ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಸಚಿವಾಲಯದಲ್ಲಿ 217 ಹುದ್ದೆಗಳ ನೇಮಕಾತಿ ಅಕ್ರಮ: ಸಿಎಜಿ

Last Updated 21 ಅಕ್ಟೋಬರ್ 2018, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ವಿಧಾನಸಭೆ ಸಚಿವಾಲಯದ ವಿವಿಧ ಹುದ್ದೆಗಳಿಗೆ ಕಳೆದ ಫೆಬ್ರುವರಿ ಮತ್ತು ಮೇನಲ್ಲಿ ನಡೆದ ನೇಮಕಾತಿಗಳಲ್ಲಿ ನೀತಿ–ನಿಯಮಗಳನ್ನು ಉಲ್ಲಂಘಿಸಿದ್ದು, ಇಡೀ ಪ್ರಕ್ರಿಯೆ ಪ್ರಶ್ನಾರ್ಹವಾಗಿದೆ’ ಎಂದು ಕಂಟ್ರೋಲರ್‌ ಅಂಡ್‌ ಆಡಿಟರ್‌ ಜನರಲ್‌ (ಮಹಾಲೇಖಪಾಲ) ವರದಿ ಆಕ್ಷೇಪ ವ್ಯಕ್ತಪಡಿಸಿದೆ.

ಕೆ.ಆರ್‌. ರಮೇಶ್‌ ಕುಮಾರ್‌ ವಿಧಾನಸಭೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ವಿಧಾನಸಭೆ ಸಚಿವಾಲಯದ 2017–18 ನೇ ಸಾಲಿನ ಹಣಕಾಸು ವ್ಯವಹಾರ ಮತ್ತು ನೇಮಕಾತಿ ಕುರಿತು ‘ವಿಶೇಷ ಆಡಿಟ್‌’ ನಡೆಸುವಂತೆ ಸೂಚಿಸಿದ್ದರು. ಕಂಟ್ರೋಲರ್‌ ಮತ್ತು ಆಡಿಟರ್‌ ಜನರಲ್‌ ಕಚೇರಿ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.

ವರದಿಯಲ್ಲಿ ಏನಿದೆ?: ನೇಮಕಾತಿಗೆ ರಚಿಸಿದ್ದ ಪರಿಶೀಲನಾ ಸಮಿತಿ, ಆಯ್ಕೆ ಸಮಿತಿ, ಈ ಬಗ್ಗೆ ನಡೆದಿರುವ ಚರ್ಚೆ, ಕೈಗೊಂಡಿರುವ ತೀರ್ಮಾನ ಒಳಗೊಂಡ ದಾಖಲೆಗಳನ್ನು ಪರಿಶೀಲನೆಗೆ ಮಂಡಿಸಿಲ್ಲ. ಖಾಲಿ ಹುದ್ದೆಗಳ ಕುರಿತ ಜಾಹೀರಾತು, ಅಧಿಸೂಚನೆ, ಅರ್ಜಿಗಳ ಪರಿಶೀಲನೆ, ಅಭ್ಯರ್ಥಿ ಆಯ್ಕೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನ, ಆಯ್ಕೆಯಾದ ಮತ್ತು ತಿರಸ್ಕೃತರ ಹೆಸರಿರುವ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿರುವ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ.

ವಿಧಾನಸಭೆ ಸಚಿವಾಲಯ 90 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿತ್ತು. ಎರಡು ತಂಡಗಳಲ್ಲಿ ಅಂದರೆ, ಫೆಬ್ರುವರಿ ಮತ್ತು ಮೇ ತಿಂಗಳಲ್ಲಿ 217 ಅಭ್ಯರ್ಥಿಗಳನ್ನು ನೇಮಕಾತಿ ಮಾಡಿತು. ತದನಂತರ, ಹಣಕಾಸು ಇಲಾಖೆಯಿಂದ 107 ಹುದ್ದೆಗಳಿಗೆ ಮಂಜೂರಾತಿ ಪಡೆಯಲಾಯಿತು. ಇನ್ನೂ 22 ದಲಾಯತ್ ಹುದ್ದೆಗಳಿಗೆ ಹಣಕಾಸು ಇಲಾಖೆ ಒಪ್ಪಿಗೆ ಪಡೆಯಬೇಕಾಗಿದೆ. ಅಲ್ಲದೆ, 10 ಹೆಚ್ಚುವರಿ ಹುದ್ದೆಗಳಿಗೆ ಮಂಜೂರಾತಿ ಸಿಗುವವರೆಗೂ ಅವು ಕ್ರಮಬದ್ಧವಾಗುವುದಿಲ್ಲ.

ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಹೆಚ್ಚು ಜನ ಓದುವ ಇಂಗ್ಲಿಷ್‌ ಮತ್ತು ಕನ್ನಡ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಬೇಕಿತ್ತು. ಅದನ್ನು ಮಾಡದೇ ಇರುವುದರಿಂದ ಹೆಚ್ಚಿನ ಸಂಖ್ಯೆಯ ಅರ್ಹರು ನೇಮಕಾತಿ ಪ್ರಕ್ರಿಯೆಯಿಂದ ವಂಚಿತರಾಗುವಂತಾಯಿತು. ಎರಡನೇ ಹಂತದಲ್ಲಿ ನೇಮಕ ಮಾಡಲಾದ 117 ಹುದ್ದೆಗಳನ್ನು ರಾಜ್ಯಪತ್ರದಲ್ಲೂ ಪ್ರಕಟಿಸಿಲ್ಲ.

ನೇಮಕವಾದ ಅಭ್ಯರ್ಥಿಗಳಲ್ಲಿ ಕೆಲವರ ವೈಯಕ್ತಿಕ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಮೂರು ಪ್ರಕರಣಗಳಲ್ಲಿ ನಿರ್ದಿಷ್ಟ ವಯೋಮಿತಿ ಮೀರಿದವರನ್ನು ನೇಮಿಸಲಾಗಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಗ್ರಂಥಾಲಯ ಸಹಾಯಕರ ಹುದ್ದೆಗೆ ‘2 ಎ’ ವರ್ಗಕ್ಕೆ ಸೇರಿದ ಬನ್ನೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನೊಂದು ಪ್ರಕರಣದಲ್ಲಿ, ಕಿರಿಯ ಸಹಾಯಕರಾಗಿ ನೇಮಕಗೊಂಡಿರುವ 2ಎ ವರ್ಗದ ರಾಧಾ ಅವರ ವಯೋಮಿತಿಯೂ ಮೀರಿದೆ.

ಮೂರನೇ ಪ್ರಕರಣದಲ್ಲಿ, ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಸಹಾಯಕ ಗ್ರಂಥಪಾಲಕರ ಹುದ್ದೆಗೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆ. ನಲವಾಗಲು ಅವರನ್ನು ನೇಮಿಸಲಾಗಿದೆ. ಮೀಸಲು ವರ್ಗದಡಿಯಲ್ಲಿ ವಯೋಮಿತಿ ವಿನಾಯ್ತಿ ನೀಡಲಾಗಿದ್ದು, ಇದೂ ಅಕ್ರಮವಾಗಿ ನಡೆದಿದೆ. ಖಾಲಿ ಇಲ್ಲದಿದ್ದರೂ ಒಂದು ಟೈಪಿಸ್ಟ್‌ ಹುದ್ದೆಗೆ ನೇಮಕ ಮಾಡಲಾಗಿದೆ. ದಲಾಯತ್‌ ಹುದ್ದೆಗೆ ನೇಮಕಗೊಂಡಿರುವ ಎಸ್‌. ನಾಗರಾಜ್‌ ಅವರ ಅರ್ಜಿಯಲ್ಲಿ ದಿನಾಂಕವನ್ನೇ ನಮೂದಿಸಿಲ್ಲ. ಅರ್ಜಿ ಪರಿಶೀಲಿಸಿದ ವ್ಯಕ್ತಿಯೂ ದಿನಾಂಕ, ಸಹಿ, ಹೆಸರು, ಹುದ್ದೆ ನಮೂದಿಸಿಲ್ಲ. ಈ ಗಂಭೀರ ಲೋಪಗಳಿಂದಾಗಿ ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ಸಂಶಯದಿಂದ ನೋಡುವಂತಾಗಿದೆ.

‘ಸಂದರ್ಶನದ ದಾಖಲೆಗಳೂ ಇಲ್ಲ’

ವಿಧಾನಸಭೆ ಸಚಿವಾಲಯಕ್ಕೆ ನೇಮಕಗೊಂಡಿರುವ ಕೆಲವು ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರ ಸಲ್ಲಿಸಿಲ್ಲ. ಅಂಕ ಪಟ್ಟಿಯನ್ನಷ್ಟೆ ಕೊಟ್ಟಿದ್ದಾರೆ. ಸಂದರ್ಶನದ ಮೂಲಕ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದ್ದರೂ, ಸಂದರ್ಶನ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳಿಲ್ಲ ಎಂದೂ ವರದಿ ಆಕ್ಷೇಪಿಸಿದೆ.

ಸಂದರ್ಶನ ಪಟ್ಟಿಯಲ್ಲಿ ಕೆಲವು ಅಭ್ಯರ್ಥಿಗಳ ಹೆಸರಿನ ಮುಂದೆ ಗೈರುಹಾಜರು ಎಂದು ನಮೂದಿಸಲಾಗಿದೆ. ರಿಜಿಸ್ಟರ್‌ ಅಂಚೆಯ ಮೂಲಕ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗಿದೆ ಎಂದು ಹೇಳಲಾಗಿದ್ದರೂ ಇದನ್ನು ಖಚಿತಪಡಿಸುವ ಸ್ವೀಕೃತಿಗಳಿಲ್ಲ. ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಕೊಟ್ಟ ಬಳಿಕ ಪೊಲೀಸ್‌ ಪರಿಶೀಲನೆಗೆ ಕಳುಹಿಸಿರುವುದು ಸರಿಯಲ್ಲ ಎಂದೂವರದಿ ಹೇಳಿದೆ.

*ವಿಧಾನಸಭೆ ಸಚಿವಾಲಯದ ಅಕ್ರಮ ನೇಮಕಾತಿ ಕುರಿತು ‘ಪ್ರಜಾವಾಣಿ’ ಸರಣಿ ವರದಿ ಪ್ರಕಟಿಸಿತ್ತು. ವಿಶೇಷ ಆಡಿಟ್‌ ವರದಿಯು ಪತ್ರಿಕೆಯ ವರದಿಗಳನ್ನು ಸಮರ್ಥಿಸಿದೆ.

ಮುಖ್ಯಾಂಶಗಳು

* ಗಂಭೀರ ಲೋಪಗಳಿಂದ ಪ್ರಕ್ರಿಯೆಯೇ ಸಂಶಯಾಸ್ಪದ

* ನೇಮಕಾತಿ ನೀತಿ– ನಿಯಮಗಳ ಉಲ್ಲಂಘನೆ

* ನೇಮಕಾತಿ ಪ್ರಕ್ರಿಯೆಯಿಂದ ವಂಚಿತರಾದ ಅರ್ಹರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT