ಭಾನುವಾರ, ಜೂನ್ 13, 2021
29 °C
ಶಿನೋಳಿ ಕೈಗಾರಿಕಾ ಪ್ರದೇಶದ ಉದ್ಯಮಿಗಳು, ಕಾರ್ಮಿಕರಿಗೆ ಸಂಕಷ್ಟ

ಬೆಳಗಾವಿ: ಕೈಗಾರಿಕಾ ಚಟುವಟಿಕೆಗೆ ‘ಗಡಿ’ ತೊಂದರೆ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಸಮೀಪದ ಹಾಗೂ ಕರ್ನಾಟಕ–ಮಹಾರಾಷ್ಟ್ರದ ಗಡಿಯಲ್ಲಿರುವ ಶಿನೋಳಿ ಕೈಗಾರಿಕಾ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಕೈಗಾರಿಕಾ ಚಟುವಟಿಕೆಗಳನ್ನು ನಡೆಸಲು ‘ಗಡಿ’ ವಿಷಯ ತೊಡಕಾಗಿ ಪರಿಣಮಿಸಿದೆ!

ಹೌದು. ರಾಜ್ಯದ ಗಡಿಯಿಂದ ಕೆಲವೇ ಕಿ.ಮೀ. ದೂರದಲ್ಲಿ ಈ ಪ್ರದೇಶವಿದ್ದರೂ ಕೈಗಾರಿಕೋದ್ಯಮಿಗಳು ಮತ್ತು ಕಾರ್ಮಿಕರು ಅಲ್ಲಿಗೆ ಹೋಗಲು ಹಾಗೂ ವಾಪಸಾಗಲು ಚೆಕ್‌ಪೋಸ್ಟ್‌ನಲ್ಲಿ ಅನುಮತಿ ಸಿಗುತ್ತಿಲ್ಲ. ಕೈಗಾರಿಕೆಗಳನ್ನು ನಡೆಸಲು ಲಾಕ್‌ಡೌನ್‌ ನಿರ್ಬಂಧ ಸಡಿಲಿಕೆ ಮಾಡಿ ಅವಕಾಶ ಕೊಟ್ಟಿದ್ದರೂ ಇಲ್ಲಿನ ಉದ್ಯಮಿಗಳು ತೊಂದರೆ ಅನುಭವಿಸುವಂತಾಗಿದೆ.

ಈ ಕೈಗಾರಿಕಾ ಪ್ರದೇಶವು ಕರ್ನಾಟಕದ ಗಡಿಯಿಂದ ಕೆಲವೇ ಕಿ.ಮೀ.ಗಳ ಅಂತರದಲ್ಲಿದೆ. ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲ್ಲೂಕು ವ್ಯಾಪ್ತಿಗೆ ಬರುತ್ತದೆ. ಬೆಳಗಾವಿ ತಾಲ್ಲೂಕು ಮತ್ತು ಚಂದಗಡ ತಾಲ್ಲೂಕುಗಳು ಅಕ್ಕಪಕ್ಕದಲ್ಲಿವೆ. ಬೆಳಗಾವಿ ನಗರದಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ಕರ್ನಾಟಕದ ಗಡಿಯಿಂದ 3–4 ಕಿ.ಮೀ.ಗಳ ವ್ಯಾಪ್ತಿಯಲ್ಲಿ ಇದು ಹರಡಿದೆ.

ನೂರಾರು ಕಾರ್ಮಿಕರು

ಅಲ್ಲಿ ಎಂಜಿನಿಯರಿಂಗ್‌ ಕೈಗಾರಿಕೆಗೆ ಸಂಬಂಧಿಸಿದ 15ಕ್ಕೂ ಹೆಚ್ಚು ಘಟಕಗಳಿವೆ. 1,500ಕ್ಕೂ ಹೆಚ್ಚಿನ ಕಾರ್ಮಿಕರಿದ್ದಾರೆ. ಈ ಪೈಕಿ ಗಡಿಯಲ್ಲಿರುವ ರಾಜ್ಯದ ವಿವಿಧ ಗ್ರಾಮಗಳ ಹಾಗೂ ನಗರದವರೇ ಶೇ 50ರಷ್ಟು ಮಂದಿ ಇದ್ದಾರೆ. ಇವರು ಅಲ್ಲಿಗೆ ಹೋಗಿ ಕರ್ತವ್ಯ ನಿರ್ವಹಿಸಲು ಅವಕಾಶ ದೊರೆಯುತ್ತಿಲ್ಲ. ಪರಿಣಾಮ, ಕೋವಿಡ್–19 ಲಾಕ್‌ಡೌನ್‌ನಿಂದ ಮೊದಲೇ ಸಂಕಷ್ಟಕ್ಕೆ ಒಳಗಾಗಿರುವ ಉದ್ಯಮಿಗಳು ಮತ್ತಷ್ಟು ತೊಂದರೆಗೆ ಒಳಗಾಗುತ್ತಿದ್ದಾರೆ. ಕಾರ್ಮಿಕರು ಕೆಲಸ ಮಾಡಲಾಗದ ಸ್ಥಿತಿ ಇದೆ. ಮಹಾರಾಷ್ಟ್ರ ಕೊರೊನಾ ಹಾಟ್‌ಸ್ಪಾಟ್‌ ಆಗಿರುವುದರಿಂದ ಅಂತರರಾಜ್ಯ ಪ್ರವೇಶಕ್ಕೆ ಕರ್ನಾಟಕ ಸರ್ಕಾರದಿಂದ ನಿರ್ಬಂಧ ವಿಧಿಸಿರುವುದು ಇದಕ್ಕೆ ಕಾರಣವಾಗಿದೆ.

ಬೆಳಗಾವಿ ನಗರ, ತುರಮುರಿ, ಉಚಗಾಂವ, ಕುದುರೆಮನಿ ಮೊದಲಾದ ಕಡೆಗಳವರು ಅಲ್ಲಿನ ಕಾರ್ಮಿಕರಾಗಿದ್ದು, ಇವರು ಅತಂತ್ರವಾಗಿದ್ದಾರೆ.

‘ಆ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕಿರುವವರಲ್ಲಿ ಶೇ 50ರಷ್ಟು ಮಂದಿ ಬೆಳಗಾವಿ ತಾಲ್ಲೂಕಿನವರೇ ಆಗಿದ್ದಾರೆ. ಉದ್ಯಮಿಗಳಲ್ಲಿ ಅನೇಕರು ನಗರದಲ್ಲಿರುತ್ತಾರೆ. ಕಾರ್ಖಾನೆ, ಕೈಗಾರಿಕೆಗಳನ್ನು ಆರಂಭಿಸಿ ಎನ್ನುವ ಸರ್ಕಾರ ಇನ್ನೊಂದೆಡೆ ಘಟಕಕ್ಕೆ ಹೋಗುವುದಕ್ಕೆ ಅನುಮತಿಯನ್ನೇ ನೀಡುತ್ತಿಲ್ಲ. ರಾಜ್ಯದ ಗಡಿಯಂಚಿನಲ್ಲೇ ಇದ್ದರೂ ಅವಕಾಶವಿಲ್ಲ. ರಫ್ತು ಚಟುವಟಿಕೆಗೂ ತೊಡಕಾಗಿದೆ. ಹೋದರೆ ಬರಬೇಡಿ, ಬಂದರೆ ಹೋಗುವಂತಿಲ್ಲ; ಕ್ವಾರಂಟೈನ್‌ ಇರಬೇಕು ಎಂದೆಲ್ಲಾ ಪೊಲೀಸರು ತಕರಾರು ಮಾಡುತ್ತಿದ್ದಾರೆ. ಇದರಿಂದ ನಮಗೆ ಹಾಗೂ ಕಾರ್ಮಿಕರಿಗೆ ತೊಂದರೆಯಾಗಿದೆ’ ಎಂದು ಉದ್ಯಮಿ ಎನ್‌.ಬಿ. ಅಶೋಕ್‌ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲಸವಾಗುವುದಿಲ್ಲ

‘ಕಚ್ಚಾ ಸಾಮಗ್ರಿ ಮೊದಲಾದವುಗಳನ್ನು ಸಾಗಿಸುವ ಗೂಡ್ಸ್ ವಾಹನಗಳ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿತ್ತು. ನಂತರ, ಅವಕಾಶ ಕೊಟ್ಟಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದ ಚಂದಗಡ ತಾಲ್ಲೂಕಿನ ಕೆಲವೇ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಜೂನಿಯರ್ ಹಂತದ ಕಾರ್ಮಿಕರಾಗಿದ್ದಾರೆ. ಸೂಪರ್‌ವೈಸರ್‌ಗಳು, ವ್ಯವಸ್ಥಾಪಕರು ಹಾಗೂ ಮಾಲೀಕರು ಹೋಗದಿದ್ದರೆ ಹೆಚ್ಚಿನ ಕೆಲಸ ಆಗುವುದಿಲ್ಲ’ ಎಂದು ತಿಳಿಸಿದರು.

‘ಚಂದಗಡದ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಜಿಲ್ಲಾಧಿಕಾರಿ ಭೇಟಿಯಾಗಿದ್ದೆವು. ಸಮಸ್ಯೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೂ ಅನುಮತಿ ಸಿಕ್ಕಿಲ್ಲ. ಕಂಪನಿಗಳ ಬಸ್‌ ಓಡಾಟಕ್ಕೂ ಅವಕಾಶವಿಲ್ಲ. ಘಟಕಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಆ ಪ್ರದೇಶಕ್ಕೆ  ಸೀಮಿತವಾಗುವಂತೆ ವಾಹನಗಳಲ್ಲಿ ಕಾರ್ಮಿಕರು ಹಾಗೂ ಉದ್ಯಮಿಗಳು ಹೋಗಿ ಬರುವುದಕ್ಕೆ ಅನುಕೂಲ ಆಗುವಂತೆ ಪಾಸ್ ಒದಗಿಸಿದರೆ ಅನುಕೂಲವಾಗುತ್ತದೆ’ ಎಂದು ಉದ್ಯಮಿಗಳು ಕೋರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ್‌, ‘ಈ ವಿಷಯ ಗಮನಕ್ಕೆ ಬಂದಿದೆ. ಗೂಡ್ಸ್ ವಾಹನಗಳಿಗೆ ಅವಕಾಶ ಕೊಡಲಾಗಿದೆ. ಮಹಾರಾಷ್ಟ್ರಕ್ಕೆ ಸಂಚಾರಕ್ಕೆ ನಿರ್ಬಂಧವಿದೆ. ಹೀಗಾಗಿ, ಕಾರ್ಮಿಕರು ಹೋಗಿ ಬರಲು ಅವಕಾಶವಿಲ್ಲ. ಸದ್ಯಕ್ಕೆ ಅವರು ಮಹಾರಾಷ್ಟ್ರದ ಕಾರ್ಮಿಕರನ್ನು ಬಳಸಿಕೊಳ್ಳಬಹುದು’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು