ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕೆರೆಗಳ ನಿರ್ಲಕ್ಷ್ಯ: ಎನ್‌ಜಿಟಿಯಿಂದ ಸರ್ಕಾರಕ್ಕೆ ಚಾಟಿ, ಭಾರಿ ದಂಡ

ನಿರ್ಲಕ್ಷ್ಯಕ್ಕೆ ಒಳಗಾಗಿರುವ ವರ್ತೂರು, ಬೆಳ್ಳಂದೂರು, ಅಗರ ಕೆರೆ ಪುನಶ್ಚೇತನಕ್ಕೆ ಎನ್‌ಜಿಟಿ ಸೂಚನೆ
Last Updated 6 ಡಿಸೆಂಬರ್ 2018, 20:20 IST
ಅಕ್ಷರ ಗಾತ್ರ

ನವದೆಹಲಿ: ‘ಬೆಂಗಳೂರಿನ ಕೆರೆಗಳ ಸಂರಕ್ಷಣೆಯನ್ನು ನಿರ್ಲಕ್ಷಿಸಲಾಗಿದೆ’ ಎಂದು ಅಭಿಪ್ರಯಪಟ್ಟಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಈ ಸಂಬಂಧ ರಾಜ್ಯ ಸರ್ಕಾರಕ್ಕೆ ₹50 ಕೋಟಿ, ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ₹25 ಕೋಟಿ ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.

ಬೆಳ್ಳಂದೂರು ಕೆರೆಯಲ್ಲಿ ಹೊಗೆ ಕಾಣಿಸಿಕೊಂಡ ಪ್ರಕರಣ ಸೇರಿದಂತೆ ವರ್ತೂರು ಮತ್ತು ಅಗರ ಕೆರೆಗಳ ಮಾಲಿನ್ಯ ಕುರಿತ ಪತ್ರಿಕಾ ವರದಿ ಆಧರಿಸಿ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿ ಈ ತೀರ್ಪು ನೀಡಲಾಗಿದೆ.

ಈ ಮೂರೂ ಕೆರೆಗಳ ಪುನಶ್ಚೇತನ ಕಾರ್ಯಕ್ಕಾಗಿ ₹500 ಕೋಟಿ ಮೀಸಲಿಡಬೇಕು. ಕೆರೆಗಳ ಅಭಿವೃದ್ಧಿ ಕುರಿತ ಕಾರ್ಯಕ್ಷಮತೆಯ ಖಾತರಿ ಹಣವನ್ನಾಗಿ ಪ್ರತ್ಯೇಕವಾಗಿ ₹100 ಕೋಟಿ ಇರಿಸಬೇಕು ಎಂದು ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯಲ್‌ ನೇತೃತ್ವದ ಪೀಠ ರಾಜ್ಯಕ್ಕೆ ಸೂಚಿಸಿದೆ.

ಜಲಮೂಲಗಳ ಮಾಲಿನ್ಯ ಶಿಕ್ಷಾರ್ಹ ಅಪರಾಧವಾಗಿದ್ದು, ಇದಕ್ಕೆ ಕಾರಣವಾಗುವ ಘಟಕಗಳನ್ನು ಮುಚ್ಚಬೇಕು. ಇದಕ್ಕೆ ಯಾವುದೇ ಕಾರಣ ನೀಡುವಂತಿಲ್ಲ ಎಂದು ಸೂಚಿಸಲಾಗಿದೆ.

ಮೇಲುಸ್ತುವಾರಿಗೆ ಸಮಿತಿ

ಜಲಮೂಲಗಳ ಪುನಶ್ಚೇತನ ಕಾರ್ಯದ ಮೇಲುಸ್ತುವಾರಿಗಾಗಿ ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ಹೆಗ್ಡೆ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಿ ಆದೇಶಿಸಿರುವ ಪೀಠ, ಒಂದು ತಿಂಗಳೊಳಗೆ ಕ್ರಿಯಾಯೋಜನೆ ರೂಪಿಸುವ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಕಾಲಮಿತಿ ನಿಗದಿಪಡಿಸುವ ಹೊಣೆ ಸಮಿತಿಯದ್ದಾಗಿದೆ ಎಂದು ಹೇಳಿದೆ.

ಈ ಸಮಿತಿಯು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ರಾಮಚಂದ್ರನ್ ಅವರನ್ನೂ ಒಳಗೊಳ್ಳಲಿದ್ದು, ಇತರ ತಜ್ಞರನ್ನು ಸ್ವಯಂ ಆಗಿ ನೇಮಕ ಮಾಡಿಕೊಂಡು ಕೆರೆಗಳ ಅಭಿವೃದ್ಧಿ ಕಾರ್ಯದ ಮೇಲ್ವಿಚಾರಣೆಯ ಹೊಣೆ ನಿಭಾಯಿಸಬೇಕು. ರಾಜ್ಯ ಸರ್ಕಾರ ಸಮಿತಿಯ ಶಿಫಾರಸುಗಳನ್ನು ಪಾಲಿಸಿ ಸಹಕರಿಸಬೇಕು ಎಂದು ತಿಳಿಸಿದೆ.

ಕೆರೆಗಳ ಸಂರಕ್ಷಣೆ ಉದ್ದೇಶಕ್ಕೆ ಸಾರ್ವಜನಿಕರೂ ಒಳಗೊಳ್ಳುವಂತೆ ಸಮಿತಿಯೇ ಪ್ರೇರೇಪಿಸಬೇಕು. ಆಸಕ್ತರಿಂದ ಸಲಹೆ, ದೂರುಗಳನ್ನು ಸ್ವೀಕರಿಸಲು ಪ್ರತ್ಯೇಕ ವೆಬ್‌ಸೈಟ್ ಆರಂಭಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಸ್‌.ಪಿ. ವಾಂಗ್ಡಿ, ರಾಮಕೃಷ್ಣ ಹಾಗೂ ತಜ್ಞ ಸದಸ್ಯ ನಾಗಿನ್‌ ನಂದಾ ಅವರಿದ್ದ ಪೀಠ ನಿರ್ದೇಶನ ನೀಡಿದೆ.

ರಾಜ್ಯ ಸರ್ಕಾರ ದಂಡದ ಮೊತ್ತವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಾವತಿಸಬೇಕು. ಬಿಬಿಎಂಪಿಗೆ ವಿಧಿಸಲಾದ ದಂಡವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಾವತಿಸಬೇಕು. ಇದರಲ್ಲಿ ₹ 10 ಕೋಟಿಯನ್ನು ಮೇಲುಸ್ತುವಾರಿ ಸಮಿತಿ ಕಾರ್ಯ ನಿರ್ವಹಣೆಗಾಗಿ ವಿನಿಯೋಗಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಅಧಿಕಾರಿಗಳೇ ಹೊಣೆ
ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳೇ ಬೆಂಗಳೂರಿನ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. ಜಲಮೂಲಗಳ ಅಭಿವೃದ್ಧಿ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ನಿಯೋಜಿಸಬೇಕು. ಅಭಿವೃದ್ಧಿ ಕಾರ್ಯಕ್ಕೆ ಅವರನ್ನೇ ವೈಯಕ್ತಿಕ ಹೊಣೆಯಾಗಿಸಬೇಕು. ಈ ವಿಷಯವನ್ನು ಅವರ ಸೇವಾ ದಾಖಲೆಯಲ್ಲೂ ನಮೂದಿಸಬೇಕು ಎಂದು ಹಸಿರು ಪೀಠ ಒತ್ತಿ ಹೇಳಿದೆ.

ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಬೆಂಗಳೂರಿನ ಕೆರೆಗಳ ಸಂರಕ್ಷಣೆಯನ್ನು ತೀವ್ರವಾಗಿ ನಿರ್ಲಕ್ಷಿಸಿವೆ. ನೀರು ಹರಿದು ಬರುವ ರಾಜಕಾಲುವೆಗಳ ಅತಿಕ್ರಮಣ ತಡೆಯುವಲ್ಲಿ ವಿಫಲವಾಗಿವೆ. ಘನತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತದ ಕೆಲಸವಾದರೂ, ಕೆರೆಗಳಿಗೆ ತ್ಯಾಜ್ಯ ಹರಿಬಿಡುತ್ತಿರುವುದು ಗಂಭೀರ ಸ್ವರೂಪದ ಅಪರಾಧ ಎಂಬುದು ನ್ಯಾಯಪೀಠದ ಅಭಿಪ್ರಾಯವಾಗಿದೆ.

ಮೇಲ್ಮನವಿ

ಎನ್‌ಜಿಟಿ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಲಿದೆ ಎಂದು ಕಾನೂನು ಇಲಾಖೆ ಮೂಲಗಳು ತಿಳಿಸಿವೆ.

* ನಮ್ಮ ಹೋರಾಟಕ್ಕೆ ಸಂದ ಜಯ ಇದು. ಕೆರೆ ಸಂರಕ್ಷಣಾ ಸಮಿತಿಗಳ ಒಟ್ಟಾಭಿಪ್ರಾಯವನ್ನು ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ನೇತೃತ್ವದ ಸಮಿತಿ ಗಮನಕ್ಕೆ ತರುತ್ತೇವೆ

-ಎನ್‌.ಆರ್‌.ಸುರೇಶ್, ಮುಖ್ಯಸ್ಥ, ನಮ್ಮ ಬೆಂಗಳೂರು ಪ್ರತಿಷ್ಠಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT