ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಸಂತ್ರಸ್ತರಿಗೆ ಪ್ರಧಾನಿ ಸಾಂತ್ವನ | ರಾಜ್ಯಕ್ಕೆ ಮಿಡಿಯದ ಮೋದಿ

60 ದಿನವಾದರೂ ಬಿಡಿಗಾಸಿಲ್ಲ l ಹೆಚ್ಚುತ್ತಿರುವ ಆಕ್ರೋಶ
Last Updated 2 ಅಕ್ಟೋಬರ್ 2019, 1:31 IST
ಅಕ್ಷರ ಗಾತ್ರ

ಬೆಂಗಳೂರು: ಅರ್ಧರಾಜ್ಯವೇ ಮಳೆಯಲ್ಲಿ ಕೊಚ್ಚಿಹೋಗಿ 60 ದಿನ ಕಳೆದರೂ ನಯಾ ಪೈಸೆ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಈ ಮಧ್ಯೆ, ಬಿಹಾರದ ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟ್ವೀಟ್‌ಗೆ ‍ಪ್ರತಿಕ್ರಿಯೆಯಂತೆ, ಕರ್ನಾಟಕ ನಿರ್ಲಕ್ಷ್ಯ ಮಾಡುತ್ತಿರುವುದೇಕೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಸಂತ್ರಸ್ತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರೂ ಕೇಂದ್ರ ನೆರವಿಗೆ ಧಾವಿಸಿಲ್ಲ ಎಂದು ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರ ಟೀಕಾ ಪ್ರಹಾರಕ್ಕೆ, ಇದೀಗ ಬಿಜೆಪಿ ಹಿರಿಯ ಶಾಸಕರೂ ಧ್ವನಿಗೂಡಿಸಲಾರಂಭಿಸಿದ್ದಾರೆ.

ಬಿಹಾರದ ಪ್ರವಾಹಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮಂಗಳವಾರ ಟ್ವೀಟ್‌ ಮಾಡಿದ್ದರು. ‘ಪ್ರಧಾನಿ ಮೋದಿ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ತಾರತಮ್ಯ ಧೋರಣೆ ತೋರಿದ್ದಾರೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಯೂ ಶುರುವಾಗಿದೆ.

‘ಬಿಹಾರಕ್ಕೆಸ್ಪಂದಿಸಿರುವ ಮೋದಿ, ಕರ್ನಾಟಕದ ಸಂತ್ರಸ್ತರಿಗೆ ಸಾಂತ್ವನದ ಒಂದು ಮಾತೂ ಹೇಳಿಲ್ಲ. ಉತ್ತರ ಭಾರತಕ್ಕೊಂದು ಧೋರಣೆ ದಕ್ಷಿಣ ಭಾರತಕ್ಕೊಂದು ಧೋರಣೆಯೇ’ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಆಗಸ್ಟ್‌ ಮೊದಲ ವಾರದ ಮಳೆಗೆ ರಾಜ್ಯದ 17 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬಹುತೇಕ ಎಲ್ಲ ನದಿಗಳೂ ಉಕ್ಕಿ ಹರಿದವು. ಇದರಿಂದ ನದಿ ಪಾತ್ರದ ಗ್ರಾಮಗಳು ಮುಳುಗಿ ಹೋದವು. ಮನೆಗಳು, ಅಂಗಡಿ– ಮುಂಗಟ್ಟುಗಳು ನಾಶವಾದವು, ಸಾರ್ವಜನಿಕ ಆಸ್ತಿ– ಪಾಸ್ತಿ, ಬೆಳೆಗಳಿಗೆ ಭಾರಿ ನಷ್ಟ ಉಂಟಾಯಿತು. ಆದರೆ, ಎಲ್ಲೂ ಪರಿಹಾರ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಉಸ್ತುವಾರಿ ಸಚಿವರೂ ಪರಿಹಾರ ಕಾರ್ಯ ನಡೆಯುತ್ತಿರುವ ಸ್ಥಳಗಳಿಗೂ ಹೋಗುತ್ತಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ‘ಪ್ರಧಾನಿಯವರು ಬಿಹಾರದ ನೆರೆ ಸಂತ್ರಸ್ತರ ಬಗ್ಗೆ ಟ್ವೀಟ್ ಮಾಡುತ್ತಾರೆ. ನಮ್ಮ ಜನ ಏನು ತಪ್ಪು ಮಾಡಿದ್ದಾರೆ? ನಮ್ಮ ಜನಕ್ಕೆ ನಾವೇನು ಉತ್ತರ ಕೊಡಬೇಕು. ಸಾಮಾಜಿಕ ಜಾಲತಾಣಗಳಲ್ಲೂ ಜನ ಪ್ರಶ್ನಿಸುತ್ತಾರೆ. ಕನಿಷ್ಠ ಪಕ್ಷ ಒಂದು ನಿಯೋಗ ಒಯ್ಯೋಣ, ನಾನು ಅಲ್ಲಿ ಮಾತನಾಡುತ್ತೇನೆ’ ಎಂದಿದ್ದಾರೆ.

‘ಎಂತೆಂತವರನ್ನೋ ಜನ ಮನೆಗೆ ಕಳಿಸಿದ್ದಾರೆ. ಅಂಥದ್ರಲ್ಲಿ ಇವರೆಲ್ಲ ಯಾವ ಲೆಕ್ಕ. ಇವರನ್ನು ಕೆಳಗಿಳಿಸುವುದು ನಾವಲ್ಲ, ಜನ ಇಳಿಸುತ್ತಾರೆ. ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಪಕ್ಷ ಸಂಘಟನೆ ಮಾಡಿದ್ದು ನಾವು. ಜನರಿಗೆ ನಾವು ಉತ್ತರ ನೀಡಬೇಕು. ಇಡೀ ಉತ್ತರ ಕರ್ನಾಟಕದ ಜನ ಪರದಾಡುತ್ತಾ ಇದ್ದಾರೆ. ಜನರಿಗೆ ನಾವೇನು ಉತ್ತರ ಕೊಡಬೇಕು? ಸಾಮಾಜಿಕ ಜಾಲತಾಣಗಳಲ್ಲಿ ಜನ ನಮ್ಮ ವಿರುದ್ಧ ಪ್ರಶ್ನೆ ಮಾಡುತ್ತಿದ್ದಾರೆ’ ಎಂದು ಯತ್ನಾಳ ಕಿಡಿ ಕಾರಿದರು.

ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಇದೇ 3ಕ್ಕೆ ಉತ್ತರ ಕರ್ನಾಟಕ ಒಕ್ಕೂಟ ಬೆಂಗಳೂರಿನಲ್ಲಿ ಪ್ರತಿಭಟನೆಯನ್ನೂ ಆಯೋಜಿಸಿದೆ.

ವಿದೇಶಗಳಿಗೆ ಸಾಲ ಅಗತ್ಯವೇ?

ರಷ್ಯಾಗೆ ₹7,180 ಕೋಟಿ, ಕೆರಿಬಿಯನ್‌ ದೇಶಗಳಿಗೆ ₹1.40 ಕೋಟಿ ಮತ್ತು ಪೆಸಿಫಿಕ್‌ ದೇಶಗಳಿಗೆ ₹1.50 ಕೋಟಿ ನೆರವು ನೀಡುವ ಮೋದಿಯವರಿಗೆ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಹಣವಿಲ್ಲವೆ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬಂದಿದೆ.

ಫಲ ನೀಡದ ಶಾ– ನಿರ್ಮಲಾ ಭೇಟಿ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವೈಮಾನಿಕ ಸಮೀಕ್ಷೆ ನಡೆಸಿ ಹೋದರು. ಆದರೆ, ನೆರೆ ಪೀಡಿತ ಪ್ರದೇಶಕ್ಕೆ ನೆರವೂ ಹರಿದು ಬರಲಿಲ್ಲ.

*ಬಿಹಾರ ಪ್ರವಾಹದ ಬಗ್ಗೆ ಮಿಡಿದ ನರೇಂದ್ರ ಮೋದಿ ಅವರ 52 ಇಂಚಿನ ಎದೆ, ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ಕಲ್ಲು ಬಂಡೆ ಆಗಿದ್ದು ಯಾಕೆ? ಇದು 25 ಸಂಸದರನ್ನು ಆಯ್ಕೆ ಮಾಡಿ ಕಳಿಸಿದ ಕರ್ನಾಟಕದ ಬಗ್ಗೆ ತಾತ್ಸಾರವೇ? ಇಲ್ಲ ಯಡಿಯೂರಪ್ಪ ಅವರ ಬಗ್ಗೆ ದ್ವೇಷವೇ?

-ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

*ಬಿಹಾರದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಜತೆಗೆ ಮಾತನಾಡಿದ್ದೇನೆ. ಪರಿಹಾರ ಕಾರ್ಯಕ್ಕೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡುತ್ತೇವೆ.

-ನರೇಂದ್ರಮೋದಿ, ಪ್ರಧಾನ ಮಂತ್ರಿ

*ಪರಿಹಾರವಿರಲಿ ಕರ್ನಾಟಕದ ಮುಖ್ಯಮಂತ್ರಿ ಎಂಬ ಗೌರವ ಕೂಡ ಯಡಿಯೂರಪ್ಪ ಅವರಿಗೇ ಸಿಕ್ಕಿಲ್ಲ. ರಾಜ್ಯಕ್ಕೆ ಪರಿಹಾರ ಹೇಗೆ ತರುತ್ತಾರೋ ಗೊತ್ತಿಲ್ಲ

-ಡಾ.ಜಿ.ಪರಮೇಶ್ವರ, ಕಾಂಗ್ರೆಸ್‌ ಹಿರಿಯ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT