ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer: ಹಾಲಿನ ದರ ಏರಿಕೆ ಪ್ರಸ್ತಾವದ ಹಿಂದಿನ ಹಕೀಕತ್ತು

Last Updated 19 ಜನವರಿ 2020, 2:25 IST
ಅಕ್ಷರ ಗಾತ್ರ
ADVERTISEMENT
""
""
""

ಕೆಎಂಎಫ್ ಹಾಲಿನ ದರವನ್ನು ಮತ್ತೆ ಹೆಚ್ಚಿಸುವ ಪ್ರಸ್ತಾವವನ್ನು ರಾಜ್ಯ ಸರ್ಕಾರದ ಮುಂದಿಟ್ಟಿದೆ. ಹಾಲು ಒಕ್ಕೂಟಗಳು ₹2 ರಿಂದ ₹ 5 ರವರೆಗೆ ದರ ಏರಿಕೆಗೆ ಒಲವು ತೋರಿವೆ. ಈ ಕುರಿತು ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಯವರು ಕೈಗೊಳ್ಳಲಿದ್ದಾರೆ. ಹಾಲಿನ ದರ ಏರಿಕೆಯ ಹಿಂದಿನ ಕಾರಣಗಳು ಹಾಗೂ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಸ್ಥಿತಿಗತಿ ಕುರಿತು ವಿಶ್ಲೇಷಣೆ ಇಲ್ಲಿದೆ...

ಹಾಲು ಉತ್ಪಾದನೆಯಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಗುಜರಾತ್‌ನ ಅಮೂಲ್‌ ನಂತರದ ಸ್ಥಾನ ಕೆಎಂಎಫ್‌ನದು. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆ ಇದೆ. ಕೆಲವೇ ವರ್ಷಗಳ ಹಿಂದೆ ಹಾಲಿನ ಉತ್ಪಾದನೆ ಪ್ರಮಾಣ ಏಕಾಏಕಿ ಏರಿದ್ದರಿಂದ ಅದರ ವಿಲೇವಾರಿಯೇ ದೊಡ್ಡ ಸಮಸ್ಯೆ ಆಗಿತ್ತು. ಕ್ಷೀರಭಾಗ್ಯ ಯೋಜನೆ ಮೂಲಕ ಹೆಚ್ಚುವರಿ ಹಾಲಿನ ವಿಲೇವಾರಿಗೆ ಮಾರ್ಗೋಪಾಯ ಕಂಡುಕೊಳ್ಳಲಾಗಿದೆ.

ಗ್ರಾಹಕರಿಗೆ ವಿತರಿಸುವ ಹಾಲಿನ ದರವನ್ನು 2017ರಲ್ಲಿ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ಏರಿಕೆ ಮಾಡಲು ನಿರ್ಧರಿಸಿರುವ ಕೆಎಂಎಫ್‌ ಆಡಳಿತ ಮಂಡಳಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತಿದೆ. ದರ ಏರಿಸಲು ಸರ್ಕಾರದ ಒಪ್ಪಿಗೆ ಬೇಕಿದ್ದು, ದರ ಹೆಚ್ಚಳದ ವಿವೇಚನಾಧಿಕಾರದ ಚೆಂಡನ್ನು ಮುಖ್ಯಮಂತ್ರಿಯ ಅಂಗಳಕ್ಕೆ ದೂಡಿದೆ.

ಹಾಲಿನ ಉತ್ಪಾದನೆ, ಹೈನುಗಾರರಿಗೆ ಸಿಗುತ್ತಿರುವ ದರ, ಬಳಕೆ–ಉಪ ಬಳಕೆ ಕುರಿತ ಬೆಳಕು ಚೆಲ್ಲುವ ವಿವರಗಳು ಇಲ್ಲಿವೆ.

ದರ ಏರಿಕೆ ಪ್ರಸ್ತಾವಕ್ಕೆ ಕಾರಣ

ರಾಜ್ಯದಲ್ಲಿ 2017ರ ಏಪ್ರಿಲ್‌ ಬಳಿಕ ಅಂದರೆ ಸುಮಾರು ಎರಡೂವರೆ ವರ್ಷಗಳಿಂದ ಹಾಲು ಮಾರಾಟದ ದರವನ್ನು ಏರಿಕೆ ಮಾಡಿಲ್ಲ. ಈ ಮಧ್ಯೆ ಚಿಲ್ಲಿಂಗ್‌, ವಾಹನ ಸಂಚಾರ, ಸಾಗಣೆ ಮತ್ತು ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಅದನ್ನು ಸರಿದೂಗಿಸಲು ದರ ಏರಿಕೆ ಅನಿವಾರ್ಯ ಎನ್ನುತ್ತಾರೆ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌.

ಹಾಲು ಒಕ್ಕೂಟಗಳು ಹಾಲು ಮಾರಾಟದ ದರ ಹೆಚ್ಚಿಸಲು ಒತ್ತಡ ಹೇರಿವೆ. ಒಂದೊಂದು ಹಾಲು ಒಕ್ಕೂಟವೂ ಒಂದೊಂದು ರೀತಿ ಸಲಹೆ ನೀಡಿದೆ. ಕೆಲವು ಒಕ್ಕೂಟಗಳು ₹2 ಏರಿಸಲು ಸಲಹೆ ಮಾಡಿದ್ದರೆ, ಇನ್ನು ಕೆಲವು ₹5 ಹೆಚ್ಚಳಕ್ಕೆ ಸಲಹೆ ಮಾಡಿವೆ. ಅಂತಿಮವಾಗಿ ಮುಖ್ಯಮಂತ್ರಿಯವರು ತೀರ್ಮಾನ ತೆಗೆದುಕೊಳ್ಳಲು ಪ್ರಸ್ತಾವನೆ ಅವರಿಗೆ ನೀಡಲಾಗಿದೆ ಎಂದು ಅವರು ವಿವರಿಸುತ್ತಾರೆ.

ಕೆಎಂಎಫ್‌ ಹಾಲಿಗೂ ಹೊರ ರಾಜ್ಯಗಳ ಹಾಲಿಗೂ ಬೆಲೆಯಲ್ಲಿ ಶೇ 10ರಷ್ಟು ವ್ಯತ್ಯಾಸವಿದೆ. ಈ ಮಧ್ಯೆ ಹವಾಮಾನ ಬದಲಾವಣೆ ಮತ್ತಿತರ ಕಾರಣಗಳಿಂದಾಗಿ ಕರ್ನಾಟಕ ಮಾತ್ರವಲ್ಲದೆ ದೇಶದ ಎಲ್ಲ ರಾಜ್ಯಗಳಲ್ಲೂ ಹಾಲಿನ ಇಳುವರಿ ಕಡಿಮೆ ಆಗಿದೆ. ಹೀಗಾಗಿ ಬೆಲೆ ಹೆಚ್ಚಳ ಅನಿವಾರ್ಯ ಎಂದು ಹೇಳುತ್ತಾರೆ.

ಹಾಲಿನ ಪುಡಿ ಸ್ಟಾಕ್‌ ಸ್ಥಿತಿ

2013–14ರಲ್ಲಿ 25 ಮೆಟ್ರಿಕ್ ಟನ್‌ ಹಾಲಿನ ಪುಡಿ ಸ್ಟಾಕ್‌ ಉಳಿದಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಹಾಲಿನ ಪುಡಿ ಉತ್ಪಾದನೆ ಆದಂತೆ ವಿಲೇವಾರಿಯೂ ಆಗುತ್ತಿದೆ. ಕ್ಷೀರಭಾಗ್ಯ ಯೋಜನೆಗೆ 7.5 ಲಕ್ಷ ಮೆಟ್ರಿಕ್‌ ಟನ್‌ ಹಾಲಿನ ಪುಡಿ ಬಳಕೆ ಆಗುತ್ತಿದೆ. ಈಗ ಸ್ಟಾಕ್‌ ಇಲ್ಲ, ಬೇಡಿಕೆ ಜಾಸ್ತಿ ಇದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ ಎಸ್‌ಎಂಪಿ (ಕೆನೆರಹಿತ) ಹಾಲಿನ ಪುಡಿ ಆಮದು ಮಾಡಿಕೊಳ್ಳಲು ಉದ್ದೇಶಿಸಿತ್ತು. ಆ ರೀತಿ ಮಾಡುವುದು ಬೇಡ. ದೇಶದಲ್ಲೇ ಅದರ ಉತ್ಪಾದನೆ ಹೆಚ್ಚಿಸುವುದಾಗಿ ಎಲ್ಲ ರಾಜ್ಯಗಳೂ ಮನವಿ ಮಾಡಿವೆ ಎಂಬುದು ಕೆಎಂಎಫ್‌ ಅಧಿಕಾರಿಗಳ ವಿವರಣೆ.

ಹೊರ ರಾಜ್ಯಗಳ ಹಾಲಿಗೆ ಪ್ರತಿ ಸ್ಪರ್ಧೆ: ಹೊರ ರಾಜ್ಯಗಳ ವಿವಿಧ ಬ್ರ್ಯಾಂಡ್‌ಗಳ ಹಾಲು ರಾಜಧಾನಿ ಬೆಂಗಳೂರು ಸೇರಿದಂತೆ ವಿಶೇಷವಾಗಿ ಗಡಿ ಭಾಗದ ನಗರಗಳಲ್ಲಿ ಮಾರಾಟ ಆಗುತ್ತಿದೆ. ಗುಣಮಟ್ಟದ ಕಾರಣಕ್ಕೆ ಕೆಎಂಎಫ್ ನಿರಾಕರಿಸಿದ ಹಾಲನ್ನು ಈ ಸಂಸ್ಥೆಗಳು ಖರೀದಿಸಿ ಪ್ಯಾಕಿಂಗ್‌ ಮಾಡಿ ಮಾರಾಟ ಮಾಡುತ್ತಿವೆ ಎಂಬ ದೂರಿದೆ. ಇದನ್ನು ತಡೆಯಲು ಹಾಲಿನ ಗುಣಮಟ್ಟ ಹೆಚ್ಚಿಸಿ, ರಾಜ್ಯದ ಹಾಲು ಒಕ್ಕೂಟಗಳಿಗೇ ಮಾರಲು ಹಾಲು ಉತ್ಪಾದಕರ ಮನವೊಲಿಸುವ ಕಾರ್ಯಕ್ಕೆ ಕೈ ಹಾಕಿದ್ದೇವೆ. ಒಂದೆರಡು ರೂಪಾಯಿಗಳು ಹೆಚ್ಚಿಗೆ ಸಿಗುತ್ತದೆ ಎಂಬ ಆಮಿಷಕ್ಕೆ ಒಳಗಾಗಿ ಮಾರುವವರೂ ಇದ್ದಾರೆ ಎನ್ನುತ್ತಾರೆ ಸತೀಶ್‌.

ಹಾಲಿನ ಪುಡಿಗೆ ಬೇಡಿಕೆ

ಕೆನೆರಹಿತ ಮತ್ತು ಕೆನೆಭರಿತ ಹಾಲಿನ ಪುಡಿ, ಯುಎಚ್‌ಟಿ ಹಾಲು ಮತ್ತು ಇತರೆ ಹಾಲಿನ ಉತ್ಪನ್ನಗಳಿಗೆ ವಿದೇಶಗಳಲ್ಲಿ ವ್ಯಾಪಕ ಬೇಡಿಕೆ. ರಫ್ತಾಗುವ ದೇಶಗಳು–ನೇಪಾಳ, ಒಮಾನ್‌, ಮಡಗಾಸ್ಕರ್, ಮ್ಯಾನ್ಮಾರ್‌, ಬಾಂಗ್ಲಾದೇಶ, ಪಾಕಿಸ್ತಾನ, ಸಿಂಗಪುರ, ಥಾಯ್ಲೆಂಡ್‌, ಫಿಲಿಪ್ಪೀನ್ಸ್‌, ರಷ್ಯಾ.

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ

ಕ್ಷೀರಧಾರೆ ಯೋಜನೆಯಡಿ ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ ₹5 ಪ್ರೋತ್ಸಾಹ ಧನ ನೀಡುತ್ತಿದೆ. 2018–19 ರ ಸಾಲಿನಲ್ಲಿ ₹1,252.38 ಕೋಟಿ ಪ್ರೋತ್ಸಾಹ ಧನ ನೀಡಲಾಗಿದೆ. ಹಾಲು ಉತ್ಪಾದನೆ ಹೆಚ್ಚಳಕ್ಕೆ ಈ ಪ್ರೋತ್ಸಾಹ ಧನದ ಪಾತ್ರ ಹಿರಿದು ಎಂದು ವಿಶ್ಲೇಷಿಸಲಾಗುತ್ತಿದೆ.

ಕ್ಷೀರಭಾಗ್ಯ

ಹಾಲು ಉತ್ಪಾದನೆ ಹೆಚ್ಚಾಗಿದ್ದರಿಂದ ಹಾಲಿನ ಪುಡಿ ಉತ್ಪಾದನೆಯನ್ನೂ ಹೆಚ್ಚಿಸ ಲಾಯಿತು. ಹಾಲಿನ ಪುಡಿ ಮಾರಾಟ ಆಗದೇ ಉಳಿಯಲಾರಂಭಿಸಿ ದಾಗ, ಅದರ ವಿಲೇವಾರಿಗೆ ಕ್ಷೀರಭಾಗ್ಯ ಯೋಜನೆ ಆರಂಭಿಸಲಾಯಿತು. ಈ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿಗೆ ಹೋಗುವ ಸುಮಾರು 1 ಕೋಟಿ ಮಕ್ಕಳಿಗೆ ಉಚಿತ ಹಾಲು ನೀಡಲಾಗುತ್ತಿದೆ. ಇದರಿಂದ ಹೆಚ್ಚುವರಿ ಹಾಲಿನ ವಿಲೇವಾರಿ ಆಗುತ್ತಿದ್ದು. ಹಾಲಿನ ಪುಡಿ ಸ್ಟಾಕ್‌ ಉಳಿಯುವುದಿಲ್ಲ. 2018–19ನೇ ಸಾಲಿನಲ್ಲಿ ಸರ್ಕಾರ ಈ ಯೋಜನೆಗೆ ₹808 ಕೋಟಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT