ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ ಅಖಾಡದಲ್ಲೊಂದು ಸುತ್ತು| ಕುಮಠಳ್ಳಿಗಿಂತಲೂ ಸವದಿಗೇ ಹೆಚ್ಚಿನ ಪ್ರತಿಷ್ಠೆ!

ಗಡಿ ಕ್ಷೇತ್ರದಲ್ಲಿ ಬಿಜೆಪಿ– ಕಾಂಗ್ರೆಸ್‌ ನೇರ ಹಣಾಹಣಿ
Last Updated 1 ಡಿಸೆಂಬರ್ 2019, 11:21 IST
ಅಕ್ಷರ ಗಾತ್ರ

ಅಥಣಿ: ಕ್ಷೇತ್ರ ಕಳೆದುಕೊಳ್ಳುವುದು ಗೊತ್ತಿದ್ದರೂ ಮತ್ತು ಹಿಂದಿನ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ್ದ ‘ವಿರೋಧಿ’ ಜೊತೆಯೇ ಸಖ್ಯ ಬೆಳೆಸಿಕೊಂಡು ಅವರನ್ನು ಗೆಲ್ಲಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಇದ್ದಾರೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಬೀಳಿಸಲು ಕಾಂಗ್ರೆಸ್‌ ತಂತ್ರ ಹೆಣೆದಿರುವುದರಿಂದಾಗಿ ಅಥಣಿ ಅಖಾಡ ರಂಗೇರಿದೆ.

ಹೋದ ಚುನಾವಣೆಯಲ್ಲಿ ಸೋತಿದ್ದರೂ ಸಿಕ್ಕಿರುವ ಗಾದಿಯನ್ನೇ ಪಣಕ್ಕಿಟ್ಟಿರುವ ಸವದಿ, ವರಿಷ್ಠರ ವಿಶ್ವಾಸ ಉಳಿಸಿಕೊಳ್ಳುವ ಸಂದಿಗ್ಧದಲ್ಲಿದ್ದಾರೆ. ರಾಜಕೀಯ ಭವಿಷ್ಯ ‘ಮಸುಕಾಗಿ ಕಾಣಿಸುತ್ತಿದ್ದರೂ’ ಸದ್ಯಕ್ಕೆ ಕೈಯಲ್ಲಿರುವ ಅಧಿಕಾರ ಕಾಪಾಡಿಕೊಳ್ಳಲು ದ್ವೇಷ ಪಕ್ಕಕ್ಕಿಟ್ಟಿದ್ದಾರೆ.

ಕಣದಲ್ಲಿ ಎಂಟು ಮಂದಿ ಇದ್ದರೂ ಬಿಜೆಪಿ– ಕಾಂಗ್ರೆಸ್‌ ನಡುವೆಯೇ ನೇರ ಜಿದ್ದಾಜಿದ್ದಿ. ಬಿಜೆಪಿಯಿಂದ ಮಹೇಶ ಕುಮಠಳ್ಳಿ, ಕಾಂಗ್ರೆಸ್‌ನಿಂದ ಗಜಾನನ ಮಂಗಸೂಳಿ ಅಭ್ಯರ್ಥಿಯಾಗಿದ್ದಾರೆ. ಸರ್ಕಾರದ ಉಳಿವಿನ ಪ್ರಶ್ನೆ ಇರುವುದರಿಂದ, ವೈಯಕ್ತಿಕ ವರ್ಚಸ್ಸು ಹೊಂದಿರುವ ಸವದಿ ಅವರನ್ನೇ ಅಭ್ಯರ್ಥಿ ಎಂದು ಬಿಜೆಪಿಯವರು ಬಿಂಬಿಸಿದ್ದಾರೆ. ಗೆಲ್ಲಿಸಿದರೆ ಕ್ಷೇತ್ರಕ್ಕೆ ಮತ್ತೊಂದು ಸಚಿವ ಸ್ಥಾನದ ‘ಆಫರ್‌’ ಅನ್ನೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ್ದಾರೆ. ಸವದಿ ಸ್ಥಾನ ಅಬಾಧಿತ ಎನ್ನುವ ಭರವಸೆ ಕೊಟ್ಟು, ಜನರನ್ನು ಚಿಂತನೆಗೆ ದೂಡಿದ್ದಾರೆ!

ವೀರಶೈವ ಲಿಂಗಾಯತರು ಕ್ಷೇತ್ರದಲ್ಲಿ ನಿರ್ಣಾಯಕರಾಗಿದ್ದಾರೆ. ಈ ಪೈಕಿ ಪಂಚಮಸಾಲಿ ಸಮಾಜದವರು ಹೆಚ್ಚಿದ್ದಾರೆ. ಕುಮಠಳ್ಳಿ ಪಂಚಮಸಾಲಿ ಸಮಾಜದವರು. ಮಂಗಸೂಳಿ ಬಣಜಿಗರು. ಮುಸ್ಲಿಮರು, ದಲಿತರು, ಕುರುಬರು, ಬ್ರಾಹ್ಮಣರು ನಂತರದ ಸ್ಥಾನದಲ್ಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ– ಲಿಂಗಾಯತರ ಮನ ಗೆಲ್ಲಲು ಅಭ್ಯರ್ಥಿಗಳು ಹೆಚ್ಚಿನ 'ಶ್ರಮ' ಹಾಕುತ್ತಿದ್ದಾರೆ.

ಮೊದಲ ಉಪಚುನಾವಣೆ:ಇದೇ ಮೊದಲು ಇಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಪ್ರಥಮ ಬಾರಿಗೆ ಗೆದ್ದಿದ್ದ ಕುಮಠಳ್ಳಿ ಒಂದೂವರೆ ವರ್ಷದಲ್ಲೇ ರಾಜೀನಾಮೆ ಕೊಟ್ಟು ಪಕ್ಷಾಂತರ ಮಾಡಿದ್ದಾರೆ. ಬಿಜೆಪಿಯಲ್ಲಿ, ಸವದಿ- ಕುಮಠಳ್ಳಿ ಬೆಂಬಲಿಗರಲ್ಲಿ ಸಮನ್ವಯ ಮೂಡಿಲ್ಲ. ಅವರನ್ನು ಕಮಲದಡಿಗೆ ತರುವುದೇ ಮುಖಂಡರಿಗೆ ಸವಾಲಾಗಿದೆ.

ಕುಮಠಳ್ಳಿ ಗೆಲುವಿಗೆ ದುಡಿದಿದ್ದವರಲ್ಲಿ ಒಬ್ಬರಾದ ಮಂಗಸೂಳಿ ಈಗ ಪ್ರತಿಸ್ಪರ್ಧಿ. ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವ ಅವರು, ‘1999ರ ನಂತರ 2018ರಲ್ಲಿ ಇಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಪಕ್ಷ ಬಲಪಡಿಸಲು ನಾವೆಲ್ಲಾ ಶ್ರಮಿಸಿದ್ದೇವೆ. ನಮಗೆ ಹಾಗೂ ಕೃಷ್ಣಾ ನದಿ ಪ್ರವಾಹದಿಂದ ಸಂತ್ರಸ್ತರಾದವರ ಸಂಕಷ್ಟಗಳಿಗೆ ಸ್ಪಂದಿಸದವರಿಗೆ ಪಾಠ ಕಲಿಸಬೇಕು’ ಎಂದು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ.

ಕ್ಷೇತ್ರದಲ್ಲೇ ಬೀಡು ಬಿಟ್ಟಿರುವ ಶಾಸಕರಾದ ಎಂ.ಬಿ. ಪಾಟೀಲ ಹಾಗೂ ಲಕ್ಷ್ಮಿ ಹೆಬ್ಬಾಳಕರ ‘ಅನರ್ಹ ಶಾಸಕರನ್ನು ಜನತಾ ನ್ಯಾಯಾಲಯದಲ್ಲೂ ಶಿಕ್ಷಿಸಿ, ಕುಮಠಳ್ಳಿಯಿಂದ ಹಣ ತಗೊಳ್ಳಿ, ಮತ ನಮಗೇ ಕೊಡಿ’ ಎಂದು ಹೇಳುತ್ತಿದ್ದಾರೆ. ಇದು ಕಾಂಚಾಣ ಕುಣಿತದ ಸೂಕ್ಷ್ಮ ಬಿಚ್ಚಿಡುತ್ತಿದೆ.

ಒಳೇಟಿನ ಭಯ:ಬಿಜೆಪಿಯವರು ‘ಅಭಿವೃದ್ಧಿಯೇ ಕಾರ್ಯಸೂಚಿ’ ಎನ್ನುತ್ತಿದ್ದಾರೆ. ‘ಕೊಟ್ಟ ಕುದುರೆ ಏರದೇಕುಮಠಳ್ಳಿ ಇನ್ನೊಂದನ್ನು ಕೇಳುತ್ತಿದ್ದಾರೆ’ ಎಂದು ಕಾಂಗ್ರೆಸ್‌ನವರು ಟೀಕಿಸುತ್ತಿದ್ದಾರೆ. ಕುಮಠಳ್ಳಿ ಸೇರಿದಂತೆ ಬಿಜೆಪಿಯವರನ್ನು ನೆರೆ ಸಂತ್ರಸ್ತರು ತರಾಟೆಗೆ ತೆಗೆದುಕೊಂಡಿದ್ದನ್ನು ‘ಮತ’ವಾಗಿಸಿಕೊಳ್ಳಲು ಯೋಜಿಸಿರುವ ಕಾಂಗ್ರೆಸ್, ನೆರೆಬಾಧಿತ ಪ್ರದೇಶಗಳನ್ನು ಕೇಂದ್ರೀಕರಿಸಿದೆ.

ಮಂಗಸೂಳಿ ಬಹಿರಂಗವಾಗಿಯೇ ಸವದಿ ಕಾಲಿಗೆ ನಮಸ್ಕರಿಸಿದ್ದರು! ಕಾಂಗ್ರೆಸ್‌ ಟಿಕೆಟ್ ವಂಚಿತರಲ್ಲಿನ ಅಸಮಾಧಾನದ ಹೊಗೆ ಆರಿಲ್ಲ. ಹೀಗಾಗಿ, ಎರಡೂ ಪಕ್ಷದವರಿಗೂ ‘ಒಳ ಏಟಿನ’ ಭಯವಿದೆ.

ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಗುರಪ್ಪ ದಾಶ್ಯಾಳ ಕಣದಿಂದ ಹಿಂದೆ ಸರಿದಿದ್ದಾರೆ. ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ ಜೆಡಿಎಸ್‌ ಬೆಂಬಲಿತ ಎಂದು ಹೇಳಿಕೊಂಡಿದ್ದರು. ಅವರನ್ನು ಜೆಡಿಎಸ್‌ ಅಥಣಿ ಬ್ಲಾಕ್ ಘಟಕ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದ ಮುಖಂಡರು, ‘ಜೆಡಿಎಸ್‌ನಿಂದ ಯಾರಿಗೂ ಬೆಂಬಲವಿಲ್ಲ’ ಎಂದಿದ್ದಾರೆ. ಆ ಪಕ್ಷದವರ ‘ಒಲವು’ ಯಾರಿಗೆ ಎನ್ನುವುದು ಸ್ಪಷ್ಟವಿಲ್ಲ.

ಸವದಿ ವರ್ಚಸ್ಸು ಮಹೇಶಗೆ ವರವಾದೀತೇ? ಸಂತ್ರಸ್ತರ ಸಿಟ್ಟು ಕಾಂಗ್ರೆಸ್‌ ಪರ ಮತಗಳಾಗಿ ಪರಿವರ್ತನೆ ಆಗುತ್ತವೆಯೇ? ‘ಸವದಿ ಸಾಹುಕಾರ’ ತಮ್ಮ ಬೆಂಬಲಿಗರಿಗೆ ಕೊಡುವ ‘ಕೊನೆ ಕ್ಷಣದ ಸೂಚನೆ’ ಏನಾಗಿರಲಿದೆ ಎನ್ನುವುದರ ಮೇಲೆ ಫಲಿತಾಂಶ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT