ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಚಿದಾನಂದಮೂರ್ತಿ ನಿಧನಕ್ಕೆ ಬಿಎಸ್‌ವೈ, ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

ಯಾರ್‍ಯಾರು ಏನೇನಂದ್ರು?
Last Updated 11 ಜನವರಿ 2020, 6:15 IST
ಅಕ್ಷರ ಗಾತ್ರ

ಬೆಂಗಳೂರು:ಹಿರಿಯ ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ (88) ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

‘ಕನ್ನಡಕ್ಕೆ ಮಿಡಿಯುತ್ತಿದ್ದ, ಲೇಖಕ, ಸಂಶೋಧಕ, ಚಿಂತಕ, ಇತಿಹಾಸಕಾರರಾಗಿದ್ದ ಚಿ.ಮೂ ಇನ್ನಿಲ್ಲದ ವಿಷಯ ನೋವಿನದ್ದು ಮತ್ತು ಅವರ ಸ್ಥಾನ ಅನನ್ಯ, ಯಾರೂ ತುಂಬಲಾಗದು. ಹಂಪಿಯ ಸ್ಮಾರಕಗಳನ್ನು ಉಳಿಸುವಲ್ಲಿ ಹಾಗೂ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗುವಲ್ಲಿ ಇವರ ಪ್ರಯತ್ನ ಸ್ಮರಣೀಯ. ಅವರಾತ್ಮಕ್ಕೆ ಶಾಂತಿ ದೊರಕಲಿ’ ಎಂದು ಬಿಎಸ್‌ವೈ ಟ್ವೀಟ್ ಮಾಡಿದ್ದಾರೆ.

‘ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ನಿಧನದ ಸುದ್ದಿ ತಿಳಿದು ದುಃಖವಾಯಿತು. ಸಂಶೋಧನೆ ಮತ್ತು ಸಾಹಿತ್ಯದ‌ ಜೊತೆಯಲ್ಲಿ ಅವರ ನೇರ ನಡೆ-ನುಡಿ, ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನೂ ಮೀರಿದ ಸ್ನೇಹಶೀಲ ಗುಣವನ್ನು ನಾಡು ಸದಾ ಸ್ಮರಿಸುತ್ತದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ನಾಡಿನ ಹಿರಿಯ ಸಾಹಿತಿ, ಇತಿಹಾಸಜ್ಞ, ಹೋರಾಟಗಾರ, ವಿಶೇಷವಾಗಿ ಹಂಪಿಯ ಜೊತೆ ಬಹಳ ಆಪ್ತತೆ ಬೆಳೆಸಿಕೊಂಡಿದ್ದ, ಕನ್ನಡ ನಾಡಿನ ನೆಲ-ಜಲ-ಭಾಷೆ-ಸಂಸ್ಕೃತಿಯ ಕಾವಲುಗಾರನ ರೀತಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಎಂ. ಚಿದಾನಂದಮೂರ್ತಿಗಳು ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತವಾಗಿದೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ.’ ಎಂದು ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

‘ಇತಿಹಾಸ ತಜ್ಞ ಹಾಗೂ ಸಂಶೋಧಕರಾಗಿರುವ ಡಾ. ಎಂ.ಚಿದಾನಂದಮೂರ್ತಿಯವರ ಅಗಲಿಕೆ ಅಪಾರವಾದ ನೋವುಂಟು ಮಾಡಿದೆ. ನಾಡು ನುಡಿಗಾಗಿ ಶ್ರಮಿಸಿದ ಚಿದಾನಂದಮೂರ್ತಿಯವರ ನಿಧನದಿಂದಾಗಿ ಕನ್ನಡ ಸಾಹಿತ್ಯ ಲೋಕ ಅಮೂಲ್ಯವಾದ ರತ್ನವೊಂದನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ದೇವೇಗೌಡ ಟ್ವೀಟ್ ಮಾಡಿದ್ದಾರೆ.

‘ಹಿರಿಯ ಸಂಶೋಧಕ, ಕನ್ನಡ ಗರುಡ ಡಾ. ಚಿದಾನಂದಮೂರ್ತಿ ಅವರ ನಿಧನದಿಂದ ನಾಡು ಅಪರೂಪದ ವಿದ್ವಾಂಸರನ್ನು ಕಳೆದುಕೊಂಡಿದೆ. ಕನ್ನಡ ಶಕ್ತಿ ಕೇಂದ್ರ ಸ್ಥಾಪಿಸಿದ್ದ ‘ಚಿಮೂ’ ಎಂದೇ ಖ್ಯಾತರಾಗಿದ್ದ ಹಿರಿಯ ಜೀವ ನಾಡು ನುಡಿ ಜಲಕ್ಕಾಗಿ ಅಹರ್ನಿಶಿ ಶ್ರಮಿಸಿದ್ದರು. ಮೃತರ ಕುಟುಂಬ ಸದಸ್ಯರಿಗೆ, ಅವರ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

‘ಓಂ ಶಾಂತಿ. ನಾಡಿನ ಹಿರಿಯ ಸಾಹಿತಿಗಳು, ಇತಿಹಾಸಜ್ಞ, ಹೋರಾಟಗಾರ ಡಾ.ಎಂ.ಚಿದಾನಂದಮೂರ್ತಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಮೈಸೂರು–ಕೊಡಗು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT