ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ತ್ರಿ ಪೆಟ್ಟಿಗೆಯಿಂದ ಯುವತಿಯ ಮೈ ಸುಟ್ಟ ಮೌಲ್ವಿಯ ಬಂಧನ

ಯುವತಿ ರಕ್ಷಿಸಿದ ಕೋರಮಂಗಲ ಪೊಲೀಸರು , ಅತ್ಯಾಚಾರ ಆರೋಪ
Last Updated 14 ಡಿಸೆಂಬರ್ 2019, 21:05 IST
ಅಕ್ಷರ ಗಾತ್ರ

ಬೆಂಗಳೂರು: ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದ ಯುವತಿ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿ, ಇಸ್ತ್ರಿ ಪೆಟ್ಟಿಗೆಯಿಂದ ಆಕೆಯ ಮೈ ಸುಟ್ಟಿರುವ ಆರೋಪದಡಿ ಮೌಲ್ವಿ ರೆಹಬಾರ್ ಇಸ್ಲಾಮ್ ಪರ್ವೇಜ್ (40) ಎಂಬಾತನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

‘ಬಿಹಾರದ ಪರ್ವೇಜ್ ಐದು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಕೋರಮಂಗಲದ 8ನೇ ಅಡ್ಡರಸ್ತೆಯಲ್ಲಿ ಮದರಸಾ ನಡೆಸಲಾರಂಭಿಸಿದ್ದ. ಸಮೀಪದಲ್ಲೇ ಮನೆ ಮಾಡಿಕೊಂಡು ಪತ್ನಿ ಜೊತೆ ವಾಸವಿದ್ದ. ಅದೇ ಮನೆಯಲ್ಲಿ ಯುವತಿಯನ್ನು ಅಕ್ರಮ ಬಂಧನದಲ್ಲಿಟ್ಟು ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

20 ವರ್ಷದ ಯುವತಿಯ ಎದೆ, ಕಾಲು–ಕೈ, ಹೊಟ್ಟೆ, ಬೆನ್ನು, ತೊಡೆ ಹಾಗೂ ಇತರೆ ಭಾಗಗಳಲ್ಲಿ ಸುಟ್ಟ ಗಾಯಗಳಾಗಿವೆ. ಆಕೆಗೆ ಪೊಲೀಸರೇ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆಕೆಯ ಸ್ಥಿತಿ ಕಂಡು ವೈದ್ಯರೂ ಮರುಕಪಡುತ್ತಿದ್ದಾರೆ. ಆರೋಪಿಯ ವಿಕೃತ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಹಾರದಲ್ಲಿರುವ ಆಕೆಯ ಪೋಷಕರಿಗೂ ಪೊಲೀಸರು ಮಾಹಿತಿ ನೀಡಲಾಗಿದೆ.

16 ವರ್ಷದವಳಿದ್ದಾಗಲೇ ಕರೆತಂದಿದ್ದ: ‘ಬಿಹಾರದ ಯುವತಿಯನ್ನು 16 ವರ್ಷದವಳಿದ್ದಾಗಲೇ ಆರೋಪಿ ಮನೆ ಕೆಲಸಕ್ಕೆಂದು ಕರೆತಂದಿದ್ದ. ನಿತ್ಯವೂ ಮನೆಯ ಎಲ್ಲ ಕೆಲಸಗಳನ್ನು ಮಾಡುತ್ತಿದ್ದ ಯುವತಿಯನ್ನು ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಮಾನಸಿಕ ಹಾಗೂ ದೈಹಿಕವಾಗಿಯೂ ಕಿರಕುಳ ನೀಡಲಾಗುತ್ತಿತ್ತು’ ಎಂದು ಅಧಿಕಾರಿ ಹೇಳಿದರು.

‘ಜುಲೈನಲ್ಲಿ ಪತ್ನಿ ಬೇರೆ ಊರಿಗೆ ಹೋಗಿದ್ದಳು. ಅದೇ ಸಂದರ್ಭದಲ್ಲೇ ಆರೋಪಿ, ಯುವತಿ ಮೇಲೆ ಮೊದಲ ಬಾರಿ ಅತ್ಯಾಚಾರ ಎಸಗಿದ್ದ. ಆ ಬಗ್ಗೆ ಯಾರಿಗೂ ಹೇಳದಂತೆ ಜೀವ ಬೆದರಿಕೆಯೊಡ್ಡಿದ್ದ. ಅದಾದ ಬಳಿಕವೂ ಆತ ಹಲವು ಬಾರಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಯುವತಿ ಹೇಳಿಕೆ ನೀಡಿದ್ದಾರೆ’ ಎಂದು ಅಧಿಕಾರಿ ವಿವರಿಸಿದರು.

ಯುವಕನ ಜೊತೆ ಮಾತನಾಡಿದ್ದಕ್ಕೆ ಮೈ ಸುಟ್ಟ: ‘ಅರೇಬಿಕ್, ಪರ್ಷಿಯನ್ ಭಾಷೆ ಹಾಗೂ ಧರ್ಮ ಗ್ರಂಥದ ಬಗ್ಗೆ ಮದರಸಾದಲ್ಲಿ ತರಗತಿಗಳನ್ನು ನಡೆಸಲಾಗುತ್ತಿತ್ತು. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿತ್ಯವೂ ಮದರಸಾಗೆ ಬಂದು ಹೋಗುತ್ತಿದ್ದರು’ ಎಂದು ಅಧಿಕಾರಿ ಹೇಳಿದರು.

‘ಮದರಸಾದ ಯುವಕನೊಬ್ಬ ಮೌಲ್ವಿ ಮನೆಗೆ ಆಗಾಗ ಹೋಗಿ ಬರುತ್ತಿದ್ದ. ಆತನ ಜೊತೆ ಯುವತಿ ಮಾತನಾಡಲಾರಂಭಿಸಿದ್ದಳು. ಅದು ಗೊತ್ತಾಗುತ್ತಿದ್ದಂತೆ ಯುವತಿ ಮೇಲೆ ಹರಿಹಾಯ್ದಿದ್ದ ಆರೋಪಿ, ಇಸ್ತ್ರಿ ಪೆಟ್ಟಿಗೆಯಿಂದ ಅಮಾನವೀಯವಾಗಿ ಆಕೆ ಮೈಯೆಲ್ಲ ಸುಟ್ಟಿದ್ದ.’

‘ಕೃತ್ಯದಿಂದ ತೀವ್ರವಾಗಿ ಗಾಯಗೊಂಡಿದ್ದ ಯುವತಿ ಮನೆಯಲ್ಲೇ ನರಳುತ್ತ ಬಿದ್ದಿದ್ದಳು. ಆಕೆಯನ್ನೂ ಯಾರೊಬ್ಬರೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿರಲಿಲ್ಲ. ಆಕೆಯ ನೋವು ಕಂಡ ವ್ಯಕ್ತಿಯೊಬ್ಬರು ಠಾಣೆಗೆ ಮಾಹಿತಿ ನೀಡಿದ್ದರು. ಅದರನ್ವಯ ಆರೋಪಿಯ ಮನೆ ಮೇಲೆ ದಾಳಿ ನಡೆಸಲಾಯಿತು. ಆರೋಪಿ ಕೃತ್ಯಕ್ಕೆ ಸಹಕರಿಸಿದ್ದ ಪತ್ನಿಯನ್ನೂ ವಶಕ್ಕೆ ಪಡೆಯಲಾಯಿತು’ ಎಂದು ಅಧಿಕಾರಿ ಹೇಳಿದರು.

ಅತ್ಯಾಚಾರ, ಕೊಲೆ ಯತ್ನ ಪ್ರಕರಣ
‘ಯುವತಿಯ ಹೇಳಿಕೆ ಆಧರಿಸಿ ಮೌಲ್ವಿ ರೆಹಬಾರ್ ಇಸ್ಲಾಮ್ ಪರ್ವೇಜ್ ವಿರುದ್ಧಅಕ್ರಮ ಬಂಧನ (ಐಪಿಸಿ 344), ಅತ್ಯಾಚಾರ (ಐಪಿಸಿ 376), ಕೊಲೆ ಯತ್ನ (ಐಪಿಸಿ 307) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT