ಗುರುವಾರ , ಫೆಬ್ರವರಿ 27, 2020
19 °C
ತಲ್ಲಣಗಳಿಗೆ ಅಕ್ಷರರೂಪ

ಕವಿಗಳಲ್ಲಿ ಸೂಕ್ಷ್ಮತೆ ಅತ್ಯಂತ ಅಗತ್ಯ: ಡಾ.ಲತಾ ಹಿರೇಗುತ್ತಿ

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚನ್ನಣ್ಣ ವಾಲಿಕಾರ ವೇದಿಕೆ (ಕಲಬುರ್ಗಿ): ಕವಿ ಎಸ್‌.ಪಿ ಸುಳ್ಳದ ಅವರ ‘ಕಲ್ಲಂಬುರ್ಗಿ’ ಕವಿತೆ ಕೇಳಿ ಸಭಾಂಗಣದಲ್ಲಿ ಶಿಳ್ಳೆಗಳು ಮೊಳಗಿದವು. ಗ್ಯಾರಂಟಿ ರಾಮಣ್ಣ ಅವರ ‘ಭೂಮಿ ತಾಯಿ ಕೂಗು’ ಕವಿತೆಗೆ  ಸಭಿಕರು ಕರತಾಡನಗಳ ಸುರಿಮಳೆ ಮೂಲಕ ಬೆನ್ನುತಟ್ಟಿ ಪ್ರೋತ್ಸಾಹಿಸಿದರು.

ನಗರದ ಗುಲಬರ್ಗಾವಿ.ವಿ ಆವರಣದಲ್ಲಿರುವ ಡಾ. ಬಿ.ಆರ್‌ ಅಂಬೇಡ್ಕರ್‌ ಸಭಾಂಗಣದಲ್ಲಿ ನಡೆದ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕಂಡ ದೃಶ್ಯಗಳಿವು.

ಕಲಬುರ್ಗಿಯ ಕವಿ ಶಿವಣ್ಣ ಇಜೇರಿ ಅವರ ‘ಆಧಾರ ಕೊಡಿ’ ಕವಿತೆ ಸಮಕಾಲಿನ ತವಕ ತೆರೆದಿಟ್ಟರೆ, ಹಾದಿ ಮಂಜುಳಾ ಶಿವಾನಂದ ಅವರು‘ನಿಮಗೆಷ್ಟು ಮಂದಿ ಗಂಡಂದಿರರು’ ಕವಿತೆಯಲ್ಲಿ ಅಂತರಂಗ– ಬಹಿರಂಗ ಸಾಂಗತ್ಯವನ್ನು ಸೊಗಸಾಗಿ ಸಾದರಪಡಿಸಿ ಕೊನೆಗೆ ‘ನನಗೆ ಸಕ್ಕರೆ, ಉಪ್ಪು, ಕೊಬ್ಬು ಹಾಗೂ ಥೈರಾಯ್ಡ ಗಂಡಂದಿರರು’ ಎಂದಾಗ ಜನ ಭೇಷ್‌ ಎಂದು ಚಪ್ಪಾಳೆ ತಟ್ಟಿದರು.

ನಬಿಲಾಲ್‌ ಮಕಾನದಾರ ಅವರ ಕೇಶರಾಶಿಯ ಕುರಿತ ಕವಿತೆ ವೈವಿಧ್ಯಮಯವಾಗಿತ್ತು. ರೋಹಿಣಿ ಯಾದವಾಡ ಅವು ‘ಆದಿ ಅನಾದಿ’ ಕವಿತೆಯಲ್ಲಿ ನಭಾಂಗಣಕ್ಕೆ ಹಾರಲು ತೋರಿದ ಧೈರ್ಯವನ್ನು ಊರೊಳಗಿನ ಗಲ್ಲಿಯಲ್ಲಿ ತೋರದಿರುವ ಹೆಣ್ಣಿನ ಅಭದ್ರತೆಯನ್ನು ಪ್ರತಿಪಾದಿಸಿ ಗಮನ ಸೆಳೆದರು.

ಅಂಜಲ ಬೆಳಗಲಿ ಅವರು ರೈತರ ಬಗೆಗಿನ ಕಾಳಜಿಯನ್ನು ಕಾವ್ಯದಲ್ಲಿ ತೋರಿದರು.

ಬಹುತೇಕ ಕವಿಗಳು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ, ಕ್ರೌರ್ಯ, ಲಿಂಗ ತಾರತಮ್ಯ, ವರದಕ್ಷಿಣೆ ಪಿಡುಗು ಹಾಗೂ ಸಾಮಾಜಿಕ ಸಮಸ್ಯೆ ಆಧರಿಸಿ ರಚಿಸಿದ ಕವಿತೆಗಳನ್ನು ವಾಚಿಸಿ
ದರೆ ಎನ್‌ಆರ್‌ಸಿ–ಸಿಎಎಗೆ ಪರ–ವಿರೋಧ ಕವನಗಳು ಕೇಳಿಬಂದವು.

ಅಂಧ ಕವಿಗಳಾದ ಪ್ರೊ.ಶಿವರಾಜ ಶಾಸ್ತ್ರಿ ಹೇರೂರ್‌ ಅವರು ಬ್ರೈಲ್‌ ಲಿಪಿಯಲ್ಲಿ ‘ಅನುಭವ ಮೀಮಾಂಸೆ, ಬಾಪು ಖಾಡೆ ಅವರು ‘ದೇವರ ಲೀಲೆ’ ಕವನಗಳ ಮೂಲಕ ಗಮನ ಸೆಳೆದರೆ ನಾಗಪ್ಪ ಬೆಳಮಗಿ ಅವರ ಚುಟುಕುಗಳು ಜನರನ್ನು ರಂಜಿಸಿದವು.

ಹಸು, ನಾಯಿ ಕೋತಿ ಪೂಜಿಸುವ ನಾಡಲ್ಲಿ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣದ ಬಗ್ಗೆ ಚಾಮರಾಜನಗರದ ಶಂಕರ ಅವರ ಆಕ್ರೋಶ ಭರಿತ ಕಾವ್ಯ ಮತ್ತು ವಿಜಯಪುರದ ದತ್ತಾತ್ರೇಯ ಹೊಸಮಠ ಅವರ ನೇತ್ರದಾನ ಪ್ರೋತ್ಸಾಹಿಸುವ ‘ಕುರುಡನ ಕಣ್ಣೀರು’ ಕವಿತೆ ಮನ ತಟ್ಟಿದವು.

ಸೂಕ್ಷ್ಮತೆ ಅಗತ್ಯ: ಕವಿಗಳಲ್ಲಿ ಸೂಕ್ಷ್ಮತೆ ಅತ್ಯಂತ ಅಗತ್ಯ. ಸಮಕಾಲಿನ ತವಕ ಹಾಗೂ ಸಮಾಜದಲ್ಲಿ ತಲ್ಲಣಗಳಿಗೆ ಧ್ವನಿಯಾಗುವ ಕವಿಗಳು ಸದಾ ಹೊಸತನ ರೂಢಿಸಿಕೊಳ್ಳಬೇಕು ಎಂದು  ಅಧ್ಯಕ್ಷತೆ ವಹಿಸಿದ್ದ ಡಾ. ಲತಾಹಿರೇಗುತ್ತಿ ಅಭಿಪ್ರಾಯಪಟ್ಟರು.

ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ, ಶಂಕರ ಬಿರಾದಾರ ಇದ್ದರು. ಡಾ.ಡಿ.ಕೆ ಚಿತ್ತಯ್ಯ ಪೂಜಾರ ಸ್ವಾಗತಿಸಿದರು. ಕನ್ನಡ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ನಿರೂಪಿಸಿದರು. ಬಿ.ಎಚ್‌ ಸತೀಶಗೌಡ ವಂದಿಸಿದರು.

‘ಹೌದು ಹುಲಿಯಾ’: ಕವಿಗೋಷ್ಠಿಯಲ್ಲಿ ಶಿವಣ್ಣ ಇಜೇರಿ, ಗ್ಯಾರಂಟಿ ರಾಮಣ್ಣ ಕಾವ್ಯ ವಾಚಿಸಿದಾಗ ಜನರು ಹೌದು ಹುಲಿಯಾ ಎಂದು ಕೂಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಗೋಷ್ಠಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

***

ಪ್ರಸ್ತುತ ವಿದ್ಯಮಾನಕ್ಕೆ ಕವಿಗೋಷ್ಠಿ ಕನ್ನಡಿ ಹಿಡಿದಿದೆ. ಇನ್ನಿತರ ಸಮ್ಮೇಳನಕ್ಕಿಂತ ಇಲ್ಲಿ ಯುವ ಕವಿಗಳು ತಮ್ಮ ಕವಿತೆ ಸಾದರಪಡಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ

–ಸರಸ್ವತಿ ಬಿರಾದಾರ, ಶಿಕ್ಷಕಿ ವಿಜಯಪುರ

ಕವಿಗೋಷ್ಠಿಯಲ್ಲಿ ಕಾವ್ಯ ವಾಚಿಸಿದ ಕವಿಗಳು ಪ್ರಾದೇಶಿಕ ಅಸಮತೋಲನ ಜತೆಗೆ ಲಿಂಗ ತಾರತಮ್ಯ ಹಾಗೂ ಸಮಕಾಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದು ಅರ್ಥಪೂರ್ಣವಾಗಿದೆ

–ಶರಣಪ್ಪ ಗುಂಡಗುರ್ತಿ,ಸಹಾಯಕ ಪ್ರಾಧ್ಯಾಪಕ, ಗುರುಮಠಕಲ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು