ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣೆಗೆ ಬಾರದ ನೀರು; ಸಹನೆ ಪರೀಕ್ಷೆ!

ಲಿಖಿತ ಒಪ್ಪಂದಕ್ಕೆ ಪಟ್ಟು ಹಿಡಿದಿದೆಯೇ ಮಹಾರಾಷ್ಟ್ರ ಸರ್ಕಾರ?
Last Updated 9 ಮೇ 2019, 20:00 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವಂತೆ ಮಾಡಿದ್ದ ಮನವಿಗೆ ಅಲ್ಲಿನ ಮುಖ್ಯಮಂತ್ರಿ ಇನ್ನೂ ಸ್ಪಂದಿಸಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಕೃಷ್ಣಾ ನದಿ ತೀರದ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿದ್ದು, ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗ ತಾಲ್ಲೂಕಿನ ಬಹುಪಾಲು ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಕೋಯ್ನಾ ಜಲಾಶಯದಿಂದ ನೀರು ಹರಿಸಿದರೆ, ಅಲ್ಲಿನ ಜನರು ಹಾಗೂ ಜಾನುವಾರುಗಳಿಗೆ ಬಹಳ ಉಪಯೋಗವಾಗುತ್ತದೆ. ಇದಕ್ಕಾಗಿ ಚಿಕ್ಕೋಡಿ, ಅಥಣಿ ಭಾಗದಲ್ಲಿ ರೈತ ಮುಖಂಡರ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.

ಸಚಿವರು ಹೇಳಿದ ನಂತರವೂ:ಇದರಿಂದ ಎಚ್ಚೆತ್ತ ಜಲಸಂಪನ್ಮೂಲ ಸಚಿವರು ಬೆಳಗಾವಿಗೆ ಬಂದು ಜನಪ್ರತಿನಿಧಿಗಳ ಸಭೆ ನಡೆಸಿ, ಕೃಷ್ಣಾ ನದಿಗೆ ಕೋಯ್ನಾ ಜಲಾಶಯದಿಂದ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ ವಿಧಿಸಿರುವ ನೀರಿಗೆ ನೀರು ಷರತ್ತಿಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ’ ಎಂದು ಪ್ರಕಟಿಸಿದ್ದರು. ಈ ವಿಷಯವನ್ನು ಅಲ್ಲಿನ ಸರ್ಕಾರಕ್ಕೆ ತಿಳಿಸಿದ್ದೇವೆ ಎಂದೂ ಹೇಳಿದ್ದರು. ಹೀಗಾಗಿ, ಕೆಲವೇ ದಿನಗಳಲ್ಲಿ ನೀರು ಬರಬಹುದು ಎಂದು ನಿರೀಕ್ಷೆಯಲ್ಲಿ ಹೋರಾಟಗಾರರು ಪ್ರತಿಭಟನೆ ಹಿಂಪಡೆದಿದ್ದರು. ಆದರೆ, 4 ದಿನಗಳು ಕಳೆದರೂ ‘ಕೃಷ್ಣಾ ಒಡಲು’ ಬರಿದಾಗಿಯೇ ಇದೆ. ಇದು, ಆ ಭಾಗದ ಜನರ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ. ಈ ನಡುವೆ, ‘ಮಹಾರಾಷ್ಟ್ರ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿಕೊಳ್ಳಲಾಗುವುದು’ ಎಂದು ಸಚಿವರು ಹೇಳಿರುವುದು, ‘ನೀರು ಬಿಡುಗಡೆ ಮಾಡುವುದು ಯಾವಾಗ’ ಎಂಬ ಪ್ರಶ್ನೆಯೂ ಮೂಡಿದೆ.

ಇಲ್ಲಿನ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾಂಗ್ರೆಸ್‌ ಜನಪ್ರತಿನಿಧಿಗಳ ನಿಯೋಗದಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಷರತ್ತು ಒಪ್ಪುವುದಾಗಿ ತಿಳಿಸಿದ್ದರೂ ಆ ಸರ್ಕಾರ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲಿನ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರು ಬಿಜೆಪಿ ನಿಯೋಗದವರಿಗೆ ನೀಡಿದ್ದ ಭರವಸೆ ಗುರುವಾರ ಸಂಜೆವರೆಗೂ ಈಡೇರಿಲ್ಲ.

ಸಮಸ್ಯೆ, ಸಂಕಷ್ಟ ಉಲ್ಬಣ:ಗಡಿ ಭಾಗದ ಜನರ ಸಮಸ್ಯೆ ಪರಿಹಾರಕ್ಕೆ ಮಹಾರಾಷ್ಟ್ರ ಸರ್ಕಾರ ಸ್ಪಂದಿಸದಿರುವುದು ಹಾಗೂ ರಾಜ್ಯ ಸರ್ಕಾರ ಸಮಯ ದೂಡುತ್ತಿರುವುದರಿಂದ ಜನರ ನೀರಿನ ಬವಣೆ ಉಲ್ಬಣಗೊಳ್ಳುತ್ತಿದೆ. ನೀರು ಬಾರದಿದ್ದಲ್ಲಿ ಕೆಲವೇ ದಿನಗಳಲ್ಲಿ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ.

‘ನೀರಿಗೆ ನೀರು’ ಷರತ್ತಿಗೆ ಸಂಬಂಧಿಸಿದಂತೆ ಲಿಖಿತ ಒಪ್ಪಂದಕ್ಕೆ ಮಹಾರಾಷ್ಟ್ರ ಸರ್ಕಾರ ಪಟ್ಟು ಹಿಡಿದಿದೆ ಎಂದು ತಿಳಿದುಬಂದಿದೆ.

‘ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲು ಮಹಾರಾಷ್ಟ್ರ ಮೀನಾಮೇಷ ಎಣಿಸುತ್ತಿರುವುದೇಕೆ ಎನ್ನುವ ಅನುಮಾನ ಕಾಡುತ್ತಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಜನರು ನೀರಿಗಾಗಿ ಕಾಯುತ್ತಿದ್ದಾರೆ. ಆದರೆ, ನೀರು ಬರಬಹುದು ಎನ್ನುವ ನಿರೀಕ್ಷೆ ಈಡೇರಿಲ್ಲ. ಜಲಸಂಪನ್ಮೂಲ ಸಚಿವರು ಕ್ರಮ ವಹಿಸದಿದ್ದಲ್ಲಿ, ಕೃಷ್ಣಾ ತೀರದ ಜನರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು; ಗಂಭೀರವಾಗಿ ‍ಪರಿಗಣಿಸಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದರು.

‘ನಾವು ನಿಯೋಗ ತೆರಳಿದ್ದಾಗ ನೀರು ಬಿಡುವುದಾಗಿ ಅಲ್ಲಿನ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ನೀರು ಬಿಡುಗಡೆ ಆಗಗದಿರುವುದು ನಮಗೂ ಅಚ್ಚರಿ ತರಿಸಿದೆ; ಬೇಸರವೂ ಆಗುತ್ತಿದೆ. ‘ನೀರಿಗೆ ನೀರು‌’ ಷರತ್ತಿಗೆ ಸಂಬಂಧಿಸಿದಂತೆ ಶಾಶ್ವತ ಒಪ್ಪಂದಕ್ಕೆ ಸಿದ್ಧವಿದ್ದೇವೆ; ಚುನಾವಣೆ ಮುಗಿದ ನಂತರ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಮೂಲಕ ಮಹಾರಾಷ್ಟ್ರಕ್ಕೆ ಪತ್ರ ಕಳುಹಿಸುತ್ತಿದ್ದೇವೆ ಎಂದು ಜಲಸಂಪನ್ಮೂಲ ಸಚಿವರು ಗುರುವಾರ ದೂರವಾಣಿಯಲ್ಲಿ ತಿಳಿಸಿದರು. ಏನಾಗುತ್ತದೆಯೋ ನೋಡಬೇಕಿದೆ’ ಎಂದು ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯೆಗೆ ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT