ಶನಿವಾರ, ಮಾರ್ಚ್ 6, 2021
21 °C
ಅಂತರ ಮರೆ; ಕಾರ್ಮಿಕರ ಆತಂಕ | ನಿಲ್ದಾಣಕ್ಕೆ ಸಚಿವರ ಭೇಟಿ

ತವರಿನತ್ತ ಕಾರ್ಮಿಕರು: ನಾಲ್ಕನೇ ದಿನವೂ ಬಸ್‌ಗಳು ಭರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಸಿಲುಕಿರುವ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ವಾಪಸು ಕಳುಹಿಸಿಕೊಡಲು ಕೆಎಸ್‌ಆರ್‌ಟಿಸಿ ಉಚಿತ ಬಸ್ ಸೇವೆ ಒದಗಿಸಿದ್ದು, ಮಂಗಳವಾರ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ತಮ್ಮೂರಿನತ್ತ ಹೊರಟರು. ಮಧ್ಯಾಹ್ನ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದು, ಸಂಜೆ ಪುನಃ ಹೆಚ್ಚಾಯಿತು.

ಕೂಲಿ ಹಾಗೂ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಮಕ್ಕಳು, ವೃದ್ಧರು ಹಾಗೂ ಕುಟುಂಬ ಸಮೇತ ನಗರಕ್ಕೆ ಬಂದಿದ್ದ ಉತ್ತರ ಕರ್ನಾಟಕದ ಜನ, ಲಾಕ್‌ಡೌನ್‌ನಿಂದಾಗಿ ತೊಂದರೆಗೆ ಸಿಲುಕಿದ್ದರು. ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡಿದ್ದರಿಂದ ಕಾರ್ಮಿಕರು ಹಾಗೂ ಅವರ ಕುಟುಂಬದವರನ್ನು ಇದೀಗ ಬಸ್ಸಿನಲ್ಲಿ ತವರಿಗೆ ಕಳುಹಿಸಲಾಗುತ್ತಿದೆ.

ವೈಟ್‌ಫೀಲ್ಡ್, ಮಹದೇವಪುರ, ಸರ್ಜಾಪುರ, ಬೆಳ್ಳಂದೂರು, ಮಡಿವಾಳ, ಕೆ.ಆರ್.ಪುರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಾಸವಿದ್ದ ಕಾರ್ಮಿಕರು, ಬಾಡಿಗೆ ಮನೆ ಹಾಗೂ ಶೆಡ್‌ಗಳನ್ನು ಒಬ್ಬೊಬ್ಬರಾಗಿ ಖಾಲಿ ಮಾಡುತ್ತಿದ್ದಾರೆ. ಅವರೆಲ್ಲರೂ ಲಗೇಜು ಸಮೇತವಾಗಿ ಮೆಜೆಸ್ಟಿಕ್‌ಗೆ ಬಂದು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತಮ್ಮೂರಿನತ್ತ ತೆರಳುತ್ತಿದ್ದಾರೆ.

ಬಸ್ ಸಂಚಾರ ಆರಂಭವಾಗಿ ನಾಲ್ಕನೇ ದಿನವಾದ ಮಂಗಳವಾರ ಬೆಳಿಗ್ಗೆ 8ಕ್ಕೆ ಬಸ್ಸಿನ ಕಾರ್ಯಾಚರಣೆ ಆರಂಭಿಸಲಾಯಿತು. ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಧಾರವಾಡ, ಹೊಸಪೇಟೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಹೊರಟಿದ್ದ ಬಸ್‌ಗಳು ಭರ್ತಿ ಆಗಿದ್ದವು.  

488 ಬಸ್‌ಗಳು ಮೆಜೆಸ್ಟಿಕ್‌ ನಿಲ್ದಾಣದಿಂದ ಕಾರ್ಯಾಚರಣೆ ಮಾಡಿದವು. ರಾಜ್ಯದ ಇತರೆ ಭಾಗಗಳಿಂದಲೂ 325 ಬಸ್‌ಗಳು ಸಂಚರಿಸಿವೆ. ಒಟ್ಟು 24,000 ಕಾರ್ಮಿಕರು ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ’ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ಅಂತರವಿಲ್ಲದಿದ್ದರಿಂದ ಕೊರೊನಾ ಭೀತಿ: ‘ಲಾಕ್‌ಡೌನ್‌ ಆದಾಗಿನಿಂದಲೂ ಕೊರೊನಾ ಭೀತಿಯಲ್ಲೇ ಮಕ್ಕಳು, ವೃದ್ಧರನ್ನು ಕಟ್ಟಿಕೊಂಡು ಕಾಲ ಕಳೆಯುತ್ತಿದ್ದೇವೆ. ಯಾವಾಗ ಏನಾಗುತ್ತದೆ ಎಂಬ ಭಯವೇ ಹೆಚ್ಚಿದೆ’ ಎಂದು ರಾಯಚೂರಿನ ಸುನಂದಮ್ಮ ಹೇಳಿದರು.

‘ಸರ್ಕಾರ ಉಚಿತ ಬಸ್‌ ಸೇವೆ ಕಲ್ಪಿಸಿದ್ದಕ್ಕೆ ಧನ್ಯವಾದ. ಆದರೆ, ನಾವೆಲ್ಲರೂ ವೈಟ್‌ಫೀಲ್ಡ್‌ನಿಂದ ನಿಲ್ದಾಣಕ್ಕೆ ಬರಲು ವಾಹನಕ್ಕೆ ₹2,000 ಕೊಟ್ಟಿದ್ದೇವೆ. ನಿಲ್ದಾಣದಲ್ಲೇ ಸಾಕಷ್ಟು ಮಂದಿ ಸೇರಿದ್ದು, ಬಹುತೇಕರು ಅಂತರ ಕಾಯ್ದುಕೊಳ್ಳುತ್ತಿಲ್ಲ. ಆಕಸ್ಮಾತ್ ಯಾರಿಗಾದರೂ ಸೋಂಕು ಇದ್ದರೆ ಏನು ಗತಿ? ಇದೇ ಆತಂಕದಲ್ಲೇ ಊರಿಗೆ ಹೊರಟ್ಟಿದ್ದೇವೆ.  ದೇವರ ಮೇಲೆ ಭಾರ ಹಾಕಿ ಜೀವನ ನಡೆಸುತ್ತೇವೆ’ ಎಂದರು.

ರಾಯಚೂರಿನ ಶಂಕ್ರಪ್ಪ, ‘ಖಾಸಗಿ ಕಂಪನಿಯಲ್ಲಿ ಭದ್ರತೆ ಕೆಲಸಕ್ಕಿದ್ದೆ. ಲಾಕ್‌ಡೌನ್ ಆದಾಗಲೇ ಮಾಲೀಕ ಕೆಲಸದಿಂದ ತೆಗೆದು ಅನ್ಯಾಯ ಮಾಡಿದ. ನಂತರ, ಅಲ್ಲಿ ಇಲ್ಲಿ ಊಟ ಮಾಡಿ ದಿನ ಕಳೆದೆ. ಈಗ ನನ್ನೂರಿಗೆ ಹೊರಟಿದ್ದೇನೆ’ ಎಂದರು. 

ಸಚಿವರ ಭೇಟಿ: ಮೆಜೆಸ್ಟಿಕ್ ನಿಲ್ದಾಣಕ್ಕೆ ಸಚಿವರಾದ ಲಕ್ಷ್ಮಣ ಸವದಿ, ಕೆ.ಗೋಪಾಲಯ್ಯ, ಎಸ್.ಟಿ.ಸೋಮಶೇಖರ್ ಭೇಟಿ ನೀಡಿದರು. ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಮಾತನಾಡಿಸಿ ನೀರು, ಉಪಾಹಾರ ವಿತರಿಸಿದರು.

83,880 ಕಾರ್ಮಿಕರ ಪ್ರಯಾಣ: ‘ಕಾರ್ಮಿಕರ ಅನುಕೂಲಕ್ಕಾಗಿ ನಾಲ್ಕು ದಿನಗಳಿಂದ ಬಸ್‌ಗಳ ಕಾರ್ಯಾಚರಣೆ ಆರಂಭಿಸಲಾಗಿದೆ. ಇದುವರೆಗೂ 83,880 ಕಾರ್ಮಿಕರು ಬಸ್ಸಿನಲ್ಲಿ ಊರಿಗೆ ಹೋಗಿದ್ದಾರೆ’ ಎಂದು ಪ್ರಕಟಣೆ ಹೇಳಿದೆ.

ಇಂದು ಸಹ ಕಾರ್ಯಾಚರಣೆ
‘ಕಾರ್ಮಿಕರಿಗಾಗಿ‌ ಇಂದು (ಬುಧವಾರ) ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಉಚಿತ ಬಸ್‌ಗಳ ಸಂಚಾರವಿರಲಿದೆ. ಕಾರ್ಮಿಕರು ನಿಲ್ದಾಣಕ್ಕೆ ಬಂದು ತಮ್ಮೂರಿಗೆ ಪ್ರಯಾಣಿಸಬಹುದು’ ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯದಿಂದ ತವರಿಗೆ ಹೋದ ಉತ್ತರ ಭಾರತದ ಕಾರ್ಮಿಕರು

ಭುವನೇಶ್ವರ (ಒಡಿಶಾ): 1,190
ಜಾರ್ಖಂಡ್: 1,200
ಜೈಪುರ (ರಾಜಸ್ಥಾನ): 1198,
ದಾನಾಪುರ (ಬಿಹಾರ): 1,199

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು