ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು 1 ವಾರ ಲಾಕ್, ಮಂಗಳವಾರ ರಾತ್ರಿಯಿಂದ ಜಾರಿ

ವೈದ್ಯಕೀಯ ಯುಜಿ, ಪಿಜಿ ಪರೀಕ್ಷೆಗಳು ಅಬಾಧಿತ
Last Updated 11 ಜುಲೈ 2020, 19:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ತೀವ್ರವಾಗಿ ಏರುತ್ತಿರುವ ಬೆನ್ನಲ್ಲೇ, ಪರಿಸ್ಥಿತಿಯನ್ನು ಹತೋಟಿಗೆ ತರಲು ಮುಂದಾಗಿರುವ ಸರ್ಕಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಂಗಳವಾರ (ಜುಲೈ 14) ರಾತ್ರಿ 8 ಗಂಟೆಯಿಂದ ಇದೇ 22ರ ಬೆಳಿಗ್ಗೆ 5ಗಂಟೆಯವರೆಗೆ ಲಾಕ್‌ಡೌನ್‌ ಘೋಷಿಸಿದೆ.

ವಾರದಿಂದೀಚೆಗೆ ಬೆಂಗಳೂರು ನಗರದಲ್ಲಿ ನಿತ್ಯ ಒಂದು ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಯಾರಿಂದ ಯಾರಿಗೆ ಹರಡಿದೆ ಎಂಬುದೇ ಪತ್ತೆಯಾಗುತ್ತಿಲ್ಲ. ಹರಡುವಿಕೆಯ ಸಂಪರ್ಕದ ಕೊಂಡಿಗಳನ್ನು ತಪ್ಪಿಸದೇ ಇದ್ದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಎಂಟು ವಲಯಗಳಿಗೆ ಉಸ್ತುವಾರಿಯಾಗಿ ಸಚಿವರು ಹಾಗೂ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಚಿವರು, ಅಧಿಕಾರಿಗಳು ಮತ್ತು ತಜ್ಞರ ಸಲಹೆ ಪಡೆದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮತ್ತೆ ಲಾಕ್‌ಡೌನ್‌ ಜಾರಿಮಾಡುವ ನಿರ್ಣಯವನ್ನು ಶನಿವಾರ ಸಂಜೆ ಪ್ರಕಟಿಸಿದರು.

ಖಾಸಗಿ ಆಸ್ಪತ್ರೆಗಳ ಅಸಹಕಾರ: ‘ಶನಿವಾರ ಸಂಜೆಯೊಳಗೆ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಲಭ್ಯ ಇರುವ ಹಾಸಿಗೆಗಳ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದ್ದರೂ ಅದನ್ನು ಪಾಲಿಸಿಲ್ಲ. ರಾತ್ರಿಯೊಳಗಾದರೂ ಮಾಹಿತಿ ನೀಡಿದರೆ ಮಾತ್ರ ಭಾನುವಾರದಿಂದ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಹಾಸಿಗೆಗಳ ಲಭ್ಯತೆ ಬಗ್ಗೆ ಮಾಹಿತಿ ನೀಡಬಹುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.‌

ಎಚ್‌ಡಿಕೆ ಬೆಂಬಲ: ಲಾಕ್‌ಡೌನ್‌ ನಿರ್ಧಾರವನ್ನು ಬೆಂಬಲಿಸಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ‘ಸರಕು ಸಾಗಣೆ ವಾಹನಗಳನ್ನು ಹೊರತುಪಡಿಸಿ ಅಂತರ ಜಿಲ್ಲಾ ಸಂಚಾರವನ್ನು ನಿರ್ಬಂಧಿಸಬೇಕು. ಅಧಿಕ ಪ್ರಕರಣಗಳು ದಾಖಲಾಗುತ್ತಿರುವ ಇತರ ಜಿಲ್ಲೆಗಳಲ್ಲೂ ಮತ್ತೆ ಲಾಕ್‌ಡೌನ್‌ ಜಾರಿಗೊಳಿಸಿದರೆ ನಾನು ಬೆಂಬಲಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

***

ಕೋವಿಡ್‌ ಸೇನಾನಿಗಳ ಸೇವೆಗೆ ನಾನು ಇನ್ನೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ. ಸೋಂಕು ಹರಡುವುದನ್ನು ನಿಯಂತ್ರಿಸಲು ನಿಮ್ಮ ಸಹಯೋಗ ಅತಿ ಅಗತ್ಯ

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

***

ಏನೇನು ಇರಲಿದೆ?

ಆಸ್ಪತ್ರೆಗಳು, ದಿನಸಿ, ಹಾಲು, ಹಣ್ಣು, ತರಕಾರಿ, ಔಷಧಿ ಮೊದಲಾದ ದಿನಳಕೆಯ ಅಗತ್ಯ ವಸ್ತುಗಳು ಲಭ್ಯವಿರುತ್ತವೆ.

ಈಗಾಗಲೇ ನಿಗದಿಯಾಗಿರುವ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳು ನಡೆಯಲಿವೆ.

ಏನೇನು ಇರುವುದಿಲ್ಲ?

ಹಿಂದೆ ಲಾಕ್‌ಡೌನ್ ಘೋಷಿಸಿದ ಅವಧಿಯಲ್ಲಿ ನಿರ್ಬಂಧ ವಿಧಿಸಿದಂತೆ ಬಸ್‌, ಆಟೋ, ಕ್ಯಾಬ್‌ಗಳ ಸಂಚಾರಕ್ಕೆ, ಅಗತ್ಯ ಸೇವೆಯ ವ್ಯಾಪ್ತಿಯಲ್ಲಿ ಇಲ್ಲದವರ ಓಡಾಟಕ್ಕೆ, ಹೋಟೆಲ್‌, ಮದ್ಯದಂಗಡಿ, ಬೃಹತ್ ಮಾಲ್‌ಗಳನ್ನು ತೆರೆಯಲು ನಿರ್ಬಂಧ ವಿಧಿಸುವ ಸಾಧ್ಯತೆ ಇದೆ. ಈ ಸಂಬಂಧ ಸೋಮವಾರ ಅಧಿಕೃತ ಮಾರ್ಗಸೂಚಿ ಹೊರಬೀಳಲಿದೆ.

11 ದಿನಗಳಲ್ಲಿ 21 ಸಾವಿರ ಪ್ರಕರಣ

ಬೆಂಗಳೂರು: ಕೋವಿಡ್‍-19ನಿಂದ ಬಳಲುತ್ತಿದ್ದವರಲ್ಲಿ ಮತ್ತೆ 70 ಮಂದಿ ಮೃತಪಟ್ಟಿರುವುದು ಶನಿವಾರ ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 613ಕ್ಕೆ ಏರಿಕೆಯಾಗಿದೆ.

ಶನಿವಾರ ಹೊಸದಾಗಿ 2,798 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 36,216ಕ್ಕೆ ತಲುಪಿದೆ. ಹನ್ನೊಂದು ದಿನಗಳಲ್ಲಿ 20,974 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಈ ಅವಧಿಯಲ್ಲಿ 367 ಮಂದಿ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದ್ದು, ಮತ್ತೆ 1,533 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ದಕ್ಷಿಣ ಕನ್ನಡ (186), ಉಡುಪಿ (90), ಮೈಸೂರು (83), ತುಮಕೂರು (78), ಧಾರವಾಡ (77), ಯಾದಗಿರಿ (74), ದಾವಣಗೆರೆಯಲ್ಲಿಯೂ (72) ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.

ಬೆಂಗಳೂರಿನಲ್ಲಿ 23 ಮಂದಿ, ಮೈಸೂರಿನಲ್ಲಿ 8 ಮಂದಿ, ದಕ್ಷಿಣ ಕನ್ನಡದಲ್ಲಿ 5 ಮಂದಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 70 ಮಂದಿ ಮೃತಪಟ್ಟಿದ್ದಾರೆ.

20 ಸಾವಿರ ಪರೀಕ್ಷೆ: ರಾಜ್ಯದಲ್ಲಿ ಶನಿವಾರ ಒಂದೇ ದಿನ 20,587 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ವಿವಿಧ ಜಿಲ್ಲೆಗಳಿಗೆ ಆ್ಯಂಟಿಜೆನ್ ಕಿಟ್‌ಗಳನ್ನು ಕಳುಹಿಸಲಾಗಿದ್ದು, ಪರೀಕ್ಷೆಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT