ಗುರುವಾರ , ಆಗಸ್ಟ್ 22, 2019
27 °C

ದೇಶಭಕ್ತಿಯ ಹೆಸರಿನಲ್ಲಿ ಸರ್ಕಾರದ ಅಂಧಭಕ್ತಿ ದೊಡ್ಡ ದೇಶದ್ರೋಹ: ಕನ್ಹಯ್ಯ ಕುಮಾರ್

Published:
Updated:

ಮಂಗಳೂರು: 'ದೇಶದೊಳಗೆ ಕೆಲವರು ದೇಶಭಕ್ತಿಯ ಹೆಸರಿನಲ್ಲಿ ಒಂದು ಸರ್ಕಾರದ ಭಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಇದು ದೊಡ್ಡ ದೇಶದ್ರೋಹ' ಎಂದು ಸಿಪಿಐ ಯುವ ನಾಯಕ ಡಾ.ಕನ್ಹಯ್ಯ ಕುಮಾರ್ ಹೇಳಿದರು.

ನಗರದ ಬಲ್ಮಠದಲ್ಲಿರುವ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ನಡೆಯುತ್ತಿರುವ ಬಿ.ವಿ.ಕಕ್ಕಿಲ್ಲಾಯ ಜನ್ಮ‌ ಶತಾಬ್ದಿ  ಕಾರ್ಯಕ್ರಮದಲ್ಲಿ 'ಕವಲು ದಾರಿಯಲ್ಲಿ ಭಾರತದ ಯುವಕರು' ಕುರಿತು ಅವರು ಮಾತನಾಡಿದರು.

ಈಗ ಜನ ಚಳವಳಿಗಳು ಹುಟ್ಟದಂತೆ ತಡೆಯಲಾಗುತ್ತಿದೆ. ಒಂದು ಚಳವಳಿಯ ಜನರನ್ನು ಮತ್ತೊಂದು ಚಳವಳಿಯ ವಿರುದ್ಧ ಎತ್ತಿ ಕಟ್ಟಲಾಗುತ್ತಿದೆ. ಯುವಕರನ್ನು ಅಂಧ ಶ್ರದ್ಧೆಯ ಸಮೂಹ, ಗುಂಪನ್ನಾಗಿ‌ ರೂಪಿಸಲಾಗುತ್ತಿದೆ. ಈ ಬಗ್ಗೆ ದೇಶದಲ್ಲಿ ಎಚ್ಚರ ಮೂಡಬೇಕಿದೆ ಎಂದರು.

ಬಿಜೆಪಿ ಈಗ ಹೊಸದಾಗಿ ಏನನ್ನೂ ಹೇಳುತ್ತಿಲ್ಲ. ಹಿಂದೂ - ಮುಸ್ಲಿಮರನ್ನು ವಿಭಜಿಸಿ ರಾಜಕಾರಣ ಮಾಡುವ ತಂತ್ರಗಾರಿಕೆ ಕುರಿತು ಭಾರತೀಯ ಜನಸಂಘದ ಆರಂಭದ ಸಭೆಗಳಲ್ಲೇ ಚರ್ಚೆ ನಡೆದಿತ್ತು. ಬಿಜೆಪಿ ಕೂಡ ಆರಂಭದಿಂದ ಇದನ್ನೇ ಮಾಡಿಕೊಂಡು ಬಂದಿದೆ ಎಂದು ಹೇಳಿದರು.

ತಪ್ಪು ಮಾಹಿತಿ ಪೂರೈಕೆ, ಅಪಪ್ರಚಾರ, ಪ್ರಜಾಪ್ರಭುತ್ವ ವಿರೋಧಿ ನಿಲುವುಗಳನ್ನು ಯುವಕರೊಳಗೆ ತುಂಬಿ ಅವರನ್ನು ಬಲಿಪಶು ಮಾಡಲಾಗುತ್ತಿದೆ. ಆ ಮೂಲಕ ಜನವಿರೋಧಿ ರಾಜಕಾರಣ ಬಲಗೊಳ್ಳುತ್ತಿದೆ ಎಂದರು. ದೇಶದಲ್ಲಿ ಈಗ ಯುವಕರ ಮುಂದೆ ಉದ್ಯೋಗದ ಆಯ್ಕೆಯ ಅವಕಾಶಗಳಿಲ್ಲ. ಭಾರತೀಯ ಯುವಕರನ್ನು ಕಡಿಮೆ ದರಕ್ಕೆ ಸಿಗುವ ಕಾರ್ಮಿಕರನ್ನಾಗಿ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ಎಂದರೆ ಬಹುಮತ ಇರುವವರ ಮಾತುಗಳಿಗೆ ಮಾತ್ರ ಬೆಲೆ ನೀಡುವುದಲ್ಲ. ಎಲ್ಲ ವರ್ಗ, ಸಮುದಾಯದ ಮಾತುಗಳಿಗೆ ಕಿವಿಗೊಡುವುದು ನಿಜವಾದ ಪ್ರಜಾಪ್ರಭುತ್ವ. ಇದನ್ನು ಆಳುವ ಸರ್ಕಾರಕ್ಕೆ ಅರ್ಥ ಮಾಡಿಸಬೇಕಿದೆ. ಸಂವಿಧಾನದ ರಕ್ಷಣೆಯ ಅಡಿಯಲ್ಲಿ ದೇಶದಲ್ಲಿ ಸಮಾಜವಾದಿ, ಜಾತ್ಯತೀತ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ ಎಂದರು.

ದೇಶದಲ್ಲಿ ಪ್ರಜಾಪ್ರಭುತ್ವವಾದಿ ಚಳವಳಿಗಳನ್ನು ಹತ್ತಿಕ್ಕುವ ದುರುದ್ದೇಶದಿಂದ ವಿಶ್ವವಿದ್ಯಾಲಯಗಳಿಗೆ ಅನುದಾನ ಕಡಿತ ಮಾಡಲಾಗುತ್ತಿದೆ. ದೂರ ಶಿಕ್ಷಣದಿಂದ ಚಳವಳಿಗಳು ಜನ್ಮ ತಳೆಯಲಾರವು ಎಂಬುದು ಕೇಂದ್ರ ಸರ್ಕಾರದ ನಿಲುವು ಎಂದು ಆರೋಪಿಸಿದರು.

Post Comments (+)