ಸೋಮವಾರ, ಮಾರ್ಚ್ 8, 2021
29 °C

ಅಂತರ್‌ ಜಿಲ್ಲಾ ಸಂಚಾರ; ಇಲ್ಲಿದೆ ನಿಯಮಾವಳಿಗಳು–ಪ್ರಯಾಣಿಸಲು ಯಾರು ಅರ್ಹರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗದ ತಾಲ್ಲೂಕು ಕಚೇರಿ ಆವರಣದಲ್ಲಿ ಹೊರ ಜಿಲ್ಲೆಗಳ ಪಯಣಕ್ಕಾಗಿ ಅನುಮತಿ ಪಾಸ್‌ಗಾಗಿ ಸೇರಿರುವ ಜನರು

ಬೆಂಗಳೂರು: ಲಾಕ್‌ಡೌನ್‌ ಸಂದರ್ಭದಲ್ಲಿ ಆಯಾ ಜಿಲ್ಲೆಯಲ್ಲಿ ಸಿಲುಕಿರುವ ಸಾರ್ವಜನಿಕರು, ಅಂತರ್‌ ಜಿಲ್ಲೆಗಳ ನಡುವೆ ಸಂಚಾರ ಮಾಡುವುದಕ್ಕಾಗಿ ಆನ್‌ಲೈನ್ ಮೂಲಕ ‘ಇ–ಪಾಸ್’ ನೀಡಲಾಗುತ್ತಿದೆ. ಪೊಲೀಸ್ ಇಲಾಖೆಯಿಂದ ಈ ಪಾಸ್‌ಗಳನ್ನು ವಿತರಿಸಲಾಗುತ್ತಿದೆ. ಆದರೆ, ಲಾಕ್‌ಡೌನ್‌ನಿಂದ ಬೇರೆ ಊರುಗಳಲ್ಲಿ 'ಸಿಲುಕಿರುವವರಿಗೆ ಮಾತ್ರ' ಎಂದು ನಿರ್ದಿಷ್ಟ ಪಡಿಸಿ ಬೆಂಗಳೂರು ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಮತ್ತು ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಮಂಗಳವಾರ ಟ್ವೀಟ್‌ ಮಾಡಿದ್ದಾರೆ. 

ತಮ್ಮ ಊರುಗಳಿಂದ ಹೊರಗೆ ಸಿಲುಕಿರುವ ವಲಸೆ ಕಾರ್ಮಿಕರು, ಪ್ರವಾಸಿಗರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಇತರರಿಗೆ ಸರ್ಕಾರ ಈ ಅವಕಾಶ ಕಲ್ಪಿಸಿದೆ. 'ಸಿಲುಕಿರುವುದು' ಎಂಬುದನ್ನ ಅರ್ಥೈಸಿಕೊಳ್ಳಬೇಕು. ತಮ್ಮ ಊರುಗಳಲ್ಲಿಯೇ ಇದ್ದವರು ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ಈ ಅವಕಾಶ ನೀಡಲಾಗಿಲ್ಲ. ದಯಮಾಡಿ ಗುಂಪು ಗೂಡಬೇಡಿ ಹಾಗೂ ಸಾಮಾನ್ಯ ಕಾರಣಗಳಿಗೆ ಪ್ರಯಾಣಿಸುವ ನಿಟ್ಟಿನಲ್ಲಿ ಮನವಿ ಸಲ್ಲಿಸಬೇಡಿ ಎಂದು ಸಾರ್ವಜನಿಕರಲ್ಲಿ ಕೋರಿದ್ದಾರೆ. 

https://kspclearpass.idp.mygate.com/otp ಲಿಂಕ್‌ ಮೂಲಕ ಅರ್ಜಿ ಸಲ್ಲಿಸಿ ಅರ್ಹರು ಪಾಸ್‌ಗಳನ್ನು ಪಡೆಯಬಹುದು. ಚೆಕ್‌ಪೋಸ್ಟ್‌ನಲ್ಲಿ ಪಾಸ್‌ಗಳನ್ನು ತೋರಿಸಿ ಹಾಗೂ ಆರೋಗ್ಯ ತಪಾಸಣೆಗೆ ಒಳಪಟ್ಟು ಸಂಚರಿಸಬಹುದಾಗಿದೆ. ಮೊಬೈಲ್ ನಂಬರ್ ಹಾಗೂ ಒಟಿಪಿ (ಒನ್‌ ಟೈಂ ಪಾಸ್‌ವರ್ಡ್) ಬಳಸಿ ದಾಖಲೆ ನೀಡಿ ಇ–ಪಾಸ್ ಪಡೆಯಬಹುದು. ಇದು ಒಂದು ದಿನದ, ಒಂದು ಕಡೆಯ ಹಾಗೂ ಒಂದು ಅವಧಿಯ ಪಾಸ್ ಆಗಿರಲಿದೆ.

ಕೇಂದ್ರ ಸರ್ಕಾರ ಹೊರಡಿಸಿರುವ ಪ್ರಕಟಣೆಯಲ್ಲಿ ಲಾಕ್‌ಡೌನ್‌ ಘೋಷಣೆಗೂ ಮುನ್ನ ಕೆಲಸದ ಸ್ಥಳದಿಂದ ಅಥವಾ ವಾಸ ಸ್ಥಳದಿಂದ ಹೊರ ಊರಿಗೆ ಪ್ರಯಾಣಿಸಿ ಸಿಲುಕಿಕೊಂಡಿರುವವರಿಗೆ ಮರಳಲು ಅವಕಾಶ ನೀಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಲಾಕ್‌ಡೌನ್‌ ನಿರ್ಬಂಧಗಳಿಂದಾಗಿ ಬೇರೊಂದು ಊರಿಂದ ತಮ್ಮ ಕಾರ್ಯಾಚರಣೆ ಸ್ಥಳಕ್ಕೆ ಅಥವಾ ವಾಸ ಸ್ಥಾನಕ್ಕೆ ಪ್ರಯಾಣಿಸಲು ಸಾಧ್ಯವಾಗದೆ ಸಿಲುಕಿರುವವರಿಗೆ ಮಾತ್ರವೇ ಈ ಸೌಲಭ್ಯ. ಬೇರೊಂದು ಊರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸ್ವಂತ ಊರಿಗೆ ಹೋಗಿ ಬರಲು ಇಚ್ಛಿಸಿರುವವರಿಗೆ ಇಲ್ಲಿ ಅವಕಾಶ ನೀಡಲಾಗದು ಎಂದು ವಿವರಿಸಲಾಗಿದೆ. 

ಗಮನಿಸಬೇಕಾದ ನಿಯಮಗಳು ಇಲ್ಲಿವೆ:

* ಪಾಸ್‌ನಲ್ಲಿ ವ್ಯಕ್ತಿಗಳ ಹಾಗೂ ಮಕ್ಕಳ ಸಂಖ್ಯೆ ನಮೂದಿಸಲಾಗಿರುತ್ತದೆ. ಅಷ್ಟು ಮಂದಿ ಮಾತ್ರ ಪ್ರಯಾಣಿಸಬಹುದಾಗಿರುತ್ತದೆ.

– ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಮಾತ್ರ ಸಂಚರಿಸಬಹುದು. ಚಾಲಕನ ಹಿಂಬದಿ ಸೀಟಿನಲ್ಲಿ ಕುಳಿತು ಪ್ರಯಾಣಿಸಲು ಅವಕಾಶವಿಲ್ಲ.
– ನಾಲ್ಕು ಚಕ್ರದ ವಾಹನಗಳಲ್ಲಿ ಚಾಲಕ ಸೇರಿದಂತೆ ಮೂವರು ಪ್ರಯಾಣಿಸಬಹುದು, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪ್ರಯಾಣಿಸಬಹುದು. ಪಾಸ್‌ನಲ್ಲಿ ನಮೂದಿಸಿದಂತೆ.

* ಪ್ರಯಾಣಿಕರು ಸೂಕ್ತ ಗುರುತಿನ ಚೀಟಿ ಹೊಂದಿರಬೇಕು.

* ಪಾಸ್‌ನಲ್ಲಿ ನಮೂದಿಸಿರುವ ಜಾಗಕ್ಕೆ ಮಾತ್ರವೇ ತೆರಳಬಹುದು. ಇತರೆ ಊರುಗಳಿಗೆ ಸಂಚರಿಸುವಂತಿಲ್ಲ.

* ನಿಯಮ ಉಲ್ಲಂಘನೆಯಾದಲ್ಲಿ ವಾಹನ ಪ್ರವೇಶಿಸಲು ಅಥವಾ ಹೊರ ಹೋಗಲು ಅವಕಶ ಸಿಗುವುದಿಲ್ಲ.

* ನಿಯಮ ಉಲ್ಲಂಘನೆಯಾದರೆ ಪಾಸುದಾರ ಜವಾಬ್ದಾರಿಯಾಗಿರುತ್ತಾರೆ ಹಾಗೂ ಅವರ ಮೇಲೆ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುತ್ತದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು