ಶನಿವಾರ, ಡಿಸೆಂಬರ್ 14, 2019
23 °C
ಪ್ರವಾಸೋದ್ಯಮ ಇಲಾಖೆ ಸೂಚನೆಗೆ ಸ್ಥಳೀಯರ ವಿರೋಧ

ತ್ರಿ–ಸ್ಟಾರ್ ಹೋಟೆಲ್‌ಗಾಗಿ ಹಂಪಿ ವಿವಿ ಚಿತ್ರಕಲಾ ಕೇಂದ್ರ ಸ್ಥಳಾಂತರಿಸಲು ಸೂಚನೆ

ಎಸ್.ಎಂ. ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಬಾದಾಮಿ: ಇಲ್ಲಿನ ಬನಶಂಕರಿ ದೇವಾಲಯ ಸಮೀಪದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೂರ್ತಿಶಿಲ್ಪ ಮತ್ತು ಚಿತ್ರಕಲಾ ಕೇಂದ್ರದ ಜಾಗದಲ್ಲಿ ತ್ರಿ–ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಉದ್ದೇಶಿರುವ ಪ್ರವಾಸೋದ್ಯಮ ಇಲಾಖೆಯು ಕೇಂದ್ರ ವನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚಿಸಿದೆ. ಇದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ.

ಚೊಳಚಗುಡ್ಡ ಗ್ರಾಮದ ಸರ್ವೇ ನಂ. 179 ರಲ್ಲಿರುವ 8 ಎಕರೆ ಜಾಗ ಪ್ರವಾಸೋದ್ಯಮ ಇಲಾಖೆಗೆ ಸೇರಿದೆ. ಅದೇ ಜಾಗದಲ್ಲಿ ಹಂಪಿ ಕನ್ನಡ ವಿ.ವಿಯ ಮೂರ್ತಿಶಿಲ್ಪ ಮತ್ತು ಚಿತ್ರಕಲಾ ಕೇಂದ್ರವಿದೆ. ಅಲ್ಲೀಗ ಹೋಟೆಲ್ ನಿರ್ಮಾಣಕ್ಕೆ ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ. ಈ ಕಾರಣದಿಂದ ಜಾಗ ಖಾಲಿ ಮಾಡುವಂತೆ ಕೇಂದ್ರದ ಆಡಳಿತಾಧಿಕಾರಿ ಡಾ.ಕೃಷ್ಣ ಕಟ್ಟಿ ಅವರಿಗೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸೂಚಿಸಿದೆ.

30 ವರ್ಷ ಗುತ್ತಿಗೆ: ಪ್ರವಾಸೋದ್ಯಮ ಇಲಾಖೆಯು 1995ರಲ್ಲಿ ಚಾಲುಕ್ಯ ಸಂದರ್ಶನ ಕೇಂದ್ರಕ್ಕಾಗಿ ಕಟ್ಟಿದ್ದ ಕಟ್ಟಡ ಬಳಕೆಯಾಗದೇ ಉಳಿದಿತ್ತು. ಅದರಲ್ಲಿಯೇ 1999 ರಲ್ಲಿ ಮೂರ್ತಿಶಿಲ್ಪ ಮತ್ತು ಚಿತ್ರಕಲಾ ಅಧ್ಯಯನ ಕೇಂದ್ರ ಆರಂಭಿಸಲಾಗಿತ್ತು. ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವ ಎಂ.ಪಿ.ಪ್ರಕಾಶ್ ಅವರ ಒತ್ತಾಸೆಯ ಮೇರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕಟ್ಟಡವನ್ನು ತಿಂಗಳಿಗೆ ₹1 ಸಾಂಕೇತಿಕ ದರ ನಿಗದಿಗೊಳಿಸಿ 30 ವರ್ಷಕ್ಕೆ ಗುತ್ತಿಗೆ ಕೊಡಲಾಗಿತ್ತು. ಆದರೆ ಯಾವುದೇ ಸಂದರ್ಭದಲ್ಲಿ ಸದರಿ ಕಟ್ಟಡವನ್ನು  ಪ್ರವಾಸೋದ್ಯಮ ಇಲಾಖೆಗೆ ಹಿಂದಿರುಗಿಸಬೇಕು ಎಂದೂ ಷರತ್ತು ವಿಧಿಸಲಾಗಿದೆ. ಅದರನ್ವಯ ಈಗ ಈ ಷರತ್ತನ್ನು ತೆರವುಗೊಳಿಸಬೇಕಿದೆ.

‘ಹೋರಾಟದ ಎಚ್ಚರಿಕೆ’

‘ಮಹಾಕೂಟ ಶಿವಯೋಗ ಮಂದಿರ ಮತ್ತು ಬನಶಂಕರಿಯಲ್ಲಿ ಸಾಕಷ್ಟು ಯಾತ್ರಿ ನಿವಾಸಗಳಿದ್ದರೂ ಪ್ರವಾಸಿಗರು, ಭಕ್ತರ ಕೊರತೆ ಇದೆ. ಅಲ್ಲಿ ಪ್ರವಾಸಿ ಮಂದಿರಗಳನ್ನು ನಿರ್ಮಿಸಿ ದಶಕಗಳಾದರೂ ಅವುಗಳು ಇನ್ನೂ ಆರಂಭವಾಗಿಲ್ಲ.ಹಾಗಾಗಿ ತ್ರಿ–ಸ್ಟಾರ್ ಹೋಟೆಲ್ ಬೇಡ. ಹಂಪಿ ಕನ್ನಡ ವಿ.ವಿ ಕೇಂದ್ರ ಅಲ್ಲೇ ಉಳಿಸಬೇಕು. ಸ್ಥಳಾಂತರ ಮಾಡಿದರೆ ಹೋರಾಟ ನಡೆಸುತ್ತೇವೆ’ ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಣ್ಣ ಹಿರೇಹಾಳ ಎಚ್ಚರಿಕೆ ನೀಡಿದರು.

***

ಕೇಂದ್ರದ ಸ್ಥಳಾಂತರಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಪತ್ರ ಬಂದಿದೆ. ಅದನ್ನು ಕನ್ನಡದ ವಿ.ವಿ ಕುಲಸಚಿವರ ಗಮನಕ್ಕೆ ತಂದಿರುವೆ

– ಡಾ. ಕೃಷ್ಣ ಕಟ್ಟಿ, ಆಡಳಿತಾಧಿಕಾರಿ, ಹಂಪಿ ಕನ್ನಡ ವಿ.ವಿ ಕೇಂದ್ರ ಬಾದಾಮಿ-ಬನಶಂಕರಿ

ಚಾಲುಕ್ಯರ ಸಾಂಪ್ರದಾಯಿಕ ಮೂರ್ತಿಶಿಲ್ಪ ಕಲೆ ಉಳಿಯಲಿ ಎಂಬುದು ಡಾ.ಎಂ.ಎಂ. ಕಲಬುರ್ಗಿ ಅವರ ಕನಸಾಗಿತ್ತು. ಹಾಗಾಗಿ ಈ ಕೇಂದ್ರವು ಇಲ್ಲಿಯೇ ಉಳಿಯಬೇಕು

- ಡಾ.ಎಸ್.ಐ.ಪತ್ತಾರ, ಇತಿಹಾಸ ಸಂಶೋಧಕ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು