ಮಂಗಳವಾರ, ಮೇ 26, 2020
27 °C
ನಂಜನಗೂಡಿನಲ್ಲಿ 4, ಬಳ್ಳಾರಿಯಲ್ಲಿ 3,ತುಮಕೂರಿನಲ್ಲಿ 1 ಹೊಸ ಪ್ರಕರಣ ಪತ್ತೆ

ಲಾಕ್‌ಡೌನ್ ಪಾಲಿಸದಿದ್ದರೆ 'ಕರ್ಫ್ಯೂ' ವಿಸ್ತರಣೆ: ಎಚ್ಚರಿಕೆ ಕೊಟ್ಟ ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿರುವ 21 ದಿನಗಳ ಲಾಕ್‌ಡೌನ್‌ಗೆ ಸ್ಪಂದಿಸಿ. ಅದನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇದ್ದರೆ ‘ಕರ್ಫ್ಯೂ‘ ಅವಧಿ ವಿಸ್ತರಣೆ ಮಾಡಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಸುದೀರ್ಘ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಕೆಲವು ನಗರ ಪ್ರದೇಶಗಳಲ್ಲಿನ ಜನರು ಅದನ್ನು  ಧಿಕ್ಕರಿಸಿ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಇದು ಸರಿಯಾದ ನಡವಳಿಕೆಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ನೀವು ಎಷ್ಟು ಕಟ್ಟುನಿಟ್ಟಿನಿಂದ ಮನೆಯಲ್ಲಿ ಇರುವುದನ್ನು ಪಾಲಿಸುತ್ತೀರೋ ಅಷ್ಟು ಬೇಗ ಅಂದರೆ ಏಪ್ರಿಲ್-14 ಕ್ಕೆ ಲಾಕ್‍ಡೌನ್ ಮುಗಿಯುವುದು. ಲಾಕ್‍ಡೌನ್ ಅವಧಿಯು ಕರ್ಫ್ಯೂ ಪಾಲನೆ ಮೇಲೆ ಅವಲಂಬಿತವಾಗಿದೆ. ಕಟ್ಟುನಿಟ್ಟಾಗಿ ಕರ್ಫ್ಯೂ ಪಾಲಿಸಿ; ಲಾಕ್‍ಡೌನ್ ಕೊನೆಗೊಳ್ಳಲು ಅವಕಾಶ ಕೊಡಿ’ ಎಂದು ಅವರು ಕೋರಿದ್ದಾರೆ.

21 ದಿನಗಳ ಕಾಲ ಲಾಕ್‍ಡೌನ್‌ ವಿಧಿಸಿರುವ ಅನಿವಾರ್ಯ ಪರಿಸ್ಥಿತಿಗೆ ಇಡೀ ದೇಶದ ‘ಜನರ ಕ್ಷಮೆಯನ್ನು ಪ್ರಧಾನಿ ಯಾಚಿಸಿದ್ದಾರೆ. ಪ್ರಧಾನಿ ಹೀಗೆ ಕ್ಷಮೆ ಕೇಳುವ ಅನಿವಾರ್ಯತೆ ಇದೆ ಎಂದರೆ ಪರಿಸ್ಥಿತಿ ಎ‌ಷ್ಟು ಗಂಭೀರವಾಗಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

‘ದೇಶಕ್ಕೆ ಮಾತ್ರವಲ್ಲ; ಜಗತ್ತಿನ ಇತಿಹಾಸದಲ್ಲಿಯೇ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಈಗ ಇಂತಹ ಪರಿಸ್ಥಿತಿ ಬಂದಿದೆ ಎಂದರೆ ಅದನ್ನು ನಾವು ಎದುರಿಸಲೇಬೇಕಾಗಿದೆ. ಜನರ ಹಿತದೃಷ್ಟಿಯಿಂದ ಪ್ರಧಾನಿಯವರು ಇಡೀ ದೇಶವನ್ನೇ ಲಾಕ್‌ಡೌನ್ ಮಾಡುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಅದರ ಹಿಂದೆ ಸಮಷ್ಟಿ ಹಿತವಿದೆಯೇ ವಿನಃ ಸ್ವಹಿತಾಸಕ್ತಿಯಿಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಪೊಲೀಸರು ಕೂಡ ನಿಮ್ಮ ಹಿತವನ್ನೇ ಬಯಸುವವರು. ಅವರೇನು ನಿಮ್ಮ ವೈರಿಗಳಲ್ಲ. ಪೊಲೀಸರಿಗೆ ಅನಿವಾರ್ಯತೆಯನ್ನು ಸೃಷ್ಟಿಸಬೇಡಿ’ ಎಂದು ಯಡಿಯೂರಪ್ಪ ಸಲಹೆ ನೀಡಿದ್ದಾರೆ.

ಲಾಕ್‌ಡೌನ್ ಅವಧಿ ಮನೆಯವರೊಂದಿಗೆ ಕಾಲ ಕಳೆಯಲು ನಿಮಗೆ ಒದಗಿ ಬಂದ ಸದವಕಾಶ ಎಂದು ಭಾವಿಸಿ. ನೀವು ಎಷ್ಟು ಹೊತ್ತು ಮನೆಯ ಒಳಗಡೆ ಇರುತ್ತೀರೋ ಅದರಿಂದ ನಿಮಗೆ ಮತ್ತು ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

‘ಕೊರೊನಾ ಸೋಂಕಿತರ ಪ್ರಾಣ ಉಳಿಸಲು ಸತತವಾಗಿ ಕೆಲಸದಲ್ಲಿ ತೊಡಗಿರುವ ವೈದ್ಯರು, ದಾದಿಯರು, ಆರೋಗ್ಯ ಸಿಬ್ಬಂದಿ ಮತ್ತು ನಾಗರಿಕ ಸೇವೆಯಲ್ಲಿ ತೊಡಗಿರುವ ಸಾವಿರಾರು ಕಾರ್ಯಕರ್ತರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿ ಅವರ ಮನೋಸ್ಥೈರ್ಯ ಕುಗ್ಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ನಿಮ್ಮ ಆಹಾರ, ಊಟಕ್ಕೆ ತೊಂದೆರೆಯಾಗದಂತೆ ಸರ್ಕಾರ ಎಚ್ಚರವಹಿಸಿದೆ. ಯಾವುದೇ ಸುಳ್ಳು ಸುದ್ದಿಗಳಿಗೆ ಮತ್ತು ವದಂತಿಗಳಿಗೆ ಕಿವಿಗೊಡಬೇಡಿ’ ಎಂದವರು ಕೋರಿದ್ದಾರೆ. 

ಗೃಹಬಂಧನ: ಸನ್ನಿವೇಶಕ್ಕೆ ತಕ್ಕಂತೆ ನಿರ್ಧಾರ
ನವದೆಹಲಿ:
ಕೊರೊನಾ ವೈರಾಣು ಹರಡುವುದನ್ನು ತಡೆಯುವುದಕ್ಕಾಗಿ ವಿಧಿಸಲಾಗಿರುವ ಲಾಕ್‌ಡೌನ್‌ ಏಪ್ರಿಲ್‌ 14ರ ನಂತರ ವಿಸ್ತರಣೆಯಾಗಲಿದೆಯೇ ಎಂಬ ವಿಚಾರದಲ್ಲಿ ಗೊಂದಲ ಮೂಡಿದೆ. 21 ದಿನಗಳ ಗೃಹಬಂಧನವನ್ನು ಮುಂದುವರಿಸುವ ಯೋಜನೆ ಇಲ್ಲ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ಸೋಮವಾರ ಹೇಳಿದ್ದಾರೆ. ಆದರೆ, ಗೃಹಬಂಧನ ವಿಸ್ತರಿಸಬೇಕೇ, ಬೇಡವೇ ಎಂಬುದನ್ನು ಸನ್ನಿವೇಶವನ್ನು ನೋಡಿಕೊಂಡು ನಿರ್ಧರಿಸಲಾಗುವುದು ಎಂದು ಸರ್ಕಾರದ ವಕ್ತಾರರು ಬಳಿಕ ಸ್ಪಷ್ಟನೆ ನೀಡಿದ್ದಾರೆ. 

ಇದೇ 25ರಂದು ಪ್ರಕಟಿಸಲಾದ ‘ಕೋವಿಡ್‌ ಕರ್ಫ್ಯೂ’ ವಿಸ್ತರಣೆ ಆಗಲಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ ಗೌಬಾ, ‘ಅಂತಹ ಯಾವುದೇ ಯೋಜನೆ ಸರ್ಕಾರದ ಮುಂದೆ ಇಲ್ಲ’ ಎಂದಿದ್ದರು. 

‘ಲಾಕ್‌ಡೌನ್‌ ವಿಸ್ತರಣೆ ವಿಚಾರದಲ್ಲಿ ಈವರೆಗೆ ಯಾವುದೇ ವಿಶ್ಲೇಷಣೆ ನಡೆದಿಲ್ಲ. ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು’ ಎಂದು ವಾರ್ತಾ ಮತ್ತು ಪ್ರಸಾರ ಬ್ಯೂರೊದ ಮಹಾ ನಿರ್ದೇಶಕ ಕೆ.ಎಸ್. ಧಾತ್‌ವಾಲಿಯಾ ತಿಳಿಸಿದ್ದಾರೆ. 

**

* ಇದೇ 31ರಂದು ಕೊನೆಯಾಗುವ ಹಾಲಿ ಹಣಕಾಸು ವರ್ಷವನ್ನು ಸರ್ಕಾರ ವಿಸ್ತರಣೆ ಮಾಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಹಾಲಿ ಹಣಕಾಸು ವರ್ಷವನ್ನು ಜೂನ್‌ 30 ರ ವರೆಗೆ ವಿಸ್ತರಿಸಲಾಗಿದೆ ಎಂಬ ಸುದ್ದಿಯನ್ನು ಸುದ್ದಿ ಸಂಸ್ಥೆ ಪಿಟಿಐ ನೀಡಿತ್ತು. ಆದರೆ ಹಣಕಾಸು ವರ್ಷ ವಿಸ್ತರಣೆ ಆಗಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.

* ಫೆಬ್ರುವರಿ 1ರ ನಂತರ ಅವಧಿ ಮುಗಿಯುವ ಚಾಲನಾ ಪರವಾನಗಿ, ಇತರ ಪರವಾನಗಿಗಳು ಹಾಗೂ ನೋಂದಣಿಯ ಸಿಂಧುತ್ವವನ್ನು ಜೂನ್‌ 30ರ ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

* ರೋಗಿಗಳ ಸಂಖ್ಯೆಯು ನೂರರಿಂದ ಸಾವಿರ ತಲುಪಲು ಭಾರತದಲ್ಲಿ 12 ದಿನ ಬೇಕಾಯಿತು. ಆದರೆ, ನಮಗಿಂತ ಶ್ರೀಮಂತ ಮತ್ತು ಸಣ್ಣ ದೇಶಗಳಲ್ಲಿ ರೋಗಿಗಳ ಸಂಖ್ಯೆ ನೂರರಿಂದ 3,500ಕ್ಕೆ 12 ದಿನಗಳಲ್ಲಿ ಏರಿಕೆಯಾಗಿದೆ. ಕೆಲವು ದೇಶಗಳಲ್ಲಿ ಇದು 8 ಸಾವಿರಕ್ಕೂ ಏರಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್‌ ಅಗರ್‌ವಾಲ್‌ ಹೇಳಿದ್ದಾರೆ.

* ದೇಶದಲ್ಲಿ ಕೊರೊನಾ ಸೋಂಕಿನ ಹೊಸ 149 ಪ್ರಕರಣಗಳು ಸೋಮವಾರ ವರದಿ ಆಗಿವೆ. ಸೋಂಕಿತರ ಸಂಖ್ಯೆ 1,316ಕ್ಕೆ ಏರಿದೆ. ನಾಲ್ವರು ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ38ಕ್ಕೆ ಹೆಚ್ಚಿದೆ.

* ಸೋಂಕು ಹರಡುವಿಕೆಯು ವ್ಯಕ್ತಿ–ವ್ಯಕ್ತಿಗಳ ನಡುವೆಯೇ ಇದೆ. ಸಾಮುದಾಯಿಕ ಹರಡುವಿಕೆ ಕಂಡುಬಂದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

* ತೆಲಂಗಾಣದ ಮುಖ್ಯಮಂತ್ರಿ, ಸಚಿವರು, ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಂಬಳವನ್ನು ಶೇ 75 ರಷ್ಟು, ಐಎಎಸ್‌, ಐಪಿಎಸ್‌ ಅಧಿಕಾರಿಗಳ ಸಂಬಳವನ್ನು ಶೇ 60 ಮತ್ತು ಗೆಜೆಟೆಡ್‌ ಹಾಗೂ ಇತರೆ ವೃಂದದವರ ಸಂಬಳವನ್ನು ಶೇ 50 ರಷ್ಟು ಕಡಿತ ಮಾಡುವುದಾಗಿ ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

* ಕೇರಳದಲ್ಲಿ 32 ಹೊಸ ಪ್ರಕರಣಗಳು ಸೋಮವಾರ ದೃಢಪಟ್ಟಿವೆ. ಇವರಲ್ಲಿ 15 ಮಂದಿಗೆ ಸ್ಥಳೀಯವಾಗಿ ಸೋಂಕು ತಗುಲಿದೆ. ಕಾಸರಗೋಡು ಜಿಲ್ಲೆಯಲ್ಲಿ 17 ಮಂದಿಯಲ್ಲಿ ಸೋಂಕು ದೃಢವಾಗಿದೆ. ಸಮೀಪದ ಕಣ್ಣೂರು ಜಿಲ್ಲೆಯಲ್ಲಿಯೂ 11 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

* ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಸಹಾಯಕನಿಗೆ ಸೋಂಕು ದೃಢಪಟ್ಟಿದೆ. ಹಾಗಾಗಿ, ನೆತನ್ಯಾಹು ಅವರೂ ಪ್ರತ್ಯೇಕ ವಾಸ ಆರಂಭಿಸಿದ್ದಾರೆ. 

* ಕೊರೊನಾ ಸೋಂಕು ಶಂಕಿತರಿಗಾಗಿ ದೆಹಲಿಯ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಕ್ವಾರಂಟೈನ್‌ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

***
ಕರ್ನಾಟಕದ ಜನರು ಶಿಸ್ತು ಮತ್ತು ಕಾನೂನು ಪಾಲನೆಗೆ ಹೆಸರಾದವರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಹೆಚ್ಚು ಶಿಸ್ತು ಪಾಲನೆ ಮಾಡಬೇಕಾಗಿದೆ.
-ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು