ಸೋಮವಾರ, ಮಾರ್ಚ್ 8, 2021
31 °C

ಬೆಂಗಳೂರು ಪೊಲೀಸ್ ಕಮಿಷನರ್‌ ಎತ್ತಂಗಡಿ; ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ನಗರ ‌ಪೊಲೀಸ್‌ ಆಯುಕ್ತ ಅಲೋಕ್ ಕುಮಾರ್‌ ಅವರನ್ನು ಕೇವಲ ಒಂದೂವರೆ ತಿಂಗಳೊಳಗೆಯೇ ಎತ್ತಂಗಡಿ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಎಡಿಜಿಪಿ ಭಾಸ್ಕರ ರಾವ್ ಅವರನ್ನು ನಿಯೋಜಿಸಲಾಗಿದೆ.

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರದಿಂದ ಸುನಿಲ್‌ ಕುಮಾರ್ ಜಾಗದಲ್ಲಿ ಅಲೋಕ್‌ ಕುಮಾರ್‌ಗೆ ನಿಯೋಜನೆಗೊಂಡಾಗ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳಾದ ಭಾಸ್ಕರ ರಾವ್‌ ಮತ್ತು ಅಲೋಕ್‌ ಮೋಹನ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಬಡ್ತಿ ನೀಡಿದ ತಕ್ಷಣ ಮಹತ್ವದ ಹುದ್ದೆಗೆ ನೇಮಕಗೊಳ್ಳುವ ಪರಿಪಾಠ ಇಲ್ಲವಾದರೂ, ಅಲೋಕ್‌ ಕುಮಾರ್‌ಗೆ ಅದು ಲಭಿಸಿತ್ತು. ಅತೃಪ್ತ ಶಾಸಕರ ರಾಜೀನಾಮೆ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂಬ ಬಿಜೆಪಿಯ ಬಹಿರಂಗ ಆಕ್ಷೇಪಕ್ಕೂ ಅವರು ಗುರಿಯಾಗಿದ್ದರು. ಎಲ್ಲದರ ಫಲವಾಗಿ ಅವರ ಎತ್ತಂಗಡಿಯಾಗಿದ್ದು, ಅವರನ್ನು ಕೆಎಎಸ್‌ಆರ್‌ಪಿ ಎಡಿಜಿಪಿ ಆಗಿ ವರ್ಗಾಯಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ನೂತನ ಕಮಿಷನರ್ ಆಗಿ ಭಾಸ್ಕರ್‌ ರಾವ್‌ ಅಧಿಕಾರ ಸ್ವೀಕಾರ 

ಭಾಸ್ಕರ ರಾವ್ ಅವರು ಕಳೆದ ಲೋಕಸಭಾ ಚುನಾವಣೆ ವೇಳೆ ದೋಸ್ತಿ ಸರ್ಕಾರವನ್ನು ಟೀಕಿಸುವ ರೀತಿಯ ಟ್ವೀಟ್‌ ಮಾಡಿ ವಿವಾದಕ್ಕೆ ಒಳಗಾಗಿದ್ದರು. ಇದೀಗ ಯಡಿಯೂರಪ್ಪ ಸರ್ಕಾರ ಅವರಿಗೆ ಪ್ರಮುಖ ಹೊಣೆಗಾರಿಕೆ ನೀಡಿದೆ.

ಕಾಂಗ್ರೆಸ್‌ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಹಬ್ಬಿತ್ತು. ಆಗ ಹೇಮಂತ್‌ ನಿಂಬಾಳ್ಕರ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವರ್ಗಾಯಿಸಿ ಅಂಜಲಿ ಅವರನ್ನು ಸಮಾಧಾನಪಡಿಸುವ ಕೆಲಸ ಮಾಡಲಾಗಿತ್ತು. ಆದರೆ ಗುರುವಾರ ಮತ್ತೆ ಅವರನ್ನು ವರ್ಗಾಯಿಸಿ ಸ್ಥಾನ ತೋರಿಸಿರಲಿಲ್ಲ. ಶುಕ್ರವಾರ ಅವರನ್ನು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಆಗಿ ನಿಯೋಜಿಸಲಾಗಿದೆ.

ಹಿರಿಯ ಐಎಎಸ್‌ ಅಧಿಕಾರಿ ಪಿ.ರವಿಕುಮಾರ್‌ ಅವರನ್ನು ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ನಿಯೋಜಿಸಲಾಗಿದೆ. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಯನ್ನಾಗಿ ನಿಯೋಜಿಸಲಾಗಿದ್ದು, ಕೆಎಸ್‌ಆರ್‌ಟಿಸಿ ಎಂಡಿ ಹುದ್ದೆಯನ್ನೂ ಹೆಚ್ಚುವರಿಯಾಗಿ ನಿಭಾಯಿಸಲಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಏಕವ್ಯಕ್ತಿ ಪ್ರದರ್ಶನ: ಸಂಪುಟ ವಿಸ್ತರಣೆಗೆ ಹೆಚ್ಚಿದ ಒತ್ತಡ

ಇತರ ಐಪಿಎಸ್‌ ವರ್ಗಾವಣೆ:

ಉಮೇಶ್‌ ಕುಮಾರ್–ಐಜಿಪಿ, ಹೆಚ್ಚುವರಿ ಪೊಲೀಸ್‌ ಕಮಿಷನರ್‌ , ಬೆಂಗಳೂರು ನಗರ ಪಶ್ಚಿಮ (ವರ್ಗಾವಣೆ ಹಿಂಪಡೆದು ಮತ್ತೆ ಆದೇಶ; ಹಿಂದಿನ ಸ್ಥಾನದಲ್ಲೇ ಮುಂದುವರಿಕೆ)

ಡಾ.ಬಿ.ಆರ್‌.ರವಿಕಾಂತೇ ಗೌಡ–ಡಿಐಜಿಪಿ, ಜಂಟಿ ಪೊಲೀಸ್ ಕಮಿಷನರ್‌, ಬೆಂಗಳೂರು ನಗರ ಪಶ್ಚಿಮ

ಆರ್‌.ಚೇತನ್‌–ಎಸ್‌ಪಿ, ಕರಾವಳಿ ರಕ್ಷಣಾ ಪೊಲೀಸ್‌, ಉಡುಪಿ

ಡಿ.ದೇವರಾಜ–ಎಸ್‌ಪಿ, ಅಪರಾಧ ತನಿಖಾ ವಿಭಾಗ, ಬೆಂಗಳೂರು

ಡಾ.ಎಂ.ಅಶ್ವಿನಿ–ಡಿಸಿಪಿ ಗುಪ್ತಚರ, ಬೆಂಗಳೂರು ನಗರ 

ಡಾ.ರಾಜ್‌ವೀರ್‌ ಪ್ರತಾಪ್‌ ಶರ್ಮಾ– ಎಡಿಜಿಪಿ, ಸಂವಹನ, ಸಾಗಣೆ ಮತ್ತು ಆಧುನೀಕರಣ, ಬೆಂಗಳೂರು

ಮಾಲಿನಿ  ಕೃಷ್ಣಮೂರ್ತಿ– ಎಡಿಜಿಪಿ, ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು