ಮಂಗಳವಾರ, ಮೇ 18, 2021
30 °C
16 ಕಿ.ಮೀ ಉದ್ದದ ಕಾಮಗಾರಿ 7ರಿಂದ 10 ದಿನಗಳಲ್ಲಿ ಆರಂಭ

ಮಹದೇಶ್ವರ ಬೆಟ್ಟಕ್ಕೆ ತಿರುಪತಿ ಮಾದರಿ ಮೆಟ್ಟಿಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಹದೇಶ್ವರ ಬೆಟ್ಟ: ಇತಿಹಾಸ ಪ್ರಸಿದ್ಧ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರ ಅನುಕೂಲಕ್ಕಾಗಿ ತಿರುಪತಿ– ತಿರುಮಲ ಮಾದರಿಯಲ್ಲಿ ಸುಸಜ್ಜಿತ ಮೆಟ್ಟಿಲುಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಶುಕ್ರವಾರ ಭರವಸೆ ನೀಡಿದರು.

ಮಹದೇಶ್ವರ ಬೆಟ್ಟದಲ್ಲಿ ಸುತ್ತೂರು ಮಠ ನಿರ್ಮಿಸಿರುವ ಅತಿಥಿಗೃಹ ಉದ್ಘಾಟಿಸಿ ಮಾತನಾಡಿ, ‘ಭಕ್ತರು ಮಹದೇಶ್ವರ ಸ್ವಾಮಿಯ ದರ್ಶನಕ್ಕೆ 16 ಕಿ.ಮೀ. ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುತ್ತಾರೆ. ಆದರೆ, ಮೆಟ್ಟಿಲುಗಳು ಸರಿ ಇಲ್ಲದೆ ತೊಂದರೆ ಆಗುತ್ತಿದೆ. ತಿರುಪತಿಯಲ್ಲಿ ಇರುವ ಮಾದರಿಯಲ್ಲಿ ಇಲ್ಲೂ ಮೆಟ್ಟಿಲು ನಿರ್ಮಿಸಲಾಗುವುದು. ಜೊತೆಗೆ ಶೌಚಾಲಯ, ತಂಗುದಾಣಗಳ ಸೌಲಭ್ಯ ಕಲ್ಪಿಸಲಾಗುವುದು. ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.

ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳ ಪೈಕಿ, ಹೆಚ್ಚು ಆದಾಯ ಗಳಿಸುವ ದೇವಸ್ಥಾನಗಳ ಪಟ್ಟಿಯಲ್ಲಿ ಇದು 2ನೇ ಸ್ಥಾನದಲ್ಲಿದೆ. ಭಕ್ತರು ಮಾದಪ್ಪನಿಗೆ ಸಾಕಷ್ಟು ಹಣ ನೀಡುತ್ತಿದ್ದಾರೆ. ಅದನ್ನು ದೇವಾಲಯದ ಅಭಿವೃದ್ಧಿಗೆ ಬಳಸಬೇಕಿದೆ ಎಂದು ಹೇಳಿದರು.

ಇದಕ್ಕೂ ಮೊದಲು ವಿಚಾರ ಪ್ರಸ್ತಾಪಿಸಿದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ತಿರುಪತಿ ಮಾದರಿಯಲ್ಲಿ ಇಲ್ಲೂ ಮೆಟ್ಟಿಲುಗಳನ್ನು ನಿರ್ಮಿಸಬೇಕು’ ಎಂದು ಕೋರಿದರು.

ವಿಶೇಷ ಅರ್ಥ ಕಲ್ಪಿಸುವುದು ಬೇಡ
ಡಿ.ಕೆ.ಶಿವಕುಮಾರ್‌ ಮತ್ತು ಬಿ.ಎಸ್‌.ಯಡಿಯೂರಪ್ಪ ಭೇಟಿ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಇಬ್ಬರೂ ತಮ್ಮ ಭೇಟಿ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

‘ರಾಜ್ಯದಲ್ಲಿ ಮತ್ತೆ ರೆಸಾರ್ಟ್‌ ರಾಜಕಾರಣ ನಡೆಯುವ ಲಕ್ಷಣ ಇದೆಯಲ್ಲ?’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ನಡೆಯಲಿ ಬಿಡಿ, ರೆಸಾರ್ಟ್‌ಗಳು ನಡೆಯಬೇಕಲ್ಲವೇ’ ಎಂದು ವ್ಯಂಗ್ಯವಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು