ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿನ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಜತೆಗೆ ಔತಣ ಕೂಟದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಮುಖಂಡರನ್ನು ಕರೆಸಿಕೊಂಡ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿವರಣೆ ಪಡೆದರು.
ಬಳಿಕ ಮಾತನಾಡಿದ ದಿನೇಶ್,‘ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಹಾಗೂ ಕೆಲವು ಕ್ಷೇತ್ರಗಳಲ್ಲಿ ಮೈತ್ರಿ ಧರ್ಮ
ಪಾಲನೆ ಆಗಿಲ್ಲ. ಇದಕ್ಕೆಲ್ಲ ಚುನಾವಣಾ ಫಲಿತಾಂಶವೇ ಉತ್ತರ ನೀಡುತ್ತದೆ’ ಎಂದು ಮಾರ್ಮಿಕವಾಗಿ ಹೇಳಿದರು.
‘ಮಂಡ್ಯದ ಕಾಂಗ್ರೆಸ್ ನಾಯಕರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
‘ಊಟಕ್ಕೆ ಕರೆದಿದ್ದಕ್ಕೆ ಹೋಗಿದ್ದೆವು ಹಾಗೂ ಅದಕ್ಕೆ ಯಾವುದೇ ರಾಜಕೀಯ ಬಣ್ಣ ಹಚ್ಚುವುದು ಬೇಡ ಎಂದು ಮಂಡ್ಯದ ನಾಯಕರು ಹೇಳಿದ್ದಾರೆ. ಪತ್ರಿಕೆಗಳಲ್ಲಿ ಭೋಜನಕೂಟದ ಫೋಟೋ ನೋಡಿ ಅವರನ್ನು ಕರೆಸಿ ಮಾತನಾಡಿಸಿದ್ದೇನೆ ಅಷ್ಟೇ. ನಾನು ಆ ವಿಡಿಯೊ ನೋಡಿಲ್ಲ’ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಚಲುವರಾಯಸ್ವಾಮಿ ಅವರು ತಮ್ಮ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ಜಿಲ್ಲೆಯ ಜನರಿಗೆ ಉತ್ತರ ನೀಡಬೇಕಾದವರು ತಾವು ಎಂದೂ ಹೇಳಿದರು. ‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುತ್ತಾರೆಯೇ. ಕಾಂಗ್ರೆಸ್ ಕಾರ್ಯಕರ್ತರಿಗೆ ನಾವೇ ತಾನೇಉತ್ತರ ಕೊಡಬೇಕಾದವರು’ ಎಂದರು.
‘ನಾವು ಮೊದಲಿನಿಂದಲೂ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದೇವೆ. ಅದನ್ನು ರಾಜ್ಯ ನಾಯಕರ ಗಮನಕ್ಕೂ ತಂದಿದ್ದೇವೆ. ನಾವು ಪಕ್ಷವಿರೋಧಿ ಚಟುವಟಿಕೆ ಮಾಡಿಲ್ಲ’ ಎಂದು ದಿನೇಶ್ ಅವರ ಬಳಿ ಸಮಜಾಯಿಷಿ ನೀಡಿದರು ಎಂದು ಗೊತ್ತಾಗಿದೆ.
ಇದನ್ನೂ ಓದಿ...ಸುಮಲತಾ ಔತಣಕೂಟದಲ್ಲಿ ಕಾಂಗ್ರೆಸ್ ಮುಖಂಡರು
ಜಮೀರ್ ಸಮರ್ಥನೆ: ‘ಊಟಕ್ಕೆ ಹೋಗುವುದು ತಪ್ಪಲ್ಲ. ಸ್ನೇಹಿತರು ಊಟಕ್ಕೆ ಹೋದಾಗ ನಮ್ಮ ಮುಖಂಡರು ಹೋಗಿದ್ದಾರೆ ಅಷ್ಟೇ. ಅದಕ್ಕೇ ಬೇಸರ ಮಾಡಿಕೊಂಡರೆ ನಾವೇನು ಮಾಡಲು ಸಾಧ್ಯ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.
‘ಮೈತ್ರಿ ಸ್ಥಳೀಯ ನಾಯಕರಿಗೆ ಬಿಟ್ಟಿದ್ದು’
ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳುವುದು ಸ್ಥಳೀಯ ನಾಯಕರಿಗೆ ಬಿಟ್ಟಿದ್ದು ಎಂದು ದಿನೇಶ್ ಗುಂಡೂರಾವ್ ಹೇಳಿದರು.‘ಸ್ಥಳೀಯ ನಾಯಕರೇ ಆ ಬಗ್ಗೆ ತೀರ್ಮಾನ ಮಾಡಬೇಕು. ಒಂದು ವೇಳೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಬಹುದು. ಇಲ್ಲವಾದರೆ ಸ್ವತಂತ್ರವಾಗಿಯೂ ಚುನಾವಣೆ ಎದುರಿಸಬಹುದು’ ಎಂದು ಅವರು ಹೇಳಿದರು.
ಮಂಡ್ಯ ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹ
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷದ್ರೋಹ, ಶಿಸ್ತು ಉಲ್ಲಂಘನೆ, ಮೈತ್ರಿ ವಿರೋಧಿ ಚಟುವಟಿಕೆ ನಡೆಸಿ ಪಕ್ಷಕ್ಕೆ ಕಳಂಕ ತರುವ ವರ್ತನೆ ಪ್ರದರ್ಶಿಸಿರುವ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅಗೌರವ ತೋರಿರುವ ಜಿಲ್ಲೆಯ ಕಾಂಗ್ರೆಸ್ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾನೂನು ಘಟಕ ಆಗ್ರಹಿಸಿದೆ.
ಮುಖಂಡರಾದ ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್ ಹಾಗೂ ಗಣಿಗ ರವಿ ಅವರು ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡದೆ ಪಕ್ಷದ ಸೂಚನೆ ಉಲ್ಲಂಘಿಸಿದ್ದಾರೆ. ಈ ಮೂಲಕ ಪಕ್ಷದ್ರೋಹ ಮಾಡಿದ್ದಾರೆ. ಜತೆಗೆ, ರಾಹುಲ್ ಗಾಂಧಿ ಅವರ ರ‍್ಯಾಲಿಗೂ ಗೈರುಹಾಜರಾಗಿ ಅಗೌರವ ತೋರಿದ್ದಾರೆ. ಇವರಿಗೆ ಕಾಂಗ್ರೆಸ್‌ನಲ್ಲಿ ಉಳಿಯುವ ನೈತಿಕ ಹಕ್ಕು ಇಲ್ಲ. ಇವರು ಕೂಡಲೇ ರಾಜೀನಾಮೆ ಕೊಟ್ಟು ತೆರಳಬೇಕು. ಇಲ್ಲದಿದ್ದರೆ, ಪಕ್ಷವೇ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕಾನೂನು ಘಟಕದ ಮುಖ್ಯಸ್ಥ ಸಿ.ಎಂ.ಧನಂಜಯ ಒತ್ತಾಯಿಸಿದ್ದಾರೆ.
‘ನಿಖಿಲ್ ಸೋತರೆ ನಮ್ಮ ತಲೆಗೆ ಕಟ್ಟುವ ಯತ್ನ’
‘ನಮ್ಮನ್ನೇ ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಿದ್ದಾರೆ. ನಾವು ಹೋಗಿ ಅವರನ್ನು ಗೆಲ್ಲಿಸಲು ಸಾಧ್ಯವೇ’ ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.
‘ಒಂದು ವೇಳೆ ನಿಖಿಲ್ ಕುಮಾರಸ್ವಾಮಿ ಸೋತರೆ ಅದರ ಹೊಣೆಯನ್ನು ನಮ್ಮ ತಲೆಗೆ ಕಟ್ಟುವ ಯತ್ನ ನಡೆದಿದೆ. ಸೋಲು ಗೆಲುವು ಜನರ ತೀರ್ಮಾನ. ಅದರಲ್ಲಿ ನಮ್ಮ ಪಾತ್ರ ಇಲ್ಲ’ ಎಂದೂ ಅವರು ಹೇಳಿದರು.
ಇದನ್ನೂ ಓದಿ...ಸುಮಲತಾ ಜೊತೆ ಊಟ ಮಾಡುವುದು ತಪ್ಪಾ: ಚಲುವರಾಯಸ್ವಾಮಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.