ಬುಧವಾರ, ಸೆಪ್ಟೆಂಬರ್ 18, 2019
23 °C
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹2 ಲಕ್ಷ ಪರಿಹಾರ

ಕೊಪ್ಪಳ | ವಿದ್ಯುತ್ ಸ್ಪರ್ಶ: 5 ವಿದ್ಯಾರ್ಥಿಗಳು ಸಾವು, ನಿಲಯ ಮೇಲ್ವಿಚಾರಕ ಬಂಧನ

Published:
Updated:

ಕೊಪ್ಪಳ: ನಗರದ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ವಸತಿನಿಲಯದಲ್ಲಿನ ತಾತ್ಕಾಲಿಕ ಧ್ವಜಕಂಬವನ್ನು ತೆರವುಗೊಳಿಸುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಐವರು ವಿದ್ಯಾರ್ಥಿಗಳು ಭಾನುವಾರ ಮೃತಪಟ್ಟಿದ್ದಾರೆ. 

ಮೆತಗಲ್‌ನ ಮಲ್ಲಿಕಾರ್ಜುನ ಅಮರೇಶ ಓಬಳಬಂಡಿ (16), ಗಂಗಾವತಿ ತಾಲ್ಲೂಕಿನ ಮುಕ್ಕುಂಪಿಯ ಬಸವರಾಜ ಫಕೀರಪ್ಪ ಜೆಲ್ಲಿ (16), ಹಲಗೇರಿಯ ದೇವರಾಜ ನಾಗಪ್ಪ ಹಡಪದ (14), ಲಾಚನಕೇರಿಯ ಗಣೇಶ ನಾಗಪ್ಪ ಕುರಿ (14) ಬಿಡ್ನಾಳದ (ಹೈದರ್) ಕುಮಾರ್ ಲಚಮಪ್ಪ ಲಮಾಣಿ (14) ಮೃತರು. ಶ್ರೀನಿವಾಸ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.

ನಗರದ ಬನ್ನಿಕಟ್ಟಿ ಪ್ರದೇಶದ ಬಸನಗೌಡ ಹಿರೇವಂಕಲಕುಂಟಾ ಅವರಿಗೆ ಸೇರಿದ ಕಟ್ಟಡದಲ್ಲಿ ವಸತಿನಿಲಯವಿದೆ. ನಿಲಯದ ಮೊದಲನೆ ಮಹಡಿಯ ಆವರಣದಲ್ಲಿ ತಗಡಿನ ಡಬ್ಬಿಯಲ್ಲಿ ಮರಳು ಹಾಕಿ ತೆಳುವಾದ 10 ಅಡಿಗಳ ಕಬ್ಬಿಣದ ಧ್ವಜಕಂಬವನ್ನು ನೆಡಲಾಗಿತ್ತು. ಧ್ವಜಾರೋಹಣದ ನಂತರ ತೆರವುಗೊಳಿಸಿರಲಿಲ್ಲ. ಬೆಳಿಗ್ಗೆ 6.45ಕ್ಕೆ ವಸತಿ ನಿಲಯದ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಕಂಬವನ್ನು ತೆರವುಗೊಳಿಸಲು ಹೇಳಿದ್ದಾರೆ.

ಇಬ್ಬರು ವಿದ್ಯಾರ್ಥಿಗಳು ಕಂಬವನ್ನು ತೆರವುಗೊಳಿಸಲು ಮುಂದಾದಾಗ, ಕಟ್ಟಡದ ಎದುರು ಹಾದು ಹೋಗಿರುವ ವಿದ್ಯುತ್ ತಂತಿ ತಗುಲಿದೆ. ಇದರ ಪರಿಣಾಮ  ಇಬ್ಬರೂ ಒದ್ದಾಡತೊಡಗಿದರು. ಇದನ್ನು ಕಂಡು ರಕ್ಷಿಸಲು ಮುಂದಾದ ಮೂವರು ವಿದ್ಯಾರ್ಥಿಗಳಿಗೂ ವಿದ್ಯುತ್ ಪ್ರವಹಿಸಿದೆ. ಕೆಲವೇ ಕ್ಷಣಗಳಲ್ಲಿ ಐವರೂ ಸ್ಥಳದಲ್ಲೇ ಮೃತಪಟ್ಟರು.

ಈ ಘಟನೆ ಬೆಳಿಗ್ಗೆ 7.45ರ ಸುಮಾರಿಗೆ ನಡೆದಿದ್ದು, ಇಲಾಖೆಗಳ ನಿರ್ಲಕ್ಷ್ಯದಿಂದ ಈ ದುರಂತ ನಡೆದಿದೆ ಎಂದು ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಸ್ಥಳಕ್ಕೆ ಡಿಸಿ ಪಿ.ಸುನೀಲ್ ಕುಮಾರ್ ಭೇಟಿ ನೀಡಿ ವಸತಿ ನಿಲಯದ ಸಿಬ್ಬಂದಿ ಹಾಗೂ ಪೊಲೀಸರಿಂದ ಮಾಹಿತಿ ಪಡೆದರು. 

ನಂತರ ಮಾತನಾಡಿದ ಜಿಲ್ಲಾಧಿಕಾರಿ, ಜೆಸ್ಕಾಂ ಮತ್ತು ವಸತಿ ನಿಲಯದ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮಕ್ಕಳ ಸಾವಿನ ಸುದ್ದಿ ತಿಳಿದು, ಪಾಲಕರು ಧಾವಿಸಿ ಬಂದರು. ಸ್ಥಳಕ್ಕೆ ಬಂದ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಚಾರ ಕಡಿತಗೊಳಿಸಿ, ಮಕ್ಕಳ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.

ವಸತಿ ನಿಲಯದ ಪಕ್ಕದಲ್ಲಿರುವ ವಿಜಯನಗರ ಆಂಗ್ಲ ಮಾಧ್ಯಮ ಖಾಸಗಿ ಶಾಲೆಗೆ ಮಕ್ಕಳನ್ನು ಸ್ಥಳಾಂತರಿಸಲಾಯಿತು. ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಘಟನೆಯಿಂದ ಗಾಬರಿಗೊಂಡಿದ್ದ ಮಕ್ಕಳನ್ನು ಬಡಾವಣೆಯ ನಿವಾಸಿಗಳು ಸಂತೈಸುತ್ತಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ ಸ್ಥಳಕ್ಕೆ ಭೇಟಿ ನೀಡಿ, ಮಹಜರು ನಡೆಸಿ ವಸತಿ ನಿಲಯಕ್ಕೆ ಬೀಗ ಹಾಕಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ವಸತಿ ನಿಲಯದ ಮೇಲ್ವಿಚಾರಕ ಬಸವರಾಜ ಬೆಳವಟ್ಟಿ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಜೆಸ್ಕಾಂ ಎಇಇ ಸಚಿನ್.ಆರ್‌ ಮತ್ತು ಮನೆ ಮಾಲೀಕರ ವಿರುದ್ಧ ದೂರು ದಾಖಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.

 

Post Comments (+)