ಸೋಮವಾರ, ಮಾರ್ಚ್ 8, 2021
27 °C
ಕೊಡಗು: ಜೋರು ಮಳೆಯಲ್ಲಿ ಭಾರವಾದ ನೆತ್ತಿ ಮೇಲಿನ ಜಲಮೂಲಗಳು

ಜೋರು ಮಳೆಯಲ್ಲಿ ಭಾರವಾದ ನೆತ್ತಿ ಮೇಲಿನ ಜಲಮೂಲಗಳು: ಕೆರೆಗಳಿಂದ ಗುಡ್ಡ ಕುಸಿತ?

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕೊಡಗಿನ ಹಲವು ಗುಡ್ಡಗಳ ನೆತ್ತಿಯ ಮೇಲೆ ಎಸ್ಟೇಟ್‌ಗಳ ಮಾಲೀಕರು ಎಗ್ಗಿಲ್ಲದೆ ನಿರ್ಮಿಸಿದ್ದ ಬೃಹತ್‌ ಕೆರೆಗಳೇ ಅಲ್ಲಿನ ಸದ್ಯದ ವಿಪತ್ತಿಗೆ ಕಾರಣವಾದವೇ? – ‘ಹೌದು’ ಎನ್ನುತ್ತಾರೆ ಗುಡ್ಡ ಕುಸಿತದ ಪ್ರಕರಣಗಳು ಸಂಭವಿಸಿದ ಪ್ರದೇಶಗಳ ತುಂಬಾ ಎಡೆಬಿಡದೆ ಸುತ್ತಾಡಿ ಮಾಹಿತಿ ಕಲೆಹಾಕಿರುವ ಪರಿಸರವಾದಿಗಳು.

‘ಘಟ್ಟ ಪ್ರದೇಶಗಳ ತಪ್ಪಲಿನಲ್ಲಿ ಕೆರೆಗಳಿರುವುದು ಸಾಮಾನ್ಯ. ಮೇಲಿನಿಂದ ಹರಿದುಬಂದ ನೀರನ್ನು ಸಂಗ್ರಹಿಸುವ ನೈಸರ್ಗಿಕ ಬೋಗುಣಿಗಳು ಅವು. ಆದರೆ, ಹಲವು ಎಸ್ಟೇಟ್‌ ಮಾಲೀಕರು ಗುಡ್ಡಗಳ ಮೇಲೆಯೇ ನಾಲ್ಕಾರು ಎಕರೆಗಳಷ್ಟು ವಿಸ್ತಾರವಾದ ಕೆರೆ ನಿರ್ಮಿಸಿದ್ದರು. ಕೆರೆಗಳ ಭಾರ ತಾಳಲಾರದೆ ಗುಡ್ಡಗಳು ಕುಸಿದಿವೆ’ ಎಂದು ವಿವರಿಸುತ್ತಾರೆ ಅಧ್ಯಯನ ತಂಡದಲ್ಲಿದ್ದ ಅಜ್ಜಿನಂಡ ತಮ್ಮು ಪೂವಯ್ಯ.

‘ಕುಸಿದಿರುವ ಗುಡ್ಡಗಳೆಲ್ಲ ಮಡಿಕೇರಿ ನಗರದಿಂದ 12 ಕಿ.ಮೀ. ಆಸುಪಾಸಿನಲ್ಲಿವೆ. ಮಡಿಕೇರಿ ಸುತ್ತಲಿನ ಪ್ರದೇಶಕ್ಕಿಂತ ಬ್ರಹ್ಮಗಿರಿ, ಪುಷ್ಪಗಿರಿ ಶ್ರೇಣಿಯಲ್ಲಿ ಸುರಿದ ಮಳೆಯ ಪ್ರಮಾಣ ಇನ್ನೂ ಹೆಚ್ಚಾಗಿತ್ತು. ಹೀಗಿದ್ದೂ ಅಲ್ಲಿನ ಗಿರಿಶ್ರೇಣಿಗಳು ಸುಭದ್ರವಾಗಿದ್ದು, ಇಲ್ಲಿನ ಗುಡ್ಡಗಳು ಕುಸಿದಿದ್ದೇಕೆ ಎಂಬ ಪ್ರಶ್ನೆ ಕಾಡಿತ್ತು. ನಮ್ಮ ಅಧ್ಯಯನ ಯಾತ್ರೆಗೆ ಈ ಅಂಶವೇ ಕಾರಣವಾಯಿತು’ ಎಂದು ಅವರು ಹೇಳುತ್ತಾರೆ.

ಒಂದು ಎಕರೆ ಪ್ರದೇಶದಲ್ಲಿ ಒಂದು ಅಡಿಯಷ್ಟು ನೀರು ತುಂಬಿಕೊಂಡು ನಿಂತರೆ ಅದರ ಭಾರ ಸುಮಾರು 150 ಟನ್‌ಗಳಷ್ಟು ಆಗುತ್ತದೆ. ಗುಡ್ಡಗಳ ಮೇಲ್ಭಾಗದಲ್ಲಿದ್ದ ಕೆರೆಗಳು ಸರಾಸರಿ ಆರು ಅಡಿಗಳಷ್ಟು ಆಳವಾಗಿದ್ದವು ಎಂಬ ಅಂದಾಜು ಮಾಡಲಾಗಿದೆ. ಆ ಲೆಕ್ಕಾಚಾರದಲ್ಲಿ ಎಕರೆಯಷ್ಟು ವಿಸ್ತಾರದ ಒಂದೊಂದು ಕೆರೆಯೂ ಗುಡ್ಡಕ್ಕೆ 900 ಟನ್‌ಗಳಷ್ಟು ಅಧಿಕ ಭಾರವನ್ನು ಹೊರಿಸಿತ್ತು.

‘ಗುಡ್ಡದ ಮೇಲೆ ಮೊದಲೇ 1.5 ಮೀಟರ್‌ಗಿಂತಲೂ ಅಧಿಕ ಗಾತ್ರದ ಮಣ್ಣಿನ ಪದರು ಇತ್ತು. ಬಲು ಭಾರವಾದ ಕೆರೆಯು ನೆತ್ತಿಯ ಮೇಲೆ ಕುಳಿತಿದ್ದರಿಂದ ಜಾರುಬಂಡಿಯಂತೆ ಗುಡ್ಡದ ಮೇಲಿನ ಮಣ್ಣಿನ ಪದರು ತನ್ನ ಮೇಲಿದ್ದ ಎಸ್ಟೇಟ್‌, ತೋಟ, ಬಂಗಲೆ ಹಾಗೂ ಮನೆಗಳ ಸಮೇತ ಕಣಿವೆಗೆ ಜಾರಿತು’ ಎಂದು ಪೂವಯ್ಯ ಮಾಹಿತಿ ನೀಡುತ್ತಾರೆ.

ಗುಡ್ಡದ ಮೇಲೇಕೆ ಕೆರೆ?: ಗುಡ್ಡದ ಅಡಿಯಲ್ಲಿನ ಕೆರೆ ಅಥವಾ ಜಲಮೂಲದಿಂದ ನೀರನ್ನು ಎಸ್ಟೇಟ್‌ಗೆ ತರುವುದು ವೆಚ್ಚದಾಯಕ. ಅಲ್ಲದೆ, ವಿದ್ಯುತ್‌ ಕಣ್ಣಾಮುಚ್ಚಾಲೆ ಆಡುವಾಗ ತೋಟಕ್ಕೆ ನೀರುಣಿಸುವುದು ಸುಲಭವಲ್ಲ. ಅದೇ ಗುಡ್ಡದ ಮೇಲೆ ಕೆರೆ ನಿರ್ಮಿಸಿದರೆ ಗುರುತ್ವಾಕರ್ಷಣೆ ಬಲದಿಂದ ಇಂಚಿಂಚು ಜಾಗವನ್ನೂ ಬಿಡದಂತೆ ಇಡೀ ತೋಟಕ್ಕೆ ನೀರುಣಿಸಲು ಸಾಧ್ಯ. ಅಲ್ಲದೆ, ಈ ಭಾಗದಲ್ಲಿ ಟರ್ಬೊಜೆಟ್‌ ಮೂಲಕ ಕೆರೆಯ ನೀರಿನಿಂದ ಹಲವರು ವಿದ್ಯುತ್‌ ಉತ್ಪಾದನೆಯನ್ನೂ ಮಾಡುತ್ತಾರೆ.

‘ಗುಡ್ಡದ ಮೇಲೆ ಕೆರೆ ನಿರ್ಮಾಣ ಪ್ರಕೃತಿ ನಿಯಮಕ್ಕೆ ವಿರುದ್ಧ. ಆದರೆ, ನೀರುಣಿಸುವುದು ಸುಲಭ ಎಂಬ ಒಂದೇ ಕಾರಣಕ್ಕೆ ದೊಡ್ಡ ಎಸ್ಟೇಟ್‌ಗಳ ಮಾಲೀಕರಂತೂ ಭಾರಿ ಗಾತ್ರದ ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ. ನಮ್ಮ ಪಕ್ಕದ ಎಸ್ಟೇಟ್‌ನಲ್ಲಿದ್ದ ಕೆರೆಯಿಂದಾಗಿಯೇ ನಮ್ಮ ಎಂಟು ಎಕರೆ ತೋಟ ಕೊಚ್ಚಿಕೊಂಡು ಹೋಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಮುಕ್ಕೋಡ್ಲು ಗ್ರಾಮದ ವಿಶಾಲ್‌ ಕಾರ್ಯಪ್ಪ.

‘ಗುಡ್ಡದ ಮೇಲಿರುವ ಎಲ್ಲ ಕೆರೆಗಳನ್ನು ತೆರವುಗೊಳಿಸಿ. ಇಲ್ಲದಿದ್ದರೆ ಉಳಿದ ಕೆರೆಗಳಿಂದಲೂ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾಧಿಕಾರಿಗೆ ತಿಳಿಸಿದ್ದೇವೆ. ಪರಿಹಾರ ಕಾರ್ಯಾಚರಣೆಯಿಂದ ಪುರುಸೊತ್ತು ಸಿಕ್ಕೊಡನೆ ಕೆರೆಗಳತ್ತ ಗಮನಹರಿಸುವ ಭರವಸೆ ಅವರಿಂದ ಸಿಕ್ಕಿದೆ’ ಎಂದು ಅವರು ಹೇಳುತ್ತಾರೆ.

‘ಹಟ್ಟಿಹೊಳೆಯ ಹಂದಿಗುತ್ತಿ ಎಸ್ಟೇಟ್‌ ಕುಸಿಯಲು ಸಹ ಕೆರೆಯೇ ಕಾರಣವಾಗಿದೆ. ಮಕ್ಕಂದೂರಿನ ಹಲವು ತೋಟಗಳು ಕುಸಿಯಲು ಭಾರಿ ಮಳೆಯಿಂದ ಕೆರೆ ಒಡೆದು ನೂರಾರು ಟನ್‌ ಭಾರದ ಗ್ಯಾಲನ್‌ಗಟ್ಟಲೆ ನೀರು ಗುರುತ್ವಾಕರ್ಷಣೆ ಬಲದಿಂದ ತುಂಬಾ ರಭಸವಾಗಿ ಹರಿದದ್ದೇ ಅನಾಹುತಕ್ಕೆ ಕಾರಣ’ ಎಂದು ವಿಶಾಲ್‌ ಖಚಿತ ಧ್ವನಿಯಲ್ಲಿ ವಿವರಿಸುತ್ತಾರೆ.

‘ಮೇಲ್ಭಾಗದ ಕೆರೆ ಒಡೆದು ಅಣೆಕಟ್ಟೆಯಿಂದ ಬಂದಂತೆ ನೀರು ಹರಿದು ಬಂದಿರುವುದೇ ಇವರ ಸಂಕಷ್ಟಕ್ಕೆ ಕಾರಣ’ ಎಂದು ಅದೇ ಊರಿನ ಕಾವೇರಪ್ಪ ಅಭಿಪ್ರಾಯಪಡುತ್ತಾರೆ. ಜೋಡುಪಾಲದ ಘಟ್ಟದಲ್ಲಿ ಹೆಚ್ಚಿನ ಕೆರೆಗಳು ಇರಲಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ.‘ಕೆಂಪು ಹರಳುಗಳಿಗಾಗಿ ಅಲ್ಲಿ ಗಣಿಗಾರಿಕೆ ನಡೆದಿದೆಯಲ್ಲ. ಭೂಕುಸಿತಕ್ಕೆ ಅಲ್ಲಿ ಮಳೆ ಬೇಕೆಂದೇನು ಇಲ್ಲ. ಗಣಿಗಾರಿಕೆ ಒಂದೇ ಸಾಕು’ ಎಂದು ಪೂವಯ್ಯ ಉತ್ತರಿಸುತ್ತಾರೆ ‘ಎಸ್ಟೇಟ್‌ ವ್ಯಾಪ್ತಿಯಲ್ಲಿ ಸಿಲ್ವರ್‌ ಓಕ್ಸ್‌, ಅಕೇಷಿಯಾ ಮರಗಳನ್ನು ಕತ್ತರಿಸಲು ಮಾತ್ರ ಮೊದಲು ಅನುಮತಿ ಇತ್ತು. ಹತ್ತಕ್ಕೂ ಅಧಿಕ ಪ್ರಭೇದಗಳ ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿತು. ಎಷ್ಟೋ ಗುಡ್ಡಗಳ ನೆತ್ತಿಯೆಲ್ಲಾ ಮರಗಳಿಲ್ಲದೆ ಬೋಳಾಗಿತ್ತು’ ಎಂದು ಹೇಳುತ್ತಾರೆ.

40ಕ್ಕೂ ಅಧಿಕ ಕೆರೆಗಳಿದ್ದವು

ಮಡಿಕೇರಿ ಪರಿಸರದ ಆಸುಪಾಸು ಕುಸಿದಿರುವ ಗುಡ್ಡಗಳ ಮೇಲೆ ಸುಮಾರು 40 ಬೃಹತ್‌ ಕೆರೆಗಳು ಇದ್ದುದನ್ನು ಪೂವಯ್ಯ ಅವರ ತಂಡ ಪತ್ತೆ ಮಾಡಿದೆ. ಇಗ್ಗೋಡ್ಲು ಗ್ರಾಮದ ಸರಹದ್ದಿನಲ್ಲೇ 25 ಕೆರೆಗಳಿದ್ದರೆ, ಮಕ್ಕಂದೂರು ಭಾಗದಲ್ಲಿ 12 ಹಾಗೂ ಮುಕ್ಕೋಡ್ಲು ಭಾಗದಲ್ಲಿ ಮೂರು ಕೆರೆಗಳಿದ್ದವು. ಕೆರೆಗಳ ಜೊತೆಗೆ ಕಟ್ಟಡಗಳ (ಹೋಂ ಸ್ಟೇಗಾಗಿ ನಿರ್ಮಿಸಿದ) ಭಾರವೂ ದೊಡ್ಡದಾಗಿತ್ತು ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಪರಿಸರವಾದಿಗಳು ಹೇಳುತ್ತಾರೆ.

‘ನಮಗೆ ಮಾಹಿತಿ ಸಿಕ್ಕಿರುವುದು ಇಷ್ಟು ಕೆರೆಗಳದ್ದು ಮಾತ್ರ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅವುಗಳ ನಿರ್ಮಾಣ ಆಗಿರಬೇಕು’ ಎಂದು ವಿವರಿಸುತ್ತಾರೆ.

ಕೊಡಗಿನಲ್ಲಿ ಮತ್ತೆ ಮಳೆ: ಹೆಚ್ಚಿದ ಆತಂಕ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಸೋಮವಾರ ದಿನವಿಡೀ ಸುರಿಯಿತು. ಹದಿನೈದು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿ ಅಪಾರ ಹಾನಿ ಸಂಭವಿಸಿತ್ತು. ಮತ್ತೆ ಧಾರಾಕಾರ ಮಳೆ ಸುರಿಯುತ್ತಿರುವುದು ಜನರ ಆತಂಕವನ್ನು ಹೆಚ್ಚಿಸಿದೆ.

ಮಡಿಕೇರಿ, ತಾಳತ್ತಮನೆ, ಭಾಗಮಂಡಲ, ತಲಕಾವೇರಿ, ನಾಪೋಕ್ಲು ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗುತ್ತಿದೆ.

* ಕೆರೆಗಳಿಂದ ಮೈಕ್ರೊ ಸಿಸ್ಮಿಕ್‌ (ಕಂಪನ) ಅಲೆಗಳೇನು ಸೃಷ್ಟಿಯಾಗಿಲ್ಲ. ಆದರೆ, ಅವುಗಳ ಸೋರಿಕೆಯಿಂದ ಸಮಸ್ಯೆ ಆಗಿರುವ ಸಾಧ್ಯತೆ ಇದೆ

-ಪ್ರೊ. ಎ.ಬಾಲಸುಬ್ರಮಣಿಯನ್‌, ಭೂಗರ್ಭಶಾಸ್ತ್ರಜ್ಞ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು