ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ | ಜಾಣ ರೈತನಿಗೆ ತೆರೆದ ಅವಕಾಶಗಳ ಬಾಗಿಲು

ಅನುಭವ ಮಂಟಪ
Last Updated 18 ಮೇ 2020, 19:45 IST
ಅಕ್ಷರ ಗಾತ್ರ

ಎಪಿಎಂಸಿ ಸ್ವರೂಪದ ಕುರಿತು ಎರಡು ವಾದಗಳು ಇಲ್ಲಿ ಮುಖಾಮುಖಿಯಾಗಿವೆ. ಕೃಷಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳಿಗೇ ಜಾಸ್ತಿ ಲಾಭ ಎನ್ನುವುದು ಒಂದು ವಾದವಾದರೆ, ಆನ್‌ಲೈನ್ ಮಾರಾಟಕ್ಕೆ ಅವಕಾಶ ಕಲ್ಪಿಸಿದ ಮೇಲೆ ಸ್ಪರ್ಧಾತ್ಮಕ ದರ ಸಿಗುತ್ತಿದೆ ಎನ್ನುವುದು ಇನ್ನೊಂದು ವಾದ. ವ್ಯಾವಹಾರಿಕ ಜ್ಞಾನ ಇದ್ದರೆ ಹೊಸ ವ್ಯವಸ್ಥೆಯಲ್ಲಿ ರೈತರಿಗೆ ಲಾಭವೇ ಹೆಚ್ಚು ಎನ್ನುವುದು ಒಂದು ವಾದವಾದರೆ, ಗ್ರಾಹಕರಿಗೂ ಬೆಲೆ ಏರಿಕೆ ಬಿಸಿ ತಟ್ಟಲಿದೆ ಎನ್ನುವುದು ಇನ್ನೊಂದು ವಾದ...

***

ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವಉದ್ದೇಶದಿಂದ ರಾಜ್ಯ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ರೈತರು ಎದುರಿಸುತ್ತಿದ್ದ ಎಲ್ಲ ಅಡೆ ತಡೆಗಳನ್ನು ನಿವಾರಿಸಲು ಈ ತಿದ್ದುಪಡಿ ಕಾಯ್ದೆಯು ನೆರವಿಗೆ ಬರುವ ಸಾಧ್ಯತೆ ಇದೆ.

ಸರ್ಕಾರದ ಈ ಉಪಕ್ರಮದಿಂದ ಕಂಪನಿಗಳು, ರೈತರ ಮನೆಬಾಗಿಲಿಗೇ ಹೋಗಿ ಬೆಳೆಯನ್ನು ಖರೀದಿಸುವ ಅವಕಾಶವನ್ನು ಒದಗಿಸಿಕೊಟ್ಟಂತಾಗಿದೆ. ಇದರಿಂದ ಕೃಷಿ ಉತ್ಪನ್ನವನ್ನು ಮಾರುಕಟ್ಟೆಗೆ ಸಾಗಿಸುವಂತಹ ಹೊರೆಯಿಂದ ರೈತ ಮುಕ್ತನಾಗಲಿದ್ದು, ಆತನ ಶ್ರಮ ಮತ್ತು ಸಮಯವೂ ಉಳಿತಾಯವಾಗಲಿದೆ. ಆ ಎಲ್ಲ ಹೊಣೆ ಇನ್ನುಮುಂದೆ ಖರೀದಿದಾರನದೇ ಆಗಲಿದೆ. ಅವನು ಅದನ್ನು ಹೇಗೆ ಸರಿದೂಗಿಸುತ್ತಾನೆ ಎಂಬ ಪ್ರಶ್ನೆಯೂ ಕಾಡದಿರದು.

ಬಹು ದೀರ್ಘಕಾಲದಿಂದ ಭಾರತೀಯ ಕೃಷಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳಿಗೇ ಜಾಸ್ತಿ ಲಾಭ ಹೋಗುತ್ತದೆ ಎಂಬುದು ಸರ್ವವೇದ್ಯ. ಆ ಲಾಭದ ಪ್ರಮಾಣದಲ್ಲಿ ಸ್ವಲ್ಪ ಕಡಿಮೆಯಾಗಿ, ಅದು ರೈತನಿಗೆ ದಕ್ಕಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಆಶಯ ಈಡೇರಬೇಕೆಂದರೆ ರೈತನಿಗೆ ಮಾರುಕಟ್ಟೆಯ ಸ್ಪಷ್ಟವಾದ ಜ್ಞಾನ ಇರಬೇಕು. ಹಾಗೆಂದ ಮಾತ್ರಕ್ಕೆ ಆತನಿಗೆ ಏನೂ ಗೊತ್ತಾಗುವುದೇ ಇಲ್ಲವೆಂದು ಭಾವಿಸಬೇಕಾಗಿಲ್ಲ. ಆತನ ಬಳಿಯೂ ಅಂತರ್ಜಾಲ ಸೌಲಭ್ಯದ ಮೊಬೈಲ್ ಫೋನ್‌ ಇದೆ. ಮಾರುಕಟ್ಟೆ ಧಾರಣೆಯನ್ನೂ ತಿಳಿಯಬಲ್ಲ. ಮುಕ್ತ ಮಾರುಕಟ್ಟೆ ವಹಿವಾಟಿಗೆ ಅಷ್ಟು ತಿಳಿವಳಿಕೆ ಸಾಕಾಗದು.

ಕಾಯ್ದೆಗೆ ತರಲಾದ ತಿದ್ದುಪಡಿಯ ಪರಿಪೂರ್ಣ ಲಾಭ ಸಿಗುವಂತಾಗಲು ಮಾರುಕಟ್ಟೆ ವ್ಯವಸ್ಥೆ ಕುರಿತ ಶಿಕ್ಷಣವನ್ನೂ ರೈತನಿಗೂ ನೀಡಬೇಕು. ಏಕೆಂದರೆ, ಹೊಸ ವ್ಯವಸ್ಥೆಯು ಪ್ರಜ್ಞಾವಂತ ರೈತನಿಗೆ ಬಹು ಉಪಕಾರಿ. ತನ್ನ ಕೃಷಿ ಉತ್ಪನ್ನವನ್ನು ಮಾರಲು ಅವನ ಮುಂದೆ ಎರಡು ಆಯ್ಕೆಗಳಿವೆ. ಅವನು ಮುಕ್ತ ಮಾರುಕಟ್ಟೆಯಲ್ಲೂ ಮಾರಬಹುದು ಇಲ್ಲವೆ ಎಪಿಎಂಸಿಯಲ್ಲೂ ಮಾರಾಟ ಮಾಡಬಹುದು. ಎಪಿಎಂಸಿಯೇ ಅವನ ಆಯ್ಕೆಯಾದರೆ ರಾಜ್ಯದ ಯಾವ ಜಿಲ್ಲೆಯ ಎಪಿಎಂಸಿಯಲ್ಲಿಯೂ ವಹಿವಾಟು ನಡೆಸಬಹುದು. ಇದಕ್ಕೆ ಯಾವ ತಡೆಯೂ ಇಲ್ಲ. ರೈತನಿಗೆ ಮುಕ್ತ ಅವಕಾಶ ಸಿಕ್ಕಂತಾಗಿದ್ದು, ಹಾಲಿ ಅನುಕೂಲಗಳ ಜತೆಯಲ್ಲೇ ಹೆಚ್ಚುವರಿ ಅವಕಾಶವನ್ನೂ ಸೇರ್ಪಡೆ ಮಾಡಿದಂತಾಗಿದೆ.

ಕೊರೊನಾ ಸಂಕಷ್ಟದ ಕಾರಣದಿಂದ ನಗರದಲ್ಲಿದ್ದು ಹಳ್ಳಿಗೆ ಮರಳಿದ ರೈತ ಕುಟುಂಬದ ಸದಸ್ಯರಿರುತ್ತಾರೆ. ಮಾರುಕಟ್ಟೆ ವ್ಯವಸ್ಥೆ ಕುರಿತು ಹೆಚ್ಚಿನ ಮಾಹಿತಿ ಹೊಂದಿದ ರೈತರೂ ಇರುತ್ತಾರೆ.ಅಂಥವರಿಗೆ ಬೆಳೆಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ತಿದ್ದುಪಡಿ ಕಾಯ್ದೆಯು ಒಳ್ಳೆಯ ಅವಕಾಶವನ್ನು ಕಲ್ಪಿಸಿದೆ. ಇದರಿಂದ ಯಾವ ಮಧ್ಯವರ್ತಿಯೂ ಇಲ್ಲದೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಇದು ಒಂದು ಮಹತ್ತರ ಬೆಳವಣಿಗೆ.

ಆನ್‌ಲೈನ್‌ ಮಾರಾಟದಲ್ಲಿ ಮಧ್ಯವರ್ತಿಯೇ ಇಲ್ಲ. ಇದರಿಂದ ಉತ್ಪಾದಕ ಮತ್ತು ಬಳಕೆದಾರರ ನಡುವೆ ನೇರ ಸಂಪರ್ಕ ಸಾಧ್ಯವಾಗುತ್ತದೆ. ಗುಣಮಟ್ಟದ ಕೃಷಿ ಉತ್ಪನ್ನವನ್ನು ಪಡೆಯಲು ಗ್ರಾಹಕನಿಗೆ ಸಹಾಯವಾಗುತ್ತದೆ. ಗುಣಮಟ್ಟದ ಉತ್ಪಾದನೆಗೆ ತಕ್ಕ ಬೆಲೆಯನ್ನು ಕೇಳಲು ರೈತನಿಗೂ ಅನುಕೂಲವಾಗುತ್ತದೆ. ಉದಾಹರಣೆಗೆ ಕೆಲವು ವರ್ಗದ ಗ್ರಾಹಕರು ಸಾವಯವ ಕೃಷಿ ಉತ್ಪನ್ನವನ್ನು ಬಯಸುತ್ತಾರೆ. ಅಂತಹ ಸಂದರ್ಭ ಬಂದಾಗ ಅವರ ಅಗತ್ಯಕ್ಕೆ ಸ್ಪಂದಿಸಲು ರೈತರಿಗೂ ಸುಲಭವಾಗುತ್ತದೆ.

ತಿದ್ದುಪಡಿ ಕಾಯ್ದೆಯ ಪ್ರಕಾರ, ರೈತರು ತಮ್ಮ ಉತ್ಪನ್ನಕ್ಕೆ ಸೂಕ್ತ ಬೆಲೆ ಸಿಗದೇ ಇದ್ದಲ್ಲಿ ಹರಾಜು ಹಾಕಿ ಮಾರಾಟ ಮಾಡಬಹುದು. ಇಲ್ಲಿ ರೈತರಿಗೆ ಪೂರ್ಣ ಸ್ವಾತಂತ್ರ್ಯವಿದೆ; ಆದರೆ, ಈ ಅವಕಾಶವನ್ನು ರೈತರು ಸಾಕಷ್ಟು ವಿವೇಚನೆಯಿಂದ ಬಳಸಬೇಕು. ಒಂದೊಮ್ಮೆ ತಮಗೆ ದೊರೆಯಬೇಕಾದಷ್ಟು ಬೆಲೆ ಸಿಗದೇ ಇದ್ದರೆ ತಮ್ಮ ಉತ್ಪನ್ನವನ್ನು ಎಪಿಎಂಸಿ ಗೋದಾಮಿನಲ್ಲಿ ಇಟ್ಟು ಅಲ್ಲಿಂದ ಸಾಲ ಪಡೆಯುವ ಅವಕಾಶವನ್ನೂ ನೀಡಲಾಗಿದೆ. ಈ ಅವಕಾಶವು ರೈತರಿಗೆ ಬಹಳ ಉಪಯುಕ್ತ.

ತಿದ್ದುಪಡಿ ಕಾಯ್ದೆಯು, ರೈತರ ಶೋಷಣೆ ಮತ್ತು ಕಾಳಸಂತೆಗೆ ಅವಕಾಶ ಮಾಡಿಕೊಡಬಹುದು ಎಂಬ ಆತಂಕವನ್ನೂ ಹಲವರು ವ್ಯಕ್ತಪಡಿಸಿದ್ದಾರೆ. ಹಿಂದಿನ ಎಪಿಎಂಸಿ ಕಾಯ್ದೆ ವ್ಯಾಪ್ತಿಯಲ್ಲಿ ವ್ಯವಹಾರ ನಡೆಸಿದರೆ ಪ್ರತಿ ವ್ಯವಹಾರದ ಮೇಲೆ ಎಪಿಎಂಸಿಯ ಚುನಾಯಿತ ಆಡಳಿತ ಸದಸ್ಯರು ನಿಗಾ ಇಡುತ್ತಿದ್ದರು. ಇದರಿಂದ ರೈತರಿಗೆ ಮೋಸವಾಗುವ ಸಾಧ್ಯತೆ ಅಷ್ಟಾಗಿ ಇರಲಿಲ್ಲ ಎನ್ನುವುದು ಅವರ ವಾದ. ಆದರೆ, ಆಡಳಿತ ಸದಸ್ಯರ ನಿಷ್ಠೆಯು ಯಾವ ಕಡೆಗೂ ತೂಗಬಹುದು ಎನ್ನುವುದು ಇದುವರೆಗಿನ ಅನುಭವ ಕಲಿಸಿದ ಪಾಠ.

ತಿದ್ದುಪಡಿ ಕಾಯ್ದೆಯ ಅನುಷ್ಠಾನವಾದಾಗ ರೈತರ ಶೋಷಣೆ ಸುಲಭವಲ್ಲ. ರೈತರಲ್ಲಿ ವ್ಯವಹಾರಿಕ ಜ್ಞಾನ ಇಲ್ಲದೆ ಇದ್ದಾಗ ಮಾತ್ರ ಅದು ಸಾಧ್ಯ. ಹೀಗಾಗಿ ರೈತರಲ್ಲಿ ವ್ಯಾವಹಾರಿಕ ಜ್ಞಾನವನ್ನು ಬೆಳೆಸಬೇಕಾಗಿರುವುದು ಇಂದಿನ ತುರ್ತು. ರೈತರು ಆಡಳಿತದ ನಿಗಾವನ್ನು ಮೀರಿ ತಮ್ಮದೇ ಆದ ಸ್ವಾವಲಂಬಿ ಮಾರುಕಟ್ಟೆಯನ್ನು ಕಂಡುಕೊಳ್ಳಲು ತಿದ್ದುಪಡಿ ಕಾಯ್ದೆಯು ಸಹಾಯ ಮಾಡುತ್ತದೆ ಎನ್ನುವುದಂತೂ ಸತ್ಯ.

ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕೆಂಬುದು ಮುಖ್ಯ. ತಿದ್ದುಪಡಿ ಕಾಯ್ದೆಯ ಹೆಚ್ಚಿನ ಉಪಯೋಗವನ್ನು ಪಡೆಯಲು ರೈತರು ಸಂಘಟಿತರಾಗಬೇಕು. ತಮ್ಮ ತಮ್ಮ ಗ್ರಾಮದಲ್ಲಿ ಇರುವ ಸಣ್ಣಪುಟ್ಟ ರೈತರೆಲ್ಲ ಒಟ್ಟುಗೂಡಿ ತಮ್ಮ ಉತ್ಪನ್ನಗಳನ್ನು ಒಟ್ಟುಹಾಕಿ ಮುಕ್ತ ಮಾರುಕಟ್ಟೆ ಮೂಲಕ ವಹಿವಾಟು ನಡೆಸಬೇಕು. ಇಲ್ಲಿ ಸಂಘಟನೆ ಬಲಯುತವಾಗಿ ಇರಬೇಕಾದದ್ದು ಅಗತ್ಯ. ಆಗ ಉತ್ಪನ್ನಗಳಿಗೆ ಒಳ್ಳೆಯ ಬೆಲೆಯನ್ನು ಪಡೆದುಕೊಳ್ಳುವ ಮೂಲಕ ಆರ್ಥಿಕ ಸದೃಢತೆಯನ್ನು ಸಾಧಿಸಲು ದಾರಿಯಾಗುತ್ತದೆ. ಎಪಿಎಂಸಿಯ ಸ್ಪರ್ಧಾತ್ಮಕತೆಯನ್ನೂ ಹೆಚ್ಚಿಸಲು ಸಾಧ್ಯವಾಗುತ್ತದೆ.

ಕಾಯ್ದೆಗೆ ಮಾಡಲಾದ ತಿದ್ದುಪಡಿಯಿಂದ ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಎಪಿಎಂಸಿಗಳಿಗೆ ಮೊದಲಿನ ಅಧಿಕಾರ ಇರುವುದಿಲ್ಲ. ಆದರೆ, ರಾಜ್ಯಮಟ್ಟದ ಎಪಿಎಂಸಿ ನಿರ್ದೇಶನಾಲಯದ ಅಧಿಕಾರವನ್ನು ಮೊಟಕುಗೊಳಿಸಿಲ್ಲ. ರಾಜ್ಯಮಟ್ಟದ ಸಮಿತಿಯು ರೈತರಿಗೆ ಅನ್ಯಾಯವಾದರೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಹೊಂದಿದೆ. ಹೀಗಾಗಿ ತಿದ್ದುಪಡಿ ಕಾಯ್ದೆಯು ರೈತರ ಮೇಲಿನ ಮೇಲುಸ್ತುವಾರಿಯನ್ನು ಕಡಿಮೆಗೊಳಿಸಿ ಸ್ವತಂತ್ರವಾಗಿಸುವ, ಸದೃಢವಾಗಿಸುವ ಕಡೆಗೆ ಇರಿಸಿದ ಹೆಜ್ಜೆಯಾಗಿದೆ.

(ಲೇಖಕ: ಆರ್ಥಿಕ ಚಿಂತಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT