ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಮತಕ್ಕೆ ಕುಸಿದ ರಾಜ್ಯ ಸರ್ಕಾರ: ಬಿಜೆಪಿ ಧಿಕ್ಕಾರ

ವಿಧಾನ ಪರಿಷತ್ ಕಲಾಪ ಗುರುವಾರಕ್ಕೆ ಮುಂದೂಡಿಕೆ
Last Updated 16 ಜುಲೈ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಅಲ್ಪಮತಕ್ಕೆ ಕುಸಿದಿರುವ ಸರ್ಕಾರದಲ್ಲಿ ಮುಖ್ಯಮಂತ್ರಿ ಒಬ್ಬರನ್ನು ಬಿಟ್ಟರೆ ಬೇರೆ ಸಚಿವರೇ ಇಲ್ಲ. ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಯಾರೂ ಇಲ್ಲದ ಮೇಲೆ ಕಲಾಪ ನಡೆಸುವುದರಲ್ಲಿ ಅರ್ಥವಿಲ್ಲ’ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದ್ದರಿಂದ ವಿಧಾನ ಪರಿಷತ್ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಮಂಗಳವಾರ 12 ಗಂಟೆ ಸುಮಾರಿಗೆ ಕಲಾಪ ಆರಂಭವಾಯಿತು. ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ಎಸ್‌.ಎಲ್‌.ಧರ್ಮೇಗೌಡ ಅವರು ಪೀಠಕ್ಕೆ ಬರುವ ಮೊದಲೇ ಬಿಜೆಪಿ ಸದಸ್ಯರು ‘ಮುಖ್ಯಮಂತ್ರಿ ರಾಜೀನಾಮೆ ನೀಡಿ’ ಎಂಬಭಿತ್ತಿಪತ್ರದೊಂದಿಗೆ ಸಭಾಪತಿಗಳ ಪೀಠದ ಮುಂಭಾಗಕ್ಕೆ ಬಂದು ನಿಂತಿದ್ದರು.

ಕಲಾಪ ಕೈಗೆತ್ತಿಕೊಳ್ಳಲು ಯತ್ನಿಸಿದಂತೆಯೇ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಅಲ್ಪಮತಕ್ಕೆ ಕುಸಿದಿರುವ ಸರ್ಕಾರಕ್ಕೆ ಕಲಾಪ ನಡೆಸುವ ಅಧಿಕಾರವೇ ಇಲ್ಲ. ಈ ಹಿಂದೆ ರಾಮಕೃಷ್ಣ ಹೆಗಡೆ, ದೇವರಾಜ ಅರಸು, ಕೆ.ಸಿ.ರೆಡ್ಡಿ ಎಲ್ಲರೂ ಅಲ್ಪಮತಕ್ಕೆ ಕುಸಿದಿದ್ದಾಗ ಅಧಿಕಾರಕ್ಕೆ ಅಂಟಿಕೊಳ್ಳದೆ ರಾಜೀನಾಮೆ ಕೊಟ್ಟಿದ್ದರು. ಆದರೆ ಕುಮಾರಸ್ವಾಮಿ ಸರ್ಕಾರ ಈಗಲೂಅಧಿಕಾರ ಚಲಾಯಿಸುತ್ತಿದೆ. ಇಂತಹ ನಾಟಕವನ್ನು ಒಪ್ಪಲು ಸಾಧ್ಯವಿಲ್ಲ’ ಎಂದರು.

ಜಲಸಂಪನ್ಮೂಲ ಸಚಿವಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿ,‘ಸರ್ಕಾರ ಈಗಲೂ ಅಸ್ತಿತ್ವದಲ್ಲಿದೆ, ನಾನುಈಗಲೂ ಸಚಿವನೇ’ ಎಂದು ಹೇಳಿದರು. ಸಚಿವರಾದ ಜಯಮಾಲಾ, ಸಾ.ರಾ.ಮಹೇಶ್‌ ದನಿಗೂಡಿಸಿದರು

ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಅಲ್ಪಮತದ ಸರ್ಕಾರ ತಕ್ಷಣ ಅಧಿಕಾರ ತ್ಯಜಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರೂ ಭಿತ್ತಪತ್ರ ಹಿಡಿದು. ‘ನಿಲ್ಲಿಸಿ, ನಿಲ್ಲಿಸಿ, ಕುದುರೆ ವ್ಯಾಪಾರ ನಿಲ್ಲಿಸಿ’ ಎಂದು ಘೋಷಣೆ ಕೂಗಿದರು. ಸರ್ಕಾರ ನಿಮ್ಮಿಂದಾಗಿಯೇ ಅತಂತ್ರ ಸ್ಥಿತಿಗೆ ತಲುಪಿದೆ ಎಂದು ಆರೋಪಿಸಿದರು. ಸುಮ್ಮನಿರಲು ಉಪಸಭಾಪತಿ ಮಾಡಿದ ಮನವಿಗೆ ಬೆಲೆ ಸಿಗದಾಯಿತು. ಹೀಗಾಗಿ ಅವರು 15 ನಿಮಿಷ ಕಲಾಪ ಮುಂದೂಡಿದರು.

ಗದ್ದಲದ ನಡುವೆಯೇ ಆಯನೂರು ಮಂಜುನಾಥ್‌ ಹಕ್ಕು ಬಾಧ್ಯತಾ ಸಮಿತಿಯ ವರದಿ ಹಾಗೂ ಕೆ.ಸಿ.ಕೊಂಡಯ್ಯ ಅವರು ಸರ್ಕಾರಿ ಭರವಸೆಗಳ ಸಮಿತಿಯ ವರದಿ ಮಂಡಿಸಿದರು.

ಮೇಲ್ಮನೆಯ ಹಸಿರು ಕ್ರಮ

ವಿಧಾನ ಪರಿಷತ್‌ನಲ್ಲಿ ಇದೇ ಮೊದಲ ಬಾರಿಗೆ ಪ್ರಶ್ನೆ–ಉತ್ತರಗಳನ್ನು ಕಾಗದರಹಿತವಾಗಿ ಮಾಡಲಾಗಿದ್ದು, ಪರಿಷತ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅವುಗಳನ್ನು ಪ್ರಕಟಿಸಲಾಗುತ್ತದೆ. ಮಾಧ್ಯಮಗಳಿಗೆ ಇ ಮೇಲ್‌ ಮಾಡಲಾಗುತ್ತದೆ ಎಂದು ತಿಳಿಸಲಾಯಿತು.

**

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT