ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನರೇಗಾ’ದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ: ಸಚಿವ ಕೆ.ಎಸ್.ಈಶ್ವರಪ್ಪ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ, ‘ಅಂತರ್ಜಲ ಚೇತನ’ಕ್ಕೆ ಚಾಲನೆ
Last Updated 12 ಜೂನ್ 2020, 11:11 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸರಾಸರಿ 10.76 ಲಕ್ಷ ಮಾನವದಿನ ಸೃಷ್ಟಿಸುತ್ತಿರುವ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೆ ಏರುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ದಿ ಆರ್ಟ್ ಆಫ್‌ ಲಿವಿಂಗ್‌ ಸಹಭಾಗಿತ್ವದಲ್ಲಿ ನರೇಗಾ ಯೋಜನೆಯಡಿ ಕೈಗೆತ್ತಿಕೊಂಡಿರುವ ‘ಅಂತರ್ಜಲ ಚೇತನ’ ಯೋಜನೆಗೆ ಇಲ್ಲಿನ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ₹ 425 ಕೋಟಿ ಕೂಲಿ ಹಣವನ್ನು ಬಿಡುಗಡೆ ಮಾಡಿದೆ. ಮುಂಗಡವಾಗಿ ₹ 1,000 ಕೋಟಿ ಅನುದಾನವನ್ನು ನರೇಗಾ ಯೋಜನೆಗೆ ಬಿಡುಗಡೆ ಮಾಡಿದೆ. ಬಾಕಿ ಉಳಿದಿದ್ದ ₹ 1,841 ಕೋಟಿಯನ್ನು ನೀಡಿದೆ. ಕೂಲಿ ಮಾಡಿದ 15 ದಿನಗಳಲ್ಲಿ ಕಾರ್ಮಿಕರ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗಲಿದೆ’ ಎಂದು ಹೇಳಿದರು.

‘ಕೊಳವೆ ಬಾವಿಯನ್ನು ಕೊರೆದು ಅಂತರ್ಜಲವನ್ನು ಹಾಳು ಮಾಡಿದ್ದೇವೆ. ಇದೇ ತಪ್ಪು ಮುಂದುವರಿಸುವುದು ಬೇಡ ಎಂಬ ಕಾರಣಕ್ಕೆ ಹೊಸ ಯೋಜನೆ ರೂಪಿಸಲಾಗಿದೆ. ಇದಕ್ಕೆ ಆರ್ಟ್‌ ಆಫ್ ಲಿವಿಂಗ್ ಕೂಡ ಕೈಜೋಡಿಸಿದೆ. ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಅಂತರ್ಜಲ ಚೇತನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಯ ಶ್ರಮದಲ್ಲಿ ಯೋಜನೆಯ ಯಶಸ್ಸು ಅಡಗಿದೆ’ ಎಂದು ಹೇಳಿದರು.

ಸಂಸದ ಎ. ನಾರಾಯಣಸ್ವಾಮಿ, ‘ಫೋರೈಡ್ ಅಂಶ ಮೊಳಕಾಲ್ಮುರು ಸೇರಿ ಜಿಲ್ಲೆಯ ಹಲವು ಕಡೆ ಹೆಚ್ಚಿದೆ. ಮಳೆ ನೀರು ಇಂಗಿಸುವ ಮೂಲಕ ಫ್ಲೋರೈಡ್ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಬಡ ಕುಟುಂಬಗಳ ಏಳಿಗೆಗೆ ಪ್ರಧಾನಿ ನರೇಂದ್ರ ಮೋದಿ ಒಂದು ಲಕ್ಷ ಕೋಟಿ ಅನುದಾನ ನೀಡಿದ್ದಾರೆ. ಗ್ರಾಮೀಣ ಪ್ರದೇಶ ಇನ್ನು ಮುಂದೆ ಸಮೃದ್ಧಿ ಹೊಂದಲಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ಅನುದಾನ ಮರಳಿಸಿ’

2019–20ನೇ ಆರ್ಥಿಕ ವರ್ಷದಲ್ಲಿ ಅಧಿಕಾರಿಗಳ ಲೋಪದಿಂದ ಸರ್ಕಾರಕ್ಕೆ ವಾಪಾಸಾಗಿರುವ ಜಿಲ್ಲಾ ಪಂಚಾಯಿತಿಯ ಅನುದಾನವನ್ನು ಮರಳಿ ನೀಡುವಂತೆ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಮನವಿ ಮಾಡಿದರು.

‘₹ 24.49 ಕೋಟಿ ಅನುದಾನ ಜಿಲ್ಲೆಯ ಕೈತಪ್ಪಿದೆ. ಅನುದಾನವನ್ನು ಮುಂದಿನ ಆರ್ಥಿಕ ವರ್ಷಕ್ಕೆ ಬಳಸಲು ಅವಕಾಶ ಕಲ್ಪಿಸುವ ಅಗತ್ಯವಿದೆ. ಇದರಿಂದ ಜಿಲ್ಲೆಗೆ ಅನುಕೂಲವಾಗಲಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವರನ್ನು ಕೋರಿದರು.

ಲಾಬಿಗೆ ಮಣಿಯಲ್ಲ: ಈಶ್ವರಪ್ಪ

ವಿಧಾನಪರಿಷತ್‌ ಚುನಾವಣೆಗೆ ಟಿಕೆಟ್‌ ಕೇಳುವ ಅರ್ಹತೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಇದೆ. ಲಾಬಿಗೆ ಮಣಿದು ಟಿಕೆಟ್‌ ನೀಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಾಪಗೌಡ, ಮುನಿರತ್ನ, ರೋಷನ್‌ ಬೇಗ್‌ ಬಿಜೆಪಿಯವರಾಗಿ ಟಿಕೆಟ್‌ ಕೇಳುವುದು ತಪ್ಪಲ್ಲ. ಆದರೆ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಬಂದಿದ್ದೇನೆ ಎಂದು ಒತ್ತಡ ಹೇರುವುದು ತಪ್ಪು. ಟಿಕೆಟ್‌ ಹಂಚಿಕೆಯಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಜಾತಿ ನೋಡಿ ಟಿಕೆಟ್‌ ಕೊಡುವ ಪದ್ಧತಿ ಬಿಜೆಪಿಯಲ್ಲಿ ಇಲ್ಲ’ ಎಂದರು.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‌, ಶಾಸಕರಾದ ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಆರ್.ಪೂರ್ಣಿಮಾ, ವಿಧಾನಪರಿಷತ್ ಸದಸ್ಯೆ ಜಯಮ್ಮ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಮುಖ್ಯ ಕಾರ್ಯನಿರ್ವಣಾಧಿಕಾರಿ ಟಿ.ಯೋಗೇಶ್, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಡಿ.ಎಂ.ಲಿಂಗರಾಜು ಇದ್ದರು.

ಸಚಿವರು ಹಾಗೂ ಶಾಸಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಕೆ.ಎಸ್.ಈಶ್ವರಪ್ಪ ಅವರು ಮೈಸೂರು ಪೇಟ ತೊಡಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT