ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿತದ ಕೊರಳಪಟ್ಟಿ ಹಿಡಿದು ನಡಿಗೆ...

ಚಿತ್ರದುರ್ಗದಿಂದ ಬೆಂಗಳೂರಿನತ್ತ ಮದ್ಯ ನಿಷೇಧ ಪಾದಯಾತ್ರೆಯಲ್ಲಿ ಭಾಗವಹಿಸಿರುವ ಹೆಣ್ಣುಮಕ್ಕಳ ಮನದಾಳ
Last Updated 26 ಜನವರಿ 2019, 18:50 IST
ಅಕ್ಷರ ಗಾತ್ರ

ತುಮಕೂರು: ‘ಅಣ್ಣ, ತಮ್ಮ ಎಲ್ರೂ ಕುಡ್ತದಿಂದ್ಲೆ ಸತ್ತೋಗ್ಯಾರ. ತಮ್ಮನ್ ಹೆಂಡ್ತಿ 21 ವರ್ಷದೋಳು. ಎಲ್ಡ್‌ ಮಕ್ಳಿದಾವ. 12 ವರ್ಷದೋನಿದ್ದಾಗಿಂದ್ಲು ಕುಡಿತ್ತಿದ್ದ ತಮ್ಮ. 22 ವರ್ಷಕ್ಕ ನಮ್ಮನ್ನ ಬಿಟ್‌ ಹೋದ. ಈಗ ಆ ಮಕ್ಳ ಗತಿ. ನನ್‌ ಗಂಡಂದೂ ಅದೇ ಚಾಳಿ. ನಾ ಕೂಲಿ ಮಾಡಿದರಾ ನನ್‌ ಎಲ್ಡ್‌ ಮಕ್ಳ ಹೊಟ್ಟಿ ತುಂಬ್ತೈತಿ. ಇಲ್ಲಂದ್ರ ಇಲ್ಲ’ ಎಂದು ಕಣ್ಣೀರಾದರು ಹಾವೇರಿ ಜಿಲ್ಲೆ ಹಾನಗಲ್‌ನ ಶಾರದಾ.

ಇಂತಹ ಸಾವಿರಾರು ಮನ ಕಲಕುವ ಮತ್ತು ಕೇಳಿದವರು ಕಣ್ಣೀರಾಗುವ ಕಥೆಗಳು ಪಾದಯಾತ್ರೆ ಹೊರಟವರ ಎದೆಯಲ್ಲಿವೆ. ಅವರೆಲ್ಲರ ಜಪ ಒಂದೇ ‘ಸಂಪೂರ್ಣ ಮದ್ಯಪಾನ ನಿಷೇಧ’.

9 ದಿನಗಳಿಂದ ಸತತ 130 ಕಿ.ಮೀ ನಡೆದಿರುವ ಅವರ ಕಾಲುಗಳಿಗೆ ದಣಿವಾಗಿಲ್ಲ. ಆಯಾಸವಾಗಿಲ್ಲ. ಕೆಚ್ಚೆದೆಯಿಂದ ಮಾತನಾಡುತ್ತಿದ್ದ ಅವರ ಕಣ್ಣುಗಳಲ್ಲಿ ತಮ್ಮ ಬೇಡಿಕೆ ಈಡೇರುತ್ತದೆ ಎನ್ನುವ ನಿರೀಕ್ಷೆ ಹೆಚ್ಚಿತ್ತು.

ಹೀಗೆ ಉತ್ತರ ಕರ್ನಾಟಕ ಭಾಗದ ಹೆಣ್ಣು ಮಕ್ಕಳು ಸಾಲುಗಟ್ಟಿದ್ದರು. ಹರಕು ಚಪ್ಪಲಿ ಮೆಟ್ಟಿಕೊಂಡು ತಾಯಿ, ಪತ್ನಿ, ಅಕ್ಕ, ತಂಗಿ, ಸೊಸೆಯರು, ಅತ್ತೆಯಂದಿರು ಹೀಗೆ ಒಂದೇ ಕುಟುಂಬದ ಎಲ್ಲ ಹೆಣ್ಣು ಮಕ್ಕಳೂ ಇಲ್ಲಿ ಇದ್ದರು; ಮನೆಯ ಗಂಡಸರ ಕುಡಿತ ಬಿಡಿಸಲು.

‘ನಮ್ಗ ಮೂರೂ ಹೆಣ್ಮಕ್ಕಳು. ಎಲ್ರೂನು ಮದ್ವಿ ಮಾಡಿ ಕೊಟ್ವಿದ್ದೀವಿ. ಇಬ್ರು ಅಳಿಯಂದ್ರೂ ಕುಡ್ತದ ಚಟ ಕಲ್ತಿದ್ದಾರೆ. ತವರು ಮನಿಗೆ ಹೆಂಡತಿ, ಮಕ್ಳನ್‌ ಕಳ್‌ಸ್ಯಾರಿ. ಈಗ ಏಳು ಮೊಮ್ಮಕ್ಳು ಜತೆ ಹೆಣಮಕ್ಳನ್‌ ನೋಡ್ಕೊಳಾ ಜವಾಬ್ದಾರಿ ನಮ್ಮದೇ. ನಮ್‌ ಹೊಟ್ಟಿ ತುಂಬೊದೆ ವಜ್ಜಿ ಆಗ್ಯದ. ಇಂತ ಪರಿಸ್ಥಿತ್ಯಾಗ ನಾವ್‌ ಎಲ್ರುನ್ನೂ ಹೆಂಗ ನೋಡ್ಕಬೇಕು. ನಮ್‌ ಮಕ್ಳೆಲ್ಲ ಬೀದಿಗೆ ಬೀಳಾಕ ಈ ಹಾಳ್‌ ಕುಡಿತಾನೆ ಕಾರ್ಣರಿ’ ಎನ್ನುತ್ತ ಕಣ್ಣಾಲಿಗಳನ್ನು ಸೆರಗಂಚಲ್ಲಿ ಒರೆಸಿಕೊಂಡರು ಕಿತ್ತೂರಿನ ಕಸ್ತೂರವ್ವ.

‘ಚಳಿಗಾಲದಲ್ಲಿ ಹೊರಟಿದ್ದೀರಿ’ ಎನ್ನುವ ಪ್ರಶ್ನೆಗೆ, ‘ನಾವ್‌ ಹೋರಾಟ ಮಾಡ್ಬೇಕು ಅಂತ್ಲೆ ಬಂದ್‌ಬಿಟ್ಟವಿ. ಚಳಿ ಇದ್ರೂ ಇರ್ತೀವಿ, ಉಪಾಸ ಇದ್ರೂ ಇರ್ತೀವಿ. ನಮ್‌ ಗುರಿ ಒಂದ. ಅದು ಈಡೇರ್ಲಿ ಮುಂದಿಂದ್‌ ಅಮೇಲ್‌ ನೋಡ್ಕಳ್ಳಾದ್ರಿ’ ಎನ್ನುತ್ತಾ ಮೆರವಣಿಗೆಯ ಸಾಲಿಗೆ ನಿಂತರು ರಾಯಚೂರು ಜಿಲ್ಲೆಯ ಮಾನ್ವಿಯ 57 ವರ್ಷದ ಶಿವಮ್ಮ.

‘ನಾವ್‌ ಹೋದಲ್ಲೆಲ್ಲಾ ಯವಸ್ಥೆ ಚನಾಗ್‌ ಮಾಡ್ಯಾರ್ರಿ. ಎಲ್ಲ ಕಡೆನೂ ಮಲಿಕ್ಕೊಳಾಕೆ ಜಾಗ ಕೊಟ್ಟಾರ್ರಿ’ ಎಂದು ತೃಪ್ತಿ ಪಟ್ಟುಕೊಳ್ಳುತ್ತಿದ್ದರು. ಅವರು ಮಲಗುತ್ತಿದ್ದದ್ದು ಪಾದಯಾತ್ರೆಯ ನಡುವೆ ಸಿಗುವ ಹಳ್ಳಿಯ ಶಾಲೆಯ ಕೊಠಡಿಯಲ್ಲಿ, ಶೌಚಕ್ಕೆ ಹೋಗುತ್ತಿದ್ದುದು ಗದ್ದೆ ಬಯಲಿನಲ್ಲಿ!

‘ಒಂಬತ್ತು ದಿವ್ಸ ಆತು. ಗಾಡಿ ಹತ್ತಿಲ್ಲ. ಅದೆಷ್ಟನಾರ ಕಷ್ಟ ಆಗ್ಲಿ ಅಂಗ್ಡಿ (ಮದ್ಯದ ಅಂಗಡಿ) ಬಂದ್ ಮಾಡ್ಸೆ ನಾವ್‌ ಮನೆ ಸೇರೋದು. ದಾರಿಲಿ ಮದ್ಯದ ಅಂಗ್ಡಿ ಕಂಡ್ವು ಅಂದ್ರ ಬೆಂಕಿ ಹಚ್ಚ ಹೋಗದು. ಅಷ್ಟ್‌ ಹೆಣ್ಮಕ್ಳಿಗೆ ಬ್ಯಾಸ್ರಾಗೇತಿ’ ಎನ್ನುತ್ತ ಮುನ್ನುಗ್ಗಿದರು ಗದಗ ಜಿಲ್ಲೆಯ 78 ವರ್ಷದ ಯಲ್ಲವ್ವ. ಅವರ ಮಾತಿನಲ್ಲಿ ನೋವಿನ ಜೊತೆ ಆಕ್ರೋಶ ಇಣುಕಿತ್ತು.

ಬಳ್ಳಾರಿಯ ಕೊಟ್ರವ್ವನದು ಇನ್ನೊಂದು ಕಥೆ. ಮೂರು ಮಕ್ಕಳಿರುವ ಅವರಿಗೆ 8 ವರ್ಷದ ಹಿಂದೆ ಪತಿ ಕುಡಿತದ ದಾಸನಾಗಿ ಮನೆ ಬಿಟ್ಟು ಹೋದ. ಮಕ್ಕಳನ್ನು ಸಾಕುವ ಜವಾಬ್ದಾರಿ ಈಗ ಕೊಟ್ರವ್ವನದು.

ಚಿತ್ರದುರ್ಗದಿಂದ ಬೆಂಗಳೂರಿಗೆ ಜಾಥಾ

ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆಯು ‘ಬಾ ಬಾಪು’ 150ನೇ ವರ್ಷಾಚರಣೆ ಅಂಗವಾಗಿ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಮಹಿಳೆಯರ ನೇತೃತ್ವದಲ್ಲಿ ‘ಬೆಂಗಳೂರು ಚಲೋ’ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದೆ.

ಚಿತ್ರದುರ್ಗದಿಂದ ಜ.19ಕ್ಕೆ ಹೊರಟ ಪಾದಯಾತ್ರೆ 30ಕ್ಕೆ ಬೆಂಗಳೂರು ತಲುಪಲಿದೆ. ಸುಮಾರು 2 ಸಾವಿರ ಮಹಿಳೆಯರು ಜಾಥಾದಲ್ಲಿ ಭಾಗವಹಿಸಿದ್ದು, ಪ್ರತಿದಿನ 20 ಕಿ.ಮೀ ನಡೆಯುವರು.

ಬರಿಗಾಲಲ್ಲಿ ನಡೆದರು

ಪಾದಯಾತ್ರೆಗೆ ಬಂದಿರುವ ಅದೆಷ್ಟೋ ಹೆಣ್ಣುಮಕ್ಕಳಿಗೆ ಪಾದರಕ್ಷೆ ಖರೀದಿಸಲೂ ಹಣವಿಲ್ಲ. 70ರಿಂದ 80 ಮಂದಿ ಒಂದಷ್ಟು ದೂರ ಬರಿಗಾಲಲ್ಲೇ ನಡೆದಿದ್ದಾರೆ. ಕಲ್ಲಿನ ಚೂರು, ಮುಳ್ಳುಗಳ ನೋವು ಅವರಿಗೆ ತಾಕಲೇ ಇಲ್ಲ. ‘ಮನ್ಸಿನ ನೋವಿಗಿಂತ ಇದು ದೊಡ್ಡದಲ್ಲ ಬಿಡ್ರಿ’ ಎನ್ನುತ್ತಲೇ ಗಾಯವಾಗಿದ್ದ ಕಾಲುಗಳನ್ನು ಮುಚ್ಚಿಕೊಂಡರು ಬೀದರ್‌ ಜಿಲ್ಲೆ ಹುಮ್ನಾಬಾದ್‌ನ ಸುಮಿತ್ರವ್ವ. ಅವರು ಮದುವೆಯಾಗಿ 12 ವರ್ಷಕ್ಕೆ ಕುಡಿತ ಚಟದ ಗಂಡನನ್ನು ಕಳೆದುಕೊಂಡಿದ್ದಾರೆ.

ಬರಿಗಾಲಲ್ಲಿ ನಡೆದು ಬರುತ್ತಿದ್ದವರನ್ನು ಕಂಡ ಸಂಘ ಸಂಸ್ಥೆಗಳ ಸದಸ್ಯರು ಸುಮಾರು 800 ಜೋಡಿ ಪಾದರಕ್ಷೆಗಳನ್ನು ಹೆಣ್ಣುಮಕ್ಕಳಿಗೆ ನೀಡಿದ್ದಾರೆ.

ಮಕ್ಕಳನ್ನು ಹೊತ್ತು ಬಂದರು

ಪಾದಯಾತ್ರೆಯಲ್ಲಿ 1 ವರ್ಷದ ಮಗುವಿನಿಂದ 80 ವರ್ಷದ ವೃದ್ಧೆಯರು ಹೆಜ್ಜೆ ಹಾಕುತ್ತಿದ್ದಾರೆ. ಮಕ್ಕಳಿಗೆ ಚಳಿಯಾದಾಗ ಸೆರಗನ್ನೇ ಹೊದಿಸಿ ಬೆಚ್ಚಗೆ ಮಾಡುತ್ತಿದ್ದಾರೆ. ಬಿಸಿಲು ಹೆಚ್ಚಿದಾಗ ಹೆಗಲಿಗೆ ಮಗು ಹಾಕಿಕೊಂಡು ತಲೆಯ ಮೇಲೆ ಸೆರಗು ಮುಚ್ಚುತ್ತಿದ್ದಾರೆ. ಮಕ್ಕಳು ಹಸಿವು ಎಂದಾಗ ಬಾಟಲಿಯ ನೀರು, ಮುಂದಿನ ನಿಲ್ದಾಣ ಬಂದಾಗಲೇ ಊಟ ಎನ್ನುವ ಪರಿಸ್ಥಿತಿ.

30ಕ್ಕೆ ಮುತ್ತಿಗೆ

ಪುರುಷ ಪ್ರಧಾನ ಸಮಾಜ ಪಕ್ಷಾತೀತವಾಗಿ ಮಹಿಳೆಯರನ್ನು ತುಳಿಯುತ್ತಲೇ ಬಂದಿದೆ. ರಾಜಕಾರಣಿಗಳನ್ನು ಎಚ್ಚರಿಸಲು ಜ. 30ರಂದು ಅಹಿಂಸಾತ್ಮಕ ವಿಧಾನಸೌಧ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ ಎಂದು ಮದ್ಯ ನಿಷೇಧ ಆಂದೋಲನ ಕರ್ನಾಟಕದ ರಾಜ್ಯ ಸಂಚಾಲನಾ ಸಮಿತಿ ಸದಸ್ಯೆ ಸ್ವರ್ಣಾ ಭಟ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT