ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಸಿಕ್ಕಿದ ದಡ: ಮೈತ್ರಿ ಗಡಗಡ

2 ದಿನ ಗಡುವು ಕೊಟ್ಟ ಬಿಎಸ್‌ವೈ: ಸರ್ಕಾರ ಉಳಿಸಿಕೊಳ್ಳಲು ‘ದೋಸ್ತಿ’ ತಂತ್ರ
Last Updated 23 ಮೇ 2019, 19:07 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಎಬ್ಬಿಸಿದ ಭೀಕರ ಚಂಡಮಾರುತದಿಂದಾಗಿ ಆಡಳಿತಾರೂಢ ಜೆಡಿಎಸ್‌–ಕಾಂಗ್ರೆಸ್ ಮೈತ್ರಿಕೂಟ ಚುನಾವಣೆಯಲ್ಲಿ ಕೊಚ್ಚಿಹೋಗಿದೆ. ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರದ ದಡ ಹತ್ತಿಸಲು ಈ ಫಲಿತಾಂಶ ನೆರವಾಗಲಿದೆ ಎಂಬ ಉತ್ಸಾಹ ಬಿಜೆಪಿ ನಾಯಕರಲ್ಲಿ ಮೂಡಿದೆ.

ಫಲಿತಾಂಶ ಹೊರಬಿದ್ದ ಬೆನ್ನಲ್ಲೇ, ‘ಜನಾದೇಶ ನಿಮ್ಮ ವಿರುದ್ಧ ಬಂದಿದೆ. ಮೈತ್ರಿಕೂಟದ ನಾಯಕರಿಗೆ ಎರಡು ದಿನ ಗಡುವು ಕೊಡುತ್ತೇನೆ. ಜನರಿಗೆ ನಿಮ್ಮ ನಿಲುವು ಸ್ಪಷ್ಟಪಡಿಸಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಎಚ್ಚರಿಕೆ ಕೊಟ್ಟಿದ್ದು, ಸರ್ಕಾರ ಕೆಡಹುವ ಸುಳಿವು ನೀಡಿದ್ದಾರೆ.

‘ರಾಜ್ಯದ ಜನಾದೇಶ ವರ್ಷದ ಹಿಂದೆಯೇ ಬಂದಿದೆ. ಇದು ಕೇಂದ್ರ ಸರ್ಕಾರ ರಚನೆಗೆ ಬಂದ ಜನಾದೇಶ. ಬಿಜೆಪಿ ಒಡ್ಡಿದ ನೂರೆಂಟು ವಿಘ್ನಗಳನ್ನು ಸಾಂಗವಾಗಿ ಎದುರಿಸಿದ್ದೇವೆ. ಮೈತ್ರಿ ಸರ್ಕಾರ ಸುಭದ್ರವಾಗಿರುತ್ತದೆ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

ತಮ್ಮ ವಿರುದ್ಧದ ಫಲಿತಾಂಶ ಬಂದ ಬೆನ್ನಲ್ಲೆ ಸರ್ಕಾರ ಉಳಿಸಿಕೊಳ್ಳುವ ತಂತ್ರಗಾರಿಕೆ ಹೆಣೆಯಲು ಮೈತ್ರಿ ನಾಯಕರು ತಯಾರಿ ನಡೆಸಿದ್ದಾರೆ.

‘ಸೋಲಿನ ಆತ್ಮಾವಲೋಕನ ಆಮೇಲೆ ಮಾಡಿಕೊಳ್ಳೋಣ. ಸಂಭಾವ್ಯ ಆಪರೇಷನ್ ಕಮಲದ ನಿಯಂತ್ರಣಕ್ಕೆ ಶಾಸಕರನ್ನು ಹಿಡಿದಿಟ್ಟುಕೊಳ್ಳಬೇಕು ಹಾಗೂ ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಬೇಕು’ ಎಂಬುದು ಮೈತ್ರಿ ನಾಯಕರ ಸದ್ಯದ ನಿಲುವು ಎಂದು ಮೂಲಗಳು ಹೇಳಿವೆ.

ಈ ಬೆಳವಣಿಗೆ ಬೆನ್ನಲ್ಲೇ, ರಾಜ್ಯ ಸಚಿವ ಸಂಪುಟ ಸದಸ್ಯರ ಅನೌಪಚಾರಿಕ ಸಭೆಯನ್ನು ಕುಮಾರಸ್ವಾಮಿ ಶುಕ್ರವಾರ ಮಧ್ಯಾಹ್ನ ಕರೆದಿದ್ದಾರೆ. ಸೋಲಿಗೆ ಕಾರಣಗಳನ್ನು ಹುಡುಕುವುದು, ಶಾಸಕರ ಬೇಡಿಕೆಗಳನ್ನು ಆಲಿಸಿ ಅವರನ್ನು ವಿಶ್ವಾಸದಲ್ಲಿಟ್ಟುಕೊಳ್ಳುವ ಸೂತ್ರ ರೂಪಿಸುವುದು ಸಭೆಯ ಉದ್ದೇಶ ಎಂದು ಮೂಲಗಳು ತಿಳಿಸಿವೆ. ಬಳಿಕ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯನ್ನೂ ಕರೆಯಲಾಗಿದೆ.

ಬಿಜೆಪಿ ಲೆಕ್ಕಾಚಾರ ಏನು?: ಇಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕಿ ಸರ್ಕಾರವನ್ನು ಅಲ್ಪಮತಕ್ಕೆ ಕುಸಿಯುವಂತೆ ಮಾಡುವುದು ಬಿಜೆಪಿ ರಾಜ್ಯ ನಾಯಕರ ಗುರಿ. ರಮೇಶ ಜಾರಕಿಹೊಳಿ ಸೇರಿದಂತೆ 10 ಶಾಸಕರನ್ನು (ಜೆಡಿಎಸ್‌ ಸೇರಿದಂತೆ) ಸೆಳೆಯುವುದು ಮೊದಲ ಹೆಜ್ಜೆ. ಬಿಎಸ್‌ಪಿಯ ಒಂದು, ಇಬ್ಬರು ಪಕ್ಷೇತರ ಶಾಸಕರನ್ನು ಸೇರಿಸಿಕೊಂಡರೆ ಈಗಿರುವ 105 ಬಲ 108ಕ್ಕೆ ಏರುತ್ತದೆ. ಕನಿಷ್ಠ 10 ಶಾಸಕರು ರಾಜೀನಾಮೆ ಕೊಟ್ಟರೆ ವಿಧಾನಸಭೆಯ ಸಂಖ್ಯಾಬಲ 214 ಕ್ಕೆ ಕುಸಿಯಲಿದ್ದು, ಬಹುಮತಕ್ಕೆ ಆಗ 108 ಸದಸ್ಯ ಬಲ ಸಾಕಾಗುತ್ತದೆ ಎಂಬ ಲೆಕ್ಕಾಚಾರ ಪಕ್ಷದಲ್ಲಿ ನಡೆದಿದೆ.

ಆದರೆ, ‘ಮೈತ್ರಿ ಸರ್ಕಾರವನ್ನು ಸದ್ಯಕ್ಕೆ ಕೆಡಹುವುದು ಬೇಡ. ಅವರಾಗಿಯೇ ಕಚ್ಚಾಡಿಕೊಂಡು ಬೀಳುವವರೆಗೆ ಕಾಯುವುದು ಸೂಕ್ತ.

ಒಂದು ವೇಳೆ, ಕಾಂಗ್ರೆಸ್ ಶಾಸಕರೇ ಗುಂಪಾಗಿ ಮುಂದೆ ಬಂದರೆ ಮಾತ್ರ ಸರ್ಕಾರ ರಚಿಸುವ ಯತ್ನ ನಡೆಸಿ. ಆಪರೇಷನ್ ಕಮಲ ಬೇಡ’ ಎಂದು ಬಿಜೆಪಿ ವರಿಷ್ಠರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಎನ್ನಲಾಗುತ್ತಿದೆ.

ಶಾಸಕರ ಆಕ್ರೋಶಕ್ಕೆ ಮದ್ದು: ‘ಮೈತ್ರಿಯು ಪಕ್ಷಕ್ಕೆ ಮುಳುವಾಗುತ್ತಿದೆ’ ಎಂದು ದೂರುತ್ತಿದ್ದ ಕಾಂಗ್ರೆಸ್‌ ಶಾಸಕರ ಸಿಟ್ಟು ಇನ್ನಷ್ಟು ಮಡುಗಟ್ಟಲು ಫಲಿತಾಂಶ ಕಾರಣವಾಗಬಹುದು ಎಂಬ ವಿಶ್ಲೇಷಣೆ ನಡೆದಿದೆ.

ಸಿದ್ದರಾಮಯ್ಯ ಬೆಂಬಲಿಗರ ಆಕ್ರೋಶವನ್ನು ತಣ್ಣಗಾಗಿಸಿ, ಮೈತ್ರಿಯನ್ನು ‘ಸಹನೆ’ಯ ದಾರಿಯಲ್ಲಿ ಕೊಂಡೊಯ್ಯುವುದು ದೋಸ್ತಿ ನಾಯಕರ ಮುಂದಿರುವ ಸವಾಲು. ‘ಐದು ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿ’ ಎಂದು ಲಿಖಿತ ಒಪ್ಪಂದ ಮಾಡಿಕೊಟ್ಟವರಿಗೆ ಸೋಲಿನ ನೆಪ ಹೇಳಿ ಅಧಿಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅಪ್ಪ ಹಾಗೂ ಮಗನ ಸೋಲಿನಿಂದ ಕುಮಾರಸ್ವಾಮಿ ಕಂಗೆಟ್ಟಿದ್ದಾರೆ. ’ಸಂಪೂರ್ಣ ನೆರವು ನೀಡುತ್ತೇವೆ. ನೀವೇ ಮುಂದುವರಿಯಿರಿ’ ಎಂದು ಅವರ ಮನವೊಲಿಸುವ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿ ನಡೆದಿದೆ.

‘ಸರ್ಕಾರವನ್ನು ಇನ್ನು ಮುನ್ನಡೆಸಲಾರೆ’ ಎಂಬ ನಿರ್ಧಾರಕ್ಕೆ ಕುಮಾರಸ್ವಾಮಿ ಬಂದರೆ, ಪರ್ಯಾಯ ಮಾರ್ಗಗಳನ್ನು ಹುಡುಕುವುದು ಕಾಂಗ್ರೆಸ್‌ ಆಲೋಚನೆ. ಬಂಡಾಯ ಎದ್ದಿರುವವರು, ಅತೃಪ್ತರು ಹಾಗೂ ಬಿಜೆಪಿ ಕಡೆ ಮುಖ ಮಾಡಿರುವರ ಪೈಕಿ ಕೆಲವರು ಸಿದ್ದರಾಮಯ್ಯ ಬೆಂಬಲಿಗರೇ ಆಗಿದ್ದಾರೆ.

ಶಾಸಕರ ಅಸಮಾಧಾನವನ್ನು ಹೋಗಲಾಡಿಸಿ, ಅವರನ್ನು ಸಂಭಾಳಿಸುವ ಸಾಮರ್ಥ್ಯ ಇರುವುದು ಸಿದ್ದರಾಮಯ್ಯಗೆ ಮಾತ್ರ. ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದರೆ ಹೇಗೆ ಎಂಬ ಚರ್ಚೆಯೂ ಶುರುವಾಗಿದೆ.

‘ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಬಲ 10ರಿಂದ ಒಂದಕ್ಕೆ ಇಳಿದಿದೆ. ಗೆಲುವು ಕೊಡಿಸುವಲ್ಲಿ ಸಿದ್ದರಾಮಯ್ಯ ಸೋತಿದ್ದಾರೆ. ಮಂಡ್ಯ, ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋತಿದ್ದು, ಮುಜುಗರ ತಂದಿದೆ.

ಇಂತಹ ಹೊತ್ತಿನಲ್ಲಿ ಅವರನ್ನು ಮುಖ್ಯಮಂತ್ರಿ ಗದ್ದುಗೆಗೆ ಕೂರಿಸಲು ದೇವೇಗೌಡ ಹಾಗೂ ಕುಮಾರಸ್ವಾಮಿ ಇಬ್ಬರೂ ಒಪ್ಪಲಾರರು’ ಎಂಬ ಮಾತುಗಳು ಜೆಡಿಎಸ್‌ ವಲಯದಲ್ಲಿ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT