ಭಾನುವಾರ, ಮೇ 31, 2020
27 °C

ದುಡಿಮೆ: ವಾರಕ್ಕೆ 12 ಗಂಟೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

protest

ಬೆಂಗಳೂರು: ರಾಜ್ಯದ ಕಾರ್ಖಾನೆಗಳಲ್ಲಿ ಶ್ರಮಿಕರ ದುಡಿಮೆಯ ಅವಧಿಯನ್ನು ಹೆಚ್ಚಳ ಮಾಡಿ ಕಾರ್ಮಿಕ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

ರಾಜ್ಯದ ಎಲ್ಲ ಕೈಗಾರಿಕೆಗಳಿಗೆ ಕಾರ್ಮಿಕ ಕಾಯ್ದೆಯ ಸೆಕ್ಷನ್‌ 51 ಮತ್ತು 54 ರಿಂದ ವಿನಾಯಿತಿ ನೀಡಲಾಗಿದೆ. ಈ ಮೂಲಕ ಒಂದು ದಿನದಲ್ಲಿ ಗರಿಷ್ಠ 9 ಗಂಟೆ ಇದ್ದ ದುಡಿಮೆ ಅವಧಿಯನ್ನು 10 ಗಂಟೆಗೆ ಹಾಗೂ ಒಂದು ವಾರದಲ್ಲಿ 48 ಗಂಟೆಗಳಷ್ಟಿದ್ದ ಗರಿಷ್ಠ ದುಡಿಮೆ ಅವಧಿಯನ್ನು 60 ಗಂಟೆಗೆ ಹೆಚ್ಚಿಸಲಾಗಿದೆ. ಇದಕ್ಕಿಂತ ಹೆಚ್ಚಿನ ದುಡಿಮೆ ಮಾಡಿಸುವಂತಿಲ್ಲ ಎಂದು ಸೂಚಿಸಲಾಗಿದೆ.

ಕಾಯ್ದೆಯ ಸೆಕ್ಷನ್ 51ರ ಅನುಸಾರ ದಿನಕ್ಕೆ ಗರಿಷ್ಠ 9 ಗಂಟೆಗೂ ಹೆಚ್ಚು ಹೊತ್ತು ದುಡಿಮೆ ಮಾಡಿಸುವಂತಿರಲಿಲ್ಲ. ಆದರೆ, ರಾಜ್ಯದಲ್ಲಿ ಕಾರ್ಮಿಕರ ದುಡಿಮೆಯ ಸರಾಸರಿ ಅವಧಿ 8 ಗಂಟೆಯಷ್ಟಿತ್ತು. ಈಗ 10 ಗಂಟೆಗೆ ಹೆಚ್ಚಿಸಿರುವುದರಿಂದಾಗಿ ದಿನದ ಶ್ರಮ 2 ಗಂಟೆ ಹೆಚ್ಚಳವಾಗಲಿದೆ ಎಂದು ಕಾರ್ಮಿಕ ಸಂಘಟನೆ ಪ್ರಮುಖರು ಹೇಳಿದ್ದಾರೆ. 

ಸೆಕ್ಷನ್‌ 59 ರ ಅನ್ವಯ ಒವರ್‌ ಟೈಮ್‌(ಒ.ಟಿ) ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅದು ಯಥಾ ಪ್ರಕಾರ ಮುಂದುವರಿ
ಯುತ್ತದೆ. ಈ ಆದೇಶವು ಮೇ 22ರಿಂದ ಆಗಸ್ಟ್‌ 21 ರವರೆಗೆ ಅಂದರೆ, 3 ತಿಂಗಳು ಗಳಿಗೆ ಮಾತ್ರ ಅನ್ವಯವಾಗಲಿದೆ.

‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಬಂದ್‌ ಆಗಿದ್ದರಿಂದ ನಷ್ಟಕ್ಕೆ ತುತ್ತಾಗಿದ್ದೇವೆ. ನಷ್ಟ ಭರಿಸಲು ಉತ್ಪಾದನೆ ಹೆಚ್ಚಿಸುವ ಅನಿವಾರ್ಯತೆ ಇದೆ. ಆದ್ದರಿಂದ ಕಾರ್ಮಿಕರ ಕೆಲಸದ ಅವಧಿಯನ್ನು ತಾತ್ಕಾಲಿಕವಾಗಿಯಾದರೂ ಹೆಚ್ಚಿಸಬೇಕು’ ಎಂದು ಉದ್ಯಮಿಗಳು ಮುಖ್ಯಮಂತ್ರಿಗೆ ಮನವಿ ಮಾಡಿದ್ದರು. 

ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶ ಸರ್ಕಾರವು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಇದೇ ಮಾದರಿಯನ್ನು ಕರ್ನಾಟಕ
ದಲ್ಲಿಯೂ ತರಲು ರಾಜ್ಯ ಸರ್ಕಾರ ಮುಂದಾಗಿತ್ತು. 

ಕಾಯ್ದೆಗೆ ತಿದ್ದುಪಡಿ ಮಾಡಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದರು. ರಾಜ್ಯದ ಎಲ್ಲ ಕಾರ್ಮಿಕ ಸಂಘಟನೆಗಳೂ ಸರ್ಕಾರದ ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

 

ಶ್ರಮಿಕರ ದುಡಿಮೆಯ ಅವಧಿಯನ್ನು ಹೆಚ್ಚಿಸಿರುವ ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳು, ಉದ್ಯಮಿಗಳಿಗೆ ಮಣೆ ಹಾಕಿ, ಕಾರ್ಮಿಕರನ್ನು ಬಲಿ ಕೊಡಲು ಹೊರಟಿದೆ

-ಕೆ.ಎನ್. ಉಮೇಶ್ ಸಿಪಿಎಂ, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ

ಕೆಲಸದ ಅವಧಿ ಹೆಚ್ಚಿಸಬೇಕೆಂಬ ಮನವಿಗೆ ಸರ್ಕಾರ ಸ್ಪಂದಿಸಿದೆ. ಕಾರ್ಮಿಕರಿಗೆ ಹೆಚ್ಚುವರಿ ಅವಧಿಯ ವೇತನ (ಒ.ಟಿ) ಕೊಡಲು ಸಿದ್ಧವಿದ್ದೇವೆ
-ಸಿ.ಆರ್. ಜನಾರ್ದನ,ಎಫ್‌ಕೆಸಿಸಿಐ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು