ಎಚ್‌ಡಿಕೆ ವಿರುದ್ಧ ತಿರುಗಿಬಿದ್ದ ಸುಮಲತಾ

ಮಂಗಳವಾರ, ಮಾರ್ಚ್ 19, 2019
21 °C
ಚರ್ಚೆಗೆ ಕಾರಣವಾದ ಅಂಬರೀಷ್‌ ವಿರುದ್ಧದ ಕುಮಾರಸ್ವಾಮಿ ಹೇಳಿಕೆ

ಎಚ್‌ಡಿಕೆ ವಿರುದ್ಧ ತಿರುಗಿಬಿದ್ದ ಸುಮಲತಾ

Published:
Updated:
Prajavani

ಮಂಡ್ಯ: ಕಾಂಗ್ರೆಸ್‌– ಜೆಡಿಎಸ್‌ ಸೀಟು ಹಂಚಿಕೆ ವಿಚಾರ ಬಾಕಿ ಇರುವಾಗಲೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಏರತೊಡಗಿದೆ. ಕಾಂಗ್ರೆಸ್‌ ಟಿಕೆಟ್‌ಗಾಗಿ ಪಟ್ಟು ಹಿಡಿದಿರುವ ಸುಮಲತಾ, ಶುಕ್ರವಾರವೂ ಕ್ಷೇತ್ರ ಪ್ರವಾಸ ಮುಂದುವರಿಸಿದ್ದು, ಜನಾಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ಒಂದೆಡೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪುತ್ರ ನಿಖಿಲ್‌ ಅವರನ್ನು ಕಣಕ್ಕಿಳಿಸಲು ಸಜ್ಜಾಗಿದ್ದಾರೆ. ಇನ್ನೊಂದೆಡೆ ಸುಮಲತಾ ಸ್ಪರ್ಧೆ ಖಚಿತವಾಗಿದೆ. ಹೀಗಾಗಿ, ಚುನಾವಣೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸುಮಲತಾ ನಡುವಿನ ನೇರ ಹೋರಾಟ ಎಂದೇ ಬಣ್ಣಿಸಲಾಗುತ್ತಿದೆ.

‘ಮಂಡ್ಯಕ್ಕೆ ಅಂಬರೀಷ್‌ ಮೃತದೇಹ ತಂದವರು ಯಾರು. ಜಿಲ್ಲೆಗೆ ಅವರ ಕೊಡುಗೆ ಏನೂ ಇಲ್ಲದಿದ್ದರೂ ನಾನು ಕರ್ತವ್ಯ ಮೆರೆದಿದ್ದೇನೆ. ಅನುಕಂಪಕ್ಕೆ ಮರುಳಾಗಬೇಡಿ’ ಎಂದು ಕುಮಾರಸ್ವಾಮಿ ಹೇಳುವ ಮೂಲಕ ಸುಮಲತಾ ವಿರುದ್ಧ ನೇರವಾಗಿ ಹೋರಾಟ ನಡೆಸುವ ಮುನ್ಸೂಚನೆ ಕೊಟ್ಟಿದ್ದಾರೆ. ‘ಅಂಬರೀಷ್‌ ತಾವು ಮಾಡಿದ ಕೆಲಸಗಳನ್ನು ಹೇಳಿಕೊಂಡು ತಿರುಗುವವರಲ್ಲ. ಅವರೇನು ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ’ ಎಂದು ಸುಮಲತಾ ತಿರುಗೇಟು ನೀಡಿದ್ದಾರೆ. ಈ ಹೇಳಿಕೆಗಳು ಇಬ್ಬರ ನಡುವಿನ ಹೋರಾಟಕ್ಕೆ ವೇದಿಕೆ ಸಿದ್ಧಗೊಳಿಸುತ್ತಿವೆ ಎಂದೇ ಬಣ್ಣಿಸಲಾಗುತ್ತಿದೆ.

 * ಇದನ್ನೂ ಓದಿ: ಸುಮಲತಾಗೆ ಕಾಂಗ್ರೆಸ್‌ ಬೆಂಬಲ ಇಲ್ಲ: ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ

ಹೈಕಮಾಂಡ್‌ ಭರವಸೆ: ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಂದ ಟಿಕೆಟ್‌ ದೊರೆಯುವ ಯಾವುದೇ ಭರವಸೆ ಸಿಕ್ಕಿಲ್ಲ. ಸುಮಲತಾ ಮನವೊಲಿಸುವ ಪ್ರಯತ್ನವನ್ನು ಡಿ.ಕೆ.ಶಿವಕುಮಾರ್‌ ಮಾಡಿದ್ದಾರೆ. ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಎಂದು ಅವರು ತಿಳಿಸಿದ್ದಾರೆ. ಹೀಗಾಗಿಯೇ ರಾಜ್ಯ ಕಾಂಗ್ರೆಸ್‌ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಸೇರಿದಂತೆ ಗುಲಾಂನಬಿ ಆಜಾದ್‌, ಆಸ್ಕರ್‌ ಫರ್ನಾಂಡಿಸ್‌ ಮುಂತಾದವರು ಕ್ಷೇತ್ರ ಬಿಡಿಸಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಲತಾ ಜಿಲ್ಲಾ ಪ್ರವಾಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ವತಂತ್ರವಾಗಿ ಸ್ಪರ್ಧಿಸಿ: ಜನರ ಕೂಗು

ಸುಮಲತಾ ಅವರು ಶುಕ್ರವಾರ ಬೆಳಿಗ್ಗೆ ಕಿಕ್ಕೇರಿ ಸಮೀಪದ ಸಾಸಲು ಶಂಭುಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಮ್ಮ ಪ್ರವಾಸ ಆರಂಭಿಸಿದರು. ಕಿಕ್ಕೇರಿಯಲ್ಲಿ ಅವರಿಗೆ ಸಾವಿರಾರು ಜನರು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಸುಮಲತಾ, ಚುನಾವಣೆ ಸ್ಪರ್ಧೆ ವಿಚಾರದಲ್ಲಿ ಜನರ ಅಭಿಪ್ರಾಯ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯರು, ‘ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ನಿಮಗೆ ನಮ್ಮ ಬೆಂಬಲವಿದೆ’ ಎಂದು ಕೂಗಿದರು. ನಂತರ, ಅವರು ಕೆ.ಆರ್‌.ಪೇಟೆ ಹಾಗೂ ಪಾಂಡವಪುರ ಕಾಂಗ್ರೆಸ್‌ ಮುಖಂಡರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಬಿಜೆ‍ಪಿಗೆ ಸೆಳೆಯಲು ಯತ್ನ
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿದ್ದರೆ ಮಂಡ್ಯ ಕ್ಷೇತ್ರದಿಂದ ಮಾತ್ರ ಎಂದು ಪಟ್ಟು ಹಿಡಿದಿರುವ ಸುಮಲತಾ ಅಂಬರೀಷ್‌ ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಆರಂಭಿಸಿದೆ.

‘ಒಕ್ಕಲಿಗರ ಬಾಹುಳ್ಯದ ಈ ಕ್ಷೇತ್ರದಲ್ಲಿ ಪಕ್ಷಕ್ಕೆ ಸಮರ್ಥ ಅಭ್ಯರ್ಥಿ ಇಲ್ಲ. ಈ ಹಿನ್ನೆಲೆಯಲ್ಲಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸುಮಲತಾ ಅವರಿಗೆ ಶುಕ್ರವಾರ ಕರೆ ಮಾಡಿ ಪಕ್ಷಕ್ಕೆ ಸೇರ್ಪಡೆಯಾಗುವಂತೆ ವಿನಂತಿಸಿದರು. ಒಂದು ವೇಳೆ ಸುಮಲತಾ ಪಕ್ಷೇತರರಾಗಿ ಕಣಕ್ಕೆ ಇಳಿದರೆ ಬೆಂಬಲ ನೀಡಲು ಸಿದ್ಧ ಎಂಬ ಅಭಯ ನೀಡಿದ್ದಾರೆ. ಸುಮಲತಾ ಜತೆಗೆ ಮಾತುಕತೆ ನಡೆಸುವ ಹೊಣೆಯನ್ನು ಹಿರಿಯ ನಾಯಕ ಎಸ್‌.ಎಂ. ಕೃಷ್ಣ ಅವರಿಗೆ ವಹಿಸಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಂಡ್ಯದಲ್ಲಿ ಟಿಕೆಟ್‌ ನೀಡುವ ಬಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್, ಯಾವುದೇ ಭರವಸೆ ನೀಡಿಲ್ಲ. ಈ ಬಗ್ಗೆ ಸುಮಲತಾ ಅಸಮಾಧಾನಗೊಂಡಿದ್ದಾರೆ ಎಂದುಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 103

  Happy
 • 33

  Amused
 • 19

  Sad
 • 7

  Frustrated
 • 8

  Angry

Comments:

0 comments

Write the first review for this !