ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಿಗಳ ಕೈಯಲ್ಲಿ ‘ಕಿನ್ನಾಳ’ ಕುಂಚ

ಕಾರಾಗೃಹದಲ್ಲಿ ಮನೋಪರಿವರ್ತನೆಗೆ ಕಾರಣವಾಗುತ್ತಿರುವ ದೇಸಿ ಕಲೆ
Last Updated 8 ನವೆಂಬರ್ 2018, 20:20 IST
ಅಕ್ಷರ ಗಾತ್ರ

ಹಾವೇರಿ: ಮಚ್ಚು, ಲಾಂಗ್, ಬ್ಲೇಡು, ಬಡಿಗೆ ಹಿಡಿದಿದ್ದ ಕೈಗಳಲ್ಲಿ ಈಗ ‘ಕಿನ್ನಾಳ ಕುಂಚ’ದ ನರ್ತನ. ಕರ್ನಾಟಕ ಸರ್ಕಾರ, ಪೊಲೀಸ್ ಇಲಾಖೆ, ಕಾರಾಗೃಹಗಳ ಲಾಂಛನದ ನಿರ್ಮಾಣ. ಅಬ್ಬರಿಸಿ, ಬೊಬ್ಬಿರಿಯುತ್ತಿದ್ದವರ ಮುಖದಲ್ಲಿ ಮುಗುಳ್ನಗೆ!

ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗಾಗಿ ‘ಕಿನ್ನಾಳ ಕಲೆ’ಯ ತರಬೇತಿ ನೀಡಲಾಗುತ್ತಿದೆ. ಹಲವು ಆರೋಪಗಳಲ್ಲಿ ಜೈಲು ಸೇರಿದ ಕೈದಿಗಳು ಈಗ ಲಾಂಛನ ಮತ್ತಿತರ ಕಲಾಕೃತಿಗಳನ್ನು ರಚಿಸಿ, ಚಿತ್ತಾರ ಬರೆಯುವುದರಲ್ಲಿ ನಿರತರಾಗಿದ್ದಾರೆ.

ಕೊಪ್ಪಳದ ಕಿನ್ನಾಳದ ರಮೇಶ ಚಿತ್ರಗಾರ ಮತ್ತು ಪದ್ಮಾ ಚಿತ್ರಗಾರ ದಂಪತಿ, ರಾಣೆಬೆನ್ನೂರಿನ ಸರೋಜಿನಿ ಎರೆಸೀಮಿ, ನಗರದ ಮಲ್ಲಮ್ಮ ಬ್ಯಾತನಾಳ ಹಾಗೂ ರಾಜೇಶ್ವರಿ ಸಾರಂಗಮಠ ತರಬೇತಿ ನೀಡುವಲ್ಲಿ ನಿರತರಾಗಿದ್ದಾರೆ.

13 ಮಹಿಳೆಯರು ಸೇರಿದಂತೆ 175 ಕೈದಿಗಳು ಕಾರಾಗೃಹದಲ್ಲಿದ್ದಾರೆ. ಈ ಪೈಕಿ ನಾಲ್ವರು ಮಹಿಳೆಯರು ಸೇರಿದಂತೆ 30 ಮಂದಿ ಈ ಕಲೆಯ ಬಗ್ಗೆ ಒಲವು ವ್ಯಕ್ತಪಡಿಸಿದ್ದು, ಅವರಿಗೆ ಅ.31ರಿಂದ ತರಬೇತಿ ಆರಂಭಿಸಲಾಗಿದೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ತಿಮ್ಮಣ್ಣ ಬಿ. ಭಜಂತ್ರಿ ತಿಳಿಸಿದರು.

‘ದೇಸಿ ಹಾಗೂ ಪಾರಂಪರಿಕ ಕಲೆಗಳನ್ನು ಉಳಿಸುವ ತರಬೇತಿ, ಕಮ್ಮಟಗಳನ್ನು ಮಾಡುತ್ತಿರುತ್ತೇನೆ. ಆದರೆ, ಈ ಕಲೆಗಳು ಸಮಾಜದಲ್ಲಿ ವರ್ಣಮಯ ಬದಲಾವಣೆ ತಂದರೆ ಅದೇ ದೊಡ್ಡ ಪರಿವರ್ತನೆ’ ಎಂದು ಹಸೆ ಚಿತ್ತಾರ ಖ್ಯಾತಿಯ ಕಲಾವಿದೆ ಸರೋಜಿನಿ ಎರೆಸೀಮಿ ತಿಳಿಸಿದರು.

‘ಜೈಲಿಗೆ ಹೋಗಬೇಕು’ ಎಂದು ನಮ್ಮ ಯಜಮಾನರು (ರಮೇಶ ಚಿತ್ರಗಾರ) ಹೇಳಿದಾಗಲೇ ನನಗೆ ಭಯ ಕಾಡಿತ್ತು. ಆದರೆ, ವಾರದ ತರಬೇತಿ ಬಳಿಕ ಕೈದಿಗಳ ಉತ್ಸಾಹ, ಬದ್ಧತೆಯನ್ನು ಕಂಡು ನನ್ನ ಮನಸ್ಥಿತಿಯೇ ಬದಲಾಯಿತು’ ಎಂದ ಪದ್ಮಾ ಚಿತ್ರಗಾರ, ‘ನಿಜವಾದ ಕೈದಿಗಳು ಜೈಲಿನ ಒಳಗಿದ್ದಾರೆಯೇ? ಅಥವಾ ಹೊರಗಿದ್ದಾರೆಯೇ?’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

‘ಹೊರ ಹೋದ ಬಳಿಕ ಎಲ್ಲಿ ಕನ್ನ ಹಾಕುವುದು, ಖರ್ಚು– ವೆಚ್ಚಕ್ಕೆ ಏನು ಮಾಡಬೇಕು ಎಂಬ ಚಿಂತೆಯೇ ಕಾಡುತ್ತಿತ್ತು. ನಿದ್ದೆಯೂ ಬರುತ್ತಿರಲಿಲ್ಲ. ದುಶ್ಚಟಗಳೂ ನೆನಪಾಗುತ್ತಿದ್ದವು. ಆದರೆ, ಈ ತರಬೇತಿಯ ಬಳಿಕ ಮನಸ್ಸಿಗೆ ನೆಮ್ಮದಿಯಾಗಿದೆ. ಬಣ್ಣ ಬಣ್ಣದ ಕನಸುಗಳೂ ಬೀಳುತ್ತಿವೆ. ಬಿಡುಗಡೆಯಾದ ಬಳಿಕ ನಾನೂ ಕಲಾವಿದನಾಗುತ್ತೇನೆ’ ಎಂದು ಮೂಲತಃ ಹುಬ್ಬಳ್ಳಿಯವರಾದ ಕೈದಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು. ಕಳ್ಳತನ, ಹಲ್ಲೆ ಸೇರಿದಂತೆ ಆರು ಪ್ರಕರಣಗಳನ್ನು ಎದುರಿಸುತ್ತಿರುವ ಅವರಿಗೆ, ಭರವಸೆಯ ಬೆಳಕು ಕಾಣಿಸಿದ ಖುಷಿ ಇತ್ತು.

ಪಾರಂಪರಿಕ ಕಲೆ ಉಳಿಸುವ ಪ್ರಯತ್ನ ಜೈಲಿನಲ್ಲಿ ನಡೆದಿರುವುದೇ ವಿಶೇಷ. ಈ ನಿಟ್ಟಿನಲ್ಲಿ ಜೈಲಿನ ಸಂದರ್ಶಕ ಮಂಡಳಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಪ್ರೋತ್ಸಾಹಿಸಿದ್ದರು ಎಂದು ಕಾರಾಗೃಹ ಅಧೀಕ್ಷಕ ಸ್ಮರಿಸಿದರು.

**

ಕಿನ್ನಾಳ ಕಲೆ

‘ವಿಜಯನಗರ ರಾಜರ ಕಾಲದಲ್ಲಿ ಕಲಾವಿದರಾಗಿದ್ದ ನಮ್ಮ ಹಿರಿಯರು ಕೊಪ್ಪಳದ ಕಿನ್ನಾಳಕ್ಕೆ ಬಂದು ನೆಲೆಸಿದ್ದರು. ದೇವರ ಮೂರ್ತಿ, ಪೀಠ, ಆಟಿಕೆ ಸೇರಿದಂತೆ ವಿವಿಧ ವಸ್ತುಗಳನ್ನು ತಯಾರಿಸಿ ಆಕರ್ಷಕ ಬಣ್ಣ ನೀಡುತ್ತಿದ್ದರು. ಈ ಕಲಾ ಪ್ರಕಾರಕ್ಕೇ ‘ಕಿನ್ನಾಳ ಕಲೆ’ ಎಂದು ಹೆಸರು ಬಂದಿದೆ’ ಎಂದು ಕಲಾವಿದ ರಮೇಶ ಚಿತ್ರಗಾರ ವಿವರಿಸಿದರು.

**

ಕಲಾ ಚಟುವಟಿಕೆ ಜೊತೆ ಕೈದಿಗಳಲ್ಲಿ ಮಾನಸಿಕ ಬದಲಾವಣೆಯನ್ನೂ ಕಾಣುತ್ತಿದ್ದೇವೆ.

–ತಿಮ್ಮಣ್ಣ ಬಿ. ಭಜಂತ್ರಿ, ಕಾರಾಗೃಹ ಅಧೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT