ಸೋಮವಾರ, ಸೆಪ್ಟೆಂಬರ್ 23, 2019
22 °C
ಸಂಕಷ್ಟದಲ್ಲಿ 32 ಗ್ರಾಮಗಳ ಜನರು

ಕೊಡಗು: ಮಳೆಗೆ 4 ಸಾವಿರ ಎಕರೆ ಕಾಫಿ ತೋಟಕ್ಕೆ ಹಾನಿ, ₹2 ಸಾವಿರ ಕೋಟಿ ನಷ್ಟ

Published:
Updated:
Deccan Herald

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿದ ಮಹಾಮಳೆ, ಭೂಕುಸಿತದಿಂದ ₹ 2 ಸಾವಿರ ಕೋಟಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ.

ಮಡಿಕೇರಿ, ಸೋಮವಾರಪೇಟೆ ತಾಲ್ಲೂಕಿನಲ್ಲಿ ಹೆಚ್ಚು ಹಾನಿಯಾಗಿದೆ. ಭೂಕುಸಿತದಿಂದ 4 ಸಾವಿರ ಎಕರೆಯಷ್ಟು ಕಾಫಿ ತೋಟಕ್ಕೆ ಹಾನಿಯಾಗಿದೆ. 716 ಮನೆಗಳು ಸಂಪೂರ್ಣ ಕುಸಿದಿವೆ. 404 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 32 ಗ್ರಾಮಗಳ ಜನರು ಸಂಕಷ್ಟಕ್ಕೆ ಒಳಗಾಗಿದ್ದು, 10 ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿ ಅಪಾರ ನಷ್ಟ ಉಂಟಾಗಿದೆ ಎಂದು ಪ್ರಾಥಮಿಕ ಸಮೀಕ್ಷೆಯಲ್ಲಿ ನಷ್ಟವನ್ನು ಅಂದಾಜಿಸಿದೆ.

1,500 ಕಿ.ಮೀ. ಗ್ರಾಮೀಣ ರಸ್ತೆಗಳಿಗೆ ಹಾನಿಯಾಗಿದೆ. 150 ಕಿ.ಮೀ. ರಸ್ತೆಯನ್ನು ಪರ್ಯಾಯ ಮಾರ್ಗದಲ್ಲಿ ಹೊಸದಾಗಿ ನಿರ್ಮಿಸಬೇಕಿದೆ. 58 ಸೇತುವೆ, 258 ಕಟ್ಟಡಗಳಿಗೆ ಹಾನಿಯಾಗಿದೆ.

ದತ್ತು ಯೋಜನೆ

ಮನೆಗಳ ನಿರ್ಮಾಣ, ರಸ್ತೆ, ಸೇತುವೆ, ಕಟ್ಟಡಗಳ ದುರಸ್ತಿ, ಮಕ್ಕಳ ಶಿಕ್ಷಣ ಸೇರಿದಂತೆ ಸಂತ್ರಸ್ತರಿಗೆ ಸವಲತ್ತು ಒದಗಿಸಲು ದತ್ತು ಯೋಜನೆ ಜಾರಿಗೆ ಜಿಲ್ಲಾಡಳಿತ ಮುಂದಾಗಿದೆ. ಸಂಘ, ಸಂಸ್ಥೆಗಳು ಪ್ರವಾಹಪೀಡಿತ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡುವುದಾದರೆ ಅಂತಹ ಗ್ರಾಮಗಳನ್ನು ಬಿಟ್ಟುಕೊಡಲು ಜಿಲ್ಲಾಡಳಿತ ನಿರ್ಧರಿಸಿದೆ.

ವಿಶೇಷ ಅನ್ನಭಾಗ್ಯ ಯೋಜನೆ: ಪ್ರವಾಹ ಪೀಡಿತ ಗ್ರಾಮಗಳಿಗೆ ವಿಶೇಷ ಅನ್ನಭಾಗ್ಯ ಯೋಜನೆ ಜಾರಿ ಮಾಡಲಾಗಿದ್ದು, ಪ್ರತಿ ಕುಟುಂಬಕ್ಕೆ ₹ 10 ಕೆ.ಜಿ. ಅಕ್ಕಿ, ಅಡುಗೆ ಎಣ್ಣೆ, ಸಕ್ಕರೆ, ಬೇಳೆ, ಸೀಮೆಎಣ್ಣೆ ವಿತರಣೆ ಮಾಡಲಾಗುತ್ತಿದೆ.

‘ಗ್ರಾಮೀಣ ಪ್ರದೇಶಕ್ಕೆ 17,160 ಲೀಟರ್‌ ಸೀಮೆಎಣ್ಣೆ ವಿತರಿಸಲಾಗಿದೆ. 153 ಕುಟುಂಬಗಳಿಗೆ ಗ್ಯಾಸ್‌ ಸ್ಟೌ ವಿತರಣೆ ಮಾಡಲಾಗಿದೆ. ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅದೂ ಸಾಧ್ಯವಾಗದಿದ್ದರೆ, ಮನೆ ನಿರ್ಮಿಸುವ ತನಕ ಬಾಡಿಗೆಯ ಹಣ ಪಾವತಿಸುವ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸುತ್ತೇನೆ’ ಎಂದು ಆಹಾರ ಸಚಿವ ಜಮೀರ್‌ ಅಹ್ಮದ್‌ ಮಾಹಿತಿ ನೀಡಿದರು.

‘ಎಪಿಎಲ್‌, ಬಿಪಿಎಲ್‌ ಕಾರ್ಡ್‌ ಕಳೆದುಕೊಂಡ ಸಂತ್ರಸ್ತರಿಗೆ ನಕಲು ಪ್ರತಿ ನೀಡುವ ಪ್ರತಿಕ್ರಿಯೆ ಆರಂಭವಾಗಿದೆ. ಸಂತ್ರಸ್ತರು ಆತಂಕಕ್ಕೆ ಒಳಗಾಗಬಾರದು. ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕ ವಿತರಿಸಲಾಗುವುದು’ ಎಂದರು.

ಮತ್ತೆ ಇಬ್ಬರ ಮೃತದೇಹ ಪತ್ತೆ

ಭೂಕುಸಿತದಲ್ಲಿ ಕಣ್ಮರೆಯಾಗಿದ್ದ ಇಬ್ಬರ ಮೃತದೇಹಗಳು ಶನಿವಾರ ಪತ್ತೆಯಾಗಿದ್ದು, ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಹಾಡಗೇರಿಯಲ್ಲಿ ಫ್ರಾನ್ಸಿಸ್‌ (47), ಹೆಬ್ಬಟ್ಟಗೇರಿ ಗ್ರಾಮದಲ್ಲಿ ಚಂದ್ರಪ್ಪ (58) ಮೃತದೇಹಗಳು ಸಿಕ್ಕಿವೆ. ಆ. 15ರಿಂದ ಇಬ್ಬರು ಕಣ್ಮರೆ ಆಗಿದ್ದರು. ಇನ್ನೂ 6 ಮಂದಿಗಾಗಿ ಎನ್‌ಡಿಆರ್‌ಎಫ್‌ ಹಾಗೂ ಗರುಡ ಪಡೆಯ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.


ಮಡಿಕೇರಿ ತಾಲ್ಲೂಕಿನ ತಾಳತ್ತಮನೆ ಗ್ರಾಮದಲ್ಲಿ ಭತ್ತದ ಗದ್ದೆಗಳನ್ನು ಆವರಿಸಿರುವ ಮಣ್ಣು

ನಿರಾಶ್ರಿತ ಕೇಂದ್ರದಲ್ಲಿದ್ದ ವ್ಯಕ್ತಿ ಸಾವು

ಸುಳ್ಯ ವರದಿ : ಅರಂತೋಡು ಪರಿಹಾರ ಕೇಂದ್ರದಲ್ಲಿದ್ದ ಜೋಡುಪಾಲ ಮೊಣ್ಣಂಗೇರಿ ನಿವಾಸಿ ಅಂಗಾರ (60) ಅವರು ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಅಂಗಾರ ಆರಂಭದಲ್ಲಿ ಮಡಿಕೇರಿ ಪರಿಹಾರ ಕೇಂದ್ರದಲ್ಲಿದ್ದರು. ಅವರಿಗೆ ಮೊದಲೇ ಉಸಿರಾಟದ ಸಮಸ್ಯೆ ಇತ್ತು. ವಿಪರೀತ ಮಳೆ ಮತ್ತು ಶೀತದಿಂದ ಉಸಿರಾಟದ ಸಮಸ್ಯೆ ಹೆಚ್ಚಾಯಿತೆಂದು ಎರಡು ದಿನದ ಹಿಂದೆ ಸೂಕ್ತ ಚಿಕಿತ್ಸೆ ನೀಡಿ ಅವರನ್ನು ಅರಂತೋಡು ಕೇಂದ್ರಕ್ಕೆ ಕರೆತರಲಾಗಿತ್ತು.

ಶನಿವಾರ ಮಧ್ಯರಾತ್ರಿ ಅವರಿಗೆ ಮತ್ತೆ ಉಸಿರಾಟದ ಸಮಸ್ಯೆ ಕಂಡುಬಂದಾಗ ಅಲ್ಲೇ ಚಿಕಿತ್ಸೆ ನೀಡಿ ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲು ಒಯ್ಯುವ ಸಂದರ್ಭದಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟರು. ಅವರ ಶವದ ಮರಣೋತ್ತರ ಪರೀಕ್ಷೆ ನಡೆಸಿ ಮನೆ ಮಂದಿಗೆ ಹಸ್ತಾಂತರಿಸಲಾಯಿತು.

Post Comments (+)