ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17ರ ಬಳಿಕ ಜಿಮ್‌, ಹೋಟೆಲ್‌ ಶುರು? ಸಿಎಂ ಭರವಸೆ ನೀಡಿದ್ದಾರೆ ಎಂದ ಸಚಿವ ಸಿ.ಟಿ ರವಿ

ಸಿಎಂ ಭರವಸೆ ನೀಡಿದ್ದಾರೆ ಎಂದ ಸಿಟಿ ರವಿ
Last Updated 13 ಮೇ 2020, 19:28 IST
ಅಕ್ಷರ ಗಾತ್ರ

ಬೆಂಗಳೂರು: ದರ್ಶಿನಿ ಸೇರಿದಂತೆ ಹೋಟೆಲ್, ಗಾಲ್ಫ್‌ ಕ್ಲಬ್‌, ಫಿಟ್‌ನೆಸ್(ಜಿಮ್‌)‌ ಕೇಂದ್ರಗಳ‌‌ ಚಟುವಟಿಕೆ ಆರಂಭಿಸಲು ಮೇ 17 ರ
ಬಳಿಕ ಅನುಮತಿ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಈ ವಿಷಯ ತಿಳಿಸಿದ್ದಾರೆ.

‘ಇವುಗಳ ಆರಂಭಕ್ಕೆ ತಕ್ಷಣವೇ ಈ ಕ್ರಮ ತೆಗೆದುಕೊಂಡರೆ, ಸ್ಥಳೀಯವಾಗಿ ಪ್ರವಾಸೋದ್ಯಮಕ್ಕೆ ಪುನಶ್ಚೇತನ ಸಿಗುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿದ್ದೇನೆ. ಕ್ರೀಡಾ ಪಟುಗಳು ಮತ್ತು ಸೆಲಿಬ್ರಿಟಿಗಳು ಫಿಟ್‌ನೆಸ್‌‌ ಕೇಂದ್ರಗಳನ್ನು ತೆರೆಯದಿದ್ದರೆ ದೈಹಿಕ ಸದೃಢತೆ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಆದ್ದರಿಂದ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು’ ಎಂದೂ ರವಿ ಹೇಳಿದರು.

‘ದರ್ಶನಿ, ಕುಳಿತು ತಿನ್ನುವ ಹೋಟೆಲ್‌, ವಸತಿ ಗೃಹಕ್ಕೆ (ಲಾಡ್ಜ್‌)ಹೊಂದಿಕೊಂಡ ಹೋಟೆಲ್‌ಗಳಿಗೆ ಅವಕಾಶ ನೀಡಬೇಕು. ವಸತಿಗೃಹಗಳಲ್ಲಿ ಶೇ 30ರಷ್ಟು ಕೊಠಡಿಗಳನ್ನು ಭರ್ತಿ ಮಾಡಲು ಅವಕಾಶ ಕೊಡಿ ಎಂಬ ಬೇಡಿಕೆ ಇದೆ. ಈ ಬಗ್ಗೆಯೂ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದೇನೆ. ಲಾಕ್‌ಡೌನ್ 4.0ರಲ್ಲಿ ಅವಕಾಶ ಕೊಡುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ’ ಎಂದು ವಿವರಿಸಿದರು.

‘ಈ ಎಲ್ಲ ಕಡೆಗಳಲ್ಲೂ ವ್ಯಕ್ತಿಗತ ಅಂತರ ಕಾಪಾಡಿಕೊಂಡು ಚಟುವಟಿಕೆ ನಡೆಸಲು ಅವಕಾಶ ನೀಡಬೇಕು ಎಂಬುದು ಇಲಾಖೆಯ ಮುಖ್ಯ ಬೇಡಿಕೆ. ಅಲ್ಲದೆ, ಪ್ರವಾಸೋದ್ಯಮ ಉಳಿಯಬೇಕು ಮತ್ತು ಬೆಳೆಯಬೇಕು ಎಂಬ ಘೋಷ ವಾಕ್ಯದಡಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ. ಲವ್‌ ಯುವರ್‌ ನೇಟಿವ್‌, ನೋಡು ಬಾ ನಮ್ಮೂರ ಅವುಗಳಲ್ಲಿ ಪ್ರಮುಖವಾದವು’ ಎಂದರು.

‘ಸದ್ಯದ ಪರಿಸ್ಥಿತಿಯಲ್ಲಿ ಯಾರೂ ಪ್ರವಾಸಕ್ಕೆ ಹೊರಡುವ ಮನಸ್ಥಿತಿಯಲ್ಲಿ ಇಲ್ಲ. ಜನರ ಸಂಕಷ್ಟದ ಮನಸ್ಥಿತಿಯನ್ನು ಬದಲಿಸಿ ಅವರನ್ನುಪ್ರವಾಸದತ್ತ ಸೆಳೆಯುವ ಕಾರ್ಯವೂ ಆಗಬೇಕಾಗಿದೆ. ಪ್ರವಾಸೋದ್ಯಮ ಕ್ಷೇತ್ರದ ಉತ್ತೇಜನಕ್ಕೆ ಕೇಂದ್ರದಿಂದ ಪ್ಯಾಕೇಜ್‌ ಸಿಗುವ ನಿರೀಕ್ಷೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT