ಬುಧವಾರ, ಏಪ್ರಿಲ್ 21, 2021
33 °C

Live| ರಾಜೀನಾಮೆ ಅಂಗೀಕಾರವಾಗದೇ ಸದಸ್ಯತ್ವ ರದ್ದಾಗದು: ವಿಪ್‌ ಅತೃಪ್ತರಿಗೂ ಅನ್ವಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಶಾಸಕರ ರಾಜೀನಾಮೆಯ ಬೃಹನ್ನಾಟಕಕ್ಕೆ ಇಂದು ತೆರೆ ಬೀಳುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರ ಪತನವಾಗಿ, ಬಿಜೆಪಿ ಬಹುಮತ ಸಾಬೀತು ಪಡಿಸಿ ಹೊಸ ಸರ್ಕಾರ ರಚಿಸುವುದೊ ಅಥವಾ ಚುನಾವಣೆಯ ಕದ ತಟ್ಟುವರೋ ಎನ್ನುವ ಬೇಸರದ ಕುತೂಹಲ ಜನರಲ್ಲಿ ಮೂಡಿದೆ.

08.07 –ರಾಜೀನಾಮೆ ಅಂಗೀಕಾರ ಆಗದ ಹೊರತು ಸದಸ್ಯತ್ವ ಹೋಗುವುದಿಲ್ಲ. ಹೀಗಾಗಿ ನಾಳೆಯ ವಿಪ್ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿದ್ದಾರೆ. ಹೀಗಾಗಿ ಶಾಸಕರು ನಾಳೆ ತೆಗೆದುಕೊಳ್ಳುವ ನಿರ್ಧಾರ ಕುತೂಹಲಕ್ಕೆ ಕಾರಣವಾಗಿದೆ. 

07.51 – ಶುಕ್ರವಾರದ ಅಧಿವೇಶನಕ್ಕೆ ತಪ್ಪದೇ ಹಾಜರಾಗುವಂತೆ ಜೆಡಿಎಸ್‌ನ ಎಲ್ಲ ಶಾಸಕರಿಗೂ ವಿಪ್‌ ಜಾರಿ.  

07.35 – ‘ಇಲ್ಲಿರುವ ಕೆಲವರು ನಮ್ಮನ್ನು ಬೆದರಿಸುತ್ತಿದ್ದಾರೆ,’ ಎಂದು ಕೆಲ ಶಾಸಕರು ನನಗೆ ತಿಳಿಸಿದ್ದಾರೆ. ಹಾಗೇನಾದರೂ ಇದ್ದಿದ್ದರೆ ಅವರು ನನಗೆ ತಿಳಿಸಬಹುದಿತ್ತು. ಅವರಿಗೆ ನಾನೇ ರಕ್ಷಣೆ ಕೊಡಿಸುತ್ತಿದೆ. ಇದನ್ನೇ ಅವರಿಗೂ ಹೇಳಿದ್ದೇನೆ. ಅವರು ರಾಜೀನಾಮೆ ಕೊಟ್ಟು ಮೂರು ಮಂಗಳವಾರಕ್ಕೆ ಮೂರು ದಿನವಾಗಿತ್ತಷ್ಟೇ. ಅಷ್ಟಕ್ಕೇ ಭೂಕಂಪನವಾದಂತೆ ವರ್ತಿಸುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ವರ್ಷಗಳಗಟ್ಟಲೆ ರಾಜೀನಾಮೆ ಅಂಗೀಕರಿಸದೇ ಉಳಿಸಿಕೊಂಡ ಉದಾಹರಣೆಗಳು ಈ ದೇಶದಲ್ಲಿವೆ. 

07.29 – ರಾಜೀನಾಮೆಗಳನ್ನು ನಾನು ಪರಿಶೀಲನೆ ನಡೆಸಲೇಬೇಕಿದೆ. ಅದರ ನೈಜತೆ ಖಾತ್ರಿಯಾದ ನಂತರವೇ ರಾಜೀನಾಮೆ ಇತ್ಯರ್ಥಪಡಿಸುತ್ತೇನೆ. 

07.13 – ಶಾಸಕರ ರಾಜೀನಾಮೆ ವಿಚಾರದಲ್ಲಿ ನಾನು ಕಾನೂನಿನ ಪರಿಮಿತಿಯನ್ನು ಮೀರಲಾರೆ. ಎಲ್ಲರ ವಾದವನ್ನೂ ಆಲಿಸಿದ್ದೇನೆ. ಅದನ್ನು ವಿಡಿಯೋ ಚಿತ್ರಿಕರಣ ಮಾಡಿದ್ದೇನೆ. ಎಲ್ಲವನ್ನೂ ನಾಳೆ ನ್ಯಾಯಾಲಯಕ್ಕೆ ಸಲ್ಲಿಸುತ್ತೇನೆ– ರಮೇಶ್‌ ಕುಮಾರ್‌

07.13 – ಶಾಸಕರ ರಾಜೀನಾಮೆ ವಿಚಾರದಲ್ಲಿ ನಾನು ವಿಳಂಬ ಮಾಡುತ್ತಿದ್ದೇನೆ ಎಂಬ ಸಂಗತಿ ಕೇಳಿ ನೋವಾಗಿದೆ– ಸ್ಪೀಕರ್‌ ರಮೇಶ್‌ ಕುಮಾರ್‌  

– ರಾಜೀನಾಮೆ ಹೀಗೇ ಇರಬೇಕು ಎಂದು ಕಾನೂನಿದೆ. ಆದರೆ, ಕೆಲವು ಶಾಸಕರ ರಾಜೀನಾಮೆ ಕ್ರಮ ಬದ್ಧವಾಗಿರಲಿಲ್ಲ. ಇದನ್ನು ತಿಳಿಸಿದ್ದಕ್ಕೆ ನಾನು ವಿಳಂಬ ಮಾಡುತ್ತಿದ್ದೇನೆ ಎಂಬುದು ಸರಿಯಲ್ಲ. 

– ರಾಜೀನಾಮೆಗೆ ಇರುವ ಕಾನೂನಿನ ಪರಿಮಿತಿಗಳನ್ನು, ಸಂವಿಧಾನದ ಉಲ್ಲೇಖ, ಇತರ ಪ್ರಕರಣಗಳಲ್ಲಿನ ಮಹತ್ವದ ಆದೇಶಗಳನ್ನು ಉಲ್ಲೇಖಿಸಿದ ಸ್ಪೀಕರ್‌ ರಮೇಶ್‌ ಕುಮಾರ್‌. 

– ನನ್ನನ್ನು ಭೇಟಿಯಾಗಲು ನನ್ನದೇ ಶಾಸಕರು ಸುಪ್ರೀಂ ಕೋರ್ಟ್‌ಗೆ ಹೋದರು. ಭೇಟಿಗೆ ಅವಕಾಶ ಕೇಳಿದ್ದರೆ ನಾನು ಇಲ್ಲ ಎನ್ನುತ್ತಿರಲಿಲ್ಲ. ಸುಪ್ರೀಂ ಕೋರ್ಟ್‌ ಕೂಡ ಈ ಸಂಗತಿಯನ್ನು ಗಮನಸಿಬಹುದಿತ್ತು. ಅವರ ಪಾಡಿಗೆ ಅವರು ಹೋಗಿ ಮುಂಬೈ ಅಲ್ಲಿ ಕೂತು, ನಾನು ವಿಳಂಬ ಮಾಡುತ್ತಿದ್ದೇನೆ ಎಂದರೆ, ಜನ ಗಮನಿಸಲಾರರೇ?  

07.10– ಅತೃಪ್ತರ ರಾಜೀನಾಮೆ ನಂತರ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ರಾಷ್ಟ್ರೀಯ ಸುದ್ದಿ ವಾಹಿನಿ ಅದರ ನೇರಪ್ರಸಾರ ಮಾಡುತ್ತಿದ್ದು, ಈ ಕೆಳಗಿನ ಟ್ವೀಟ್‌ ಕ್ಲಿಕ್‌ ಮಾಡುವ ಮೂಲಕ ವೀಕ್ಷಿಸಬಹುದು. 

06.30 – ವಿಧಾನಸಭೆ ಅಧಿವೇಶ ಶುಕ್ರವಾರದಿಂದ ಆರಂಭವಾಗುತ್ತಿರುವ ಕುರಿತು ವಿಧಾನಸಭೆ ಕಾರ್ಯದರ್ಶಿ ಪತ್ರ

ವಿಧಾನಸೌಧ ಸ್ಪೀಕರ್‌ ಕಚೇರಿಗೆ ಓಡೋಡಿ ಬಂದ ಶಾಸಕ ಬೈರತಿ ಬಸವರಾಜು 

06.20 – ಹಣಕಾಸು ವಿದೇಯಕದ ಅಂಗೀಕಾರಕ್ಕಾಗಿ ಶುಕ್ರವಾರ ಕಾಂಗ್ರೆಸ್‌ನ ಎಲ್ಲ ಶಾಸಕರೂ ವಿಧಾನಸಭೆ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಕಾಂಗ್ರೆಸ್‌ ಮುಖ್ಯಸಚೇತಕ ಗಣೇಶ್‌ ಹುಕ್ಕೇರಿ ಅವರು ವಿಪ್‌ ಜಾರಿ ಮಾಡಿದ್ದಾರೆ.  

06.10– ಸಂಜೆ 7 ಗಂಟೆಗೆ ಸ್ಪೀಕರ್‌ ಕೆಆರ್‌ ರಮೇಶ್‌ ಕುಮಾರ್‌ ಅವರು ಪತ್ರಿಕಾಗೋಷ್ಠಿ ಕರೆದಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. 

06.03 – ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ 10 ಮಂದಿ ಶಾಸಕರ ತಂಡ ವಿಧಾನಸೌಧ ತಲುಪಿದೆ. ಮೊದಲಿಗೆ ಕೆ.ಆರ್‌ ಪುರ ಶಾಸಕ ಬೈರತಿ ಬಸವರಾಜು ಅವರು ಸ್ಪೀಕರ್‌ ಕಚೇರಿ ತಲುಪಿದರು.  

05.40 – ಮುಂಬೈನಿಂದ ಬೆಂಗಳೂರಿನ ಎಚ್‌ಎಎಲ್‌ಗೆ ವಿಶೇಷ ವಿಮಾನದಲ್ಲಿ ಬಂದಿಳಿದ ಭಿನ್ನಮತೀಯ ಶಾಸಕರು, ಜೀರೋ ಟ್ರಾಫಿಕ್‌ ಮೂಲಕ ಸ್ಪೀಕರ್‌ ಕಚೇರಿಯತ್ತ ಹೊರಟಿದ್ದಾರೆ. ಪೊಲೀಸರ ಭದ್ರತೆಯ ನಡುವೆ ಶಾಸಕರನ್ನು ಬಸ್‌ನಲ್ಲಿ ಕರೆತರಲಾಗುತ್ತಿದೆ. 

05.40 –ರಾಜೀನಾಮೆ ಸಲ್ಲಿಸಿರುವ ಮೂವರು ಜೆಡಿಎಸ್‌ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ನಿನ್ನೆಯೇ ದೂರು ದಾಖಲಿಸಿದ್ದೇವೆ. ಇಂದು ಅದಕ್ಕೆ ಪೂರಕವಾದ ದಾಖಲೆಗಳನ್ನು ಸ್ಪೀಕರ್‌ಗೆ ಸಲ್ಲಿಸಿದ್ದೇವೆ. – ರಮೇಶ್‌ ಬಾಬು, ಜೆಡಿಎಸ್‌ ಪರ ವಕೀಲ ಮತ್ತು ವಕ್ತಾರ  

05.30 –ಕಾಂಗ್ರೆಸ್ ನಾಯಕರು ಸ್ಪೀಕರ್ ಕಚೇರಿಯೊಳಗೆ ಇದ್ದಾರೆ. ಅವರನ್ನು ಹೊರಗೆ ಕಳುಹಿಸಲಿ, ಇಲ್ಲವೇ ಬಿಜೆಪಿಯವರನ್ನೂ ಸ್ಪೀಕರ್ ಕಚೇರಿಗೆ ಬಿಡಲಿ-ಬಿಜೆಪಿ ಸಭೆಯ ನಡುವೆಯೇ ಹೊರಬಂದು ಆರ್. ಅಶೋಕ್ ಒತ್ತಾಯಿಸಿದರು. ಅಶೋಕ್‌ ಸೂಚನೆ ಮೇರೆಗೆ ಶಾಸಕ ರವಿ ಸುಬ್ರಹ್ಮಣ್ಯ ಮತ್ತು ತೇಜಸ್ವಿನಿ ರಮೇಶ್ ಮೊದಲಾದವರು ಸ್ಪೀಕರ್ ಕಚೇರಿಯತ್ತ ನುಗ್ಗಿದರು.

05.20 – ಬಿಜೆಪಿ ಶಾಸಕರಿಂದ ಸಭಾಧ್ಯಕ್ಷರ ಕಚೇರಿಗೆ ನುಗ್ಗಲು ಯತ್ನ. ಗೇಟ್ ನಲ್ಲೇ ತಡೆದ ಪೊಲೀಸರು.

05.00 – ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಬಿಜೆಯ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ.  

04.20 – ಇಂದು ಸಂಜೆ 6ರ ಒಳಗೆ ಅತೃಪ್ತ ಶಾಸಕರು ಸ್ಪೀಕರ್‌ ಕಚೇರಿ ಎದುರು ಹಾಜರಾಗಬೇಕು, ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂಬ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ವಿಧಾನಸೌಧ ಮತ್ತು ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಸ್ವತಃ ಸಿಎಂ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ ಶಿವಕುಮಾರ್‌ ಅವರು ಭದ್ರತೆ ಪರಿಶೀಲಿಸಿದರು.

04.17 – ಈಗಾಗಲೇ ರಾಜೀನಾಮೆ ಸಲ್ಲಿಸಿರುವ ಶಿವಾಜಿನಗರ ಶಾಸಕ ರೋಷನ್‌ ಬೇಗ್‌ ಅವರು ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ವಿಧಾನಸೌಧಕ್ಕೆ ತೆರಳಿ ಸ್ಪೀಕರ್‌ ಎದುರು ಹಾಜರಾದರು.

04.00 – ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ತಂತ್ರ ರೂಪಿಸಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಯಿತು.

03.40 – ರಾಜಕೀಯ ಅನಿಶ್ಚಿತತೆಯ ನಡುವೆಯೇ ಸರ್ಕಾರ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ.  ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸುವ ಸಂಬಂಧ ಸಾಧಕ ಬಾಧಕ ಚರ್ಚಿಸಲು ಆಯೋಗ ರಚನೆಗೆ ಸಚಿವ ಸಂಪುಟದ ಮಹತ್ವದ ನಿರ್ಧಾರ.

ಜಿಂದಾಲ್‌ಗೆ ಜಮೀನು ಮಾರಾಟ ಮಾಡುವ  ಸಂಬಂಧ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಂಪುಟ ಉಪಸಮಿತಿ ಆ ಬಗ್ಗೆ ಶಿಫಾರಸು ಮಾಡಿಲ್ಲ. ಸಮಿತಿ ಮಾಹಿತಿ ಪಡೆಯುವ ಕೆಲಸ ಆರಂಭಿಸಿದೆ. ಜಿಂದಾಲ್ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಕೃಷ್ಣಬೈರೇಗೌಡ ತಿಳಿಸಿದ್ದಾರೆ. 

03.15 – ಬಿಜೆಪಿ ಬಳಿ ಸಂಖ್ಯೆ ಇದ್ದರೆ ಸರ್ಕಾರ ಅವಿಶ್ವಾಸ ಮಂಡಿಸಲಿ. ಅದನ್ನು ಎದುರಿಸಲು ಸಿದ್ಧ ಎಂದು ಸಚಿವ ಕೃಷ್ಣಬೈರೇಗೌಡ ಅವರು ಕೇಸರಿ ಪಾಳಯಕ್ಕೆ ಸವಾಲೊಡ್ಡಿದ್ದಾರೆ

02.45 – ಹತ್ತು ಮಂದಿ ಶಾಸಕರ ರಾಜೀನಾಮೆಯನ್ನು ಇತ್ಯರ್ಥ ಮಾಡುವಂತೆ ನ್ಯಾಯಾಲಯ ಸ್ಪೀಕರ್‌ಗೆ ನಿರ್ದೇಶನ ನೀಡುವಂತಿಲ್ಲ ಎಂದು ಸ್ಪೀಕರ್‌ ಪರವಾಗಿ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿದ್ದಾರೆ. 

ಶಾಸಕರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆಯೇ ಇಲ್ಲವೇ ಎಂಬುದನ್ನು ಮಧ್ಯರಾತ್ರಿ 12ರ ಒಳಗಾಗಿ ಇತ್ಯರ್ಥ ಮಾಡಲು ಸಾಧ್ಯವಿಲ್ಲ. ವಿಚಾರಣೆ ಬಳಿಕವೇ ರಾಜೀನಾಮೆ ಅಂಗೀಕರಿಸಬೇಕು. ಜತೆಗೇ, ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಕೆಯಾಗಿದ್ದು, ಮೊದಲು ಅದನ್ನು ವಿಚಾರಣೆ ಮಾಡಬೇಕು ಎಂದು ಸ್ಪೀಕರ್‌ ಕೋರ್ಟ್‌ಗೆ ತಿಳಿಸಿದ್ದಾರೆ.

ಶಾಸಕರ ರಾಜೀನಾಮೆಯನ್ನು ಇತ್ಯರ್ಥ ಮಾಡಲು ಹೆಚ್ಚಿನ ಸಮಯವಕಾಶದ ಅಗತ್ಯವಿದೆ ಎಂದು ಸ್ಪೀಕರ್‌ ಗುರುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಆದರೆ, ಸುಪ್ರೀಂ ಕೋರ್ಟ್‌ ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿತು. ‘ನಾಳೆ ಬೆಳಗ್ಗೆ ಕೋರ್ಟ್‌ ಈ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ಮಾಡಲಿದೆ,’ ಎಂದು ಹೇಳಿತು. 

ಜತೆಗೇ, ನ್ಯಾಯಾಲಯ ಈಗಾಗಲೇ ಆದೇಶ ಮಾಡಿದೆ. ಮುಂದೆ ಏನು ಮಾಡಬೇಕು ಎಂಬುದು ಸ್ಪೀಕರ್‌ಗೆ ಬಿಟ್ಟ ವಿಚಾರ. ಈ ಅರ್ಜಿಯನ್ನು ನಾಳೆ ವಿಚಾರಣೆ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿತು.  

02.30 – ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಸಂಜೆ ಸ್ಪೀಕರ್‌ ರಮೇಶ್‌ ಕುಮಾರ್‌ ಅವರನ್ನು ಭೇಟಿ ಮಾಡಲು ಬರುತ್ತಿರುವ ಹಿನ್ನಲೆಯಲ್ಲಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಅವರು ವಿಧಾನಸೌಧವನ್ನು ಪರಿಶೀಲಿಸಿದರು.

 

02.10 – 'ಸಂಜೆ 6ರೊಳಗೆ ರಾಜೀನಾಮೆ ಅರ್ಜಿ ಇತ್ಯರ್ಥ ಸಾಧ್ಯವಿಲ್ಲ. ಹಾಗಾಗಿ ವಿಚಾರಣೆ ನಡೆಸಲು ಮಧ್ಯರಾತ್ರಿ 12ರವರೆಗೆ ಕಾಲಾವಕಾಶ ನೀಡಬೇಕು’ ಎಂದು ಸ್ಪೀಕರ್‌ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ತುರ್ತು ಅರ್ಜಿ ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿ ಸುಪ್ರೀಂಕೋರ್ಟ್‌ ನಾಳೆಗೆ ವಿಚಾರಣೆಯನ್ನು ಮುಂದೂಡಿದೆ.

‘ಶಾಸಕರು ಸ್ವ–ಇಚ್ಚೆಯಿಂದ ಅರ್ಜಿ ನೀಡಿದ್ದಾರೆಯೇ ಎನ್ನುವುದನ್ನು ಪರಾಮರ್ಶಿಸಬೇಕಿದೆ. ಅಲ್ಲದೆ, ಅನರ್ಹತೆಯ ಅರ್ಜಿ ಸಹ ನನಗೆ ಬಂದಿದೆ ಹಾಗಾಗಿ ಸಂಜೆ 6 ಗಂಟೆಯೊಳಗೆ ವಿಚಾರಣೆ ಸಾಧ್ಯವಿಲ್ಲ’ ಎಂದು ಸ್ಪೀಕರ್‌ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಸ್ಪೀಕರ್‌ ಪರ ಅಭಿಷೇಕ್ ಮನು ಸಿಂಘ್ವಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಲಿದ್ದಾರೆ.

01.50 – ‘2.45ಗೆ ವಿಮಾನದಿಂದ ಹೊರಡುತ್ತೇವೆ. 5 ಗಂಟೆ ಒಳಗೆ ಸ್ಪೀಕರ್‌ ಭೇಟಿಯಾಗುತ್ತೇವೆ. ಅವರು ಹೇಳಿದ ರೀತಿಯಲ್ಲಿಯೇ ರಾಜೀನಾಮೆಯನ್ನು ಮತ್ತೊಮ್ಮೆ ಕೊಡೊಣಾ. ಮಾಡುವಂತೆ ಪರಿಸ್ಥಿತಿ ಆ ರೀತಿ ಆಗಿದೆ. ನಿರ್ಧಾರ  ಮನಸ್ಸಿಗೆ ಘಾಸಿಯಾಗಿ ಈ ರೀತಿ ಆಗುತ್ತಿದೆ. ಇವತ್ತಿಗೆ ಎಲ್ಲವೂ ಮುಗಿಯಬೇಕು’ ಎಂದು ಅತೃಪ್ತ ಶಾಸಕ ಎಚ್‌. ವಿಶ್ವನಾಥ್ ತಿಳಿಸಿದರು.

'ಎಚ್‌.ಡಿ.ದೇವೇಗೌಡರು ಹಾಗೂ ನಮ್ಮ ಮುಖ್ಯಮಂತ್ರಿ ಬಗ್ಗೆ ಪ್ರೀತಿ, ನಂಬಿಕೆ, ವಿಶ್ವಾಸವಿದೆ. ಆದರೆ, ಕೆಲವರು ಅವರ ದಿಕ್ಕು ತಪ್ಪಿಸಿದರು. ನಾವು ಸ್ವಾರ್ಥಿಗಳಾಗಿ ಈ ನಿರ್ಧಾರ ತೆಗೆದುಕೊಂಡಿಲ್ಲ. ಮುಖ್ಯಮಂತ್ರಿ ಪಕ್ಕ ನಿಂತು ಜನರು ಸಮ್ಮಿಶ್ರ ಸರ್ಕಾರಕ್ಕೆ ನೀಡಿದ ಸವಾಲನ್ನು ಎದುರಿಸಬೇಕು ಎಂದೇ ನಾನು ಅಂದುಕೊಂಡಿದ್ದೆ. ನನಗೇನು ಮಂತ್ರಿ ಸ್ಥಾನ ಬೇಕಿರಲಿಲ್ಲ. ಆದರೆ, ಹಳ್ಳಿ ಹಕ್ಕಿಯ ಮೂಕರೋದನೆ ಅವರಿಗೆ ತಿಳಿಯಲೇ ಇಲ್ಲ’ ಎಂದರು.

 

01.40 – ‘ಈಗಾಗಲೇ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ. ರಾಜೀನಾಮೆ ಕೊಟ್ಟಿರುವ ಶಾಸಕರು 6ಗಂಟೆ ಒಳಗೆ ಸ್ಪೀಕರ್‌ ಭೇಟಿಯಾಗಿ ತಮ್ಮ ಅನಿಸಿಕೆಗಳನ್ನು ಹೇಳಬೇಕು. ಯಾವ ರೀತಿಯಾಗಿ ಅತೃಪ್ತ ಶಾಸಕರು ಸ್ಪೀಕರ್ ಅವರನ್ನು  ಸಮಾಧಾನಪಡಿಸುತ್ತಾರೆ ಎನ್ನುವುದನ್ನು ನೋಡಬೇಕು. ನಂತರ ಸ್ಪೀಕರ್‌ ಕಾನೂನಿನ ಪ್ರಕಾರ ಕ್ರಮಕೈಗೊಳ್ಳುತ್ತಾರೆ’ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

 

01.40 –  ‘ನಾವು ರಾಜೀನಾಮೆ ನೀಡಿರುವುದರಲ್ಲಿ ಬಿಜೆಪಿ ಅವರ ಪಾತ್ರ ಏನೂ ಇಲ್ಲ.  ನಮಗೆ ರಕ್ಷಣೆ ನೀಡಿ ಎಂದು ಇಲ್ಲಿನ ಪೊಲೀಸರಿಗೆ ಕೇಳಿದ್ದೇವೆ. ಅವರು ರಕ್ಷಣೆ ನೀಡಿದರು. ನಾವಿನ್ನೂ ಕಾಂಗ್ರೆಸ್‌ ಪಕ್ಷದಲ್ಲಿಯೇ ಇದ್ದೇವೆ’ ಎಂದು ಅತೃಪ್ತ ಶಾಸಕ ಭೈರತಿ ಬಸವರಾಜ್‌ ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

 

01.22 – ‘ನಮ್ಮ ನಡವಳಿಕೆಯಿಂದ ಸಿದ್ದರಾಮಯ್ಯ, ಖರ್ಗೆ ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ. ಸುಪ್ರೀಂ ಕೋರ್ಟ್ ಆದೇಶದ‌ ಪ್ರಕಾರ ನಾವು ಬೆಂಗಳೂರಿಗೆ ಹೋಗಿ ಸಭಾಧ್ಯಕ್ಷರನ್ನು ಭೇಟಿಯಾಗಿ ಮತ್ತೊಮ್ಮೆ ರಾಜೀನಾಮೆ‌ ಕೊಡುತ್ತೇವೆ’: ಮುಂಬೈನಲ್ಲಿ ರಮೇಶ್ ಜಾರಕಿಹೋಳಿ ಹೇಳಿಕೆ.

 

01.20 – ಬೆಂಗಳೂರಿಗೆ ಹೊರಟ ಅತೃಪ್ತ ಶಾಸಕರು. ಮುಂಬಯಿಂದ ವಿಶೇಷ ವಿಮಾನದಲ್ಲಿ ಪ್ರಯಾಣ. ಸಂಜೆ‌ ನಾಲ್ಕು ಗಂಟೆಗೆ ಆಗಮನ ನಿರೀಕ್ಷೆ.

 

01.00 – ‘ಅತೃಪ್ತ ಶಾಸಕರ ರಾಜೀನಾಮೆಗೂ ನಮಗೂ ಯಾವ ಸಂಬಂಧವಿಲ್ಲ. ನಾನು ಯಾವ ಶಾಸಕರನ್ನು ಭೇಟಿಯಾಗಿಲ್ಲ. ಮುಂಬೈನಲ್ಲಿ ಪಕ್ಷೇತರ ಶಾಸಕರ ಜತೆ ಮಾತನಾಡಿದ್ದೇವೆ. ಉಳಿದಂತೆ ಯಾವ ಶಾಸಕರ ಜತೆಯೂ ಮಾತುಕತೆ ನಡೆಸಿಲ್ಲ’: ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಆರ.ಅಶೋಕ್ ಹೇಳಿಕೆ. 

 

12.15 –  ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆ. ಮುಂಬೈನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬರಲಿರುವ ಎಲ್ಲ ಅತೃಪ್ತ ಶಾಸಕರು. ತುರ್ತುಸಭೆ ನಡೆಸಿದ ಅತೃಪ್ತ ಶಾಸಕರು. 

‘ಸುಪ್ರೀಂ ಕೋರ್ಟ್ ಆದೇಶ ಸ್ವಾಗತಾರ್ಹ. ನಾವೆಲ್ಲರೂ ಬೆಂಗಳೂರಿಗೆ ಬರುತ್ತಿದ್ದು, ಸ್ಪೀಕರ್ ಅವರನ್ನು ಭೇಟಿಯಾಗಲಿದ್ದೇವೆ’ ಎಂದು ಎಚ್.ವಿಶ್ವನಾಥ್ ತಿಳಿಸಿದರು.

 

12.00 – ವಿಧಾನಸೌಧದಲ್ಲಿ ಬುಧವಾರ ನಡೆದ ಶಾಸಕರ ಗಲಭೆ ನಂತರ 144 ಸೆಕ್ಷನ್‌ ಜಾರಿ ಮಾಡಲಾಗಿದ್ದು, ಗುರುವಾರವೂ ಸಹ ಪೊಲೀಸರ ಸರ್ಪಗಾವಲು ಇತ್ತು.

 

10.40 – ಸಂಜೆಯೊಳಗೆ ಖುದ್ದಾಗಿ ಸಭಾಧ್ಯಕ್ಷರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವಂತೆ ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ರಾಜೀನಾಮೆ ಸ್ವೀಕರಿಸದ ಕುರಿತು 10 ಅತೃಪ್ತ ಶಾಸಕರು ಸಲ್ಲಿಸಿದ್ದ ರಿಟ್ ಅರ್ಜಿ‌ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಸ್ಪೀಕರ್ ಭೇಟಿ ವೇಳೆ ಸೂಕ್ತ ಭದ್ರತೆ ‌ಒದಗಿಸಲು ತಿಳಿಸಿದೆ. ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಮುಕುಲ್‌ ರೊಹಟ್ಗಿ, ‘ಈಗಾಗಲೇ 15 ಶಾಸಕರು ರಾಜೀನಾಮೆ ನೀಡಿದ್ದಾರೆ. ಆದರೂ ಸ್ಪೀಕರ್ ರಾಜೀನಾಮೆ ಸ್ವೀಕರಿಸಿಲ್ಲ’ ಎಂದು ವಾದ ಮಂಡಿಸಿದರು.

‘ಮುಂಬೈನಿಂದ ಬೆಂಗಳೂರಿಗೆ ತೆರಳಿ ಖುದ್ದಾಗಿ ಭೇಟಿ ಮಾಡಿದ ‌ನಂತರ, ಸ್ಪೀಕರ್ ಎಲ್ಲ ಶಾಕಸರ ವಿಚಾರಣೆ ನಡೆಸಲಿ’ ಎಂದು ಪೀಠ ಹೇಳಿದೆ.

 

10.40 – ಕುಮಾರಕೃಪದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ‘ನಾನ್ಯಾಕೆ ರಾಜೀನಾಮೆ ನೀಡಲಿ. ಅದರ ಅಗತ್ಯವೇನಿದೆ’ ಎಂದು ಪ್ರಶ್ನಿಸಿದರು.

‘2009–10ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 8 ಸಚಿವರು ಸೇರಿ 18 ಶಾಸಕರು ರಾಜೀನಾಮೆ ನೀಡಿದ್ದರು. ಆಗ ಏನಾಗಿತ್ತು?. ಅವರು ರಾಜೀನಾಮೆ ನೀಡಿದ್ದರಾ?’ ಎಂದರು.

 

10.30 – ಕುಮಾರಕೃಪದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಮಹತ್ವ ಸಭೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಗುಲಾಂ ನಭಿ ಆಜಾದ್‌, ಸಾ.ರಾ. ಮಹೇಶ್‌, ಜಿ. ಪರಮೇಶ್ವರ್‌, ಕೆ.ಸಿ.ವೇಣುಗೋಪಾಲ್‌, ದಿನೇಶ್‌ ಗುಂಡುರಾವ್‌ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಭಾಗಿಯಾಗಿದ್ದರು. ಒಂದು ತಾಸಿಗೂ ಹೆಚ್ಚು ಸಮಯ ಸಭೆ ನಡೆಯುತ್ತಿದೆ. ‘ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಎಲ್ಲಾ ರೀತಿ ಸಾಧ್ಯತೆಗಳನ್ನು ಸಭೆಯಲ್ಲಿ ಚರ್ಚಿಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ಮುಂಬೈನಿಂದ ಬುಧವಾರ ಮಧ್ಯರಾ‌ತ್ರಿ ಬಂದೆ. ‍ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಲ್ಲಿನ ಸರ್ಕಾರ ನಡೆದುಕೊಂಡ ರೀತಿ ಅಮಾನವೀಯ. ಅಧಿಕೃತ ಪ್ರವಾಸ ಹೋಗಿದ್ದೇನೆ. ಅದನ್ನು ಅಲ್ಲಿನ ಸರ್ಕಾರಕ್ಕೂ ತಿಳಿಸಿದ್ದೆ. ಹೀಗಿದ್ದೂ ಅವರು ನನಗೆ ಹೋಟೆಲ್ ಪ್ರವೇಶಿಸದಂತೆ ತಡೆದರು. ಈ ಬಗ್ಗೆ ನಾನು ಹೋಟೆಲ್‌ ವಿರುದ್ಧ ಕಾನೂನಿನ ಪ್ರಕಾರ ಹೋರಾಟ ನಡೆಸುತ್ತೇನೆ’ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

 

10.10 – ‘ಅತೃಪ್ತ ಶಾಸಕರು ನನ್ನನ್ನು ವಿಧಾನಸೌಧದಲ್ಲಿಯೇ ಭೇಟಿಯಾಗಲಿ. ಗುಟ್ಟಾಗಿ ಮಾತನಾಡಲು ಅವರೇನು ವ್ಯಾಪಾರ ಮಾತನಾಡಲು ಬರುತ್ತಿಲ್ಲವಲ್ಲ. ಸುರಕ್ಷಿತವಾಗಿ ಬರಲು ಅವರಿಗೆ ಬೇಕಾಗಿರುವ ವ್ಯವಸ್ಥೆ ಮಾಡಿಕೊಡುತ್ತೇನೆ’ ಎಂದು ಸ್ಪೀಕರ್‌ ರಮೇಶ್‌ ಕುಮಾರ್ ತಿಳಿಸಿದರು.

‘ಯಾರು ಏನೇ ಹೇಳಿದರೂ ನಾನು ಕಾನೂನು ಹಾಗೂ ನಿಯಮಾವಳಿಗಳನ್ನು ಬಿಟ್ಟು ಒಂದು ಇಂಚು ಪಕ್ಕಕ್ಕೆ ಜರುಗುವುದಿಲ್ಲ. ಸುಪ್ರೀಂಕೋರ್ಟ್‌ ತೀರ್ಪಿಗಾಗಿ ನಾನೂ ಕಾಯುತ್ತಿದ್ದೇನೆ. ಅಧಿವೇಶನ ಮುಂದೂಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇಂದು ಅಧಿವೇಶನ ನಡೆಯುತ್ತದೆ’ ಎಂದು ಸ್ಪಷ್ಟಪಡಿಸಿದರು.

 

10.00 – 'ರಮೇಶ್‌ ಕುಮಾರ್‌ ಅವರು ಸ್ಪೀಕರ್‌ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಶಾಸಕರ ಮೇಲಿನ ಹಲ್ಲೆಯನ್ನು ಜನ ನೋಡಿದ್ದಾರೆ. ಆದರೆ, ಈ ಬಗ್ಗೆ ಅವರು ಯಾವುದೇ ಕ್ರಮಕೈಗೊಂಡಿಲ್ಲ. ಸ್ಪೀಕರ್‌ ಪಕ್ಷದ ಕಾರ್ಯಕರ್ತರ ತರ ನಡೆದುಕೊಳ್ಳುತ್ತಿದ್ದಾರೆ' ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಆರೋಪಿಸಿದ್ದಾರೆ.

 

9.30 – ರಾಜೀನಾಮೆ ನೀಡಿದ ಶಾಸಕರು ಸಿದ್ದರಾಮಯ್ಯಗೆ ಆಪ್ತರು ಎಂಬ ಆರೋಪಕ್ಕೆ ಟ್ವೀಟ್‌ನಲ್ಲಿ ಉತ್ತರಿಸಿದ ಅವರು ಎಲ್ಲಾ ಶಾಸಕರು ನನಗೆ ಆಪ್ತರೇ ಎಂದು ಹೇಳಿದ್ದಾರೆ.

 

9.10 – ಬೆಂಗಳೂರಿನ ಲಕ್ಕಸಂದ್ರದಲ್ಲಿರುವ ಕಾಂಗ್ರೆಸ್‌ ಮುಖಂಡ ರಾಮಲಿಂಗಾ ರೆಡ್ಡಿ ಅವರ ಮನೆಗೆ ಬಿಜೆಪಿ ಕಾರ್ಪೊರೇಟರ್‌ ಕಟ್ಟೆ ಸತ್ಯನಾರಾಯಣ ಭೇಟಿ ನೀಡಿದರು.

 

9.00 – ಮಧ್ಯರಾತ್ರಿ ಬೆಂಗಳೂರಿಗೆ ಬಂದ ಸೋಮಶೇಖರ್‌ ಭೇಟಿ ಡಿ.ಕೆ.ಶಿವಕುಮಾರ್‌ ಯತ್ನಿಸಿದ್ದು, ಅವರ ಮನೆ ಬಳಿ 3 ತಾಸು ಕಾದು ವಾಪಾಸ್‌ ಹೋದರು.

 

8.30 – ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ತಿರುಪತಿಗೆ ಪ್ರಯಾಣ ಬೆಳಸಿದ್ದಾರೆ. 

 

8.00 – 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಸಲು ಮೈತ್ರಿ ಪಕ್ಷದ ನಾಯಕರು ನಿರ್ಧರಿಸಿದ್ದಾರೆ.

 

7.50 – ಬುಧವಾರ ತಾಜ್‌ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ತಂಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಾವಲು ಪಡೆ ವಾಹನವಿಲ್ಲದೆ ಬೆಳಿಗ್ಗೆ ತಮ್ಮ ನಿವಾಸಕ್ಕೆ ತೆರಳಿದ್ದಾರೆ.

 

7.00 –ರಾಜೀನಾಮೆ ನೀಡಿ ಮುಂಬೈಗೆ ತೆರೆಳಿದ್ದ ಯಶವಂತಪುರ ಕಾಂಗ್ರೆಸ್ ಶಾಸಕ ಎಸ್‌.ಟಿ.ಸೋಮಶೇಖರ್‌ ಗುರುವಾರ ಬೆಳಗ್ಗಿನ ಜಾವ 1ಗಂಟೆಗೆ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಬರುತ್ತಿದ್ದಂತೆ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ವಿಮಾನ ನಿಲ್ದಾಣದಲ್ಲಿ  ಕಾಣಿಸಿಕೊಂಡರು. ಮಾಧ್ಯಮದವರನ್ನು ಕಂಡು ಬಿಜೆಪಿ ಶಾಸಕರು ಅಂತರ ಕಾಯ್ದುಕೊಂಡರು.

‘ನಾನು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ. ನಾನಿನ್ನೂ ಕಾಂಗ್ರೇಸಿಗ’ ಎಂದು ಅವರು ಪ್ರತಿಕ್ರಿಯೆ ನೀಡಿದರು. ಕರ್ನಾಟಕ ವಸತಿ ಮಹಾಮಂಡಳಿ ಚುನಾವಣೆ ಕಾರಣ ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಬಂದಿರುವುದಾಗಿ ಮೂಲಗಳು ತಿಳಿಸಿವೆ. 

 

6.50 – ರಾಜೀನಾಮೆ ಅಂಗೀಕರಿಸದ ಸ್ಪೀಕರ್‌ ರಮೇಶ್‌ ಕುಮಾರ್‌ ವಿರುದ್ಧ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಮುಖ್ಯನ್ಯಾಯಮೂರ್ತಿ ರಂಜನ್‌ ಗೋಗೊಯಿ ನೇತೃತ್ವದ ಪೀಠ ಇದರ ವಿಚಾರಣೆ ನಡೆಸಲಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಿಯಾಂಕ್‌ ಖರ್ಗೆ, ಸ್ಪೀಕರ್‌ ನಿಯಮದ ಪ್ರಕರ ನಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

 

6.30 – ವಿಧಾನಸೌಧದಲ್ಲಿ ಶಾಸಕ ಸುಧಾಕರ್‌ ಅವರನ್ನು ಕಾಂಗ್ರೆಸ್‌ ಮುಖಂಡರು ಎಳೆದುಕೊಂಡು ಹೋಗಿದ್ದನ್ನು ಬಿಜೆಪಿಯ ಕೆಲ ನಾಯಕರು ಖಂಡಿಸಿದ್ದರು ಇದಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಟ್ವೀಟ್‌ ಮೂಲಕ ಟೀಕಿಸಿದ್ದಾರೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು