ಶನಿವಾರ, ಸೆಪ್ಟೆಂಬರ್ 25, 2021
22 °C
ನಿವೃತ್ತ ಪೊಲೀಸ್ ಅಧಿಕಾರಿಯಿಂದ ದೂರು

ಅಬಕಾರಿ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆ ಆಮಿಷ: ಶ್ಯಾಂ ಭಟ್ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಹುದ್ದೆ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಆರೋಪದಡಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶ್ಯಾಂ ಭಟ್ ಸೇರಿದಂತೆ ಮೂವರ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನನ್ನ ಮಗನಿಗೆ ಕೆಲಸ ಕೊಡಿಸುವುದಾಗಿ ಹೇಳಿದ್ದ ಮೀಸಲು ಪೊಲೀಸ್‌ ಪಡೆಯ ನಿವೃತ್ತ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಪ್ರದೀಪ್, ಜೆಡಿಎಸ್ ಮುಖಂಡ ಧನರಾಜ್ ಹಾಗೂ ಶ್ಯಾಂ ಭಟ್‌ ಅವರು ಹಣ ಪಡೆದು ವಂಚಿಸಿದ್ದಾರೆ’ ಎಂದು ಸಶಸ್ತ್ರ ಮೀಸಲು ಪಡೆಯ ನಿವೃತ್ತ ಸಬ್‌ ಇನ್‌ಸ್ಪೆಕ್ಟರ್‌ ಸಿದ್ದಯ್ಯ ದೂರು ನೀಡಿದ್ದಾರೆ. ಮೂವರ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ ತಿಳಿಸಿದರು.

ದೂರಿನ ವಿವರ: ‘ಪರಿಚಯಸ್ಥ ಪ್ರದೀಪ್ ಮೂಲಕ ಪರಿಚಯವಾಗಿದ್ದ ಧನರಾಜ, ‘ನನಗೆ ಕೆಪಿಎಸ್‌ಸಿ ಅಧ್ಯಕ್ಷ ಶ್ಯಾಂ ಭಟ್ ಸ್ನೇಹಿತ. ನೀವು ₹ 20 ಲಕ್ಷ ಕೊಟ್ಟರೆ, ಶ್ಯಾಂ ಭಟ್ ಅವರನ್ನೇ ನೇರವಾಗಿ ಭೇಟಿ ಮಾಡಿಸಿ ಹುದ್ದೆ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದ್ದರು. ಅವರ ಮಾತು ನಂಬಿದ್ದ ಸಿದ್ದಯ್ಯ, ಮುಂಗಡವಾಗಿ ₹ 10 ಲಕ್ಷ ಕೊಟ್ಟಿದ್ದರು. ಆ ಹಣವನ್ನು ಶ್ಯಾಂ ಭಟ್‌ಗೆ ತಲುಪಿಸಿರುವುದಾಗಿ ಆರೋಪಿ ಹೇಳಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಸಿದ್ದಯ್ಯ ಅವರ ಮಗ ನೇಮಕವಾಗಿರಲಿಲ್ಲ. ಹಣ ವಾಪಸು ಕೊಡುವಂತೆ ಸಿದ್ದಯ್ಯ ಒತ್ತಾಯಿಸಿದ್ದರು. ಆಗ ಆರೋಪಿಗಳು, ₹ 3 ಲಕ್ಷ ಮಾತ್ರ ವಾಪಸು ನೀಡಿದ್ದರು. ಉಳಿದ ₹ 7 ಲಕ್ಷವನ್ನು ಇದುವರೆಗೂ ಕೊಟ್ಟಿಲ್ಲ. ಪ್ರದೀಪ್, ಧನರಾಜ್ ಹಾಗೂ ಶ್ಯಾಂ ಭಟ್‌ ಮೂವರೂ ಸೇರಿಕೊಂಡು ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಶ್ಯಾಂ ಭಟ್ ಅವರು ಸಂಪರ್ಕಕ್ಕೆ ಸಿಗಲಿಲ್ಲ. 

***

ಪ್ರಕರಣದ ಮೂವರು ಆರೋಪಿಗಳಿಗೆ ನೋಟಿಸ್‌ ನೀಡಲಾಗಿದ್ದು, ಸದ್ಯದಲ್ಲೇ ಉಪ್ಪಾರಪೇಟೆ ಇನ್‌ಸ್ಪೆಕ್ಟರ್ ವಿಚಾರಣೆ ನಡೆಸಲಿದ್ದಾರೆ
- ರವಿ ಚನ್ನಣ್ಣನವರ, ಪಶ್ಚಿಮ ವಿಭಾಗದ ಡಿಸಿಪಿ

***

* ನಿವೃತ್ತ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌, ಜೆಡಿಎಸ್ ಮುಖಂಡನೂ ಆರೋಪಿ

* ₹ 10 ಲಕ್ಷ ಪಡೆದು ₹ 3 ಲಕ್ಷ ಮರಳಿಸಿರುವ ಆರೋಪಿಗಳು

* ಮೂವರಿಗೂ ಪೊಲೀಸರಿಂದ ನೋಟಿಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.