ಸೋಮವಾರ, ಸೆಪ್ಟೆಂಬರ್ 16, 2019
21 °C
ನೀತಿ ಸಂಹಿತೆ ಮೇ 2ರಿಂದಲೇ ಜಾರಿ

ಬಂತು ಮತ್ತೊಂದು ಚುನಾವಣೆ: ಸ್ಥಳೀಯ ಸಂಸ್ಥೆಗಳ ಕಾದಾಟಕ್ಕೆ ಮೈತ್ರಿ ಇಲ್ಲ

Published:
Updated:

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಮತದಾನ ಮುಗಿದ ಬೆನ್ನಲ್ಲೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ನೀತಿ ಸಂಹಿತೆಯ ಪರ್ವ ಮುಂದುವರಿಯಲಿದೆ.

63 ಸ್ಥಳೀಯ ಸಂಸ್ಥೆಗಳಿಗೆ ಮೇ 29ರಂದು ಮತದಾನ ನಡೆಯಲಿದೆ. ಚುನಾವಣಾ ನೀತಿಸಂಹಿತೆ ತಕ್ಷಣದಿಂದ ಜಾರಿಗೆ ಬಂದಿದ್ದು, ಫಲಿತಾಂಶ ಪ್ರಕಟವಾಗುವ ಮೇ 31ರ ವರೆಗೆ ಚಾಲ್ತಿಯಲ್ಲಿರುತ್ತದೆ.

ಜೆಡಿಎಸ್‌–ಕಾಂಗ್ರೆಸ್‌ ಪಕ್ಷಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿವೆ. ಲೋಕಸಭೆಯಲ್ಲಿ ಮೈತ್ರಿ ಮಾಡಿ ಕೊಂಡು ಚುನಾವಣೆ ಎದುರಿಸಿದ್ದ ಮೈತ್ರಿಕೂಟದ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಈಗ ಎದುರಾಳಿ
ಗಳಾಗಿ ಕಣಕ್ಕೆ ಇಳಿಯುವ ಸನ್ನಿವೇಶ ತಿಂಗಳ ಒಳಗೇ ಸೃಷ್ಟಿಯಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಉಳಿಸಿಕೊಳ್ಳುವುದು ಹಾಗೂ ಹೊಸದಾಗಿ ಗಿಟ್ಟಿಸುವುದು ಮೈತ್ರಿ ಕೂಟ ಹಾಗೂ ವಿರೋಧ ಪಕ್ಷ ಬಿಜೆಪಿಗೆ ಪ್ರತಿಷ್ಠೆಯೂ ಆಗಿದೆ.

ಮೈತ್ರಿ ಒಪ್ಪಂದದ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 21 ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್‌ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಉಭಯ ಪಕ್ಷಗಳ ರಾಜ್ಯ ನಾಯಕರ ಸೂಚನೆಯ ಬಳಿಕವೂ ಸ್ಥಳೀಯ ನಾಯಕರು ಮುಕ್ತ ಮನಸ್ಸಿನಿಂದ ಕೆಲಸ ಮಾಡಿರಲಿಲ್ಲ ಎಂಬ ಆರೋಪಗಳು ವ್ಯಕ್ತವಾಗಿದ್ದವು. ಮತದಾನದ ದಿನದವರೆಗೂ ಮಂಡ್ಯ, ಮೈಸೂರು ಹಾಗೂ ತುಮಕೂರಿನಲ್ಲಿ ಗೊಂದಲ ಮುಂದುವರಿದಿತ್ತು.

‘ಈ ಮೈತ್ರಿ ಲೋಕಸಭಾ ಚುನಾವಣೆಗಷ್ಟೇ ಸೀಮಿತ’ ಎಂದು ಕಾಂಗ್ರೆಸ್‌ ನಾಯಕರು ಮನವರಿಕೆ ಮಾಡಿಕೊಡಲು ಯತ್ನಿಸಿದ್ದರು. ‘ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ಮಾಡಿಕೊಳ್ಳಲಾಗಿದೆ. ಮೈತ್ರಿ ರಾಜ್ಯಕ್ಕಷ್ಟೇ ಸೀಮಿತ. ಸ್ಥಳೀಯ ಮಟ್ಟದಲ್ಲಿ ಮಾಡಿಕೊಂಡರೆ ಪಕ್ಷ ಸಂಘಟನೆಗೆ ಹೊಡೆತ ಬೀಳುತ್ತದೆ. ಹೀಗಾಗಿ, ಸ್ವತಂತ್ರವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇವೆ’ ಎಂದು ಕಾಂಗ್ರೆಸ್‌ನ ನಾಯಕರೊಬ್ಬರು ಹೇಳಿದರು.

2018ರ ಆಗಸ್ಟ್‌ನಲ್ಲಿ ನಡೆದ 109 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉಭಯ ಪಕ್ಷಗಳು ‘ಸ್ನೇಹಯುತ ಸ್ಪರ್ಧೆ’ ಮಾಡಿದ್ದವು. 2,662 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಗರಿಷ್ಠ ಸ್ಥಾನ (982 ವಾರ್ಡ್‌ಗಳಲ್ಲಿ ಗೆಲುವು) ಗಳಿಸಿತ್ತು. 929 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಎರಡನೇ ಸ್ಥಾನಕ್ಕೆ ಸರಿದಿತ್ತು. ಜೆಡಿಎಸ್‌ 375 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿತ್ತು. ಅತಂತ್ರ ಸ್ಥಿತಿ ಉದ್ಭವವಾದ ಕಡೆ ಜೆಡಿಎಸ್‌–ಕಾಂಗ್ರೆಸ್‌ ಪ್ರತಿನಿಧಿಗಳು ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.

Post Comments (+)