ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿಗೆ ಕನಕದಾಸರ ತತ್ವ ಸಂದೇಶ

ಭಕ್ತಿ ಪರಂಪರೆಯ ಒಳಹೊಕ್ಕು ತಮ್ಮತನವನ್ನು ಮೆರೆದ ದಾಸ ಶ್ರೇಷ್ಠರು
Last Updated 14 ನವೆಂಬರ್ 2019, 23:40 IST
ಅಕ್ಷರ ಗಾತ್ರ

ಹಾವೇರಿ: ಕನಕದಾಸರದು ಕನ್ನಡ ಹರಿದಾಸ ಪರಂಪರೆಯಲ್ಲಿ ದಿಟ್ಟ ಹೆಜ್ಜೆ. ಮೇಲ್ವರ್ಗದ ಪಂಕ್ತಿಗೆ ಮಾತ್ರ ಸೀಮಿತವಾದ ಭಕ್ತಿ ಪರಂಪರೆಯಲ್ಲಿ ಇವರು ಪ್ರವೇಶಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದರೂ, ಆ ಚಕ್ರವ್ಯೂಹವನ್ನು ಭೇದಿಸಿ ಒಳಹೊಕ್ಕು ತಮ್ಮತನವನ್ನು ಮೆರೆದರು.

ಕನಕದಾಸರ ಪೂರ್ವದ ಮತ್ತು ನಂತರದ ಭಕ್ತಿ ಪರಂಪರೆಯನ್ನು ಗಮನಿಸಿದರೆ, ಅದು ಸಾಂಪ್ರದಾಯಿಕ ನೆಲೆಯಲ್ಲಿಯೇ ಸಾಗಿರುವುದನ್ನು ಕಾಣಬಹುದು. ಆದರೆ, ಇವರು ಅದಕ್ಕೆ ವೈಚಾರಿಕ ಪ್ರಖರತೆಯ ನೆಲೆಯಲ್ಲಿ ಭಕ್ತಿಯನ್ನು ನೋಡಿದರು. ತನ್ನೆಲ್ಲ ಐಹಿಕ ಸುಖ-ಸಂಪತ್ತುಗಳನ್ನು ತ್ಯಾಗ ಮಾಡಿದರು. ‘ಅನುದಿನದಲ್ಲಿ ಬರುವ ಸುಖ-ದುಃಖ ನಿನ್ನದಯ್ಯ’ ಎಂದು ಭಗವಂತನಿಗೆ ಶರಣಾದರು.

ಕಲಿಯೂ, ಕವಿಯೂ ಆದ ಕನಕದಾಸರು ‘ದಾಸರಲ್ಲಿ ಕವಿ, ಕವಿಗಳಲ್ಲಿ ದಾಸರೆಂಬ’ ಹೆಗ್ಗಳಿಕೆಗೆ ಪಾತ್ರರಾದರು. ಕೀರ್ತನೆ, ಮುಂಡಿಗೆ, ಉಗಾಭೋಗ, ಸುಳಾದಿ, ದಂಡಕಗಳು ಮಾತ್ರವಲ್ಲದೇ, ಮೋಹನತರಂಗಿಣಿ, ರಾಮಧಾನ್ಯ ಚರಿತ್ರೆ, ನಳಚರಿತ್ರೆ, ಹರಿಭಕ್ತಿಸಾರ, ನೃಸಿಂಹಸ್ತವ ಎಂಬ ಕಾವ್ಯಗಳ ಮೂಲಕ ಜೀವಪರ ಸಂದೇಶಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವಂತಹ ಉಪದೇಶಗಳನ್ನು ನೀಡಿದರು.

ಅಹಂಕಾರ, ಢಾಂಭಿಕತನ, ಭಕ್ತಿ ಶೂನ್ಯತೆಯಿಂದ ಕೂಡಿ ಭೋಗ ಪ್ರವೃತ್ತಿಯಲ್ಲಿ ಕಾಲ ಕಳೆಯುತ್ತಿರುವುದನ್ನು ಕಟುವಾಗಿ ವಿಡಂಬಿಸಿದರು.ಭಕ್ತಿ ನಿಷ್ಠೆಗಳಿಲ್ಲದೆ ಹೊರಗಿನ ಮಡಿಗೆ, ಆಚಾರಗಳಿಗೆ ಪ್ರಾಧಾನ್ಯತೆ ಕೊಡುವ ಕಪಟಿಗಳನ್ನೂ ಟೀಕಿಸಿದರು. ‘ತೀರ್ಥ ಪಿಡಿದವರೆಲ್ಲ ತಿರುಮಾನಧಾರಿಗಳೆ, ಜನ್ಮ ಸಾರ್ಥಕವಿದಲ್ಲವರೆಲ್ಲ ಭಾವತರೆ?’ ಎಂದು ಢಾಂಭಿಕತೆಯನ್ನು ಹೊತ್ತು ಮೆರೆಸುವ ಮೂಢರನ್ನೂ ಅವರು ಖಂಡಿಸಿದರು.

ಸಮಾಜದಲ್ಲಿ ಗುಣಕ್ಕಿಂತ ಕುಲವೇ ಮುಖ್ಯವೆಂದು ಬೀಗುವವರನ್ನು ಕಂಡ ಕನಕದಾಸರು, ‘ಕುಲದ ನೆಲೆಯನೇನಾದರು ಬಲ್ಲಿರಾ’ ಎಂದು ಪ್ರಶ್ನಿಸುತ್ತಲೇ ಗುಣ ಮುಖ್ಯವೇ ಹೊರತು ಕುಲವಲ್ಲ ಎಂಬ ಸಂದೇಶವನ್ನು ಸಾರಿದರು. ‘ಈ ಲೋಕದಲ್ಲಿ ದುರ್ಜನರ ಸಂಗ ಬೇಡ. ನೈತಿಕ ನಡವಳಿಯೇ ಬದುಕಿನ ಜೀವಾಳ. ಆದ್ದರಿಂದ ಸದಾ ಸಜ್ಜನರ ಸಂಗದಲ್ಲಿಯೇ ಬಾಳಬೇಕು’ ಎಂಬಆಶಯವನ್ನೂ ವ್ಯಕ್ತಪಡಿಸಿದರು.

‘ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ?’ ಎಂದುನೈತಿಕತೆ ಇಲ್ಲದ ನಾಯಕರನ್ನು ತರಾಟೆಗೂ ತೆಗೆದುಕೊಂಡ ಕನಕದಾಸು, ‘ಇವರು ಧರ್ಮಕ್ಕೂ, ಮಾನವೀಯತೆಗೂ ದೂರ ನಿಲ್ಲವವರು. ಯಾವುದಕ್ಕೂ ಹೇಸದ, ಒಳಿತನ್ನು ಮಾಡದ ಇವರು ಸಮಾಜಕ್ಕೆ ಕಂಟಕರು’ ಎಂದೂ ಕರೆದಿದ್ದರು.

ಮನುಷ್ಯ ಸದಾಕಾಲ ಹಲವು ಹಸಿವುಗಳಿಂದ ಕೊರಗುತ್ತಿರುತ್ತಾನೆ. ತನ್ನ ಹಸಿವು ಪೂರೈಸಿಕೊಳ್ಳುವುದು, ಪರರ ಹಸಿವನ್ನು ಪೂರೈಸುವ ಜೀವಪರ ಕಾಳಜಿಬೇಕು. ಅದು ಆಗದಿದ್ದಾಗ, ನೀತಿ ಮಾರ್ಗ ಬಿಟ್ಟು ಅನೀತಿ ಮಾರ್ಗದ ಮೂಲಕ ಅವುಗಳನ್ನು ಪೂರೈಸಿಕೊಳ್ಳಲು ಇಚ್ಛಿಸುತ್ತಾನೆ. ಈ ಕುರಿತು ಕನಕದಾಸರು ಮುಂಚಿವಾಗಿಯೇ ಆಲೋಚನೆಯ ಎಚ್ಚರಿಕೆಯನ್ನು ಕೊಡುತ್ತಾರೆ.

ಕನಕದಾಸರ ಸಾಹಿತ್ಯದಲ್ಲಿ ನೈತಿಕ ಮೌಲ್ಯಗಳು ಬೀಜ ಮಂತ್ರದಂತೆ ಬೀತ್ತರಗೊಂಡಿವೆ. ಇಂತಹ ಅನೇಕ ಮೌಲ್ಯಗಳ ಸಂದೇಶ ಹೊತ್ತ ಕನಕದಾಸರು, ‘ಹೃದಯ ಹೊಲವನು ಮಾಡಿ, ತನುವ ನೇಗಿಲು ಮಾಡಿ, ನಾಲಗೆಯ ಕೊರಿಗೆ ಮಾಡಿ ಬಿತ್ತಿರಯ್ಯ’ ಎನ್ನುವ ಚಿಂತನೆಯ ನೆಲೆಯಲ್ಲಿ ಲೋಕದ ಒಳಿತನ್ನು ಬಯಸಿದ್ದಾರೆ.

ಕನಕದಾಸರು ತಾವು ಕಂಡದ್ದನ್ನು, ಅನುಭವಕ್ಕೆ ಬಂದುದನ್ನು ಅಭಿವ್ಯಕ್ತಿಸಿದ್ದಾರೆ. ಅಂದು ಅವರು ಹೇಳಿದ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದಂತವು. ಯವುದೇ ಒಂದು ಜಾತಿ, ಮತ, ಪ್ರದೇಶ, ಭಾಷೆಗೆ ಸೀಮಿತವಾಗದ ವಿಶ್ವ ಮಾನವ ಪರಿಕಲ್ಪನೆಯ ಸಂದೇಶಗಳು. ಹಾಗಾಗಿ ಇಂದಿನ ಆಧುನಿಕ ಸಮಾಜಕ್ಕೆ ಕನಕದಾಸರ ತತ್ವ ಸಂದೇಶಗಳ ಅವಶ್ಯಕತೆ ಇದೆ.

ಡಾ. ಜಗನ್ನಾಥ ಆರ್.ಗೇನಣ್ಣವರ,ಲೇಖಕರು, ಸಂಶೋಧಕರು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT