ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋರದಲ್ಲಿ ಮುನಿದ ‘ಆಸರೆ’ ತಾಣ

ಪ್ರವಾಹದಿಂದ ತಪ್ಪಿಸಿಕೊಂಡ ಕುಟುಂಬಕ್ಕೆ ಆಪತ್ತು ತಂದ ಭೂಕುಸಿತ
Last Updated 11 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಮಡಿಕೇರಿ: ರಾತ್ರೋರಾತ್ರಿ ಉಕ್ಕೇರಿದ ನದಿ ಪ್ರವಾಹದಿಂದ ತಪ್ಪಿಸಿಕೊಂಡು ಹೋದ ಕುಟುಂಬಕ್ಕೆ ಭೂಕುಸಿತವೂ ಆಪತ್ತು ತಂದುಬಿಟ್ಟಿದೆ. ‘ಆಸರೆ’ ಅರಸಿ ಹೋದ ತಾಣವೂ ಮೃತ್ಯುಕೂಪವಾಗಿ ಪರಿಣಮಿಸಿದೆ. ಇದು ಕೊಡಗಿನ ತೋರ ಗ್ರಾಮದ ದುರಂತ ಕಥೆ.

ಭೂಕುಸಿತದಲ್ಲಿ ಪ್ರಭು ಎಂಬುವರ ತಾಯಿ, ಪತ್ನಿ, ಇಬ್ಬರು ಮಕ್ಕಳು ಕಣ್ಮರೆಯಾಗಿದ್ದು ಅವರಿನ್ನೂ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ‘ಆ ದೇವರು ನನ್ನನ್ನು ಮಾತ್ರ ಏಕೆ ಬದುಕಿಸಿಬಿಟ್ಟ’ ಎಂದು ಪ್ರಶ್ನಿಸುತ್ತಿದ್ದಾರೆ.

ತೋರದ ಪರಮೇಶ್‌ ಕುಟುಂಬದ ಇಬ್ಬರ ಶವ ಶುಕ್ರವಾರವೇ ಪತ್ತೆಯಾಗಿದ್ದವು. ಕಣ್ಮರೆಯಾದ ಪ್ರಭು ಹಾಗೂ ಹರೀಶ್‌ ಕುಟುಂಬದ ಒಟ್ಟು ಎಂಟು ಮಂದಿ ಸುಳಿವು ಇನ್ನೂ ಸಿಕ್ಕಿಲ್ಲ. ಭೂಕುಸಿತದ ಸ್ಥಳದಲ್ಲಿ ಎನ್‌ಡಿಆರ್‌ಎಫ್‌, ಸೇನೆ, ಪೊಲೀಸರು ಮೂರನೇ ದಿನವೂ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ನೋವಿನ ಕಥೆ: ಪ್ರಭು ಅವರು ದುರಂತದ ಸ್ಥಳದಲೇ ಮೊದಲು ವಾಸವಿದ್ದರು. ಎರಡು ವರ್ಷಗಳ ಹಿಂದೆ ಎರಡೂವರೆ ಕಿ.ಮೀ ದೂರದ ಬೆಟ್ಟದ ತಪ್ಪಲಿನಲ್ಲಿ ಮನೆ ನಿರ್ಮಿಸಿಕೊಂಡು, ಅಲ್ಲಿಗೆ ಸ್ಥಳಾಂತರವಾಗಿದ್ದರು. ಕೃಷಿ, ಅಂಗಡಿ ನಡೆಸುತ್ತ ಬದುಕು ಕಟ್ಟಿಕೊಂಡಿದ್ದರು. ಆದರೆ, ಪ್ರವಾಹ– ಭೂಕುಸಿತ ಅವರ ಕುಟುಂಬವನ್ನೇ ಕಿತ್ತುಕೊಂಡಿದೆ.

‘ಬುಧವಾರ ಪ್ರವಾಹ ಹೆಚ್ಚಾದಂತೆ ತೋರ ಪ್ರದೇಶದಲ್ಲಿದ್ದವರು ಹಳೇ ಮನೆಗೆ ಬರಲು ಬಲವಂತ ಮಾಡಿದರು. ಊರಿನವರ ಮಾತು ಮೀರಬಾರದೆಂದು ಅಲ್ಲಿಗೆ ಕುಟುಂಬ ಸಮೇತ ತೆರಳಿದ್ದವು. ಹಳೆಯ ಮನೆ ಸುರಕ್ಷಿತ ಸ್ಥಳದಲ್ಲಿಯೇ ಇತ್ತು. ಆದರೆ, ದೊಡ್ಡ ಬೆಟ್ಟವೇ ಕುಸಿದು ಬಂದರೆ ಯಾರು ತಾನೆ ಉಳಿಯುತ್ತಾರೆ ಹೇಳಿ? ಆಸರೆ ಅರಸಿ ಹೋದ ತಾಣವೇ ಕುಟುಂಬವನ್ನು ಕಿತ್ತುಕೊಂಡಿತು’ ಎಂದು ಪ್ರಭು ಕಣ್ಣೀರು ಸುರಿಸುತ್ತಾರೆ.

ಅಂತ್ಯಸಂಸ್ಕಾರಕ್ಕೆ ಅಡ್ಡಿ?

ಭೂಕುಸಿತದಲ್ಲಿ ಮೃತಪಟ್ಟಿದ್ದ ಮಮತಾ (40) ಹಾಗೂ ಲಿಖಿತಾ (13) ಅವರ ಮೃತದೇಹಗಳನ್ನು ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರುದ್ರಭೂಮಿಗೆ ಅಂತ್ಯಸಂಸ್ಕಾರಕ್ಕೆ ತರಲಾಗಿತ್ತು. ವ್ಯಕ್ತಿಯೊಬ್ಬ, ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿ ₹ 8 ಸಾವಿರ ನೀಡು
ವಂತೆ ಒತ್ತಾಯಿಸಿದ್ದ. ಆತ ಕಾವಲುಗಾರ ಎನ್ನಲಾಗಿದೆ. ಆ ವಿಡಿಯೊ ಈಗ ಹರಿದಾಡುತ್ತಿದೆ.

ವಿಡಿಯೊ ಮಾಡಿರುವ ವ್ಯಕ್ತಿ, ಶಾಸಕ ಕೆ.ಜಿ.ಬೋಪಯ್ಯ ಹಾಗೂ ಸಂಸದ ಪ್ರತಾಪಸಿಂಹ ವಿರುದ್ಧವೂ ಆಕ್ರೋಶ ವ್ಯಕ್ತಡಿಸಿದ್ದಾರೆ. ಆ ವ್ಯಕ್ತಿ ವಿರುದ್ಧ ದೂರು ದಾಖಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT