೆ ಸೇರಿ ಸರ್ಕಾರ ರಚನೆಯಾದರೆ ಎಚ್‌.ಡಿ.ರೇವಣ್ಣ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿದರೂ ಸಾಕು ಎಂದು ಹಲವರು ಅಭಿಪ್ರಾಯಪಟ್ಟರು. ಅದರ ಭಾಗವಾಗಿ ಸಾ.ರಾ.ಮಹೇಶ್‌ ಈ ಹೆಜ್ಜೆ ಇಟ್ಟಿದ್ದಾರೆ’ ಎಂದು ಹೇಳಲಾಗುತ್ತಿದೆ.

ಆದರೆ ಬಿಜೆಪಿ ವಲಯದಲ್ಲಿ ಮಾತ್ರ ಬೇರೆಯದೇ ಮಾತು ಕೇಳಿಸಿದೆ.

‘ಈಗಾಗಲೇ 16 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಇಬ್ಬರು ಪಕ್ಷೇತರ ಶಾಸಕರೂ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ತನಗೆ ಯಾರ ಬೆಂಬಲವೂ ಅಗತ್ಯ ಇಲ್ಲ. ಈ ಹಿಂದೆ ಜೆಡಿಎಸ್‌ ಕೈಕೊಟ್ಟ ವಿದ್ಯಮಾನವನ್ನು ಬಿಜೆಪಿ ಮರೆತಿಲ್ಲ. ಮತ್ತೆ ಆ ಪಕ್ಷದೊಂದಿಗೆ ಕೈಜೋಡಿಸುವುದು ಸಾಧ್ಯವೇ ಇಲ್ಲ. ಹೀಗಾಗಿ ಈ ಭೇಟಿಗೆ ಮಹತ್ವ ಕೊಡಬೇಕಿಲ್ಲ. ರಾಜಕೀಯದಲ್ಲಿ ಗೊಂದಲ ಮೂಡಿಸಿ, ದಿಕ್ಕು ತಪ್ಪಿಸುವ ಸಲುವಾಗಿ ಇಂತಹ ಸುದ್ದಿ ಸೃಷ್ಟಿಸಲಾಗಿದೆ’ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.

‘ಈ ಸುದ್ದಿಯಲ್ಲಿ ಒಂದಿಷ್ಟು ಸತ್ಯಾಂಶವೂ ಇಲ್ಲ. ಸಾರ್ವಜನಿಕ ಸ್ಥಳದಲ್ಲಿ ಜೆಡಿಎಸ್‌ ಸಚಿವರನ್ನು ಭೇಟಿ ಮಾಡಿದ್ದು ಒಂದು ಆಕಸ್ಮಿಕ ವಿದ್ಯಮಾನ. ಇಂತಹ ಊಹಾತ್ಮಕ ಸುದ್ದಿಯನ್ನು ಇನ್ನಷ್ಟು ಸೂಕ್ಷ್ಮಗೊಳಿಸುವ ಅಗತ್ಯ ಇಲ್ಲ’ ಎಂದು ಸ್ವತಃ ಮುರಳೀಧರ ರಾವ್‌ ಟ್ವೀಟ್ ಮಾಡಿದ್ದಾರೆ.

‘ಇಂತಹ ಸಂದರ್ಭದಲ್ಲಿ ಕೆಎಸ್‌ಟಿಡಿಸಿ ನಿರ್ವಹಿಸುವ ಕುಮಾರಕೃಪ ಅತಿಥಿಗೃಹದ ಹೊಸ ಕಟ್ಟಡಕ್ಕೆ ಕಾರ್ಯ ನಿಮಿತ್ತ ತೆರಳಿದ್ದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರ ಬಿಜೆಪಿ ನಾಯಕರೊಂದಿಗಿನ ಭೇಟಿ ಆಕಸ್ಮಿಕ, ಮಾತುಕತೆ ಸೌಜನ್ಯದ್ದು. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

**

ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸುಭದ್ರವಾಗಿದೆ. ವಿಧಾನಮಂಡಲ ಅಧಿವೇಶನ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಿದ್ಧರಾಗಿದ್ದೇವೆ
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು