ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸರೆ ನೀಡಿದವರನ್ನೇ ಕೈಬಿಟ್ಟ ಅಡಗೂರು

ಬೆಂಬಲಿಗರಿಗೆ ಪುರಸಭೆ ಟಿಕೆಟ್‌ ಕೊಡಿಸಲೂ ಸಾಧ್ಯವಾಗದ್ದಕ್ಕೆ ಕೋಪ
Last Updated 6 ಜುಲೈ 2019, 18:30 IST
ಅಕ್ಷರ ಗಾತ್ರ

ಮೈಸೂರು: ‘ರಾಜಕೀಯ ಸಂಧ್ಯಾಕಾಲದಲ್ಲಿ ನನ್ನ ಕೈಹಿಡಿದು ಶಾಸಕರನ್ನಾಗಿ ಮಾಡಿದ್ದು ಎಚ್‌.ಡಿ.ದೇವೇಗೌಡ. ಅಂಥವರ ಕೈಬಿಟ್ಟು ಹೋದರೆ ಆ ದೇವರು ಮೆಚ್ಚುವನೇ?’

–ಹೀಗೆಂದು ಪದೇಪದೇ ಹೇಳುತ್ತಿದ್ದ ಹುಣಸೂರು ಕ್ಷೇತ್ರದ ಜೆಡಿಎಸ್‌ ಶಾಸಕ ಅಡಗೂರು ಎಚ್‌.ವಿಶ್ವನಾಥ್‌, ಈಗ ಆಸರೆ ನೀಡಿದವರಿಗೇ ಕೈಕೊಟ್ಟಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯರೂ ಆಗಿರುವ ಪುತ್ರ ಅಮಿತ್‌ ದೇವರಹಟ್ಟಿ ಅವರಿಗೆ ರಾಜಕೀಯ ಶಕ್ತಿ ತುಂಬಲು ಬಿಜೆಪಿ ಜೊತೆ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಅಮಿತ್‌ ಅವರನ್ನು ಕಣಕ್ಕಿಳಿಸುವ ಕುರಿತು ಚರ್ಚೆ ನಡೆದಿರುವುದು ಈಗ ಬಹಿರಂಗ ರಹಸ್ಯ.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಸಮಯದಲ್ಲಿ, ತಮ್ಮ ಹುಟ್ಟೂರಾದ ಕೆ.ಆರ್‌.ನಗರ ಪುರಸಭೆ ಚುನಾವಣೆ ವೇಳೆ ಕುರುಬ ಸಮುದಾಯದ ಒಬ್ಬ ಬೆಂಬಲಿಗನಿಗೂ ಟಿಕೆಟ್‌ ಕೊಡಿಸಲು ಸಾಧ್ಯವಾಗದ ದಿನವೇ ಅವರು ಪಕ್ಷ ತೊರೆಯುವ ಚಿಂತನೆ ನಡೆಸಿದ್ದರು ಎಂದು ಅವರ ಆಪ್ತರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪುರಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವ ವಿಚಾರವಾಗಿ ತಮ್ಮ ಸಲಹೆಯನ್ನು ಧಿಕ್ಕರಿಸಿ, ಸಚಿವ ಸಾ.ರಾ.ಮಹೇಶ್‌ ಜಾತಿ ರಾಜಕಾರಣ ಮಾಡಿದ್ದಾಗಿ ವಿಶ್ವನಾಥ್‌ ಈಚೆಗೆ ಆರೋಪಿಸಿದ್ದರು. ತಮಗೆ ಸಚಿವ ಸ್ಥಾನ ಸಿಗದಿರಲೂ ಅವರೇ ಕಾರಣ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು.

ಕಾಂಗ್ರೆಸ್‌ನಲ್ಲಿದ್ದ ಕೊನೆಯ ದಿನಗಳಲ್ಲಿ ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಂಡಿದ್ದ ಅವರು, ಈಗ ದೊಡ್ಡಗೌಡರು ಹಾಗೂ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧವೂ ಸೆಟೆದು ನಿಂತಿದ್ದಾರೆ.

ಕಾಶಿ ಪ್ರವಾಸದ ನೆಪದಲ್ಲಿ ಈಚೆಗೆ ನವದೆಹಲಿಯಲ್ಲಿ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಿ ಜೆಡಿಎಸ್‌ ತೊರೆಯಲು ಯೋಜನೆ ರೂಪಿಸಿದ್ದು ಈಗ ಬಹಿರಂಗಗೊಂಡಂತಾಗಿದೆ.

2 ಬಾರಿ ಗೆದ್ದಿದ್ದ ಬಿಜೆಪಿ: ಒಕ್ಕಲಿಗ ಹಾಗೂ ಕುರುಬ ಸಮುದಾಯದ ಪ್ರಾಬಲ್ಯವಿರುವ ಹುಣಸೂರು ಕ್ಷೇತ್ರದಲ್ಲಿ 1994 ಹಾಗೂ 1999ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

ಕಾಂಗ್ರೆಸ್‌ನಲ್ಲಿದ್ದಾಗ ಕೆ.ಆರ್‌.ನಗರದಿಂದ ಸ್ಪರ್ಧಿಸುತ್ತಿದ್ದ ವಿಶ್ವನಾಥ್‌, ಜೆಡಿಎಸ್‌ ಸೇರಿ 2018ರ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರಿಗೆ ಸ್ಥಳಾಂತರಗೊಂಡು ಗೆದ್ದು ಬಂದರು. ಕಾಂಗ್ರೆಸ್‌ನ ಎಚ್‌.ಪಿ.ಮಂಜುನಾಥ್‌ ಅವರನ್ನು ಮಣಿಸಿದ್ದರು. ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಆರು ಬಾರಿ ಗೆಲುವು ಸಾಧಿಸಿದ್ದರು.

***

ವಿಶ್ವನಾಥ್‌ ಅವರನ್ನು ಜೆಡಿಎಸ್‌ಗೆ ಕರೆದುಕೊಂಡು ಬಂದವ ನಾನಲ್ಲ. ಆದರೆ, ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ.

- ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT