ಶನಿವಾರ, ಫೆಬ್ರವರಿ 22, 2020
19 °C
ಗೊಂದಲ ಪರಿಹರಿಸುವ ಹೊಣೆ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕಗ್ಗಂಟು: ಖರ್ಗೆ ಹೆಗಲಿಗೆ ಗೊಂದಲ ಪರಿಹರಿಸುವ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದು ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದ್ದು, ದೆಹಲಿ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಗೊಂದಲ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ.

ಅಧ್ಯಕ್ಷ ಸ್ಥಾನಕ್ಕೆ ಶಾಸಕರಾದ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಪಕ್ಷದಲ್ಲಿ ತಮ್ಮದೇ ಆದ ಹಿಡಿತ ಹೊಂದಿರುವ ಸಿದ್ದರಾಮಯ್ಯ ಅವರ ಬಲ ಕುಗ್ಗಿಸಬೇಕು ಎಂಬ ಲೆಕ್ಕಾಚಾರದಲ್ಲಿ ‘ಮೂಲ’ ಕಾಂಗ್ರೆಸಿಗರ ಗುಂಪು ಹಿರಿಯ ನಾಯಕರಾದ ಎಂ. ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಮುಂದೆ ಬಿಟ್ಟಿದೆ. ದೆಹಲಿ ಮಟ್ಟದಲ್ಲಿ ಖರ್ಗೆ ಹೆಸರು ಹೆಚ್ಚು ಓಡಾಡುತ್ತಿದೆ. ಅವಕಾಶ ಸಿಕ್ಕಿದರೆ ಒಂದು ಕೈ ನೋಡೋಣ ಎಂಬ ಭಾವನೆ ಖರ್ಗೆಯವರಲ್ಲಿದೆ ಎಂದು ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ.

‘ಖರ್ಗೆ ಪ್ರಯತ್ನಿಸುವುದಿಲ್ಲ. ವರಿಷ್ಠರೇ ಹುದ್ದೆ ಕೊಟ್ಟರೆ ಒಪ್ಪಿಕೊಳ್ಳುವ ಇರಾದೆ ಅವರಲ್ಲಿದೆ’ ಎಂದು ಆಪ್ತರ ಆಂಬೋಣ. 

ಗೊಂದಲದ ಗೂಡು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಸೂಚಿಸಿರುವ ಹೆಸರುಗಳಲ್ಲಿ ವರಿಷ್ಠರು ಒಬ್ಬರನ್ನು ಅಂತಿಮ ಗೊಳಿ
ಸಬೇಕಿದೆ. ಈ ಗೊಂದಲ ಪರಿಹರಿಸುವ ಹೊಣೆಯನ್ನೂ ಖರ್ಗೆ ಅವರಿಗೆ ವಹಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಪಕ್ಷದ ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಶುಕ್ರವಾರ ಭೇಟಿ ಮಾಡಿ ಚರ್ಚಿಸಿರುವ ಖರ್ಗೆ, ಶೀಘ್ರವೇ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿ ಗೊಂದಲಕ್ಕೆ ತೆರೆ ಎಳೆಯುವಂತೆ ಕೋರಿದ್ದಾರೆ ಎಂದು ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ನನಗೆ ಆಸಕ್ತಿ ಇಲ್ಲ. ಈ ಬಗ್ಗೆ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಖರ್ಗೆ ಸುದ್ದಿಗಾರರಿಗೆ ತಿಳಿಸಿದರು.

ದೆಹಲಿಯಲ್ಲಿ ಡಿಕೆಶಿ: ಮಧ್ಯಪ್ರದೇಶದಲ್ಲಿನ ದೇವಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಶುಕ್ರವಾರ ಇಲ್ಲಿಗೆ ಬಂದಿರುವ ಡಿ.ಕೆ. ಶಿವಕುಮಾರ್, ‘ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೋರಿಲ್ಲ. ಈ ಸಂಬಂಧ ಯಾರಿಗೂ ಮನವಿ ಸಲ್ಲಿಸಿಲ್ಲ. ನನ್ನ ಹೆಸರು ಕೇಳಿಬರುತ್ತಿದೆ ಎಂಬುದೂ ಸುಳ್ಳು’ ಎಂದರು.

‘ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ’ ಎಂದೂ ಹೇಳಿದರು
ತುಮಕೂರು:
‘ಮಂತ್ರಿಯಾಗಲೆಂದೇ ಕಾಂಗ್ರೆಸ್ ಮತ್ತು ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಿ ಗೆದ್ದಿದ್ದಾರೆ. ಅವರು ಮಂತ್ರಿ ಆಗದಿದ್ದರೆ ಜೀವ ಹೋಗಿ ಬಿಡುತ್ತದೆ’ ಎಂದು ಗುಬ್ಬಿ ಶಾಸಕ, ಜೆಡಿಎಸ್‌ನ ಎಸ್‌.ಆರ್.ಶ್ರೀನಿವಾಸ್‌ ಅವರು ಮಾರ್ಮಿಕವಾಗಿ ಹೇಳಿದರು.

ಸುದ್ದಿಗಾರರೊಂದಿಗೆ ಅವರು ಶುಕ್ರವಾರ ಮಾತನಾಡಿದ ಅವರು ‘ಮಂತ್ರಿ ಸ್ಥಾನ ಸಿಗದಿದ್ದರೆ, ಉಪಚುನಾವಣೆಯಲ್ಲಿ ಗೆದ್ದವರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ’ ಎಂದರು.

‘ಯಡಿಯೂರಪ್ಪ ನಂಬಿಗಸ್ಥರು. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ದಿಟ್ಟ ನಾಯಕ. ಅವರ ಹೈಕಮಾಂಡ್‌ ಅವರಿಗೆ ಸದ್ಯ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿಲ್ಲದೆ ಇರಬಹುದು. ಅವರಿಗೆ ಈಗ ತಾತ್ಕಾಲಿಕ ಹಿನ್ನಡೆ ಆಗಿರಬಹುದು. ಆದರೆ, ಯಡಿಯೂರಪ್ಪ ಅವರು ಎಷ್ಟೇ ಕಷ್ಟ ಬಂದರೂ, ಕೊಟ್ಟ ಆಶ್ವಾಸನೆಯನ್ನು ಈಡೇರಿಸುತ್ತಾರೆ’ ಎಂದರು.

.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು