ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಮತ್ತೆ ಧಾರಾಕಾರ ಮಳೆ; ತಲಕಾವೇರಿಯಲ್ಲಿ ವಿಶೇಷ ಪೂಜೆ-ಪ್ರಾರ್ಥನೆ

Last Updated 11 ಸೆಪ್ಟೆಂಬರ್ 2019, 20:26 IST
ಅಕ್ಷರ ಗಾತ್ರ

ಬೆಂಗಳೂರು: ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ ಕೊಡಗು ಜಿಲ್ಲೆ ಸೇರಿದಂತೆ ಮಲೆನಾಡು ಭಾಗದಲ್ಲಿ ಜೋರು ಮಳೆ ಸುರಿಯುತ್ತಿದೆ.

ಕೊಡಗಿನಲ್ಲಿ ಎರಡು ದಿನ ಬಿಡುವು ನೀಡಿದ್ದ ಮಳೆ, ಬುಧವಾರ ಮಧ್ಯಾಹ್ನದ ಬಳಿಕ ಮತ್ತೆ ಧಾರಾಕಾರವಾಗಿ ಸುರಿಯುತ್ತಿದೆ. ಮಡಿಕೇರಿ, ಕಾಟಕೇರಿ, ಅಪ್ಪಂಗಳ, ಮದೆನಾಡು, ಮಾದಾಪುರ, ಸುಂಟಿಕೊಪ್ಪ ಸುತ್ತಮುತ್ತ ಗುಡುಗು ಸಹಿತ ಜೋರು ಮಳೆಯಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯ ಹಲವೆಡೆ ಬುಧವಾರ ತುಂತುರು ಮಳೆಯಾಗಿದೆ. ತೀರ್ಥಹಳ್ಳಿ, ಆಗುಂಬೆ, ಮಾಸ್ತಿಕಟ್ಟೆಯಲ್ಲಿ ಕೆಲಕಾಲ ಸಾಧಾರಣ ಮಳೆಯಾಗಿದ್ದು, ಹೊಸನಗರ, ಸಾಗರ, ಜೋಗ ಭಾಗದಲ್ಲಿ ತುಂತುರು ಮಳೆಯಾಗಿದೆ.

ತಗ್ಗದ ಪ್ರವಾಹ: ‌ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಕ್ಷೀಣಿಸಿದ್ದರೂ, ಅಲ್ಲಿನ ವಿವಿಧ ಜಲಾಶಯಗಳ ಮೂಲಕ ರಾಜ್ಯಕ್ಕೆ ಹರಿದು ಬರುತ್ತಿರುವ ನೀರಿನ‌ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ಕೃಷ್ಣಾ, ತುಂಗಭದ್ರಾ ನದಿಗಳ ಹೊರಹರಿವಿನ ಪ್ರಮಾಣ ಮತ್ತೆ ಹೆಚ್ಚಳವಾಗಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1.65 ಲಕ್ಷ ಕ್ಯುಸೆಕ್ ಮತ್ತು ದೂಧ್‌ಗಂಗಾ ನದಿಯಿಂದ 33 ಸಾವಿರ ಕ್ಯುಸೆಕ್ ಸೇರಿದಂತೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಒಟ್ಟು 1.98 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ.

ಮಲಪ್ರಭಾ ನದಿ ನೀರಿನಲ್ಲಿ ರಾಮದುರ್ಗದ ಹಳೇ ಸೇತುವೆ ಜಲಾವೃತವಾಗಿದೆ. ಪರ್ಯಾಯ ಮಾರ್ಗದ ಮೂಲಕ ಜನರು ಸಂಚರಿಸುತ್ತಿದ್ದಾರೆ. ಚಿಕ್ಕೋಡಿ, ನಿಪ್ಪಾಣಿ ಹಾಗೂ ರಾಯಬಾಗ ತಾಲ್ಲೂಕಿನ 9 ಸೇತುವೆಗಳು ಇನ್ನೂ ಜಲಾವೃತ ಸ್ಥಿತಿಯಲ್ಲಿಯೇ ಇವೆ.

ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಆರ್ಭಟ ಕಡಿಮೆಯಾಗಿದೆ. ಆದರೆ ಜಮಖಂಡಿ ತಾಲ್ಲೂಕಿನ ಮುತ್ತೂರು, ಕಂಕಣವಾಡಿ ಇನ್ನೂ ಕೃಷ್ಣೆಯ ನೀರಿನಿಂದ ಆವೃತವಾಗಿವೆ. ಸತತ ಮೂರು ದಿನಗಳಿಂದ ಕಡಿಮೆ ಇದ್ದ ತುಂಗಭದ್ರಾ ಜಲಾಶಯದ ಒಳಹರಿವು, ಹೊರಹರಿವು ಬುಧವಾರ ಹೆಚ್ಚಾಗಿದೆ.

ಸೇತುವೆ ಸಂಚಾರಕ್ಕೆ ಮುಕ್ತ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವ ಪ್ರಮಾಣ ಕಡಿಮೆಯಾಗಿರುವುದರಿಂದ ಪ್ರವಾಹ ಇಳಿಮುಖವಾಗಿದ್ದು, ದೇವದುರ್ಗ ತಾಲ್ಲೂಕಿನ ಹೂವಿನಹಡಗಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.

ಬೆಂಗಳೂರು (ವರದಿ): ರಾಜ್ಯದ ಕರಾವಳಿಯಲ್ಲಿ ಗುರುವಾರ (ಸೆ. 12) ವ್ಯಾಪಕ ಮಳೆಯಾಗಲಿದೆ. ಬಳಿಕ ಮಳೆಯ ಪ್ರಮಾಣ ಕಡಿಮೆ ಆಗಲಿದ್ದು, ಉತ್ತರ ಒಳನಾಡು, ದಕ್ಷಿಣ ಒಳನಾಡು, ರಾಜ್ಯದಾದ್ಯಂತ ಸೆ.16ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ತಲಕಾವೇರಿಗೆ ವಿಶೇಷ ಪೂಜೆ

ನಾಪೋಕ್ಲು: ಜನರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಪ್ರಾರ್ಥಿಸಿ, ಕೊಡಗು ಜಿಲ್ಲೆಯ ಮೂಲನಿವಾಸಿಗಳು ತಲಕಾವೇರಿ ಕ್ಷೇತ್ರದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿದರು.

ಸತತ ಎರಡು ವರ್ಷಗಳಿಂದ ಅತಿವೃಷ್ಟಿ ಹಾಗೂ ಭೂಕುಸಿತದಿಂದ ತತ್ತರಿಸಿರುವ ಜಿಲ್ಲೆಯ ಜನರು, ತಮ್ಮ ಮೇಲೆ ಕಾವೇರಿ ಮಾತೆ ಮುನಿಸಿಕೊಂಡಿದ್ದಾಳೆ ಎಂದು ಬಗೆದಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಾವ ವಿಘ್ನವೂ ಬಾರದಿರಲಿ ಎಂದು ತಲಕಾವೇರಿಯ ಗಣಪತಿ ದೇವಾಲಯ ಹಾಗೂ ಅಗಸ್ತ್ಯೇಶ್ವರ ದೇವಾಲಯದಲ್ಲಿ ಪ್ರಾರ್ಥಿಸಿ, ನಂತರ ಮೂಲ ಕಾವೇರಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT