ಭಾನುವಾರ, ಜೂಲೈ 5, 2020
27 °C
ರಾಜ್ಯ ಸರ್ಕಾರ ಘೋಷಿಸಿದ್ದ ಸಂಪೂರ್ಣ ಲಾಕ್‌ಡೌನ್

‘ಕರ್ಫ್ಯೂ’ಗೆ ಸ್ಪಂದಿಸಿದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಯಲು ಭಾನುವಾರ ಜಾರಿಗೊಳಿಸಿದ್ದ ಕರ್ಫ್ಯೂ (ಸಂಪೂರ್ಣ ಲಾಕ್‌ಡೌನ್‌)ಗೆ ರಾಜ್ಯದಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಇಡೀ ದಿನ ಮನೆಯಿಂದ ಹೊರಬರದೆ ತಮಗೆ ತಾವೇ ದಿಗ್ಬಂಧನ ವಿಧಿಸಿಕೊಳ್ಳುವ ಮೂಲಕ ಕೊರೊನಾ ವಿರುದ್ದದ ಹೋರಾಟಕ್ಕೆ ಜನರು ಕೈಜೋಡಿಸಿದರು.

ಅಗತ್ಯ ವಸ್ತುಗಳಾದ ಔಷಧ, ಹಾಲು, ಪತ್ರಿಕೆ, ಪೆಟ್ರೋಲ್ ಬಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಹೂವು, ಹಣ್ಣು, ತರಕಾರಿ ಮಾರುಕಟ್ಟೆಗಳು, ಮದ್ಯದಂಗಡಿಗಳು, ಹೋಟೆಲ್‌ಗಳು, ಸಲೂನ್, ಚಿನ್ನಾಭರಣ ಮಳಿಗೆ ಸೇರಿದಂತೆ ಎಲ್ಲ ಬಗೆಯ ಅಂಗಡಿ ಮುಂಗಟ್ಟುಗಳು ತೆರೆಯಲಿಲ್ಲ. ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ಸಂಪೂರ್ಣ ಸ್ಥಗಿತವಾಗಿತ್ತು.

ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಬೆರಳೆಣಿಕೆಯ ವಾಹನಗಳು ಓಡಾಡಿದವು. ಉಳಿದಂತೆ ಪೊಲೀಸರ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಯಾರೂ ಹೊರಬರಲಿಲ್ಲ. ದಿನಸಿ ಅಂಗಡಿಗಳು, ಎಪಿಎಂಸಿ ಮಾರುಕಟ್ಟೆ, ಕೆಲವು ಸಣ್ಣ-ಪುಟ್ಟ ಖಾಸಗಿ ಕ್ಲಿನಿಕ್‌ಗಳು, ಆಟೊ, ಓಲಾ, ಉಬರ್ ಮತ್ತಿತರ ಟ್ಯಾಕ್ತಿ ಸೇವೆ ಕೂಡಾ ಬಂದ್ ಆಗಿದ್ದವು. ಹೀಗಾಗಿ, ನಿತ್ಯ ಸಂಚಾರ–ಜನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಎಲ್ಲ ರಸ್ತೆಗಳು ಬಿಕೊ ಎನ್ನುತ್ತಿತ್ತು. ಪಾರ್ಕ್‌ಗಳೂ ಮುಚ್ಚಿದ್ದವು. 

ಎಲ್ಲ ಕಡೆಗಳಲ್ಲಿ ಜನರು ಮನೆಗಳಲ್ಲೇ ಬಂಧಿಯಾಗಿದ್ದರು. ಕರಾವಳಿ ಜಿಲ್ಲೆಗಳಲ್ಲಿ ಮುಸ್ಲಿಮರು ಮನೆಗಳಲ್ಲಿಯೇ ಈದ್ ಉಲ್ ಫಿತ್ರ್ ಹಬ್ಬವನ್ನು ಸರಳವಾಗಿ ಆಚರಿಸಿದರು. ಕುಟುಂಬ ಸದಸ್ಯರೆಲ್ಲ ಒಟ್ಟು ಸೇರಿ ಮನೆಯಲ್ಲಿಯೇ ಹಬ್ಬದ ವಿಶೇಷ ಪ್ರಾರ್ಥನೆ ಮಾಡಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಸಾವಿರಾರು ಬಸ್‌ಗಳು, ರಾಜ್ಯಾದ್ಯಂತ ಇರುವ 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಆಟೊಗಳು, 20 ಲಕ್ಷಕ್ಕೂ ಅಧಿಕ ಬಾಡಿಗೆಗೆ ಸಂಚರಿಸುವ ಖಾಸಗಿ ವಾಹನಗಳು ರಸ್ತೆಗಿಳಿಯಲಿಲ್ಲ. ಸರಕು ಸಾಗಣೆ ವಾಹನಗಳೂ ಸಂಚಾರ ಸ್ಥಗಿತಗೊಳಿಸಿದ್ದವು.

ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಹಾಗೂ ಪ್ರಮುಖ ರಸ್ತೆಗಳನ್ನು ಹೊರತುಪಡಿಸಿ ಉಳಿದ ಹೆಚ್ಚಿನ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್‌‌ ಅಳವಡಿಸಿ ಬಂದ್ ಮಾಡಿದ್ದರು. ಅಲ್ಲಲ್ಲಿ ಚೆಕ್ ಪೋಸ್ಟ್ ಮಾಡಿಕೊಂಡು ವಾಹನಗಳಲ್ಲಿ ಅನಗತ್ಯವಾಗಿ ಓಡಾಡುವವರಿಗೆ ಎಚ್ಚರಿಕೆ ನೀಡಿದರು. ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಟ್ಟು ಬಂದೋಬಸ್ತ್ ಏರ್ಪಡಿಸಿದ್ದರು. ಪೂರ್ವ ನಿಗದಿತ ಮದುವೆ ಸಮಾರಂಭಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು