ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಪರಿವರ್ತನೆ ಸರಳೀಕರಣಕ್ಕೆ ಚಿಂತನೆ: ಸಚಿವ ಆರ್. ಅಶೋಕ್

Last Updated 16 ಜೂನ್ 2020, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ 30 ದಿನಗಳಲ್ಲಿ ಭೂಪರಿವರ್ತನೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆದರೆ, ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಭೂ ಪರಿವರ್ತನೆಯಾಗುವ ಸರಳೀಕೃತ ವಿಧಾನ ಜಾರಿಗೆ ತರುವ ಚಿಂತನೆ ಇದೆ’ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಸಣ್ಣ ಕೈಗಾರಿಕೆಗಳು ಹಾಗೂ ಕೃಷಿ ವಲಯಕ್ಕೆ ಆಗಲಿರುವ ಅನುಕೂಲಗಳ ಕುರಿತು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ಕೈಗಾರಿಕೆ ಸ್ಥಾಪನೆಗೆ ಅರ್ಜಿ ಸಲ್ಲಿಸಿದರೆ, ಐದರಿಂದ ಹತ್ತು ವರ್ಷ ಕಾಯಬೇಕಿತ್ತು. ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇದರಿಂದಾಗಿ 30 ದಿನಗಳೊಳಗೆ ಭೂಪರಿವರ್ತನೆ ಪೂರ್ಣಗೊಳ್ಳಲಿದ್ದು, ಈ ವಿಧಾನವನ್ನು ಇನ್ನಷ್ಟು ಸರಳಗೊಳಿಸುವ ಕುರಿತು ಅಧ್ಯಯನ ಕೈಗೊಂಡಿದ್ದೇನೆ’ ಎಂದರು.

‘ರಾಜ್ಯದಲ್ಲಿ ಅಂದಾಜು ಶೇ 80ರಷ್ಟು ಸಣ್ಣ ಕೈಗಾರಿಕೆಗಳು ಬಾಡಿಗೆ ಜಾಗದಲ್ಲಿವೆ. ಈ ಕಾಯ್ದೆ ತಿದ್ದುಪಡಿಯಿಂದ ಸ್ವಂತ ಜಾಗದಲ್ಲಿ ಕೈಗಾರಿಕೆಗಳನ್ನು ಆರಂಭಿಸಬಹುದು. ರಾಜ್ಯದಲ್ಲಿ ಲಕ್ಷಾಂತರ ಎಕರೆಗಳಷ್ಟು ಭೂಮಿಯಲ್ಲಿ ಉಳುಮೆ ಮಾಡುತ್ತಿಲ್ಲ. ಕಚ್ಛಾ ವಸ್ತುಗಳು, ಮಾನವ ಸಂಪನ್ಮೂಲ ಇರುವ ಜಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದರೆ, ಸುಮಾರು 90 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಕೃಷಿ ಸಂಪತ್ತು ಹೆಚ್ಚುವ ಜೊತೆಗೆ ಗ್ರಾಮೀಣ ಅಭಿವೃದ್ಧಿಯೂ ಆಗಲಿದೆ’ ಎಂದರು.

ಕಾಸಿಯಾ ಅಧ್ಯಕ್ಷ ಸಿ.ಆರ್.ರಾಜು, ‘ಕೆಲ ಕೈಗಾರಿಕೆಗಳಿಗೆ ನೆರೆಹೊರೆ ರಾಜ್ಯಗಳನ್ನು ಅವಲಂಬಿಸಬೇಕಿತ್ತು. ಕೃಷಿ ಉತ್ಪನ್ನಗಳ ರಫ್ತಿನಲ್ಲಿ ರಾಜ್ಯ ಐದನೇ ಸ್ಥಾನದಲ್ಲಿದೆ. ಈ ಕಾಯ್ದೆ ತಿದ್ದುಪಡಿ ಆಗಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯ ಮೊದಲ ಸ್ಥಾನಕ್ಕೇರುವುದರಲ್ಲಿ ಅನುಮಾನವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT