ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

63 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಹೂರ್ತ

Last Updated 2 ಮೇ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯ ಬೆನ್ನಲ್ಲೇ, ರಾಜ್ಯದಲ್ಲಿ ಮತ್ತೊಂದು ಚುನಾವಣೆಗೆ ವೇದಿಕೆ ಸಜ್ಜಾಗಿದೆ. 63 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಮುಹೂರ್ತ ನಿಗದಿಪಡಿಸಿದೆ.

‘2018ರ ಆಗಸ್ಟ್‌ನಲ್ಲಿ 109 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಉಳಿದ 103 ಸಂಸ್ಥೆಗಳ (2,651 ವಾರ್ಡ್‌ಗಳು) ಅವಧಿ ಮಾರ್ಚ್‌– ಜುಲೈ ನಡುವೆ ಪೂರ್ಣಗೊಳ್ಳಲಿದೆ. ಕ್ಷೇತ್ರ ವಿಂಗಡಣೆ ಹಾಗೂ ವಾರ್ಡ್‌ವಾರು ಮೀಸಲಾತಿ ಪ್ರಶ್ನಿಸಿ ಹಲವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದರಿಂದಾಗಿ, 39 ಸ್ಥಳೀಯ ಸಂಸ್ಥೆಗಳಿಗೆ (1,271 ವಾರ್ಡ್‌ಗಳು) ಸದ್ಯ ಚುನಾವಣೆ ನಡೆಸುವಂತಿಲ್ಲ’ ಎಂದು ರಾಜ್ಯ ಚುನಾವಣಾ ಆಯುಕ್ತ ಪಿ.ಎನ್‌.ಶ್ರೀನಿವಾಸಾಚಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘25 ಸ್ಥಳೀಯ ಸಂಸ್ಥೆಗಳ ಪ್ರಕರಣಗಳು ಹೈಕೋರ್ಟ್‌ನಲ್ಲಿ ದಾಖಲಾಗಿವೆ. ಉಳಿದ ಪ್ರಕರಣಗಳು ಧಾರವಾಡ ಹಾಗೂ ಕಲಬುರ್ಗಿ ‍ಪೀಠದಲ್ಲಿವೆ. 25 ಪ್ರಕರಣಗಳ ಆದೇಶ ಮಾತ್ರ ಬಾಕಿ ಇದೆ. ಒಂದೆರಡು ದಿನಗಳಲ್ಲಿ
ಆದೇಶ ಹೊರಬಿದ್ದರೆ 63 ಸ್ಥಳೀಯ ಸಂಸ್ಥೆಗಳ ಜತೆಗೇ ಚುನಾವಣೆ ನಡೆಸುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದರು.

ಇವಿಎಂ ಬಳಕೆ: ಮತ ಯಂತ್ರಗಳನ್ನು (ಇವಿಎಂ) ಬಳಸಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತದೆ. ಒಟ್ಟು 1,998 ಬ್ಯಾಲೆಟ್‌ ಯೂನಿಟ್‌ಗಳನ್ನು ಹಾಗೂ 1998 ಕಂಟ್ರೋಲ್‌ ಯೂನಿಟ್‌ಗಳನ್ನು ಸಿದ್ಧಪಡಿಸಲಾಗಿದೆ. ಆದರೆ, ವಿವಿಪ್ಯಾಟ್‌ಗಳನ್ನು ಬಳಸುವುದಿಲ್ಲ. ಪ್ರಸ್ತುತ ದೇಶದ ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಿವಿಪ್ಯಾಟ್‌ಗಳ ಬಳಕೆ ಮಾಡುತ್ತಿಲ್ಲ ಎಂದು ಶ್ರೀನಿವಾಸಾಚಾರಿ ಸ್ಪಷ್ಟಪಡಿಸಿದರು.

ಚುನಾವಣಾ ವೀಕ್ಷಕರ ನೇಮಕ: ನಗರ ಸ್ಥಳೀಯ ಸಂಸ್ಥೆಗಳಿಗೆ ಐಎಎಸ್‌ ಅಧಿಕಾರಿಗಳನ್ನು ವಿಶೇಷ ವೀಕ್ಷಕರನ್ನಾಗಿ, ಕೆಎಎಸ್‌ (ಹಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರನ್ನಾಗಿ ಹಾಗೂ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರು, ಉಉ‍ಪ ನಿಯಂತ್ರಕರನ್ನು ಚುನಾವಣಾ ವೆಚ್ಚ ವೀಕ್ಷಕರನ್ನಾಗಿಯೂ ನೇಮಕ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ನೋಟಾ: ಮತದಾರರು ನೋಟಾ (ಯಾರೊಬ್ಬರಿಗೂ ತನ್ನ ಮತ ಹಾಕಲು ಇಚ್ಛಿಸುವುದಿಲ್ಲ) ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಭಾವಚಿತ್ರವಿರುವ ಮತಪತ್ರ: ಒಂದೇ ವಾರ್ಡಿನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸುವ ಸಂದರ್ಭ ಇರುವುದರಿಂದ ಅವರನ್ನು ಗುರುತಿಸಲು ಮತಪತ್ರದಲ್ಲಿ
ಅವರ ಹೆಸರಿನ ಮುಂದೆ ವೃತ್ತಿ ಅಥವಾ ವಿಳಾಸ ತೋರಿಸಲಾಗುತ್ತಿತ್ತು. ಆದರೂ ಸಹ, ಮತದಾರರಿಗೆ ಗೊಂದಲ ಉಂಟಾಗುವುದನ್ನು
ತಪ್ಪಿಸಲು ಮತಪತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆ ಇತ್ತೀಚಿನ ಭಾವಚಿತ್ರ ಮುದ್ರಿಸಲಾಗು ತ್ತದೆ ಎಂದರು.

ಘೋಷಣಾ ಪತ್ರ: ಪ್ರತಿಯೊಬ್ಬ ಅಭ್ಯರ್ಥಿಯು ನಾಮಪತ್ರದೊಂದಿಗೆ ತನ್ನ ಹಿನ್ನೆಲೆ, ಚರಾಸ್ತಿ ಹಾಗೂ ಸ್ಥಿರಾಸ್ತಿಗಳ ವಿವರಗಳು, ಸ್ವವಿವರ, ವಿದ್ಯಾರ್ಹತೆ ಹಾಗೂ ಆದಾಯದ ಮೂಲಗಳನ್ನು ಪರಿಷ್ಕೃತ ನಮೂನೆಯಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು.

ಚುನಾವಣಾ ವೆಚ್ಚ ಮಿತಿ

ನಗರ ಸ್ಥಳೀಯ ಸಂಸ್ಥೆಗಳು; ವೆಚ್ಚ ಮಿತಿ (₹ಲಕ್ಷಗಳಲ್ಲಿ)

ಬಿಬಿಎಂಪಿ; 5

ಮಹಾನಗರ ಪಾಲಿಕೆ; 3.5

ನಗರಸಭೆ; 2

ಪುರಸಭೆ; 1.50

ಪಟ್ಟಣ ಪಂಚಾಯಿತಿ; 1

ಉಪಚುನಾವಣೆ

ವಿವಿಧ ಕಾರಣಗಳಿಂದ ತೆರವಾಗಿರುವ 8 ತಾಲ್ಲೂಕು ಪಂಚಾಯಿತಿಗಳ 10 ಕ್ಷೇತ್ರಗಳಿಗೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ 202 ಸದಸ್ಯ ಸ್ಥಾನಗಳಿಗೆ ಮೇ 29ರಂದು ಉಪಚುನಾವಣೆ ನಡೆಯಲಿದೆ.

ಜಿಲ್ಲಾಧಿಕಾರಿ ಅವರು ಮೇ 13ರಂದು ಅಧಿಸೂಚನೆ ಹೊರಡಿಸುವರು. ಮೇ 13ರಿಂದ 31ರ ವರೆಗೆ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುತ್ತದೆ.

ನಗರ ಸ್ಥಳೀಯ ಸಂಸ್ಥೆಗಳ ಆರು ವಾರ್ಡ್‌ಗಳಿಗೂ ಇದೇ ವೇಳೆ ಉಪಚುನಾವಣೆ ಜರುಗಲಿದೆ. ಬಿಬಿಎಂಪಿಯ ಸಗಾಯಿಪುರ ಹಾಗೂ ಕಾವೇರಿಪುರ ವಾರ್ಡ್‌ಗಳು, ತುಮಕೂರು ಮಹಾನಗರ ಪಾಲಿಕೆಯ ವಾರ್ಡ್‌ 22, ಹೆಬ್ಬಗೋಡಿ ನಗರಸಭೆಯ ವಾರ್ಡ್‌ 26, ಸದಲಗ ಪುರಸಭೆಯ ವಾರ್ಡ್ 19 ಹಾಗೂ ಮುಗಳಖೋಡ ಪುರಸಭೆಯ ವಾರ್ಡ್ 2ರಲ್ಲಿ ಉಪಚುನಾವಣೆ ಇರಲಿದೆ.

*ಉಡುಪಿ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿನ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ 2018ರಲ್ಲೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದೆ.

*ರಾಮನಗರ, ಕೊಡಗು, ಕಲಬುರ್ಗಿ, ಬೆಳಗಾವಿ ಜಿಲ್ಲೆಯ ಬಾಕಿ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇದೆ.

*ಉಳಿದ 22 ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ.

1,646

ಮತಗಟ್ಟೆಗಳು

8,230

ಮತಗಟ್ಟೆ ಸಿಬ್ಬಂದಿ

ಗ್ರಾ.ಪಂ.ಗಳಲ್ಲಿ ಮದ್ಯ ನಿಷೇಧ

ಉಪಚುನಾವಣೆ ನಡೆಯುವ ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾ‍ಪ್ತಿಯಲ್ಲಿ ಮೇ 13ರಿಂದ ಮೇ 31ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ರಾಜ್ಯ ಪಂಚಾಯತ್‌ರಾಜ್ ಕಾಯ್ಡೆಗೆ ತಿದ್ದುಪಡಿ ತಂದಿರುವುದರಿಂದ ಚುನಾವಣಾ ವೇಳೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ಈ ಅವಧಿಯಲ್ಲಿ ಮದ್ಯದಂಗಡಿಗಳ ಜತೆಗೆ ಡಿಸ್ಟಿಲರಿಗಳನ್ನೂ ಮುಚ್ಚಬೇಕಿದೆ ಎಂದು ಶ್ರೀನಿವಾಸಾಚಾರಿ ತಿಳಿಸಿದರು.

26 ಸದಸ್ಯರ ಸದಸ್ಯತ್ವ ರದ್ದು

ಆಸ್ತಿ ವಿವರ ಸಲ್ಲಿಸದ ಒಬ್ಬರು ತಾಲ್ಲೂಕು ಪಂಚಾಯಿತಿ ಸದಸ್ಯರ ಹಾಗೂ 24 ಗ್ರಾಮ ಪಂಚಾಯಿತಿ ಸದಸ್ಯರ ಸದಸ್ಯತ್ವವನ್ನು ಆಯೋಗ ರದ್ದುಪಡಿಸಿದೆ. ಜತೆಗೆ, ಸುಳ್ಳು ಮಾಹಿತಿ ನೀಡಿದ ಕಾರಣಕ್ಕೆ ಬೆಂಗಳೂರಿನ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಸದಸ್ಯತ್ವ ರದ್ದಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್‌ ಹಾಗೂ ಪಂಚಾಯತ್‌ರಾಜ್‌ ಕಾಯ್ದೆಯ ಪ್ರಕಾರ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಹಾಗೂ ಕುಟುಂಬ ಸದಸ್ಯರ ಆಸ್ತಿ ವಿವರವನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಪ್ರತಿವರ್ಷ ಸಲ್ಲಿಸಬೇಕು. 2017–18ನೇ ಸಾಲಿನವರೆಗೆ ಆಸ್ತಿ ವಿವರ ಸಲ್ಲಿಸದ ಸದಸ್ಯರ ಸದಸ್ಯತ್ವವನ್ನು ರದ್ದು ‍ಪಡಿಸಲಾಗಿದೆ ಎಂದು ಶ್ರೀನಿವಾಸಾಚಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT