ಶುಕ್ರವಾರ, ನವೆಂಬರ್ 22, 2019
20 °C

ಬಿಜೆಪಿಯವರಿಗೆ ನನ್ನ ಕಂಡರೆ ಭಯ: ಸಿದ್ದರಾಮಯ್ಯ

Published:
Updated:

ಸಿದ್ದಾಪುರ(ಉತ್ತರ ಕನ್ನಡ): ‘ಬಿಜೆಪಿಯವರಿಗೆ ನನ್ನ ಬಗ್ಗೆ ಭಯ, ಅದಕ್ಕೆ ನನ್ನ ವಿರುದ್ಧ ಒಬ್ಬರಾದ ನಂತರ ಒಬ್ಬರು ಸುಳ್ಳು ಹೇಳುತ್ತಿದ್ದಾರೆ. ನನ್ನನ್ನೇ ಗುರಿ ಮಾಡಿ, ಟೀಕೆ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ ಎಂಟು ಸ್ಥಾನಗಳನ್ನು ಗೆಲ್ಲದಿದ್ದರೆ ಯಡಿಯೂರಪ್ಪ ರಾಜೀನಾಮೆ ಕೊಡಬೇಕಾಗುತ್ತದೆ. ನಾವು ಕನಿಷ್ಠ 12 ಸ್ಥಾನಗಳನ್ನು ಗೆಲ್ಲುವ ಭರವಸೆ ಇರುವುದರಿಂದ, ಮತ್ತೆ ವಿಧಾನಸಭೆಗೆ ಚುನಾವಣೆ ಎದುರಾಗಬಹುದು’ ಎಂದರು.

‘ರಾಜ್ಯದ ಬಿಜೆಪಿ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲ ಎಂದು ಜೆಡಿಎಸ್‌ನವರು ಹೇಳಿದ್ದಾರಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರ (ಬಿಜೆಪಿ ಮತ್ತು ಜೆಡಿಎಸ್) ನಡುವಿನ ಒಳ ಒಪ್ಪಂದ ನನಗೆ ಗೊತ್ತಿಲ್ಲ. ಆ ಬಗ್ಗೆ ಕುಮಾರಸ್ವಾಮಿ ಅವರನ್ನು ಕೇಳಿ’ ಎಂದರು.

‘ಸ್ಪೀಕರ್ ಸ್ಥಾನದ ಬಗ್ಗೆ ನನಗೆ ಗೌರವ ಇದೆ. ಅಪ್ಪನಿಗೂ ಏಕವಚನದಲ್ಲಿ ಮಾತನಾಡುತ್ತೇವೆ. ಒಂದೊಂದು ಸಾರಿ ಸ್ಲಿಪ್ ಆಫ್ ದಿ ಟಂಗ್ ಬಂದು ಬಿಡುತ್ತದೆ. ಅದು ಅಗೌರವದ ಪ್ರಶ್ನೆ ಅಲ್ಲ, ಪ್ರವಾಹದ ಬಗ್ಗೆ ಮಾತನಾಡುವಾಗ ವಿರೋಧ ಪಕ್ಷದ ನಾಯಕರಿಗೆ ಮಿತಿ ಹಾಕಬೇಡಿ, ಎಂದು ಹೇಳಿದ್ದೇನೆ’ ಎಂದು ಸಮರ್ಥಿಸಿಕೊಂಡರು.

ಉಪಚುನಾವಣೆಯಲ್ಲಿ ಬಿಜೆಪಿಯಿಂದ ಬರುವವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಬಿಜೆಪಿಯ ಕೆಲವು ಮಾಜಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರಿಗೆ ಸ್ಪರ್ಧಿಸುವ ಅವಕಾಶ ನೀಡುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ’ ಎಂದರು.

ಇದನ್ನೂ ಓದಿ... ಸಿದ್ದರಾಮಯ್ಯ ಮೊದಲಿನಂತಿಲ್ಲ, ಬದಲಾಗಿದ್ದಾರೆ: ವಿ.ಸೋಮಣ್ಣ ವ್ಯಂಗ್ಯ

‘17 ಶಾಸಕರು ಅನರ್ಹರಾಗಲು ಸಿದ್ದರಾಮಯ್ಯ ಕಾರಣ ಎಂದು ಯಡಿಯೂರಪ್ಪ ಹೇಳಿದ್ದಾರಲ್ಲ’ ಎಂದು ಕೇಳಿದ್ದಕ್ಕೆ, ‘ಸಿಕ್ಕಿಹಾಕಿಕೊಂಡಿದ್ದರಿಂದ ಯಡಿಯೂರಪ್ಪ ಈ ರೀತಿ ಸುಳ್ಳು ಹೇಳುತ್ತಿದ್ದಾರೆ’ ಎಂದರು.

ಪ್ರತಿಕ್ರಿಯಿಸಿ (+)