ಸೋಮವಾರ, ಫೆಬ್ರವರಿ 24, 2020
19 °C

ಯಡಿಯೂರಪ್ಪ ಸರ್ಕಾರ ಸೇರಿದ 10 ಸಂಪುಟ ದರ್ಜೆ ಸಚಿವರ ಪಟ್ಟಿ ಇಲ್ಲಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

New Cabinet Ministers inducted to Karnataka Government

ಬೆಂಗಳೂರು: ಶಾಸಕತ್ವದಿಂದ 'ಅನರ್ಹಗೊಂಡು' ಬಿಜೆಪಿಗೆ ಸೇರಿ ಉಪಚುನಾವಣೆಯಲ್ಲಿ ಗೆದ್ದು ‘ಅರ್ಹ’ರಾದ 10 ಶಾಸಕರು ಸಚಿವರಾಗಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಎರಡನೇ ಹಂತದಲ್ಲಿ ಸಚಿವ ಸಂಪುಟವನ್ನು ಗುರುವಾರ ವಿಸ್ತರಿಸಲಾಯಿತು. ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ವಜುಭಾಯ್‌ ವಾಲಾ ಅವರು ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. 

ಈ ಶಾಸಕರನ್ನು ಅಂದಿನ ಸ್ಪೀಕರ್ ಅನರ್ಹಗೊಳಿಸಿದ್ದು, ಉಪಚುನಾವಣೆಯಲ್ಲಿ ಗೆದ್ದ ಬಳಿಕ 'ಅರ್ಹತೆ' ಪಡೆದುಕೊಂಡ ಈ ಶಾಸಕರು ಈಗ ಬಿಎಸ್‌ವೈ ಸಂಪುಟ ಸೇರ್ಪಡೆಯಾಗಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾದ ಹೊಸ ಸಚಿವರ ಪಟ್ಟಿ ಇಲ್ಲಿದೆ.

1. ಯಶವಂತಪುರದ ಎಸ್.ಟಿ.ಸೋಮಶೇಖರ್
2. ಗೋಕಾಕದ ರಮೇಶ್ ಜಾರಕಿಹೊಳಿ
3. ಹೊಸಪೇಟೆಯ ಆನಂದ ಸಿಂಗ್
4. ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್
5. ಕೆ.ಆರ್.ಪುರದ ಭೈರತಿ ಬಸವರಾಜ
6. ಯಲ್ಲಾಪುರದ ಶಿವರಾಮ ಹೆಬ್ಬಾರ್
7. ಹಿರೇಕೆರೂರಿನ ಬಿ.ಸಿ. ಪಾಟೀಲ್
8. ಮಹಾಲಕ್ಷ್ಮಿ ಲೇಔಟ್‌ನ ಕೆ.ಗೋಪಾಲಯ್ಯ
9. ಕೆ.ಆರ್.ಪೇಟೆಯ ನಾರಾಯಣ ಗೌಡ
10. ಕಾಗವಾಡದ ಶ್ರೀಮಂತ ಪಾಟೀಲ್

ಹುಣಸೂರಿನ ಎಚ್.ವಿಶ್ವನಾಥ್, ಅಥಣಿಯ ಮಹೇಶ್ ಕುಮಟಳ್ಳಿ, ಮಸ್ಕಿಯ ಪ್ರತಾಪ ಗೌಡ ಪಾಟೀಲ, ರಾಜರಾಜೇಶ್ವರಿ ನಗರದ ಮುನಿರತ್ನ, ರಾಣೆಬೆನ್ನೂರಿನ ಆರ್.ಶಂಕರ್, ಹೊಸಪೇಟೆಯ ಎಂ.ಟಿ.ಬಿ.ನಾಗರಾಜ್ ಅವರು ಅವರು ತಮ್ಮ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರಾದರೂ, ಸಚಿವ ಪದವಿ ಸಿಕ್ಕಿರಲಿಲ್ಲ.

ಹುಣಸೂರಿನಲ್ಲಿ ವಿಶ್ವನಾಥ್, ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್, ಶಿವಾಜಿನಗರದಲ್ಲಿ ಶರವಣ ಅವರು ಉಪಚುನಾವಣೆಯಲ್ಲಿ ಸೋತಿದ್ದರು. ಮುನಿರತ್ನ ಹಾಗೂ ಪ್ರತಾಪಗೌಡ ಪಾಟೀಲ್ ಕ್ಷೇತ್ರಗಳ ಚುನಾವಣೆ ನಡೆದಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿದ್ದ ಆರ್.ಶಂಕರ್ ಅವರು ಬಿಜೆಪಿ ಸೇರಿದ್ದರೂ ತಮ್ಮ ಕ್ಷೇತ್ರವನ್ನು ಬಿಜೆಪಿ ಅಭ್ಯರ್ಥಿಗೆ ಬಿಟ್ಟುಕೊಟ್ಟಿದ್ದರು. ಅವರಿಗೂ ವಿಧಾನ ಪರಿಷತ್ ಸ್ಥಾನ ನೀಡುವ ಸಾಧ್ಯತೆಗಳಿವೆ.

ಈ 16 ಕ್ಷೇತ್ರಗಳಿಗೆ ಡಿ.5ರಂದು ಉಪಚುನಾವಣೆ ನಡೆದು ಡಿ.9ರಂದು ಫಲಿತಾಂಶ ಬಂದಿತ್ತು. 15ರಲ್ಲಿ 12 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಈ ಕಾರಣದಿಂದ ಯಡಿಯೂರಪ್ಪ ಸರ್ಕಾರಕ್ಕೆ ಬಹುಮತವೂ ಗಟ್ಟಿಯಾಗಿತ್ತು.

ವಿವರ ಇಲ್ಲಿದೆ: 2019 ಡಿ. 9ರಂದು ಪ್ರಕಟವಾದ ಫಲಿತಾಂಶದಲ್ಲಿ ಗೆದ್ದವರ, ಸೋತವರ ಪಟ್ಟಿ

ಇದಕ್ಕೆ ಮುನ್ನ ಈ ಶಾಸಕರು ಬಿಜೆಪಿ ಸೇರ್ಪಡೆಯಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, "ಇಂದಿನ ಮಾಜಿ ಶಾಸಕರು, ನಾಳೆಯ ಭಾವಿ ಸಚಿವರು" ಎಂದು ಹೇಳಿ, ಈ ಮುಖಂಡರು ಮಾಡಿದ ತ್ಯಾಗವನ್ನು ಕೊಂಡಾಡಿ ಭರವಸೆಯನ್ನೂ ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು